KANNADA ASTROLOGY
(ಜ್ಯೊತಿಷ್ಯ ಎನ್ನುವುದು ಒಂದು ಬೆಳಕಿನ ಶಾಸ್ತ್ರ.ಅದು ಮಾನವನ ಬಾಳಿಗೆ ಒಂದು ಮಾರ್ಗದರ್ಶನ)

ವಿಚಾರ

                                                               ವಿಚಾರ-೧

                                          ಕಾಲ- ಸರ್ಪ ಯೋಗದ ಬಗ್ಗೆ ಭೀತಿ ಅಗತ್ಯವೇ?
                                               ~~~~~~~~~~~~~~~~~~~~~~~~~~~
                                         ************************************
ಕಾಲ-ಸರ್ಪ ಯೋಗವು ರ‍ಾಹು-ಕೇತುಗಳೆಂಬ ೨ ಗ್ರಹಗಳಿಂದ ಉಂಟಾಗುತ್ತದೆ. ರಾಹು-ಕೇತು ಗ್ರಹಗಳು ಅಪ್ರದಕ್ಷಿಣಾಕಾರವಾಗಿ ಚಲಿಸುತ್ತವೆ.ಉಳಿದ ಗ್ರಹಗಳು ಪ್ರದಕ್ಷಿಣಾಕಾರವಾಗಿ ಚಲಿಸುತ್ತವೆ. ರಾಹು- ಕೇತು ಗ್ರಹಗಳ ಚಲನೆಯ ಕಾಲದಲ್ಲಿ ಉಳಿದ ೭ ಗ್ರಹಗಳು ರಾಹು-ಕೇತುಗಳು ಇರುವ ರಾಶಿಗಳ ಹೊರತಾಗಿ ಮಧ್ಯ ಉಳಿದ ೫ ರಾಶಿಗಳಲ್ಲಿ ಇದ್ದರೆ ಅಪ್ರದಕ್ಷಿಣಾಕಾರವಾಗಿ ೬; ಪ್ರದಕ್ಷಿಣಾಕಾರವಾಗಿ ೬; ಒಟ್ಟು ೧೨ ರೀತಿಯಾಗಿ ಕಾಲ-ಸರ್ಪ ಯೊಗ ಉಂಟಾಗುವುದೆಂದು ಕೆಲವು ಗ್ರಂಥಗಳಲ್ಲಿ ಹೇಳಿದ್ದರೆ ಮತ್ತೆ ಕೆಲವು ಗ್ರಂಥಗಳಲ್ಲಿ ಕೇವಲ ಅಪ್ರದಕ್ಷಿಣಾಕಾರವಾಗಿ ೭ ಗ್ರಹಗಳು ರಾಹು-ಕೇತುಗಳ ಮಧ್ಯ ಇದ್ದರೆ ಮಾತ್ರಾ ಕಾಲ-ಸರ್ಪ ಯೊಗ ಎಂದಿರುವರು. ಕೆಲವು ಗ್ರಂಥಗಳಲ್ಲಿ ಈ ೭ ಗ್ರಹಗಳ ಜೊತೆಯಲ್ಲಿ ಜನ್ಮ ಲಗ್ನವು ಕೂಡಾ ಸೇರಿರ ಬೇಕೆಂದಿರುವರು. ಅಭಿಪ್ರಾಯ ಭೇಧಗಳಿರುವಾಗ ಯಾವುದನ್ನು ಅಳವಡಿಸಿ ಕೊಂಡರೆ ಈ ಯೊಗ ಉಂಟಾಗುವ ಸಂಭವ ಕಡಿಮೆಯೋ ಅದನ್ನು ಅಳವಡಿಸಿಕೊಳ್ಳಬೇಕಾದುದು ಅವಶ್ಯ.ತೀರಾ ಇತ್ತೀಚೆಗೆ ಅಪೂರ್ಣ ಕಾಲ-ಸರ್ಪ ಯೊಗ ಎಂಬ ಯೋಗವನ್ನು ಹೊಸದಾಗಿ ಹೇಳುವುದು ಗಮನಕ್ಕೆ ಬಂದಿದೆ. ಆದರೆ ಅದಕ್ಕೆ ಆಧಾರ ಎಲ್ಲಿಯೂ ನನಗೆ ಸಿಕ್ಕಿಲ್ಲ.ಈ ಕಾಲ-ಸರ್ಪ ಯೋಗದ ಹೆಸರು ಕೇಳಿಯೇ ಜನರು ಹೆದರಿಕೆಗೆ ಒಳಗಾಗುವುದು ಹೆಚ್ಚು.ವಾಸ್ತವವಾಗಿ ಕಾಲ- ಸರ್ಪ ಯೋಗವೆಂಬುದು ಇತರ ಯೋಗಗಳಂತೆ ಒಂದು ಯೋಗ.ಅದರ ಫಲ ಕೆಟ್ಟದಿರ ಬಹುದು.ಅದು ಬೇರೆ ವಿಚಾರ.ಅಷ್ಟೇ ಕೆಟ್ಟ ಫಲದ ಮತ್ತು ಅದಕ್ಕಿಂತಲೂ ಅಧಿಕ ಕೆಟ್ಟ ಫಲಗಳನ್ನೀಯಬಹುದಾದ ಇತರ ಯೋಗಗಳು ಇವೆ.ಆದರೆ ಹೆಸರು ಭೀತಿ ಹುಟ್ಟಿಸುವಂತೆ ಇಲ್ಲ.ಕಾಲ-ಸರ್ಪ ಹೆಸರು ಬಂದುದು ಹೇಗೆಂದು ತಿಳಿದುಕೊಂಡಲ್ಲಿ ಈ ಯೊಗವು ಭೀತಿದಾಯಕವಲ್ಲವೆಂಬ ವಿಚಾರ ಗಮನಾರ್ಹವಾಗಬಹುದು.ರ‍ಾಹು ಗ್ರಹದ ನಕ್ಷತ್ರ ಭರಣಿ.ಅದರ ಅಧಿದೇವತೆ ಯಮ, ಅಂದರೆ ಕಾಲ. ಕೇತು ಗ್ರಹದ ನಕ್ಷತ್ರ ಆಶ್ಲೇಷ. ಅದರ ಅಧಿದೇವತೆ ಸರ್ಪ. ಹಾಗಾಗಿ ರಾಹು- ಕೇತುಗಳಿಂದಾಗುವ ಯೋಗಕ್ಕೆ ಈ ಹೆಸರು ಬಂದಿದೆ. ಆದರೆ ಕೇವಲ ರಾಹು-ಕೇತುಗಳ ಮಧ್ಯೆ ೫ ರಾಶಿಗಳಲ್ಲಿ ಉಳಿದ ಗ್ರಹಗಳು ಇದ್ದಾಕ್ಷಣ ಕಾಲ-ಸರ್ಪ ಯೋಗವಿದೆ ಎಂದು ತೀರ್ಮಾನಿಸುವುದು ತಪ್ಪಾಗುತ್ತದೆ.ಅಲ್ಲಿರುವ ಗ್ರಹಗಳ ಸ್ಥಿತಿ ಗತಿ; ಬಲಾಬಲ ಉಚ್ಚ ನೀಚತ್ವ ಇತ್ಯಾದಿ ವಿಮರ್ಶಿಸಿ ನಿರ್ಧಾರಕ್ಕೆ ಬಂದು ವ್ಯಕ್ತಿಗಳಿಗೆ ಫಲ/ಪರಿಹಾರ ಹೇಳುವುದು ಸೂಕ್ತ ಎಂದು ನನ್ನ ಅನಿಸಿಕೆ.
      ಮುಖ್ಯವಾಗಿ ಗಮನಿಸಬೇಕಾದ ವಿಚಾರವೆಂದರೆ ಜ್ಯೋತಿಷ್ಯಾಚಾರ್ಯರೆಂಬ ಕೀರ್ತಿಗೆ ಭಾಜನರಾಗಿರುವ ವರಾಹಮಿಹಿರಾಚಾರ್ಯರು ತಮ್ಮ ಗ್ರಂಥ ಬೃಹದ್ಜಾತಕದಲ್ಲಿ ಕಾಲ - ಸರ್ಪ ಯೋಗವೆಂಬ ಯೋಗದ ಬಗ್ಗೆ ಎಲ್ಲೂ ಹೇಳಿರುವುದಿಲ್ಲ. ಇದನ್ನು ಗಮನದಲ್ಲಿ ಇರಿಸಿಕೊಳ್ಳುವುದು ಸೂಕ್ತ.
     ಇಷ್ಟು ಓದಿದ ಮೇಲೂ ಕಾಲ- ಸರ್ಪ ಯೋಗದ ಬಗ್ಗೆ ಭೀತಿ ಇದೆಯೇ? ಇದ್ದರೆ ಸುಬ್ರಹ್ಮಣ್ಯ ಸ್ವಾಮಿಯನ್ನು ಮತ್ತು ಮಹಾಗಣಪತಿ ದೇವರ ಧ್ಯಾನ; ಯಥಾ ಸಾಧ್ಯ ಸೇವೆಯಿಂದ ದೋಷಗಳು ಪರಿಹಾರವಾಗುವವು.

                                                        ಶುಭಮಸ್ತು ನಿತ್ಯಮ್
++++++++++++++++++++++++++++++++++++++++++++++++++++++++++++++++++++++++

                                                                    ವಿಚಾರ-೨

                                                ಕುಜದೋಷದ ಬಗ್ಗೆ ನಿಮಗೆಷ್ಟು ಅರಿವಿದೆ?
                                              ++++++++++++++++++++++++++

                            ಕುಜದೋಷದ ಬಗ್ಗೆ ಮಾಹಿತಿ ನೀಡುವ ಅಗತ್ಯವು ಇಂದು ಎದ್ದು ಕಾಣುತ್ತಲಿದೆ.ಸರಿಯಾಗಿ ವಿಮರ್ಶಿಸದೆ ಮೇಲ್ನೋಟಕ್ಕೆ ಕಾಣುವ ಕುಜದೋಷವನ್ನು ಅರುಹಿ ಜನರನ್ನು ಭೀತಿಗೊಳಪಡಿಸುವ ಪ್ರವೃತ್ತಿ ಅಲ್ಲಲ್ಲಿ ಕಂಡುಬರುತ್ತಿದೆ.ವಾಸ್ತವವಾಗಿ ಕುಜದೋಷ ಯಾರಿಗಿದೆ ಎಂಬ ಮಾಹಿತಿ ಮುಂದೆ ನೀಡುತ್ತಲಿರುವೆ.

