ಜನ್ಮನಕ್ಷತ್ರ ಫಲ
ಅಶ್ವಿನಿ
ಈ ನಕ್ಷತ್ರಕ್ಕೆ ಅಧಿದೇವತೆ ಕೇತು. ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರು ಮೊಂಡು ಸ್ವಭಾವದವರಾಗಿಯೂ, ಅತಿ ಬುದ್ಧಿವಂತರಾಗಿಯೂ ಇರುತ್ತಾರೆ. ವೃತ್ತಿಯಲ್ಲಿ ಸ್ವಂತ ಪ್ರೌಢಿಮೆಯಿಂದ ಸಂಪಾದನೆ ಮಾಡುತ್ತಾರೆ. ಇವರಿಗೆ ದೇವರಲ್ಲಿ ಅಪಾರ ಭಕ್ತಿ ಇರುತ್ತದೆ. ಬಂಧು ಜನರಲ್ಲಿ ವಿಶೇಷ ಪ್ರೀತಿಯುಳ್ಳವರಾಗಿಯೂ, ಸಜ್ಜನರನ್ನು ಸೇವಿಸುವರು. ಪುತ್ರ-ಮಿತ್ರ-ಕಳತ್ರರಿಗೆ ಸಂತೋಷವನ್ನುಂಟು ಮಾಡುವವರು. ಹಿತ ಮಾತುಗಾರಿಕೆಯಿಂದ ಮೇಲಾಧಿಕಾರಿಗಳ ಒಲವು ಗಳಿಸುವವರಾಗಿಯೂ ಇರುತ್ತಾರೆ. ಇವರ ಮನಸ್ಸು ಹಠ, ಸಾಧನೆಗಳಿಂದ ಕೂಡಿರುತ್ತದೆ. ಸಾಹಸ ಕೆಲಸಗಳಲ್ಲಿ ಇವರು ಅತಿ ಪ್ರಯತ್ನದಿಂದ ಜಯಗಳಿಸಿ ಕೀರ್ತಿವಂತರಾಗುತ್ತಾರೆ. ಇವರಿಗೆ ಭೂಮಿ, ಗೃಹ-ಹೊಲ ಗದ್ದೆಗಳಿಂದ ವರಮಾನವಿರುತ್ತದೆ.
ಭರಣಿ
ಈ ನಕ್ಶತ್ರಕ್ಕೆ ಅಧಿದೇವತೆ ಶುಕ್ರ. ಭರಣಿ ನಕ್ಷತ್ರದಲ್ಲಿ ಜನಿಸಿದವರು ವಿದ್ವಾಂಸರು, ಶ್ರೀಮಂತ ಸೌಲಭ್ಯವನ್ನು ಹೊಂದುವವರೂ ಆಗಿರುತ್ತಾರೆ.ಶುಕ್ರನ ನಕ್ಷತ್ರವಿದಾದ್ದರಿಂದ ಜಾತಕರಿಗೆ ಅಷ್ಟೈಶ್ವರ್ಯಗಳೂ ಲಭಿಸಿ ಸಂತೋಷ ಜೀವನ ಪ್ರಾಪ್ತವಾಗುವುದು. ಬೃಹತ್ ವ್ಯವಹಾರಗಳಲ್ಲಿ ಪಾಲುದಾರರಾಗಿ ವಾಣಿಜ್ಯ ಕ್ಷೇತ್ರದಲ್ಲಿ ಅಪಾರ ಕೀರ್ತಿ ಗೌರವಗಳಿಗೆ ಪಾತ್ರರಾಗುತ್ತಾರೆ. ಇವರಿಗೆ ಮದ್ಯ, ವಾಹನಗಳು ಹಾಗೂ ಶೃಂಗಾರ ಸಾಮಗ್ರಿಗಳ ಮಾರಾಟದಲ್ಲಿ ವಿಶೇಷ ಲಾಭ ದೊರಕುವುದು.ಷೇರು ಬಂಡವಾಳ ಹೂಡಿಕೆ ಮತ್ತು ಕೃಷಿ ಸಾಮಗ್ರಿಗಳ ಮಾರುವಿಕೆಯಿಂದ ಹಣ ಲಭಿಸುವುದು. ಇವರು ಸೂಕ್ಷ್ಮ ಸ್ವಭಾವದವರಾಗಿದ್ದೂ ಶೀಘ್ರ ಕೋಪಿಗಳಾಗಿರುತ್ತಾರೆ. ಸತ್ಯ-ನ್ಯಾಯ-ಧರ್ಮಾರ್ಥ ಚಿಂತನೆ ನಡೆಸುತ್ತಾರೆ. ಬಂಧು ಜನರಿಂದ ದೂರ ಸರಿದು ಭ್ರಷ್ಠತೆ ಅನುಭವಿಸುವ ಭರಣಿ ನಕ್ಷತ್ರದವರು ಸ್ತ್ರೀಯರಿಂದ ವಿಶೇಷವಾದ ಪ್ರೀತಿಯನ್ನು, ಹಣವನ್ನೂ ಗಳಿಸುತ್ತಾರೆ. ಕುಟುಂಬ ಜೀವನದಲ್ಲಿ ಅತಿ ಸೌಖ್ಯ ಹೊಂದುವುದರಲ್ಲಿ ಸೋಲುತ್ತಾರೆ. ವೃತ್ತಿ ಜೀವನದಲ್ಲಿ ಅಧಿಕಾರಿಗಳಿಂದ ಪ್ರಶಂಸೆ ಹೊಂದುವರು.
ಕೃತ್ತಿಕ
ಈ ನಕ್ಶತ್ರಕ್ಕೆ ಅಧಿದೇವತೆ ಸೂರ್ಯ. ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದವರು ಅಧಿಕಾರಯುತವಾಗಿ ಮಾತನಾಡುವವರು, ಜೀವನವನ್ನು ಕ್ರೀಡೆ ಎಂದು ತಿಳಿಸು ಉತ್ಸಾಹದಿಂದ ಕಾರ್ಯ ನಿರ್ವಹಿಸುವವರು, ಸೂಕ್ಷ್ಮ ಮನೋಭಾವನೆಗಳನ್ನು ಹೊಂದಿರುವ ಇವರು ಮಾನವೀಯ ದೃಷ್ಠಿಯಿಂದ ಅನೇಕರಿಗೆ ಉಪಕಾರವನ್ನು ಮಾಡುವರು. ಉನ್ನತ ವಿಚಾರವನ್ನು ಹೊಂದಿದವರು ಆಗುತ್ತಾರೆ. ಅಧಿಪತಿ ರವಿಯು ಪಾಪ ಗ್ರಹವಾದ್ದರಿಂದ ಇವರ ಸ್ವಭಾವ ಒರಟಾದರೂ ಹೃದಯ ನಿಷ್ಕಲ್ಮಶವಾಗಿರುತ್ತದೆ. ಉಚ್ಛ ವಿದ್ಯೆ ಉನ್ನತ ನಡುವಳಿಕೆಗಳನ್ನು ಪಡೆದು ಜಾತಕರು ಕುಟುಂಬದಲ್ಲಿ ಶ್ರೇಷ್ಠ ಮಟ್ಟದ ಸುಖಶಾಂತಿಗಳನ್ನು ಹೊಂದುತ್ತಾರೆ. ಆತ್ಮ ಜ್ಞಾನವನ್ನೂ ಸಹ ಸಂಪಾದಿಸಿ ಸಮಾಜದಲ್ಲಿ ನ್ಯಾಯ-ನೀತಿ-ಧರ್ಮಗಳಿಂದ ಶ್ರಮಿಸಿ ಅನೇಕರಿಗೆ ಮಾರ್ಗದರ್ಶಕರಾಗಿರುತ್ತಾರೆ. ತಾವು ಸಂಪಾದಿಸಿದ ತಾಂತ್ರಿಕ ವಿದ್ಯೆಯಿಂದ ಉನ್ನತ ಹುದ್ಧೆಗಳಿಸಿ ಅಪಾರ ಹಣ ಸಂಪಾದಿಸಿ ಜನಪ್ರೀಯರಾಗುತ್ತಾರೆ. ಇವರು ಪುತ್ರ-ಮಿತ್ರ-ಕಳತ್ರರಿಗಾಗಿ ಯಾವೂದೇ ತ್ಯಾಗಕ್ಕೂ ಸಿದ್ಧರಾಗಿ ಅವರ ಏಳಿಗೆಗಾಗಿ ಸದಾ ಶ್ರಮಿಸುತ್ತಾರೆ. ಇವರು ಇಂದ್ರಿಯ ಸುಖವನ್ನು ಹತೋಟಿಯಲ್ಲಿಟ್ಟುಕೊಂಡು ಧಾರ್ಮಿಕ ಜೀವನವನ್ನು ನಡೆಸುತ್ತಾರೆ.
ಪುನರ್ವಸು
ಈ ನಕ್ಷತ್ರಕ್ಕೆ ಅಧಿದೇವತೆ ಗುರು. ಪುನರ್ವಸು ನಕ್ಷತ್ರದಲ್ಲಿ ಹುಟ್ಟಿದವರು ಸದ್ಗುಣ ಸಂಪನ್ನರು, ಸದಾಚಾರಗಳಿಂದ ಭೂಷಿತರು, ಧರ್ಮಾರ್ಥ ಕಾಮ ಮೋಕ್ಷಗಳನ್ನು ಅನುಭವಿಸುವರು. ದೇವತಾಶೃದ್ಧೆಯಿಂದ ಉನ್ನತ ಜೀವನ ನಡೆಸುವರು. ನೇರವಾದ ಸ್ಪಷ್ಟ ಸ್ವಭಾವವನ್ನು ಹೊಂದಿದವರು. ಸ್ವಜನ ಪಕ್ಷಪಾತವಿಲ್ಲದೇ ನ್ಯಾಯವನ್ನು ತೀರ್ಮಾನಿಸಿಕೊಂಡು ಅದರಂತೆ ನಡೆಯುವರು. ತತ್ವಬದ್ಧವಾದ ಗುಣಗಳನ್ನು ಆರಾಧಿಸುವ ನಿಟ್ಟಿನಲ್ಲಿ ಲೋಕ ವಿರೋಧವನ್ನು ತಂದುಕೊಳ್ಳುವವರು. ಗುರುದೇವತಾ ಬ್ರಾಹ್ಮಣರನ್ನು ಆಶ್ರಯಿಸಿ ಉತ್ತಮ ಅಧಿಕಾರವನ್ನು, ಸುಖ-ಸಂಸಾರವನ್ನು ಪಡೆಯುವವರು ಆಗುವರು. ಇವರ ಕುಟುಂಬದಲ್ಲಿ ವಿರಸ-ವಿರಹ-ವೈಮನಸ್ಸು ಇದ್ದೇ ಇರುವುದು. ಆದರೇ ನಕ್ಷತ್ರದ ಅಧಿಪತಿ ಗುರುವಿನ ಶುಭಯೋಗದಿಂದ ತೊಂದರೆಗಳು ಕ್ಷಣಿಕವಾಗಿ ಬಂದು ಹಾಗೆಯೇ ಮಾಯವಾಗುತ್ತದೆ. ಶ್ರೀರಾಮನಂತೆ ಆದರ್ಶ ಪುರುಷನಾಗಿ ಆದರ್ಶ ಜೀವನವನ್ನು ನಡೆಸುವ ಧ್ಯೇಯವನ್ನು ಈ ನಕ್ಷತ್ರ ಸಂಜಾತರು ಹೊಂದಿರುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ಸುಪುಷ್ಟ ದೇಹವನ್ನು ಹೊಂದಿದ್ದೂ, ದೇಹಾರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುತ್ತಾರೆ. ನ್ಯಾಯಶಾಸ್ತ್ರ, ರಾಜಕೀಯ ಜ್ಞಾನ, ವೇದೋಪಾಸನೆಗಳಲ್ಲಿ ಪ್ರೌಢಿಮೆ ಸಾಧಿಸುತ್ತಾರೆ.