     ಕನ್ಯಾ-ವರರ ಜಾತಕ ಹೊಂದಾಣಿಕೆಯಲ್ಲಿ ಕುಜದೋಷವನ್ನು ಪರಿಶೀಲಿಸುವುದು ಸಂಪ್ರದಾಯ.ಜನ್ಮ ಕುಂಡಲಿಯಲ್ಲಿ ಲಗ್ನ,ಶುಕ್ರ, ಚಂದ್ರ  ಸ್ಥಿತ ಸ್ಥಾನಗಳಿಂದ ೧,೨,೪,೫,೭,೮,೧೨ ನೇ ಸ್ಥಾನಗಳಲ್ಲಿ ಕುಜನು ಇದ್ದರೆ ಕುಜ ದೋಷ ಇದೆ ಎಂಬುದಾಗಿ ಮೇಲ್ನೋಟದ ತೀರ್ಮಾನಕ್ಕೆ ಬರುವುದು ಬಹುತೇಕ ಅನುಸರಿಸುವ ಕ್ರಮ .ಆದರೆ ಈ ರೀತಿಯಾಗಿ ತೀರ್ಮಾನಕ್ಕೆ ಬಂದರೂ ಅಂತಹಾ ದೋಷಗಳಿಗೆ ಅಪವಾದಗಳು ಕೂಡಾ ಇವೆ ಅಂದರೆ ಪರಿಹಾರಗಳೂ ಇವೆ  ಎಂಬುದನ್ನು ಗಮನಿಸುವುದು ಅಗತ್ಯ ಇದೆ.ನಾನು ತಿಳಿದುಕೊಂಡಂತೆ ಕುಜದೋಷಕ್ಕೆ ೨೨ ರೀತಿಯಲ್ಲಿ ಅಪವಾದಗಳು ಇವೆ.ಆ ೨೨ ರೀತಿಯ ಪರಿಹಾರಗಳನ್ನು ಕುಂಡಲಿಯಲ್ಲಿಯೇ ಪರಿಶೀಲಿಸಬೇಕಾಗಿದೆ. ಅವುಗಳನ್ನು ಅನ್ವಯಿಸಿ ಪರಿಶೀಲನೆ ಮಾಡಿದಾಗ ಹೆಚ್ಚಿನ ಜಾತಕಗಳಲ್ಲಿ ಕುಜ ದೋಷ ಜಾತಕದಲ್ಲಿಯೇ ಪರಿಹಾರ ಆಗಿರುತ್ತದೆ.ಆ ಬಗ್ಗೆ ವಿವರಿಸುವುದು ಈ ಬರಹದ ಗುರಿ.

.[೧] ಕರ್ಕಾಟಕ ಮತ್ತು ಸಿಂಹ ಲಗ್ನ ಸಂಜಾತರಿಗೆ ಕುಜದೋಷ ಇಲ್ಲ.

 [೨] ೭ ನೇ ರಾಶಿಯಲ್ಲಿರುವ ಕುಜನನ್ನು ಗುರು ನೋಡಿದಲ್ಲಿ ದೋಷ ಪರಿಹಾರ.

 [೩] ಕನ್ಯಾ ಜಾತಕದಲ್ಲಿ ಜನ್ಮ ಲಗ್ನದಿಂದ ೭ ನೇ ರಾಶಿಯಲ್ಲಿ ಆ ರಾಶಿಯ ಅಧಿಪತಿ ಅಥವಾ      ಯಾವುದಾದರೂ ಶುಭ ಗ್ರಹ ಇದ್ದರೆ ಸಂತಾನ ದೋಷ, ವೈಧವ್ಯ ದೋಷ, ಕುಜ ದೋಷ ಪರಿಹಾರ.

[೪] ೭ ನೇ ಸ್ಥಾನದ ಅಧಿಪತಿ ೭ ನೇ ಮನೆಯಲ್ಲಿ ಇದ್ದರೆ ಕುಜ ದೋಷ ಇಲ್ಲ.

[೫] ಕನ್ಯಾ- ವರರ ಜಾತಕಗಳಲ್ಲಿ ಸಮಾನವಾದ ಕುಜ ದೋಶ ಇದ್ದಲ್ಲಿ ಅಥವಾ ಕುಜದೋಶಕ್ಕೆ   ಸಮಾನವಾದ ಪಾಪ ಗ್ರಹ ದೋಷ ಇದ್ದಲ್ಲಿ[ರವಿ,ಶನಿ,ಕೇತು,ರಾಹು, ಕುಜ-ಇವುಗಳು ಪಾಪ ಗ್ರಹರು]ಕುಜ ದೋಷ ಪರಿಹಾರ.

[೬]ಜನ್ಮ ಲಗ್ನದಿಂದ ೧,೪,೭,೮,೧೨ರಲ್ಲಿ ಶನಿ ಇದ್ದರೆ ಕುಜ ದೋಷ ಪರಿಹಾರ.

[೭]ಕನ್ಯಾ-ವರರ ಜಾತಕಗಳಲ್ಲಿ ಒಂದರಲ್ಲಿ ಕುಜದೋಶ ಇದ್ದು ಮತ್ತೊಂದರಲ್ಲಿ ೧,೪,೭,೮,೧೨ರಲ್ಲಿ ಶನಿ ಇದ್ದರೆ ಕುಜ ದೋಷ ಪರಿಹಾರ.

[೮]ಲಗ್ನದಿಂದ೨,೪,೭,೮,೧೨ರಲ್ಲಿರುವ  ಕುಜನು ಗುರುವಿನೊಟ್ಟಿಗೆ ಇದ್ದರೆ ಅಥವಾ ಬುಧ,ಗುರು ಗಳಿಂದ ನೋಡಲ್ಪಟ್ಟರೆ ಕುಜದೋಷ ಪರಿಹಾರ.

[೯]ಕುಜನು ಗುರು ಅಥವಾ ಚಂದ್ರನ ಒಟ್ಟಿಗೆ ಇದ್ದರೆ ಅಥವಾ ಅವರಿಂದ ನೋಡಲ್ಪಟ್ಟರೆ ಕುಜ ದೋಷ ಪರಿಹಾರ.

[೧೦]ಮೇಷ,ವೃಶ್ಚಿಕ,ಮಕರ,ಕರ್ಕಟಕ,ಸಿಂಹ,ಧನುಸ್ಸು,ಮೀನ ಈ ರಾಶಿಗಳಲ್ಲಿ ಕುಜ ಇದ್ದರೆ ಕುಜ ದೋಷ ಇಲ್ಲ.

[೧೧]ಕುಜನು, ರವಿ, ಚಂದ್ರ,ಗುರು ನವಾಂಶದಲ್ಲಿ ಇದ್ದರೆ ಕುಜದೋಷ ಇಲ್ಲ.

[೧೨]ಕುಜನು ಕರ್ಕಾಟಕ,ಮಿಥುನ,ಕನ್ಯಾ ರಾಶಿಗಳಲ್ಲಿ ಇದ್ದರೆ ಅಥವಾ ಅಸ್ತನಾಗಿ ಇದ್ದರೆ ಶುಭಾಶುಭ ಫಲ ಇಲ್ಲವಾದ ಕಾರಣ ಕುಜ ದೋಷ ಇಲ್ಲ.

[೧೩]ಕನ್ಯಾ-ವರರ ಜಾತಕಗಳಲ್ಲಿ ಒಂದರಲ್ಲಿ ಕುಜ ದೋಷವಿದ್ದು ಮತ್ತೊಂದರಲ್ಲಿ ಅದೆ ರಾಶಿಯಲ್ಲಿ ಶನಿ,ಕುಜ,ಅಥವಾ ಯಾವುದಾದರೂ ಪಾಪಗ್ರಹ ಇದ್ದಲ್ಲಿ ಕುಜ ದೋಷ ಇಲ್ಲ.

[೧೪]ಜಾತಕದಲ್ಲಿ ಯಾವ ರಾಶಿಯಲ್ಲಿ ಕುಜನು ಇದ್ದಾನೋ ಆ ರಾಶಿಯ ಅಧಿಪತಿ ೧,೪,೭,೧೦,೫,೯ರಲ್ಲಿ ಇದ್ದರೆ ಕುಜ ದೋಷ ಪರಿಹಾರ.

[೧೫]ಮೇಷ ಲಗ್ನವಾಗಿ ಅಲ್ಲಿ ಕುಜನು ಇದ್ದರೆ,ಮಕರ ಲಗ್ನವಾಗಿ ಧನು ರಾಶಿಯಲ್ಲಿ ಕುಜನು ಇದ್ದರೆ,ಸಿಂಹ ಲಗ್ನವಾಗಿ ವೃಶ್ಚಿಕದಲ್ಲಿ ಕುಜನು ಇದ್ದರೆ,ಕರ್ಕಾಟಕ ಲಗ್ನವಾಗಿ ಮಕರದಲ್ಲಿ ಕುಜನು ಇದ್ದರೆ, ಧನುರ್ಲಗ್ನವಾಗಿ ಕರ್ಕಾಟಕದಲ್ಲಿ ಕುಜನು ಇದ್ದರೆ ಆಯಾಲಗ್ನದಲ್ಲಿ ಹುಟ್ಟಿದವರಿಗೆ ಕುಜ ದೋಷ ಇಲ್ಲ.
.

[೧೬]ಅಶ್ವಿನಿ,ಮೃಗಶಿರೆ,ಪುನರ್ವಸು,ಪುಷ್ಯ,ಆಶ್ಲೇಶಾ,ಉತ್ತರಾ,ಸ್ವಾತಿ,ಅನುರಾಧ,ಪೂರ್ವಾಷಾಢ, ಉತ್ತರಾಷಾಢ,ಶ್ರವಣ,ಉತ್ತರಾಭಾದ್ರ,ರೇವತಿ--ಈ ನಕ್ಷತ್ರದವರಿಗೆ ಕುಜದೋಷ ಇಲ್ಲ.

[೧೭]ಮಿಥುನ-ಕನ್ಯಾ ಲಗ್ನಗಳಲ್ಲಿ ಹುಟ್ಟಿದವರಿಗೆ ಕರ್ಕಟಕ-ತುಲಾ ರಾಶಿಗಳಲ್ಲಿ ಕುಜನು ಇದ್ದರೆ,ವೃಷಭ-ಸಿಂಹ ಲಗ್ನದವರಿಗೆ ಮಿಥುನ- ಕನ್ಯಾ ರಾಶಿಗಳಲ್ಲಿ ಕುಜನು ಇದ್ದರೆ ದೋಷ ಇಲ್ಲ.

[೧೮]ಮೇಷ-ವೃಶ್ಚಿಕ ಲಗ್ನದವರಿಗೆ ಕರ್ಕಟಕ- ಕುಂಭ ರಾಶಿಗಳಲ್ಲಿ, ಮಕರ- ಸಿಂಹ ಲಗ್ನದವರಿಗೆ ಮೇಷ- ವೃಶ್ಚಿಕ ರಾಶಿಗಳಲ್ಲಿ ಕುಜನು ಇದ್ದರೆ ಕುಜ ದೋಷ ಇಲ್ಲ.

[೧೯]ಮಕರ-ಕರ್ಕಟಕ ಲಗ್ನದವರಿಗೆ ಕರ್ಕಟಕ-ಮಕರ ರಾಶಿಗಳಲ್ಲಿ ಕುಜನು ಇದ್ದರೆ ಕುಜ ದೋಷ ಇಲ್ಲ ಮತ್ತು ಕರ್ಕಟಕ-ಮಕರ ಲಗ್ನದವರಿಗೆ ಮಕರ-ಕರ್ಕಟಕ ರಾಶಿಗಳಲ್ಲಿ ಕುಜನು ಇದ್ದರೆ ದೋಷ ಇಲ್ಲ.

[೨೦]ಧನು-ಮೀನ ಲಗ್ನದವರಿಗೆ ಕರ್ಕಟಕ-ತುಲಾರಾಶಿಗಳಲ್ಲಿ,ವೃಷಭ-ಸಿಂಹ ಲಗ್ನದವರಿಗೆ ಧನು-ಮೀನ ರಾಶಿಗಳಲ್ಲಿ ಕುಜನು ಇದ್ದರೆ ದೋಷ ಇಲ್ಲ.

[೨೧]ವೃಷಭ-ತುಲಾ ಲಗ್ನದವರಿಗೆ ಮೇಷ-ಕನ್ಯಾ ರಾಶಿಗಳಲ್ಲಿ,ವೃಶ್ಚಿಕ-ಮಿಥುನ ಲಗ್ನದವರಿಗೆ ವೃಷಭ- ತುಲಾ ರಾಶಿಗಳಲ್ಲಿ ಕುಜನು ಇದ್ದರೆ ದೋಷ ಇಲ್ಲ.

[೨೨]ಕುಂಭ-ಸಿಂಹ ಲಗ್ನದವರಿಗೆ ಕುಜನು ಯಾವರಾಶಿಯಲ್ಲಿ ಇದ್ದರೂ ದೋಷ ಇಲ್ಲ. ಕುಂಭ-ಸಿಂಹ ರಾಶಿಗಳು ಲಗ್ನದಿಂದ ೧-೨-೪-೫-೭-೮-೧೨ ನೇ ರಾಶಿಗಳಾಗಿದ್ದು ಅಲ್ಲಿ ಕುಜನು ಇದ್ದರೆ ಕುಜ ದೋಷ ಇಲ್ಲ.

ಈ ರೀತಿಯಾಗಿ ಕುಜದೋಷಗಳಿಗೆ ಅಪವಾದ ಅಥವಾ ಪರಿಹಾರಗಳನ್ನು ಶಾಸ್ತ್ರಕಾರರು ತಿಳಿಸಿರುವ ಕಾರಣ ಕೆಲವೇ ಕೆಲವು ಜಾತಕಗಳಲ್ಲಿ  ಮಾತ್ರಾ ಕುಜ ದೋಷ ಇರಬಹುದಾಗಿದೆ. ಈ ವಿಚಾರವನ್ನು ಜ್ಯೋತಿಷಿಗಳು ಗಮನದಲ್ಲಿರಿಸಿಕೊಂಡು ಕುಜದೋಷದ ಬಗ್ಗೆ ಪರಿಶೀಲಿಸ ಬೇಕೆಂಬುದು ಶಾಸ್ತ್ರಕಾರರ ಮತ.

                                                     ಮಂಗಳಮ್ ಶುಭ ಮಂಗಳಮ್

 &&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&&


                                                                          ವಿಚಾರ-೩

                                                    ಕನ್ಯಾವರರ ಜಾತಕಗಳ ಹೊಂದಾಣಿಕೆ

                                                        ದೋಷಗಳಿಗೆ ಅಪವಾದಗಳು 

++++++++++++++=============++++++++++++++++==============++++++++++++++

 ಕನ್ಯಾವರರ ವಿವಾಹವನ್ನು ನಿಶ್ಚಯಮಾಡುವ ಮೊದಲು ಅವರ ಜಾತಕಗಳು ಹೊಂದಾಣಿಕೆಯಾಗುತ್ತಿವೆಯೇ ಎಂಬುದನ್ನು ಪರಿಶೀಲಿಸುವುದು ಎಲ್ಲಾ ವರ್ಣದವರಲ್ಲಿಯೂ ಸರ್ವೇಸಾಮಾನ್ಯವಾಗಿದೆ.ಕನ್ಯಾವರರ ಜಾತಕಾನುಕೂಲವನ್ನು ದಶಕೂಟ[೧೦ ಕೂಟ]ಗಳನ್ನು ಪರಿಶೀಲಿಸಿ ನಿರ್ಧರಿಸುವುದು ಹೆಚ್ಚಿನ ಪ್ರದೇಶಗಳಲ್ಲಿ ರೂಡಿಯಲ್ಲಿದೆ.ಕೆಲವು ಪ್ರದೇಶಗಳಲ್ಲಿ ಅಷ್ಟ[೮] ಅಥವಾ ದ್ವಾದಶ[೧೨]ಕೂಟಗಳನ್ನು ಪರಿಶೀಲಿಸುವ ಕ್ರಮವಿದೆ.ಮತ್ತೆ ಕೆಲವು ಪ್ರದೇಶಗಳಲ್ಲಿ ೧೫ ಕೂಟಗಳನ್ನು ಪರಿಶೀಲಿಸುವುದೂ ಇದೆ.ಬಹುತೇಕ ದಶ ಕೂಟಗಳನ್ನು ಪರಿಶೀಲಿಸುವುದು ರೂಢಿಯಲ್ಲಿರುವ ಕಾರಣ ಇಲ್ಲಿ ಆ ದಶ ಕೂಟಗಳ ಪರಿಶೀಲನೆಯಲ್ಲಿ ಕಂಡು ಬರಬಹುದಾದ ದೋಷಗಳಿಗೆ ಶಾಸ್ತ್ರಕಾರರು ತಿಳಿಸಿದ ಅಪವಾದಗಳನ್ನು ದಾಖಲಿಸುವ ಬಯಕೆ ನನ್ನದು. ಇವುಗಳ ಆಧಾರದಿಂದ ಜಾತಕಗಳ ಹೊಂದಾಣಿಕೆ ಮಾಡುವುದು ಸತ್ಸಂಪ್ರದಾಯವಾಗಬಹುದು.

೧ ದಿನಕೂಟ:-
           ಸ್ತ್ರೀ ದೀರ್ಘಕೂಟ, ಗಣಕೂಟಗಳು ಶುಭವಾಗಿ ಹೊಂದಾಣಿಕೆಯಾಗುತ್ತಿದ್ದಲ್ಲಿ ದಿನಕೂಟ ಹೊಂದಾಣಿಕೆ ಅಶುಭವಾದರೂ ಭಾದಕವಲ್ಲ.

೨ ಗಣಕೂಟ:-
         [ಅ] ಗ್ರಹ ಮೈತ್ರಿ,ರಾಶಿಕೂಟಗಳು ಹೊಂದಾಣಿಕೆಯಾಗುವುದಾದಲ್ಲಿ ಗಣಕೂಟ ಅಶುಭವಾದರೂ ಭಾದಕವಲ್ಲ.

 ಜನ್ಮ ರಾಶಿಗಳ ಅಧಿಪತಿಗಳಾಗಲೀ,ಜನ್ಮ ರಾಶಿಗಳ ನವಾಂಶಾಧಿಪತಿಗಳಾಗಲೀ ಪರಸ್ಪರ ಮಿತ್ರರಾಗಿದ್ದಲ್ಲಿ ಗಣಕೂಟ ಹೊಂದಾಣಿಕೆಯಾಗದಿದ್ದರೂ ಭಾದಕವಲ್ಲ.

 [ಆ] ಗ್ರಹ ಮೈತ್ರಿ, ರಜ್ಜು, ನಾಡಿ ಕೂಟಗಳು ಶುಭವಾಗಿದ್ದಲ್ಲಿ ಕನ್ಯೆಯದು ರಾಕ್ಷಸ ಗಣವಾಗಿ ವರನದು ಮನುಷ್ಯಗಣವಾದರೂ ದೋಷವಲ್ಲ.

[ಇ] ಸ್ತ್ರೀ ದೀರ್ಘ ಕೂಟವಿದ್ದರೂ, ರಾಶ್ಯಧಿಪತಿ ಕೂಟವಿದ್ದರೂ ಗಣಕೂಟ  ಅಶುಭವಾದರೂ ದೋಷವಲ್ಲ.

[ಈ] ಕನ್ಯಾ ಜನ್ಮ ನಕ್ಷತ್ರದಿಂದ ವರನ ಜನ್ಮ ನಕ್ಷತ್ರವು ೧೪ ನಕ್ಷತ್ರಗಳ ನಂತರವಿದ್ದಲ್ಲಿ ಗಣಕೂಟವು ಅಶುಭವಾದರೂ ಭಾದಕವಿಲ್ಲ.

೩ ಮಾಹೇಂದ್ರ ಕೂಟ:-
                ಗ್ರಹ ಮೈತ್ರಿ. ರಜ್ಜು ಕೂಟಗಳಿದ್ದಲ್ಲಿ ಮಾಹೇಂದ್ರಕೂಟವು ಅಶುಭವಾಗಿದ್ದರೂ ದೋಷವಿಲ್ಲ.

೪ ಸ್ತ್ರೀದೀರ್ಘ ಕೂಟ:-
               ರಾಶಿ ಮತ್ತು ಗ್ರಹಮೈತ್ರಿ ಕೂಟಗಳು ಹೊಂದಾಣಿಕೆಯಾಗುತ್ತಿದ್ದರೆ ಅಥವಾ ರಾಶ್ಯಧಿಪತಿಗಳಿಗೆ ಮೈತ್ರಿಯಿದ್ದಲ್ಲಿ ಯಾ ಕನ್ಯೆಯ ಜನ್ಮ ನಕ್ಷತ್ರದಿಂದ ವರನ ಜನ್ಮ ನಕ್ಷತ್ರವು ೧೩ನೇ ನಕ್ಷತ್ರದ ನಂತರದ ನಕ್ಷತ್ರವಾಗಿದ್ದಲ್ಲಿ ಸ್ತ್ರೀದೀರ್ಘಕೂಟವು ಹೊಂದಾಣಿಕೆಯಾಗದಿದ್ದರೂ ಭಾದಕವಲ್ಲ.

೫ ಯೋನಿ ಕೂಟ:- ರಾಶಿ ಮತ್ತು ವಶ್ಯ ಕೂಟಗಳು ಶುಭವಾಗಿದ್ದಲ್ಲಿ ಯೋನಿಕೂಟವು ಹೊಂದಾಣಿಕೆಯಾಗದಿದ್ದರೂ ಬಾಧಕವಲ್ಲ.

೬ ರಾಶಿಕೂಟ:-
        [ಅ] ಕನ್ಯಾ ವರರ ಜನ್ಮ ನಕ್ಷತ್ರಗಳಿಗೆ ವೇಧೆಯಿಲ್ಲದೆ ಇದ್ದು ರಾಶ್ಯಧಿಪತಿಗಳಿಗೆ ಮೈತ್ರಿ ಯೋಗವಾಗಲೀ, ಏಕರಾಶ್ಯಧಿಪತಿತ್ವವಾಗಲೀ ಇದ್ದು ಆ ರಾಶಿಗಳು ವಶ್ಯವಾಗಿದ್ದಲ್ಲಿ ಷಷ್ಠಾಷ್ಟಕ ದೋಷದ ಭಾದಕವಿಲ್ಲ.

  [ಆ] ರಾಶಿಕೂಟವು ೨-೧೨; ೯-೫; ೬-೮ ಆದರೂ ಕನ್ಯೆಯ ನಕ್ಷತ್ರ ಗಣವು ರಾಕ್ಷಸ ಗಣವಾದರೂ,ಏಕ ರಾಶ್ಯಧಿಪತಿತ್ವವಿದ್ದಲ್ಲಿ ಅಥವಾ ಮೈತ್ರ್ಯಾಧಿಪತಿತ್ವವಿದ್ದಲ್ಲಿ ಕನ್ಯೆಯ ನಕ್ಷತ್ರ ಗಣವು ರಾಕ್ಷಸ ಗಣವಾಗಿದ್ದರೂ ಅಶುಭ ರಾಶಿ ಕೂಟದ ಭಾದಕವಿಲ್ಲ.

  [ಇ] ಮೇಷ-ಕನ್ಯಾ; ತುಲಾ-ಮೀನ;ಧನು-ವೃಷಭ; ಮಿಥುನ-ವೃಶ್ಚಿಕ;ಕುಂಭ-ಕರ್ಕಟಕ;ಸಿಂಹ-ಮಕರ ಇವುಗಳಲ್ಲಿ ವಿಷಮರಾಶಿಯು ಕನ್ಯೆಯದಾಗಿದ್ದರೆ ಷಷ್ಠಾಷ್ಟಕ ದೋಷದ ಭಾದಕವಿಲ್ಲ.ವಿಷಮ ರಾಶಿಯಲ್ಲವಾದರೆ ದೋಷವೆಂದು ಪರಿಗಣಿಸಬಹುದಾಗಿದೆ.

  [ಈ] ಮೀನ-ಮೇಷ;ಕರ್ಕಟಕ-ಸಿಂಹ;ಸಿಂಹ-ಕನ್ಯಾ;ಮಕರ-ಕುಂಭ;ತುಲಾ-ಕನ್ಯಾ;ಧನು-  ವೃಶ್ಚಿಕ;ವೃಷಭ-ಮಿಥುನ ಇವುಗಳು ದ್ವಿದ್ವಾದಶರಾಶಿಗಳಾದಲ್ಲಿ ಶುಭಕೂಟವೆಂದು ಪರಿಗಣಿಸಬೇಕು.

[ಉ]ಕುಂಭ-ಮೀನ;ಮೇಷ-ವೃಷಭ;ಮಿಥುನ-ಕರ್ಕಟಕ;ತುಲಾ-ವೃಶ್ಚಿಕ;ಧನು-ಮಕರ;ಇವುಗಳು ಅಶುಭ ದ್ವಿದ್ವಾದಷ ಕೂಟಗಳಾಗಿವೆ.

 [ಊ]ಮೇಷ-ಸಿಂಹ;ವೃಷಭ-ಕನ್ಯಾ;ಸಿಂಹ-ಧನು;ತುಲಾ-ಕುಂಭ;ವೃಶ್ಚಿಕ-ಮೀನ;ಧನು-ಮೇಷ;  ಮಕರ-ವೃಷಭ;ಇವುಗಳು ೯-೫ನೇ ರಾಶಿಗಳಾಗಿದ್ದರೆ ನವ ಪಂಚಮ ದೋಷವಿಲ್ಲ.

  [ಋ]ಸಿಂಹ-ಮೀನ;ತುಲಾ- ವೃಷಭ;ಕುಂಭ-ಕನ್ಯಾ;ಮೇಷ- ವೃಶ್ಚಿಕ;ಧನು-ಕರ್ಕಾಟಕ;ಇವುಗಳು ೬-೮ನೇ ರಾಶಿಗಳಾಗಿದ್ದಲ್ಲಿ ಶುಭ ಷಷ್ಠಾಷ್ಟ ಕೂಟವೆಂದು ಪರಿಗಣಿಸಬೇಕು.

  [ೠ]ರಾಶಿ,ಗಣ,ರಜ್ಜುಕೂಟಗಳು ಅಶುಭವಾದರೂ,ರಾಶಿಕೂಟವು ಷಷ್ಠಾಷ್ಟಕವಾದರೂ,ಕನ್ಯೆಯ ನಕ್ಷತ್ರಗಣವು ರಾಕ್ಷಸಗಣವಾದರೂ, ಕನ್ಯಾವರರ ರಾಶ್ಯಧಿಪತಿ ಒಬ್ಬನೇ ಆಗಿದ್ದರೆ ಅಥವಾ ರಾಶ್ಯಧಿಪತಿಗಳು ಪರಸ್ಪರ ಮಿತ್ರರಾಗಿದ್ದರೆ ರಾಶಿ ಕೂಟವನ್ನು ಶುಭ ಕೂಟವೆಂದು ಪರಿಗಣಿಸಬೇಕು.

 [ಎ] ರಜ್ಜು; ಸ್ತ್ರೀ ದೀರ್ಘ ಕೂಟಗಳು ಶುಭವಾಗಿದ್ದರೂ ರಾಶಿಕೂಟವು ೨-೧೨[ದ್ವಿದ್ವಾದಶ] ;೯-೫[ನವ ಪಂಚಮ];೬-೮[ಷಷ್ಠ ಅಷ್ಟ] ಆಗಿದ್ದರೂ ಏಕರಾಶ್ಯಧಿಪತಿತ್ವ;ಅಥವಾ ಪರಸ್ಪರ ಮಿತ್ರತ್ವವಿದ್ದಲ್ಲಿ ರಾಶಿ ಕೂಟವು ಶುಭವೆಂದು ಪರಿಗಣಿಸಬೇಕು.

 [ಏ]ರಾಶಿ ಕೂಟವು ೨-೧೨[ದ್ವಿ ದ್ವಾದಶ] ಆಗಿದ್ದರೂ ಕನ್ಯೆಯ ರಾಶಿ ಮೀನಾದಿಯಾಗಿ {ಮೀನ ರಾಶಿಯಿಂದ ಎಣಿಸಲಾಗಿ}ಯುಗ್ಮ{ಸಮ} ರಾಶಿಯಾಗಿದ್ದರೆ ರಾಶಿ ಕೂಟವು ಶುಭವೆಂದು ಪರಿಗಣಿಸಬೇಕು.

 [ಐ] ವಶ್ಯ ಕೂಟ;ದಿನಕೂಟ; ಪರಸ್ಪರ ಮೈತ್ರಿ ಯಾ ಏಕಾಧಿಪತಿತ್ವವಿದ್ದಲ್ಲಿ ೨-೧೨[ದ್ವಿದ್ವಾದಶ];೬-೮[ಷಷ್ಠಾಷ್ಟಕ]೫-೯[ಪಂಚಮ ನವಮ] ರಾಶಿಕೂಟಗಳನ್ನು ಶುಭ ಕೂಟವೆಂದು ಪರಿಗಣಿಸಬೇಕು.

 [ಒ] ವರನ ಜನ್ಮ ರಾಶಿಯು ಸಮರಾಶಿಯಾಗಿದ್ದಲ್ಲಿ ೬-೮[ಷಷ್ಠಾಷ್ಟಕ]ದೋಷವಿಲ್ಲವೆಂದು ಪರಿಗಣಿಸಬೇಕು.

 [ಓ] ಮೇಷ-ಸಿಂಹ;ಕರ್ಕಟಕ-ವೃಶ್ಚಿಕಗಳು ೫-೯[ಪಂಚಮ ನವಮ] ಆದರೂ ಶುಭವೆಂದು ಪರಿಗಣಿಸಬೇಕು.

 [ಔ] ಕನ್ಯಾವರರ ರಾಶಿಗಳು ಪರಸ್ಪರ ಚತುರ್ಥ ದಶಮ[೪-೧೦] ಅಥವಾ ತೃತೀಯ ಏಕಾದಶ[೩-೧೧]ಆದರೂ ಶುಭವೆಂದು ಕೆಲವು ಶಾಸ್ತ್ರಕಾರರ ಅಭಿಮತವಿದೆ.

 ೭ ಗ್ರಹ ಮೈತ್ರಿ ಕೂಟ:-
                 [ಅ] ಸ್ತ್ರೀ ದೀರ್ಘ; ನಾಡಿ; ರಜ್ಜು;ರಾಶಿ ಕೂಟಗಳು ಶುಭವಾಗಿದ್ದಲ್ಲಿ ಗ್ರಹ ಮೈತ್ರಿ ಇಲ್ಲದಿದ್ದರೂ ಭಾಧಕವಲ್ಲ.
 [ಆ]ಸ್ತ್ರೀ ದೀರ್ಘ ಕೂಟವಿದ್ದು, ಕನ್ಯಾವರರ ರಾಶಿಗಳು ಸಮ ಸಪ್ತಕ[೭-೭];ಮತ್ತು ೩-೧೧ ನೇ ರಾಶಿಗಳ ಅಧಿಪತಿಗಳ ಪೈಕಿ ಯಾರಾದರೂ ಒಬ್ಬರು ಮಿತ್ರರಾಗಿದ್ದಲ್ಲಿ, ಮಿತ್ರ-ಶತ್ರು ಸಮವಾಗಿಯೂ, ಸಮ-ಮಿತ್ರವು ಮಿತ್ರವಾಗಿಯೂ ಆಗುವುದರಿಂದ ಗ್ರಹಮೈತ್ರಿ ಕೂಟವನ್ನು ಶುಭವೆಂದು ಪರಿಗಣಿಸಬೇಕು.

 [ಇ]ಕನ್ಯಾವರರ ಜನ್ಮ ರಾಶ್ಯಧಿಪತಿಗಳು ಶತ್ರುಗಳಾಗಿದ್ದರೂ ಕನ್ಯಾವರರ ಚಂದ್ರ ನವಾಂಶಾಧಿಪತಿಗಳು ಬಲಯುಕ್ತರಾಗಿದ್ದು ಅವರಿಗೆ ಮಿತ್ರತ್ವವಿದ್ದಲ್ಲಿ ಗ್ರಹಮೈತ್ರಿಕೂಟವನ್ನು ಶುಭವೆಂದು ಪರಿಗಣಿಸಬೇಕು.

 [ಈ]ಕನ್ಯಾವರರ ಜನ್ಮ ರಾಶ್ಯಧಿಪತಿಗಳಿಗೆ ಮಿತ್ರತ್ವ,ಅಥವಾ ಕನ್ಯಾವರರ ಜನ್ಮ ನಕ್ಷತ್ರ ನವಾಂಶ ರಾಶ್ಯಧಿಪತಿಗಳು ಮಿತ್ರರಾಗಿದ್ದರೂ ಗ್ರಹಮೈತ್ರಿ ಕೂಟ ಶುಭವೆಂದು ಪರಿಗಣಿಸಬೇಕು.

 ೮ ರಜ್ಜು ಕೂಟ:-
               ದಿನಕೂಟ;ಮಾಹೇಂದ್ರಕೂಟ;ರಾಶಿಕೂಟ; ಗ್ರಹಮೈತ್ರಿಕೂಟಗಳು ಶುಭವಾಗಿದ್ದಲ್ಲಿ ಅಶುಭ ರಜ್ಜು ಕೂಟವನ್ನು ದೋಷವೆಂದು ಪರಿಗಣಿಸದೆ ಶುಭವೆಂದು ಪರಿಗಣಿಸಬೇಕು.

 ೯  ನಾಡಿ ಕೂಟ:-

     [ಅ]ಮಾಹೇಂದ್ರ ಕೂಟ, ದಿನ ಕೂಟ, ಯೋನಿಕೂಟ,ಗ್ರಹ ಮೈತ್ರಿ ಕೂಟಗಳು ಶುಭವಾಗಿದ್ದಲ್ಲಿ ಅಶುಭ ನಾಡಿ ಕೂಟವಾಗಿದ್ದರೂ ಶುಭವೆಂದು ಪರಿಗಣಿಸಬೇಕು.

   [ಆ]ಕನ್ಯಾವರರ ಜನ್ಮ ನಕ್ಷತ್ರವು ಏಕರಾಶಿಯಾಗಿ ಭಿನ್ನ ನಕ್ಷತ್ರವಾಗಿದ್ದರೂ,ಅಥವಾ ಒಂದೇ ನಕ್ಷತ್ರವಾವಾಗಿ ಭಿನ್ನರಾಶಿಯಾಗಿದ್ದರೂ ನಾಡಿ ಕೂಟ ದೋಷವಿಲ್ಲ.

 [ಇ] ಕನ್ಯಾವರರ ಜನ್ಮ ನಕ್ಷತ್ರವು ಆದಿ ನಾಡಿಯಾಗಿ ಅಶ್ವಿನಿ,ಆರ್ದ್ರೆ,ಪುನರ್ವಸು,ಉತ್ತರೆ,ಹಸ್ತ,ಜ್ಯೇಷ್ಠ,ಮೂಲ,ಶತಭಿಷೆ,ಪೂರ್ವಾಭದ್ರೆಯಾಗಿದ್ದರೆ;ಹಾಗೆಯೇ ಮಧ್ಯ ನಾಡಿಯ ಭರಣಿ,ಮೃಗಶಿರಾ,ಪುಷ್ಯಾ,ಹುಬ್ಬೆ[ಪೂರ್ವಾ ಪಲ್ಗುಣ],ಚಿತ್ರ, ಅನುರಾಧ,ಪೂರ್ವಾಷಾಢ,ಉತ್ತರಾಭದ್ರೆಯಾಗಿದ್ದರೆ;ಅದರಂತೆಯೇ ಅಂತ್ಯ ನಾಡಿಯ ಕೃತ್ತಿಕಾ,ಆಶ್ಲೇಷಾ,ಮಖಾ[ಮಘಾ],ಸ್ವಾತಿ,ವಿಶಾಖಾ,ಉತ್ತರಾಷಾಢ,ಶ್ರವಣ,ರೇವತಿಯಾಗಿದ್ದರೆ ಏಕನಾಡಿ ದೋಷವಿಲ್ಲ.

 [ಈ] ವಿಶಾಖಾ, ಅನುರಾಧಾ, ಧನಿಷ್ಟ, ರೇವತಿ,ಹಸ್ತ,ಸ್ವಾತಿ,ಆರ್ದ್ರಾ,ಪೂರ್ವಾಭದ್ರಾ -ಈ ಎಂಟು ನಕ್ಷತ್ರಗಳಲ್ಲಿ ಕನ್ಯೆಅಥವಾ ವರ ಈ ಇಬ್ಬರ ಪೈಕಿ ಒಬ್ಬರು ಜನಿಸಿದ್ದರೆ ನಾಡಿ ದೋಷವಿಲ್ಲ. ಇದು ಶುಭ ಫಲದಾಯಕವಾಗುವುದು.

[ಉ] ಉತ್ತರಾಭದ್ರಾ,ರೇವತಿ,ರೋಹಿಣಿ,ವಿಶಾಖಾ,ಶ್ರವಣ,ಆರ್ದ್ರಾ,ಪುಷ್ಯ,ಮಘಾ-ಈ ಎಂಟು ನಕ್ಷತ್ರಗಳಲ್ಲಿ ವರ ಅಥವಾ ಕನ್ಯೆಯ ಜನ್ಮ ನಕ್ಷತ್ರವಿದ್ದರೆ ನಾಡಿ ದೋಷ ಶಾಂತವಾಗುತ್ತದೆ ಎಂಬುದು ಕೆಲವು ಶಾಸ್ತ್ರಕಾರರ ಮತ.

[ಊ] ಭರಣಿ,ಮೃಗಶಿರಾ,ಶತಭಿಷ, ಹಸ್ತಾ ,ಪೂರ್ವಾಷಾಢ ಮತ್ತು ಆಶ್ಲೇಷ ನಕ್ಷತ್ರಗಳಲ್ಲಿ ಜನಿಸಿದರೂ ನಾಡಿ ದೋಷವಿರುವುದಿಲ್ಲವೆಂಬುದು ಕಾಲಾಮೃತಕಾರರ ಮತ.