ಪುಷ್ಯ
ಈ ನಕ್ಷತ್ರಕ್ಕೆ ಅಧಿಪತಿ ಶನಿ. ಈ ನಕ್ಷತ್ರ ಸಂಜಾತರು ಮೃದು ಸ್ವಭಾವದವರು, ಧೀರರೂ, ಶೂರರೂ ಹಾಗೂ ಸಾಹಸಿಗಳೂ ಆಗಿರುತ್ತಾರೆ. ಆಕರ್ಷಕ ಕಣ್ಣುಗಳನ್ನು ಹಾಗೂ ಕೃಶ ದೇಹವನ್ನು ಹೊಂದಿರುತ್ತಾರೆ. ಇವರು ಸಂಪ್ರದಾಯ, ಆಚಾರ, ವಿಚಾರಗಳನ್ನು ಗೌರವಿಸಿ ಅದರಂತೆ ನಡೆಯುತ್ತಾರೆ. ಸಮಾಜದಲ್ಲಿ ತಮ್ಮ ವಿವೇಚನಾ ಶಕ್ತಿಯ ಮೂಲಕ ಸುಧಾರಣೆಗಳನ್ನು ಮಾಡುವ ಸಾಮಾಜಿಕ ತಜ್ಞರಾಗಿ ಜನಪ್ರೀಯರಾಗುತ್ತಾರೆ. ಶಿಕ್ಷಣ ಶಾಸ್ತ್ರ ಹಾಗೂ ರಾಜಕೀಯ ಜ್ಞಾನ ಮತ್ತು ಭಾಷಾ ಜ್ಞಾನಗಳಲ್ಲಿ ಪ್ರೌಢಿಮೆ ಸಾಧಿಸುವ ಪುಷ್ಯ ನಕ್ಷತ್ರದವರು ಜನಪ್ರಿಯ ವಿದ್ವಾಂಸರಾಗುತ್ತಾರೆ. ಇವರ ಕುಟುಂಬ ಜೀವನ ಅತ್ಯಾಕರ್ಷಕವಾಗಿದ್ದೂ, ಪೂರ್ವಪುಣ್ಯ ಯೋಗವನ್ನು ಸಂಪಾದಿಸಿರುವ ಪರಿಣಿತಿ ಸಾಧಿಸುವ ಇವರಿಗೆ ಅಷ್ಟೈಶ್ವರ್ಯಗಳು ಹಂತ ಹಂತವಾಗಿ ಪ್ರಾಪ್ತವಾಗುವವು. ಇವರಿಗೆ ಅತ್ಯುಗ್ರ ಕೋಪ ಹಾಗೂ ಅಸಹನೆ ಇರುವ ಕಳತ್ರ ಲಭಿಸುವುದು. ಧನ-ಕನಕ-ಗೃಹ, ವಾಹನ, ವಸ್ತ್ರಾಭರಣಗಳನ್ನು ಸ್ವಸಾಮರ್ಥ್ಯಗಳಿಂದ ಸಂಪಾದಿಸಿ ಶ್ರೀಮಂತ ಜೀವನ ನಡೆಸುವರು. ಇವರು ಸ್ವಾರ್ಥ ಪರರಾಗಿದ್ದೂ ಹಣವನ್ನು ಯಾಚಕರಿಗೆ ನೀಡಲು ಹಿಂದೆ ಮುಂದೆ ನೋಡುತ್ತಾರೆ. ಇವರು ಸಮಾಜದಲ್ಲಿ, ಕುಟುಂಬದಲ್ಲಿ ಘನತೆ-ಗೌರವಗಳಿಗೆ ಪಾತ್ರರಾಗುತ್ತಾರೆ. ಸಮಾಜದಲ್ಲಿ ಅತ್ಯುನ್ನತ ಸ್ಥಾಮಮಾನಗಳನ್ನು ಪಡೆದು ಜನಪ್ರಿಯ ಅಧಿಕಾರಿಯೆಂದು ಜನರಿಂದ ಗೌರವಿಸಲ್ಪಡುತ್ತಾನೆ.
ಆಶ್ಲೇಷ
ಆಶ್ಲೇಷ ನಕ್ಶತ್ರಕ್ಕೆ ಅಧಿಪತಿ ಬುಧ. ಈ ನಕ್ಷತ್ರ ಸಂಜಾತರು ಬುದ್ಧಿವಂತರು, ಶಾಸ್ತ್ರಾರ್ಥಗಳನ್ನು ಅರಿತು ಅದರ ಪ್ರಕಾರವೇ ಜೀವನವನ್ನು ನಡೆಸುವವರು. ಲಿಪಿ, ಲೇಖನ ಸಾಹಿತ್ಯ, ಕಲೆಗಳಲ್ಲಿ ಪ್ರೌಢಿಮೆ ಸಾಧಿಸುವರು, ಸುಖ ಕುಟುಂಬ ಜೀವನವನ್ನು ನಡೆಸುವರು.ವಾಣಿಜ್ಯ ಉದ್ಯಮಗಳನ್ನು ಪ್ರಾರಂಭಿಸಿ ಧನವ್ಯವಹಾರ ನಡೆಸಿ ಯಶಸ್ವಿಗಳಾಗುವರು. ಮೃದುವಾದ ಮನಸ್ಸುಳ್ಳಾವರೂ, ಕಾಮಾತುರತೆಯನ್ನು ಹೊಂದಿದವರೂ ಆಗುತ್ತಾರೆ. ಇವರಿಗೆ ಕುಟುಂಬ ಜೀವನ ಹಿತಕರವಾಗಿರುವುದಲ್ಲದೇ ಹಣಕ್ಕಾಗಿ ಹೆಚ್ಚಿನ ಶ್ರಮಪಡುವ ಅವಶ್ಯಕತೆ ಇರುವುದಿಲ್ಲ. ಸಮಾಜದಲ್ಲಿ ಉತ್ಕೃಷ್ಟತೆಯ ಬುದ್ಧಿಶಕ್ತಿಯ ಸಹಾಯದಿಂದ ಸುಧಾರಣೆಗಳನ್ನು ತರುವವರು ಆಗುತ್ತಾರೆ. ದೇವತಾ ಪೂಜಾದಿಗಳಲ್ಲಿ ಆಸಕ್ತರು ಹಾಗೂ ಶ್ರೀಮಂತ ಜೀವನವನ್ನು ನಡೆಸುವರು ಆಗುತ್ತಾರೆ. ಇವರಿಗೆ ಕುಟುಂಬ ಜೀವನದಲ್ಲಿ ನಾನಾ ತರಹದ ತೊಂದರೆಗಳು ಉಂಟಾದರೂ ಕೂಡಾ ಶುಭ ಬುಧನ ಯೋಗದಿಂದ ಅವು ಪರಿಹಾರವಾಗುತ್ತವೆ. ರಾಕ್ಷಸ ಗಣದ ಆಶ್ಲೇಷ ನಕ್ಷತ್ರದವರು ಶೀಘ್ರ ಕೋಪಿಗಳಷ್ಟೇ ಅಲ್ಲದೇ ತಮ್ಮ ಆಲೋಚನೆಗಳ ಪ್ರಕಾರವೇ ಎಲ್ಲವೂ ನಡೆಯಬೇಕೆಂಬ ಛಲ ಇವರಿಗಿರುವುದು. ಇವರಿಗೆ ತಾಂತ್ರಿಕ ಉಪಕರಣಗಳಿಂದಲೂ, ಕೃಷಿ ವಾಣಿಜ್ಯ ವಹಿವಾಟಿನಿಂದಲೂ, ವೈಜ್ಞಾನಿಕ ಯಂತ್ರಗಳಿಂದಲೂ ಅಪಾರ ಲಾಭ ದೊರಕುವುದು. ಹಾಗೆಯೇ ಬದುಕಿನ ಆಡಂಬರಗಳನ್ನು ನೀಡುವ ಜನಪ್ರಿಯ ಸಮಾರಂಭಗಳನ್ನು ವ್ಯವಸ್ಥಾಪಿಸುವ ಈ ನಕ್ಷತ್ರದವರು ಹಣವನ್ನು ಸ್ವಸಾಮರ್ಥ್ಯದಿಂದ ಸಂಪಾದಿಸಿ ಸುಖ ಜೀವನವನ್ನು ನಡೆಸುವರು. ನೇರ ಹಾಗೂ ನಿರರ್ಗಳ ಮಾತಿನಿಂದ ಎಂತಹ ವ್ಯಕ್ತಿಯನ್ನಾದರೂ ವಶೀಕರಿಸಿಕೊಳ್ಳುತ್ತಾರೆ. ಇವರಿಗೆ ಸಂಪತ್ತು ಸೌಲಭ್ಯಗಳು ಸ್ವಂತ ದುಡಿಮೆಯಿಂದಲೇ ಬರೆಬೇಕೇ ವಿನಃ ಪಿತ್ರರ್ಜಿತವಾಗಿ ಬರುವದಿಲ್ಲ. ಇವರಿಗೆ ಕುಟುಂಬ ಜೀವನದಲ್ಲಿ ಅನೇಕ ವಿಧವಾದ ತಾಪತ್ರಯಗಳು ಕಾಡಿದರೂ ಕೂಡಾ ಶುಭ ಬುಧನ ಯೋಗದಿಂದ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ.