  ಟಿಪ್ಪಣಿ:-ಈ ರೀತಿಯಾಗಿ ನಕ್ಷ್ತ್ರಗಳ ಆಧಾರದಿಂದ ಏಕನಾಡಿ ದೋಷವಿಲ್ಲವೆಂದು ಪರಿಗಣಿಸಲಾಗಿರುವ ಅಪವಾದಗಳ ಆಧಾರದಲ್ಲಿ ನಾಡಿ ಕೂಟವನ್ನು ಶುಭವೆಂದು ನಿರ್ಧರಿಸುವುದು ರೂಢಿಯಲ್ಲಿರುವ ನಿಯಮಗಳಿಗೆ ವಿರುಧ್ಧವಾಗಿರುವುದರಿಂದ ರೂಢಿಯಲ್ಲಿರುವ ನಿಯಮಗಳನ್ನು ಅನುಸರಿಸುವುದು ಉತ್ತಮವೆಂದು ಕೆಅವು ಶಾಸ್ತ್ರಕಾರರ ಅಭಿಮತವಾಗಿದೆ.

                ಸ್ತ್ರೀಪೂರ್ವ ನಕ್ಷತ್ರ ದೋಷಗಳಿಗೆ ಅಪವಾದಗಳು

 ೧ ಅಶ್ವಿನಿ,ಕೃತ್ತಿಕಾ,ರೋಹಿಣಿ,ಮೃಗಶಿರಾ, ಆರ್ದ್ರಾ,
ಮಘಾ, ಹಸ್ತ,ಸ್ವಾತಿ,ವಿಶಾಖಾ,ಮೂಲಾ, ಪೂರ್ವಾಷಾಢ,ಉತ್ತರಾಷಾಢ, ಶತಭಿಷಾ ಈನಕ್ಷತ್ರಗಳಲ್ಲಿ ಕನ್ಯೆಯದು ಪೂರ್ವ ಪಾದವಾಗಿ ವರನದು ಮುಂದಿನ ಪಾದವಾಗಿ ಇದ್ದರೂ ,ಕನ್ಯಾವರರ ರಾಶಿಗಳು ಒಂದೇ ಆಗಿದ್ದಲ್ಲಿ ಸ್ತ್ರೀಪೂರ್ವ ನಕ್ಷತ್ರ ದೋಷವಿಲ್ಲ.

 ೨ ಅಶ್ವಿನಿ,ಕೃತ್ತಿಕಾ, ರೋಹಿಣಿ,ಮೃಗಶಿರಾ,ಪುನರ್ವಸು, ಹಸ್ತಾ,ವಿಶಾಖಾ, ಅನುರಾಧ,ಮೂಲಾ,ಪೂರ್ವಾಷಾಢ, ಶತಭಿಷಾ ಇವುಗಳು ವರನ ಜನ್ಮ ನಕ್ಷತ್ರವಾಗಿದ್ದು, ಇವುಗಳ ಹಿಂದಿನ ನಕ್ಷತ್ರವು ಕನ್ಯೆಯ ಜನ್ಮ ನಕ್ಷತ್ರವಾಗಿದ್ದಲ್ಲಿ ಸ್ತ್ರೀ ಪೂರ್ವ ನಕ್ಷತ್ರ ದೋಷವಿರುವುದಿಲ್ಲ.

 ವರ್ಜ್ಯ ನಕ್ಷತ್ರಗಳು:-ಸ್ತ್ರೀ ಪೂರ್ವ ನಕ್ಷತ್ರಗಳಲ್ಲಿ ಕನ್ಯಾವರರ ನಕ್ಷತ್ರಗಳು ಬೇರೆ ಬೇರೆ ರಾಶಿಯಲ್ಲಿದ್ದರೂ ಸಹಾ ಭರಣಿ,ಆಶ್ಲೇಷಾ,ಹುಬ್ಬಾ[ಪೂರ್ವಾ ಫಲ್ಗುಣ],ಜ್ಯೇಷ್ಠಾ,ಧನಿಷ್ಠಾ,ಪೂರ್ವಾಭದ್ರ,ಉತ್ತರಾಭದ್ರ,ರೇವತಿ ಈ ನಕ್ಷತ್ರಗಳು ಕನ್ಯೆಯ ಜನ್ಮ ನಕ್ಷತ್ರಗಳಾಗಿದ್ದಲ್ಲಿ ಸರ್ವಥಾ ನಿಷಿಧ್ಧ ಎಂಬುದು ಅನೇಕ ಋಷಿಗಳ ಅಭಿಮತವಿದೆ.

  ಟಿಪ್ಪಣಿ:-ಸ್ತ್ರೀ ಪೂರ್ವ ನಕ್ಷತ್ರ ವಿಚಾರವು ಕನ್ಯಾವರರ ಜನ್ಮ ನಕ್ಷತ್ರಕ್ಕೆ ಮಾತ್ರಾ ಅನ್ವಯಿಸುತ್ತದೆಯೇ ಹೊರತು ನಾಮ ನಕ್ಷತ್ರಗಳಿಗಲ್ಲ.

॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒
                                                               ಓಮ್ ಸ್ವಸ್ತಿ
“““““““““““““““““““““““““““““““““““““““““““““““““““““““““““““““'''''''''''''''''''''''''''''''''''''''''''''''''''''''''''''''''''''''''''''''''''''''''''
                                                                     ವಿಚಾರ-೪

                                         ನೀವು ಅದೃಷ್ಟ ಹರಳಿನ ಹಂಬಲದಲ್ಲಿರುವಿರಾ?
                                         *********************************
       ನೀವು ಅದೃಷ್ಟರತ್ನದ ಬಗ್ಗೆ ತಿಳಿಯಲಿಚ್ಚಿಸುವಿರಾ?. ಆಂಗ್ಲ ಪದ್ಧತಿಯಲ್ಲಿ ಜನವರಿ ಆದಿಯಾಗಿ ೧೨ ತಿಂಗಳುಗಳಿಗೆ ಪ್ರತ್ಯೇಕ ಪ್ರತ್ಯೇಕ ರತ್ನಗಳನ್ನು ಹೇಳಲಾಗುತ್ತಿದ್ದು ವ್ಯಕ್ತಿಯ ಜನ್ಮ ತಿಂಗಳಿಗೆ ರತ್ನವನ್ನು ಸೂಚಿಸುವ ವಿಧಾನವೊಂದಿದ್ದರೆ ವ್ಯಕ್ತಿಯ ಜನನ ದಿನಾಂಕದಂದು ಸೂರ್ಯನು ಇರುವ ರಾಶಿಗೆ ಸೂಚಿಸುವ ರತ್ನವನ್ನು ಹೇಳುವ ವಿಧಾನವೂ  ಇದೆ.
ಜನನದಿನಾಂಕದ ಆಧಾರದಲ್ಲಿ ಸೂರ್ಯನಿರುವ ರಾಶಿಯನ್ನು ನಿರ್ಧರಿಸುವ ಆಂಗ್ಲ ವಿಧಾನಕ್ಕೂ ಭಾರತೀಯ ವಿಧಾನಕ್ಕೂ ಗಣಿತ ಕ್ರಿಯೆಯಲ್ಲಿ ವ್ಯತ್ಯಾಸವಿದ್ದು ಕೆಲವು ದಿನಗಳ ವ್ಯತ್ಯಾಸ ಕಂಡುಬರುತ್ತಿದೆ. ಭಾರತೀಯ ಪದ್ಧತಿಯು ಆಂಗ್ಲ ವಿಧಾನವನ್ನು ಒಪ್ಪುತ್ತಿಲ್ಲ.ಮತ್ತು ಆಂಗ್ಲ ವಿಧಾನದ ಮೂಲಕ ನಿರ್ಧರಿಸಿದ ರತ್ನವನ್ನು ಧರಿಸುವುದರಿಂದ ಒಳಿತಾಗುವ ಬದಲು ಕೆಡುಕಾಗುವ ಸಂಭವಗಳೇ ಜಾಸ್ತಿ ಎಂದು ಪ್ರತಿಪಾದಿಸುತ್ತಿದೆ.
ಭಾರತೀಯ ಪದ್ದತಿಯಲ್ಲಿ ಜನ್ಮಲಗ್ನ ಆಧಾರಿತವಾಗಿ[೧]. ಜನ್ಮ ಕಾಲದಲ್ಲಿ ಚಂದ್ರನು ಯಾವ ರಾಶಿಯಲ್ಲಿರುತ್ತಾನೆಯೋ ಆ ರಾಶಿ ಆಧಾರಿತವಾಗಿ[೨]. ಜನನ ದಿನ ಸೂರ್ಯನು ಇರುವ ರಾಶಿಯ ಆಧಾರದಲ್ಲಿ ರತ್ನವನ್ನು ಸೂಚಿಸಲಾಗಿದೆ[೩]. ಯಾರಿಗೆ ಜನ್ಮ ಕುಂಡಲಿ ಇರುವುದೋ ಅವರಿಗೆ ಜನ್ಮ ಲಗ್ನ ಆಧಾರಿತವಾಗಿ, ಯಾರಿಗೆ ಜನ್ಮ ನಕ್ಷತ್ರವಾಗಲೀ, ಜನ್ಮ ಕುಂಡಲಿಯಾಗಲೀ ಇಲ್ಲದೆ ಕೇವಲ ಹುಟ್ಟಿದ ದಿನಾಂಕ ಮಾತ್ರಾ ತಿಳಿದಿರುವುದೋ ಅವರಿಗೆ ಆ ದಿನ ಸೂರ್ಯನು ಇರುವ ರಾಶಿಯ ಆಧಾರದಲ್ಲಿ ; ಯಾರಿಗೆ ಜನ್ಮ ,ಕುಂಡಲಿಯಾಗಲೀ ಜನ್ಮ ದಿನಾಂಕವಾಗಲೀ ಗೊತ್ತಿಲ್ಲದಿದ್ದು ಕೇವಲ ಜನ್ಮ ನಕ್ಷತ್ರ ತಿಳಿದಿದೆಯೋ ಅವರಿಗೆ ನಕ್ಷತ್ರ ಆಧಾರಿತವಾಗಿ ಚಂದ್ರ ರಾಶಿಯನ್ನು ನಿರ್ಧರಿಸಿ ಆ ರಾಶಿಯ ಆಧಾರದಲ್ಲಿ ಆಯಾ ರಾಶಿ ಲಗ್ನಗಳಿಗೆ ಸಂಬಂಧಿಸಿದ ರತ್ನವನ್ನು ಹೇಳುವುದಾಗಿದೆ. ಅನುಕ್ರಮವಾಗಿ ೧.೨,೩ ನೇ ಪದ್ಧತಿಗಳು ೧,೨,೩,ನೇ ಸ್ಥಾನದಲ್ಲಿ ಫಲವನ್ನು ಕೊಡುತ್ತವೆ ಎಂದು ಭಾರತೀಯ ಪದ್ಧತಿ ತಿಳಿಸುತ್ತದೆ.
      ಆದರೆ ಕುಂಡಲಿಯನ್ನು ಪರಿಶೋಧಿಸಿ ಆ ಕುಂಡಲಿಗೆ ಯಾವ ಗ್ರಹವು ಶುಭಕಾರವಾಗಿರುವುದೋ, ಯಾವ ಗ್ರಹವು ಯೋಗಕಾರಕ ಗ್ರಹವಾಗಿರುವುದೋ ಆ ಗ್ರಹಕ್ಕೆ ಸೂಚಿಸಿದ ಹರಳನ್ನು ಧರಿಸುವುದು ಉತ್ತಮ ವಿಧಾನವೆಂಬುದು ಈ ಲೇಖಕನ ಅಭಿಮತ.
ನವರತ್ನಗಳಲ್ಲಿ ಗ್ರಹಗಳಿಗಿರುವಂತೆಯೆ ಶತ್ರುತ್ವ ಮಿತ್ರತ್ವವಿದೆ.ಹಾಗಾಗಿ ಅವುಗಳನ್ನು ಧರಿಸಲು ಇಚ್ಚಿಸುವವರು ಇದರ ಬಗ್ಗೆ ತಿಳಿದು ಕೊಳ್ಳಬೇಕಾದ್ದು ಹಿತಕರ.ಇಲ್ಲವಾದಲ್ಲಿ ಶುಭ ಫಲದ ಅಪೇಕ್ಷೆಯಿಂದ ಧರಿಸಿದ ರತ್ನ ಅಶುಭಫಲಕ್ಕೆ ನಾಂಧಿಯಾಗಬಹುದು. ನವರತ್ನದ ಉಂಗುರಕ್ಕೆ ಈ ನಿಯಮ ಅನ್ವಯಿಸುವುದಿಲ್ಲ ಎನ್ನುತ್ತಾರೆ.
ರತ್ನದ ಆಭರಣಗಳನ್ನು ಮೊತ್ತ ಮೊದಲು ಧರಿಸಲು ನಿಯಮಗಳಿವೆ.ಶುಭ ಮುಹೂರ್ತದಲ್ಲಿ, ಶುಕ್ಲ ಪಕ್ಷದಲ್ಲಿ,ಆಯಾ ಗ್ರಹರಿಗೆ ಸೂಚಿಸಿದ ವಾರದಲ್ಲಿ,ಕುಲದೇವರ ಸನ್ನಿಧಾನದಲ್ಲಿ ಇರಿಸಿ ಪಂಚಗವ್ಯದಿಂದ ಶುದ್ಧೀಕರಿಸಿ, ಅದಕ್ಕೆ ಜಲಾಭಿಷೇಕ,ಕ್ಷೀರಾಭಿಷೇಕ,ಪುನಹ ಜಲಾಭಿಷೇಕ ಮಾಡಿ ನಂತರ ದೇವರಿಗೆ ನಿವೇದಿಸಿ ಪ್ರಸಾದ ರೂಪದಲ್ಲಿ ಸ್ವೀಕರಿಸಿ ಧರಿಸಬೆಕಾದುದು ನಿಯಮ.
ರತ್ನ ಖಚಿತ ಉಂಗುರವನ್ನು ಧರಿಸಲು ಕೂಡಾ ನಿಯಮಗಳಿವೆ.ಮೇಲೆ ತಿಳಿಸಿದಂತೆ ದೇವರಿಗೆ ನಿವೇದಿಸಿ ಸ್ವೀಕರಿಸಿದ ನಂತರ ಆಯಾ ಗ್ರಹಗಳಿಗೆ ಹೇಳಿರುವ, ಬಲ ಹಸ್ತದ ಬೆರಳಿಗೆ ಧರಿಸಬೇಕಾದುದು ಮುಖ್ಯ.ಸ್ತ್ರೀಯರಿಗೆ ಎಡ ಹಸ್ತದ ಬೆರಳನ್ನು ಹೇಳುವುದಿದೆ.  ಉಂಗುರ ಧರಿಸುವ ಬೆರಳಿಗೆ ಸಂಬಂಧಿಸಿದ ಗ್ರಹಕ್ಕೂ, ಆ ಬೆರಳ ಬುಡದಲ್ಲಿರುವ ಹಸ್ತ ಪರ್ವಗಳಿಗೆ ಸಂಭಂಧಿಸಿದ ಗ್ರಹಕ್ಕೂ ಮಿತ್ರತ್ವ ಅಥವಾ ಸಮ ಮಿತ್ರತ್ವ ಇರಬೇಕಾದುದು ಅತೀ ಮುಖ್ಯ..ಶತ್ರುತ್ವ ಅಥವಾ ಸಮ ಶತ್ರುತ್ವವಿದ್ದಲ್ಲಿ ಅಶುಭ ಫಲಗಳು ಕಟ್ಟಿಟ್ಟ ಬುತ್ತಿಯಾಗಬಹುದು.
ಧರಿಸಬೇಕಾದ ರತ್ನಕ್ಕೂ ತೂಕದ ನಿಯಮಗಳಿವೆ. ಪುರುಷರಿಗೆ ಸೂಚಿಸುವ ರತ್ನದ ತೂಕದ ೧/೨ ಅಂಶ ತೂಕದ ಹರಳನ್ನು ಸ್ತ್ರೀಯರಿಗೆ ಹೇಳಲಾಗಿದೆ.ಇನ್ನೂ ಒಂದು ಅಂಶವನ್ನು ಗಮನಿಸುವುದು ಒಳಿತು.ಪ್ರತಿಯೊಬ್ಬ ವ್ಯಕ್ತಿಗೂ ಒಂದು ಯೋಗಕಾರಕ ಗ್ರಹವಿರುತ್ತದೆ.ಆ ಯೋಗಕಾರಕ ಗ್ರಹಕ್ಕೆ ಹೇಳಲಾಗುವ ರತ್ನದ ಧಾರಣೆ ಶ್ರೇಷ್ಠ ಫಲವನ್ನು ಕೊಡಬಲ್ಲುದು. 
               ಆತ್ಮೀಯ ಸಲಹೆ:-ರತ್ನದ ನೈಜ ಹರಳುಗಳಿಗೆ ದುಬಾರಿ ಬೆಲೆಯಿದೆ.ಒಂದು ವೇಳೆ ವ್ಯಕ್ತಿಗೆ ಸೂಚಿಸಲಾಗುವ ರತ್ನವು ಅನುಕೂಲಕರ ಫಲವನ್ನು ನೀಡದಿದ್ದಲ್ಲಿ ಆರ್ಥಿಕವಾಗಿ ಬಹಳ ಹಾನಿಗೊಳಗಾಗಬೇಕಾಗುತ್ತದೆ. ಪ್ರತಿಯೊಂದು ನೈಜ ರತ್ನಕ್ಕೆ ಬದಲಾಗಿ ಕಡಿಮೆ ದರದ ಉಪ ರತ್ನದ ಹರಳುಗಳು ದೊರಕುತ್ತವೆ. ೬ ತಿಂಗಳ ಕಾಲ ಕಡಿಮೆ ದರದ ಹರಳನ್ನು ಅಳವಡಿಸಿದ ಉಂಗುರವನ್ನಾಗಲೀ,ಆಭರಣವನ್ನಾಗಲೀ ಧರಿಸಿ ನಂತರ ನೈಜರತ್ನವನ್ನು ಕೊಂಡುಕೊಳ್ಳುವುದು ಹಿತಕರ. ಇದರಿಂದ ಆಗುವ ನಷ್ಟದ ಪ್ರಮಾಣ ಕಡಿಮೆ.

27 ನಕ್ಷತ್ರಗಳು ಮತ್ತದರ ಗಾಯತ್ರೀ ಮಂತ್ರಗಳು:
 
ಜಾತಕದಲ್ಲಿ ನಿಮ್ಮ ನಕ್ಷತ್ರ ಯಾವುದೆಂದು ತಿಳಿದು ಅದರ ಗಾಯತ್ರಿ ಮಂತ್ರವನ್ನು ತ್ರಿಕರಣ ಪೂರ್ವಕವಾಗಿ ಶುದ್ಧರಾಗಿ ಪೂರ್ವಾಭಿಮುಖವಾಗಿ ಸೂರ್ಯನ ನೋಡುತ್ತಾ ೯ರಿಂದ ೧೦೮ ಮಂತ್ರ ಜಪಿಸುವುದರಿಂದ ವಿಶೇಷ ನಕ್ಷತ್ರ ಸಂಬಂಧವಾದ ಶಕ್ತಿ ದೊರೆಯುತ್ತದೆ. 
 