ವಿಶಾಖಾ :
ಇದರ ಅಧಿಪತಿ ಗುರು. ವಿಶಾಲ ನಕ್ಷತ್ರದಲ್ಲಿ ವ್ಯಕ್ತಿಗಳು ಆಕರ್ಷಕ ವ್ಯಕ್ತಿತ್ವವನ್ನು ಪಡೆಯುವುದಲ್ಲದೆ ತಮ್ಮ ಬುದ್ದಿ ಸಾಮರ್ಥ್ಯ ವಿಶೇಷಗಳಿಂದ ಅಪಾರ ಜನಪ್ರೀಯತೆಯನ್ನು ಗಳಿಸುತ್ತಾರೆ. ಗುರುವು ನಕ್ಷತ್ರಾಧಿಪತಿಯಾಗುವುದರಿಂದ ಇವರಿಗೆ ಸಂಸ್ಕಾರ ವಿಶೇಷಗಳು ಶಾಸ್ತ್ರ ಜ್ಞಾನಗಳಿಂದಾದರೂ ಪ್ರಕಾಶಿಸುವ ವಿಶೇಷ ಗುಣ ಈ ನಕ್ಷತ್ರಕ್ಕಿದೆ. ಆಚಾರ ವಿಚಾರಗಳಲ್ಲಿ ಹಾಗೂ ಆಧ್ಯಾತ್ಮ ವಿಷಯಗಳಲ್ಲಿ ಇವರಿಗೆ ಸಂಪೂರ್ಣ ಜ್ಞಾನ ದೊರಕುವುದು. ಇವರಿಗೆ ಅದೃಷ್ಟಯೋಗ ವಿಶೇಷವಾಗಿದ್ದು ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿ ಅಂತಸ್ತುಗಳಿಂದ ಐಶ್ವರ್ಯಾವಂತ ಲಭಿಸುವುದು. ಸಂಸ್ಕಾರ ಹಾಗೂ ಪೂರ್ವ ಪುಣ್ಯಗಳು ಇವರಿಗೆ ಅಧಿಕವಾಗಿರುತ್ತವೆ. ವಿಶಾಖ ನಕ್ಷತ್ರದಲ್ಲಿ ಜನಿಸಿರುವ ವ್ಯಕ್ತಿಗಳು ಪೂರ್ಣವಾಗಿ ದೈವಶಕ್ತಿಯನ್ನು ನಂಬಿ ಜೀವನ ನಡೆಸುವರು, ಧರ್ಮ ಮಾರ್ಗಿಗಳು, ಪ್ರಾಮಾಣಿಕ ದುಡಿಮೆಯಿಂದ ಅಪಾರ ಸಂಪತ್ತನ್ನು ಕ್ರೋಢಿಕರಿಸುವವರು ಆಗುತ್ತಾರೆ. ಇವರಿಗೆ ಸರ್ಕಾರದ ಮೂಲಕ ಅನೇಕ ಸವಲತ್ತುಗಳು, ಸೌಲಭ್ಯಗಳು ದೊರಕುತ್ತವೆ. ಸಂಸಾರದಲ್ಲಿ ಕಷ್ಟಕಾರ್ಪಣ್ಯಗಳು ವಿರಸ-ಸಂವೇದನಗಳು ಆಗಿಂದಾಗ್ಗೆ ಉಂಟಾಗುತ್ತಲೇ ಇರುತ್ತವೆ. ಆದರೆ ಉತ್ತಮ ಸಂಸ್ಕಾರವುಳ್ಳ ಮಕ್ಕಳು ಜನಿಸಿ ಉನ್ನತ ಸ್ಥಾನಮಾನಗಳನ್ನು ಹೊಂದುವುದು ವಿಶೇಷ. ವಿಶಾಖ ನಕ್ಷತ್ರದವರು ಸೌಮ್ಯಸ್ವಭಾವದವರಾದರೂ, ಯಾವುದೇ ನಿರ್ದಿಷ್ಟನಿಯಮದಂತೆ ನಡೆದುಕೊಳ್ಳುತ್ತಾರೆ. ಭಗವಂತನಲ್ಲಿ ನಿರಂತರ ಧ್ಯಾನವನು ನಡೆಸಿ ತಮ್ಮ ಕ್ಲೇಶಗಳನ್ನು ಕಳೆದುಕೊಳ್ಳುತ್ತಾರೆ. ಶಿಕ್ಷಣ ಇಲಾಖೆ,ವಾಣಿಜ್ಯ ಇಲಾಖೆ ಅಥವಾ ಕಂದಾಯ ಇಲಾಖೆಯಲ್ಲಿ ವಿಶಾಖ ನಕ್ಷತ್ರದವರು ವೃತ್ತಿಯನ್ನು ಕೈಗೊಂಡು ಜ್ಞಾನ ಪ್ರಸರಣ ಹಾಗೂ ಸಮಾಜ ಸೇವೆಯಲ್ಲಿ ತೊಡಗುತ್ತಾರೆ
ಅನುರಾಧ :
ನಕ್ಷತ್ರಾಧಿಪತಿ ಶನಿ.ಅನುರಾಧಾ ನಕ್ಷತ್ರದಲ್ಲಿ ಜನಿಸಿದವರು ಮಹಾನ ವ್ಯಕ್ತಿಗಳಾಗಿ ಸಂಪದ್ಭರಿತ ಜೀವನವನ್ನು ನಡೆಸುತ್ತಾರೆ . ಇವರಿಗೆ ಗರ್ವ , ಅಹಂಕಾರ , ಅಸೂಯೆಗಳು ಇರುವುದಿಲ್ಲ. ಸಮಾಜದಲ್ಲಿ ಉನ್ನತ ಧ್ಯೇಯವನ್ನು ಹೊಂದಿ ಜನಪ್ರೀಯ ಕೆಲಸವನ್ನು ಮಾಡುತ್ತಾ ಪ್ರಜಾಮನ್ನಣೆಗಳಿಸುತ್ತಾರೆ. ಅನೂರಾಧ ಮಹಾ ನಕ್ಷತ್ರದಲ್ಲಿ ಒಂದು. ಎಷ್ಟೇ ಬಡತನದಲ್ಲಿ ಜನಿಸಿದ್ದರೂ ಕೂಡಾ ತಮ್ಮ ಸ್ವಸಾಮರ್ಷ್ಯ ದಿಂದ ವಿದ್ಯಾ ಸಂಪತ್ತಿನಿಂದ ಉನ್ನತ ಸ್ಥಾನಮಾನಗಳನ್ನು ಪಡೆದು ಅಪಾರ ಹಣಕಾಸುಗಳನ್ನು ಸಂಪಾದಿಸಿ ಶ್ರೀಮಂತ ಜೀವನವನ್ನು ನಡೆಸುತ್ತಾರೆ. ಇವರು ನ್ಯಾಯ ಪರಿಪಾಲಿಸುವಲ್ಲಿ ಸಮರ್ಥವಾದರೂ ಸಂದರ್ಭಕ್ಕೆ ತಕ್ಕ ಹಾಗೆ ಮಾತನ್ನು ಬದಲಾಯಿಸುವ ತಂತ್ರವನ್ನು ಹೊಂದಿದ್ದಾರೆ. ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರವಹಿಸುವ ಅನುರಾಧಾ ನಕ್ಷತ್ರದವರು ಸ್ವಾಭಿಮಾನಿಗಳು ಹಾಗೂ ಯಾರನ್ನೂ ಯಾವುದಕ್ಕೂ ಯಾಚನೆ ಮಾಡುವುದಿಲ್ಲ. ಇವರಿಗೆ ಧನ-ಕನಕ-ಗೃಹ-ವಾಹನ-ವಸ್ತ್ರ-ವಜ್ರಾಭರಣಗಳು ೩೦ನೇ ವಯಸ್ಸಿನ ನಂತರ ಹಂತ ಹಂತವಾಗಿ ಲಭಿಸುತ್ತವೆ. ಸುಖ ದಾಂಪತ್ಯವನ್ನು ಹೊಂದುವ ಅನುರಾದ ನಕ್ಷತ್ರದ ವ್ಯಕ್ತಿಗಳು ತಮ್ಮ ಮರ್ಮ, ವಿಚಾರಗಳನ್ನು ಯಾರೊಡಯೂ ತಿಳಿಸುವುದಿಲ್ಲ. ಇವರಿಗೆ ಅನೇಕ ಮಿತ್ರರಿದ್ದರೂ ಆ ಮಿತ್ರರು ತಮ್ಮ ಎಲ್ಲೆಯನ್ನು ಪ್ರವೇಶಿಸಿದಂತೆ ಜಾಗರೂಕವಾಗಿ ನೋಡಿಕೋಳ್ಳುತ್ತಾರೆ. ಶನಿಯು ನಕ್ಷತ್ರಾಧಿಪತಿಯಾಗಿರುವುದರಿಂದ ಇವರಿಗೆ ಬಾಲ್ಯದಲಿ ತೊಂದರೆ ತಾಪತ್ರಯಗಳು ಇರುವುದು ಸಹಜ.
ಜೇಷ್ಠಾ :
ನಕ್ಷತ್ರಾಧಿಪತಿ ಬುಧ. ಜೇಷ್ಠಾ ನಕ್ಷತ್ರದಲ್ಲಿ ಹುಟ್ಟಿದವರು ಸೂಕ್ಷ್ಮಬುದ್ದಿಯುಳ್ಳವರು., ಧರ್ಮ -ನ್ಯಾಯ-ನೀತಿ ಶಾಸ್ತ್ರಗಳನ್ನು ಅರಿತು ಅದರಂತೆ ಜೀವನ ನಡೆಸುವವರು, ಕುಶಾಗ್ರ ಬುದ್ಧಿಯಿಂದ ಯಾವುದೇ ಕೆಲಸವನ್ನು ಅಚ್ಚಕಟ್ಟಾಗಿ ನಿರ್ವಹಿಸುವರು, ಧನಿಕರು, ಶ್ರಮಸಂಪಾದನೆಯಿಂದ ತೃಪ್ತಿಯನ್ನು ಹೊಂದುವವರು ಆಗುತ್ತಾರೆ. ಜೇಷ್ಠಾ ನಕ್ಷತ್ರದ ಅಧಿಪತಿ ಪ್ರಾಜ್ಞಾಕಾರನಾದ ಬುಧ ನಾದ್ದರಿಂದ ಇವರು ವಿಚಾರವಂಚಿಕೆಯಿಂದ ಕೂಡಿದ್ದು ಸಮಯ ಸಂದರ್ಭಗಳನ್ನು ಅನುಸರಿಸಿಕೊಂಡು ಅದರಂತೆ ನಡೆದುಕೊಳ್ಳುವವರು, ಶಾಸ್ತ್ರ-ಗಣಿತ -ಮಾಂತ್ರಿಕ ವಿದ್ಯೆಗಳಲ್ಲಿ ಪ್ರೌಢಿಮೆ ಸಾಧಿಸುವವರು ಆಗುತ್ತಾರೆ. ಇವರಿಗೆ ಕುಟುಂಬ ಜೀವನದಲ್ಲಿ ಪೂರ್ಣ ತೃಪ್ತಿ ಸಿಗುವುದಿಲ್ಲ. ನಿಗೂಡರಹಸ್ಯಗಳು ಹಾಗೂ ಮಾಂತ್ರಿಕ ಶಕ್ತಿಗಳನ್ನು ಇವರು ನಂಬುತ್ತಾರೆ. ವಿದ್ಯಾಭ್ಯಾಸ ಮಾಡುವಾಗ ಇವರಿಗೆ ನಾನಾ ವಿಧವಾದ ಅಡ್ಡಿ ಆತಂಕಗಳು ಎದರಾಗುತ್ತವೆ. ಆದರೆ ತಾವು ಗಳಿಸಿರುವ ಅಲ್ಪಜ್ಞಾನದಿಂದಲೇ ಪ್ರಾರಂಭಿಕ ವ್ಯವಹಾರಗಳನ್ನು ಸಮರ್ಪಕವಾಗಿ ಮಾಡಿಕೊಂಡು ಹೋಗುತ್ತಾರೆ. ತಂತ್ರಜ್ಞಾನ -ಯಂತೋಪಕರಣ ಶಾಸ್ತ್ರ, ವಾಣಿಜ್ಯ, ಗಣಿತ, ಶೀಘ್ರಲಿಪಿ ಮತ್ತು ಕಚೇರಿ ನಿರ್ವಹಣೆಗಳಲ್ಲಿ ಇವರು ಪರಿಣಿತ ಸಾಧಿಸುವ ಸಾಧ್ಯತೆ ಬಹಳಷ್ಟು ಇರುವುದು. ದೇವತಾ ಶ್ರದ್ಧೆಯನ್ನು ಗಳಿಸಿಕೊಂಡಿದ್ದು ದೇವತಾ ಪೂಜೆ ನಡೆಸುವುದರಿಂದ ಇವರು ನಡೆಸುವುದರಿಂದ ಇವರು ಹೆಚ್ಚಿನ ಅಭಿವೃದ್ಧಿಯನ್ನು ಸಾಧಿಸುತ್ತಾರೆ. ಇವರಿಗೆ ವಿವಾಹನಂತರ ಸಮಸ್ತಸೌಭಾಗ್ಯಗಳೂ ಲಭಿಸಿ ಐಶ್ವರ್ಯವಂತ ಜೀವನವು ಪ್ರಾಪ್ತವಾಗುವುದು. ಕುಟುಂಬ ಜೀವನದಲ್ಲಿ ಕ್ಲೇಶ ಕಾರ್ಪಣ್ಯಗಳು ಉಂಟಾಗಿ ಇವರ ಮನಸ್ಸಿಗೆ ಅಶಾಂತಿಯುಂಟಾಗುವುದು. ಸಾಮಾಜಿಕ ಬದುಕಿನಲ್ಲಿ ಇವರಿಗೆ ಹಸ್ತನೀಡುವ ಜನರು ಹೆಚ್ಚಾಗಿರುವುದಿಲ್ಲ. ಆದರೆ ಇವರಿಗೆ ಬುದ್ಧಿ ಬಲವುಳ್ಳ ಹಾಗು ಪೂರ್ಣ ಪೂಣ್ಯ ಸಂಸ್ಕಾರ ವಿಶೇಷಗಳನ್ನು ಪಡೆದಿರುವ ಮಕ್ಕಳು ಜನಿಸಿ ಉನ್ನತ ಸ್ಥಾನ ಮಾನಗಳನ್ನೂಗಳಿಸಿಕೊಳುತ್ತಾರೆ.
ಜೇಷ್ಠಾ ನಕ್ಷತ್ರದ ವ್ಯಕ್ತಿಗಳು, ವಿಚಾರವಾದಿಗಳು; ಪತ್ರಿಕೋದ್ಯಮ, ಸಾರ್ವಜನಿಕ ಸಂಪರ್ಕ ಇಲಾಖೆ, ದೂರವಾಣಿ ಇಲಾಖೆ ಅಥವಾ ವಾಣಿಜ್ಯ ಇಲಾಖೆಗಳಲ್ಲಿ ವೃತ್ತಿಯನ್ನುಗಳಿಸಿ ನಿಷ್ಠಾಸೇವೆಯಿಂದ ಮೇಲ್ಮಟ್ಟಕ್ಕೆ ಬರುತ್ತಾರೆ. ಅವರು ಮೇಲಧಿಕಾರಿಗಳ ಬಲವನ್ನು ಹಾಗೂ ಅಭಿಮಾನವನ್ನು ಗಳಿಸುವುದರಲ್ಲಿ ಯಶಸ್ವಿಗಳಾಗುತ್ತಾರೆ. ರಾಜಕೀಯ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡು ಅವರಿಗೆ ಮಾರ್ಗದರ್ಶನವನ್ನು ಸಹ ಮಾಡಿ ಪ್ರಸಿದ್ಧರಾಗುತ್ತಾರೆ
ಮೂಲ :
ಇದರ ಅಧಿಪತಿ ಕೇತು. ಮೂಲ ನಕ್ಶತ್ರದಲ್ಲಿ ಜನಿಸಿದವರು ಉನ್ನತ ಧ್ಯೇಯೋದ್ದೇಶಗಳನ್ನು ಅಧಿಕಾರಯುತವಾಗಿ ಜೀವನ ನಡೆಸುವರು, ಅತಿಶಯವಾದ ಸಂಪತ್ತನ್ನು ಸ್ವಸಾಮರ್ಥ್ಯದಿಂದ ಸಂಪಾದಿಸಿ ವಿಲಾಸ ಜೀವನವನ್ನು ನಡೆಸುವರು. ಯಾವಾಗಲೂ ಹಣವನ್ನು ಇಟ್ಟುಕೊಂಡು ಲಕ್ಷ್ಮೀಯುಕ್ತರೆಂದು ಕರೆಯಲ್ಪಡುವರು. ದೇವತಾ ಶ್ರದ್ಧೆಯುಳ್ಳವರು, ಗುರು-ದೇವತಾ, ಬ್ರಹ್ಮಣರಲ್ಲಿ ಅಪಾರವಾದ ಭಕ್ತಿ ಗೌರವಗಳನ್ನಿಟ್ಟುಕೊಂಡಿರುವವರು, ಜನಾನುರಾಗಿಗಳು ಆಗುತ್ತಾರೆ. ಇವರಿಗೆ ಕುಟುಂಬ ಜೀವನದಲ್ಲಿ ಸಾಧಾರಣ ಸುಖ ಪ್ರಾಪ್ತಿಯಾಗುವುದು. ತಮ್ಮ ಸೂಕ್ಷ್ಮ ಬುದ್ಧಿಶಕ್ತಿಯಿಂದ ಪ್ರಪಂಚದ ವಿಷಿಷ್ಠ ವ್ಯವಹಾರವನ್ನು ಕರಗತ ಮಾಡಿಕೊಳ್ಳುವರು, ಉತ್ತಮ ಗುಣ ನಡವಳಿಕೆಗಳಿಂದ ಪ್ರಕಾಷಿಸುವವರು, ಸ್ವಾರ್ಥ ಪರರು, ಕುಟುಂಬ ಜೀವನವನ್ನು ಅದ್ಧೂರಿಯಿಂದ ನಡೆಸಲು ಅಪೇಕ್ಷಿಸುವವರು ಆಗುತ್ತಾರೆ. ಮೂಲಾ ನಕ್ಷತ್ರದಲ್ಲಿ ಹುಟ್ಟಿದವರು ಕಲೆ, ಸಾಹಿತ್ಯ ವಾಣಿಜ್ಯ ವ್ಯವಹಾರಗಳಲ್ಲಿ ಅಪಾರ ಪ್ರೌಢಿಮೆ ಸಾಧಿಸುವರು. ನಿರ್ಶಿಷ್ಠವಾಗಿ, ನೇರವಾಗಿ ಮಾತನಾಡಿ ಜನಾನುರಾಗಿಗಳಾಗುತ್ತಾರೆ. ಇವರಿಗೆ ಪ್ರಪಂಚದ ಜ್ಞಾನದ ಜೊತೆಗೆ ಆಧ್ಯಾತ್ಮಿಕ ಜ್ಞಾನವೂ ಹೆಚ್ಚಾಗಿರುವುದು. ಉನ್ನತ ವಿದ್ಯೆಗಳಿಂದ ಜಾತಕರು ವಿಜ್ಞಾನ, ಗಣಿತ-ತಂತ್ರಜ್ಞಾನ ಹಾಗೂ ಕಂಪ್ಯೂಟರ ನಿರ್ವಹಣೆಗಳಲ್ಲಿ ಪ್ರೌಢಿಮೆ ಸಾಧಿಸುತ್ತಾರೆ. ಇವರಿಗೆ ಹಣವು ನಾನಾ ವ್ಯವಹಾರಗಳ ಮೂಲಕ ಪ್ರಾಪ್ತಿಯಾಗುವದು. ಭೂಮಿ-ಹೊಲ-ಗದ್ದೆ-ಜಮೀನು-ಗೃಹ-ವಾಹನಗಳ ಮೂಲಕ ಲಭಿಸುವುದು. ಇವರಿಗೆ ಸ್ತ್ರೀ ಸಂತಾನವಾದರೆ ಪೂರ್ಣವಾಗಿ ಹೆಣ್ಣು ಮಕ್ಕಳೇ ಜನಿಸುವರು ಪುರುಷ ಸಂತಾನದ ಯೋಗ ಕಡಿಮೆ. ಇವರು ಆರೋಗ್ಯ ಭಾಗ್ಯವನ್ನು ಹೊಂದಿದ್ದು ಯಾವುದೇ ಪ್ರಬಲವಾದ ರೋಗಗಳಿಂದ ಬಳಲುವದಿಲ್ಲ.
ಪೂರ್ವಾಷಾಢ:
ಈ ನಕ್ಷತ್ರದ ಅಧಿಪತಿ ಶುಕ್ರ, ಪೂರ್ವಾಷಾಢ ನಕ್ಷತ್ರದಲ್ಲಿ ಜನಿಸಿದವರು ವ್ಯವಹಾರ ಕುಶಲಿಗಳು, ನಿಸ್ವಾರ್ಥ ಸೇವೆ ನಡೆಸಿ ಪ್ರಖ್ಯಾತರಾಗುವರು, ಸತ್ಯ-ನ್ಯಾಯ ಮಾರ್ಗಗಳಲ್ಲಿ ಆಸಕ್ತಿಯನ್ನಿಟ್ಟುಕೊಂಡಿರುವವರು, ಶಾಸ್ತ್ರ ಸಂಪ್ರದಾಯಗಳನ್ನು ಪಾಲಿಸುವವರು. ಆರೋಗ್ಯವಂತ ಸದೃಢ ದೇಹವನ್ನು ಹೊಂದುವವರು, ನಿರ್ಮಲ ಚಿತ್ತರು, ಸ್ವಸಾಮರ್ಥ್ಯದಿಂದ ವ್ಯಾಪಾರ ವ್ಯವಹಾರಗಳ ಮುಲಕ ಅಪಾರ ಹಣವನ್ನು ಸಂಪಾದಿಸಿ ಸುಖ ಜೀವನ ನಡೆಸುವವರು ಆಗುತ್ತಾರೆ. ಇವರು ಆಚಾರ-ವಿಚಾರಗಳನ್ನು ಗೌರವಿಸಿ ಅದರಂತೆ ತಮ್ಮ ಜೀವನೋದ್ಧೇಶಗಳಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವರು. ಇವರ ಕುಟುಂಬ ಜೀವನ ಅತೀ ಆಕರ್ಷಕವಾಗಿದ್ದೂ, ಅಷ್ಟೈಶ್ವರ್ಯಗಳನ್ನು ಹೊಂದಿ ಶ್ರೀಮಂತ ಜೀವನವನ್ನು ನಡೆಸುತ್ತಾರೆ. ಕರ್ಮಫಲದಲ್ಲಿ ನಂಬಿಕೆಯುಳ್ಳವರಾಗಿ ಸನ್ಮಾರ್ಗದಲ್ಲಿ ಮುಂದುವರೆಯುವರು. ದೈವಭಕ್ತಿ, ಯೋಗಾಸನಗಳಲ್ಲಿ ದೇಹವನ್ನು ದಂಡಿಸುವದು ಇವರ ವಿಶೇಷತೆ. ಕಲೆ- ವಿಜ್ಞಾನ-ಇತಿಹಾಸ-ಭಾಷಾಶಾಸ್ತ್ರ-ವಾಣಿಜ್ಯ-ಗಣಿತ ಹಾಗೂ ವಿದ್ಯುನ್ಮಾನ ಶಾಸ್ತ್ರಗಳಲ್ಲಿ ಇವರು ಪ್ರೌಢಿಮೆ ಸಾಧಿಸುವರು.