1.ಅಶ್ವಿನಿ:
ಓಂ ಶ್ವೇತವರ್ಣೈ ವಿದ್ಮಹೇl
ಸುಧಾಕರಾಯೈ ಧೀಮಹಿl
ತನ್ನೋ ಅಶ್ವಿನೇನ ಪ್ರಚೋದಯಾತ್ll
 
2. ಭರಣಿ:
ಓಂ ಕೃಷ್ಣವರ್ಣೈ ವಿದ್ಮಹೇl
ದಂಡಧರಾಯೈ ಧೀಮಹಿl
ತನ್ನೋ ಭರಣೀ ಪ್ರಚೋದಯಾತ್ll
 
3. ಕೃತ್ತಿಕಾ:
ಓಂ ವಣ್ಣಿದೇಹಾಯೈ ವಿದ್ಮಹೇl
ಮಹಾತಪಾಯೈ ಧೀಮಹಿl
ತನ್ನೋ ಕೃತ್ತಿಕಾ ಪ್ರಚೋದಯಾತ್ll
 
4.ರೋಹಿಣಿ:
ಓಂ ಪ್ರಜಾವಿರುದ್ಧೈ ಚ ವಿದ್ಮಹೇl
ವಿಶ್ವರೂಪಾಯೈ ಧೀಮಹಿl
ತನ್ನೋ ರೋಹಿಣೀ ಪ್ರಚೋದಯಾತ್ll
 
5. ಮ,ಗಶಿರಾ:
ಓಂ ಶಶಿಶೇಖರಾಯ ವಿದ್ಮಹೇl
ಮಹಾರಾಜಾಯ ಧೀಮಹಿl
ತನ್ನೋ ಮ,ಗಶೀರ್ಷಾಃ ಪ್ರಚೋದಯಾತ್ll
 
6. ಆರ್ದ್ರಾ:
ಓಂ ಮಹಾಶ್ರೇಷ್ಠಾಯ ವಿದ್ಮಹೇl
ಪಶುಂ ತನಾಯ ಧೀಮಹಿl
ತನ್ನೋ ಆರ್ದ್ರಾ ಪ್ರಚೋದಯಾತ್ll
 
7. ಪುನರ್ವಸು:
ಓಂ ಪ್ರಜಾವರುಧ್ಯೈ ಚ ವಿದ್ಮಹೇl
ಅದಿತಿ ಪುತ್ರಾಯ ಧೀಮಹಿl
ತನ್ನೋ ಪುನರ್ವಸು ಪ್ರಚೋದಯಾತ್ll
 
8. ಪುಷ್ಯಾ:
ಓಂ ಬ್ರಹ್ಮವರ್ಚಸಾಯ ವಿದ್ಮಹೇl
ಮಹಾದಿಶಾಯಾಯ ಧೀಮಹಿl
ತನ್ನೋ ಪುಷ್ಯಃ ಪ್ರಚೋದಯಾತ್ll
 
9. ಆಶ್ಲೇಷಾ:
ಓಂ ಸರ್ಪರಾಜಾಯ ವಿದ್ಮಹೇl
ಮಹಾರೋಚನಾಯ ಧೀಮಹಿl
ತನ್ನೋ ಆಶ್ಲೇಷಃ ಪ್ರಚೋದಯಾತ್ll
 
10. ಮಖಾ:
ಓಂ ಮಹಾ ಅನಗಾಯ ವಿದ್ಮಹೇl
ಪಿತ್ರಿಯಾದೇವಾಯ ಧೀಮಹಿl
ತನ್ನೋ ಮಖಃ ಪ್ರಚೋದಯಾತ್ll
 
11. ಪುಬ್ಬಾ:
ಓಂ ಅರಿಯಂನಾಯ ವಿದ್ಮಹೇl
ಪಶುದೇಹಾಯ ಧೀಮಹಿl
ತನ್ನೋ ಪೂರ್ವ ಫಲ್ಗುಣಿ ಪ್ರಚೋದಯಾತ್ll
 
12. ಉತ್ತರಾ:
ಓಂ ಮಹಾಬಕಾಯೈ ವಿದ್ಮಹೇl
ಮಹಾಶ್ರೇಷ್ಠಾಯೈ ಧೀಮಹಿl
ತನ್ನೋ ಉತ್ತರ ಫಲ್ಗುಣಿ ಪ್ರಚೋದಯಾತ್ll
 
13. ಹಸ್ತಾ:
ಓಂ ಪ್ರಯಚ್ಚತಾಯೈ ವಿದ್ಮಹೇl
ಪ್ರಕೃಪ್ರಣೀತಾಯೈ ಧೀಮಹಿl
ತನ್ನೋ ಹಸ್ತಾ ಪ್ರಚೋದಯಾತ್ll
 
14. ಚಿತ್ತಾ:
ಓಂ ಮಹಾದೃಷ್ಟಾಯೈ ವಿದ್ಮಹೇl
ಪ್ರಜಾರಪಾಯೈ ಧೀಮಹಿl
ತನ್ನೋ ಚೈತ್ರಾಃ ಪ್ರಚೋದಯಾತ್ll
 
15. ಸ್ವಾತಿ:
ಓಂ ಕಾಮಸಾರಾಯೈ ವಿದ್ಮಹೇl
ಮಹಾನಿಷ್ಠಾಯೈ ಧೀಮಹಿl
ತನ್ನೋ ಸ್ವಾತಿ ಪ್ರಚೋದಯಾತ್ll
 
16. ವಿಶಾಖಾ:
ಓಂ ಇಂದ್ರಾಗ್ನೇಸ್ಯೈ ವಿದ್ಮಹೇl
ಮಹಾಶ್ರೇಷ್ಠಾಯೈ ಚ ಧೀಮಹಿl
ತನ್ನೋ ವಿಶಾಖಾ ಪ್ರಚೋದಯಾತ್ll
 
17. ಅನೂರಾಧಾ:
ಓಂ ಮಿತ್ರದೇಯಾಯೈ ವಿದ್ಮಹೇl
ಮಹಾಮಿತ್ರಾಯ ಧೀಮಹಿl
ತನ್ನೋ ಅನೂರಾಧಾ ಪ್ರಚೋದಯಾತ್ll
 
18. ಜ್ಯೇಷ್ಠಾ:
ಓಂ ಜ್ಯೇಷ್ಠಾಯೈ ವಿದ್ಮಹೇl
ಮಹಾಜ್ಯೇಷ್ಠಾಯೈ ಧೀಮಹಿl
ತನ್ನೋ ಜ್ಯೇಷ್ಠಾ ಪ್ರಚೋದಯಾತ್ll
 
19 ಮೂಲಾ:
ಓಂ ಪ್ರಜಾಧಿಪಾಯೈ ವಿದ್ಮಹೇl
ಮಹಾಪ್ರಜಾಧಿಪಾಯೈ ಧೀಮಹಿl
ತನ್ನೋ ಮೂಲಾ ಪ್ರಚೋದಯಾತ್ll
 
20. ಪೂರ್ವಾಷಾಢಾ:
ಓಂ ಸಮುದ್ರಕಾಮಾಯೈ ವಿದ್ಮಹೇl
ಮಹಾಬೀಜಿತಾಯೈ ಧೀಮಹಿl
ತನ್ನೋ ಪೂರ್ವಾಷಾಢಾ ಪ್ರಚೋದಯಾತ್ll
 
21. ಉತ್ತರಾಷಾಢಾ:
ಓಂ ವಿಶ್ವೇದೇವಾಯ ವಿದ್ಮಹೇl
ಮಹಾಷಾಢಾಯ ಧೀಮಹಿl
ತನ್ನೋ ಉತ್ತರಾಷಾಢಾ ಪ್ರಚೋದಯಾತ್ll
 
22. ಶ್ರವಣಾ:
ಓಂ ಮಹಾಶ್ರೇಷ್ಠಾಯೈ ವಿದ್ಮಹೇl
ಪುಣ್ಯಶ್ಲೋಕಾಯ ಧೀಮಹಿl
ತನ್ನೋ ಶ್ರವಣ ಪ್ರಚೋದಯಾತ್ll
 
23. ಧನಿಷ್ಠಾ:
ಓಂ ಅಗ್ರನಾಥಾಯ ವಿದ್ಮಹೇl
ವಸೂಪ್ರೀತಾಯ ಧೀಮಹಿl
ತನ್ನೋ ಶರ್ವಿಷ್ಠಾ ಪ್ರಚೋದಯಾತ್ll
 
24. ಶತಭಿಷಾ:
ಓಂ ಭೇಷಜಾಯ ವಿದ್ಮಹೇl
ವರುಣದೇಹಾಯ ಧೀಮಹಿl
ತನ್ನೋ ಶತಭಿಷಾ ಪ್ರಚೋದಯಾತ್ll
 
25. ಪೂರ್ವಾಭಾದ್ರ:
ಓಂ ತೇಜಸ್ಕರಾಯ ವಿದ್ಮಹೇl
ಅಜರಕ ಪಾದಾಯ ಧೀಮಹಿl
ತನ್ನೋ ಪೂರ್ವಪ್ರೋಷ್ಟಪತ ಪ್ರಚೋದಯಾತ್ll
 
26. ಉತ್ತರಾಭಾದ್ರ:
ಓಂ ಅಹಿರಬುಧ್ನಾಯ ವಿದ್ಮಹೇl
ಪ್ರತಿಷ್ಠಾಪನಾಯ ಧೀಮಹಿl
ತನ್ನೋ ಉತ್ತರಪ್ರೋಷ್ಟಪತ ಪ್ರಚೋದಯಾತ್ll
 
27. ರೇವತಿ:
ಓಂ ವಿಶ್ವರೂಪಾಯ ವಿದ್ಮಹೇl
ಪೂಷ್ಣ ದೇಹಾಯ ಧೀಮಹಿl
ತನ್ನೋ ರೇವತಿ ಪ್ರಚೋದಯಾತ್ll


 
This website was created for free with Own-Free-Website.com. Would you also like to have your own website?
Sign up for free