ಈ ನಕ್ಷತ್ರದಲ್ಲಿ ಜನಿಸಿದವರು ಧನ ಸಂಗ್ರಹ ಮಾಡುವುದರಲ್ಲಿ ಸಮರ್ಥರಾಗಿರುತ್ತಾರೆ. ಹಾಗೇ ವಿಲಾಸ-ಶೃಂಗಾರ ಮತ್ತು ವ್ಯಸನ ಭೂಷಣಗಳಿಗೆ ಹಣವನ್ನು ವ್ಯಯ ಮಾಡುವುದಕ್ಕೆ ಆಲೋಚಿಸುವದಿಲ್ಲ. ಇವರ ಕುಟುಂಬ ಜೀವನದಲ್ಲಿ ತಾಪತ್ರಯಗಳು ಊಂಟಾದರೂ ಶೌಕ್ರನ ಯೋಗದಿಂದ ಎಲ್ಲವೂ ನಿವಾರಣೆಯಾಗಿ ಹೆಚ್ಚಿನ ಸುಖ ಶಾಂತಿ ದೊರಕುವುದು. ಮಾತುಗಾರಿಕೆಯಲ್ಲಿ ವಿಶೇಷ ಜಾಣ್ಮೆಯನ್ನು ಹೊಂದಿರುತ್ತಾರೆ, ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಪಾಂಡಿತ್ಯದಿಂದ ಜನರ ಮನಸ್ಸನ್ನು ಗೆಲ್ಲುತ್ತಾರೆ. ತಂತ್ರಜ್ಞಾನ-ವಾಹನ ಯಂತ್ರಗಳ ಜೋಡಣಾಶಾಸ್ತ್ರ, ವ್ಯವಹಾರ ನಿರ್ವಹಣಾ ವಿಜ್ಞಾನ, ಕಂಪ್ಯೂಟರ ವಿಜ್ಞಾನಗಳಲ್ಲಿ ಪರಿಣಿತಿ ಸಾಧಿಸಿ ಸರ್ಕಾರಿ ವಲಯಗಳಲ್ಲಿ ಹಾಗೂ ಕೈಗಾರಿಕಾ ಸಂಸ್ಥೆಗಳಲ್ಲಿ ವೃತ್ತಿಯನ್ನು ನಡೆಸಿ ಜೀವನವನ್ನು ಬಹಳ ಯಶಸ್ವಿಯಾಗಿ ನಿರ್ವಹಿಸುವರು.
ಉತ್ತರಾಷಾಢ:
ಇದರ ಅಧಿಪತಿ ಸೂರ್ಯ. ಈ ನಕ್ಷತ್ರದಲ್ಲಿ ಜನಿಸುವ ವ್ಯಕ್ತಿಗಳು ಆತ್ಮ ಸಂಸ್ಕಾರವನ್ನು ಹೊಂದಿದ್ದೂ, ಆಧ್ಯಾಅತ್ಮದಲ್ಲಿ ಆಸಕ್ತರಾಗಿ ಸದಾಚಾರ ಜೀವನವನ್ನು ನಡೆಸುವರು. ಇವರ ವಿದ್ಯೆ, ಬುದ್ಧಿ ಹಾಗೂ ಸಾಧನೆಗಳು ಅತ್ಯುಚ್ಛ ಮಟ್ಟದ್ದಾಗಿರುವುದು. ಸ್ವಭಾವದಲ್ಲಿ ಸ್ವಲ್ಪ ಮುಂಗೋಪಿಗಳಾದರೂ, ಹೃದಯ ನಿಷ್ಕಲ್ಮಶವಾಗಿರುವುದು. ಯಾವುದೇ ಕ್ಲಿಷ್ಟಕರವಾದ ಕೆಲಸವನ್ನು ತಮ್ಮ ತೀಕ್ಷ್ಣ ಬುದ್ಧಿ ಶಕ್ತಿಯಿಂದ ಯಶಸ್ವಿಯಾಗಿ ನಿರ್ವಹಿಸಿ ಮೇಲಾಧಿಕಾರಿಗಳ ಬಲವನ್ನು ಸಂಪಾಧಿಸುತ್ತಾರೆ. ಇವರು ವಿಚಾರ ಪೂರ್ಣವಾಗಿ ಮಾತನಾದುವ ಕಲೆಯನ್ನು ಹೊಂದಿದ್ದೂ ಸಮಾಜದಲ್ಲಿ ವಾಗ್ಮಿಗಳೆನಿಸುತ್ತಾರೆ. ಲಿಪಿ-ಲೇಖನ-ಸಾಹಿತ್ಯ-ಸಂಗೀತ-ನೃತ್ಯ- ಹಾಗೂ ಕಲೆಗಳಲ್ಲಿ ಪರಿಣಿತರಾಗಿರುತ್ತಾರೆ. ಶಾಸ್ತ್ರ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಂಡು ಅವುಗಳನ್ನು ನಿರರ್ಗಳವಾಗಿ ನಿವೇದಿಸುವರು, ಪ್ರಾಧ್ಯಪಕರು ಆಗುವರು. ಇವರ ಕುಟುಂಬ ಜೀವನ ಒಂದೇ ಮಟ್ಟದಲ್ಲಿ ನಡೆದುಕೊಂಡು ಬಂದು ಏರಿಳಿತಗಳಿಲ್ಲದೆ ಸಂಪತ್ತು ಕ್ರಮೇಣ ಪ್ರಾಪ್ತವಾಗುತ್ತದೆ. ಹೆಂಡತಿ ಮಕ್ಕಳನ್ನು ವಿಶೇಷ ಆಸಕ್ತಿಯಿಂದ ಪಾಲನೆ ಮಾಡುವರು. ಮಕ್ಕಳು ಉಚ್ಛ ವಿದ್ಯೆಗಳಿಸಿ ಉನ್ನತ ಸ್ಥಾನಮಾನಗಳಿಗೇರುವುದನ್ನು ಕಂಡು ಸಂತೋಷಪಡುತ್ತಾರೆ ಹಾಗೂ ಸುಗುಣಿ, ಸುಶೀಲೆಯಾದ ಪುತ್ರಿಯನ್ನು ಪಡೆಯುತ್ತಾರೆ. ಸೌಮ್ಯ ಸ್ವಭಾವದ ಕುಟುಂಬದಿಂದ ಇವರಿಗೆ ಹೆಚ್ಚಿನ ಸುಖ ಸಂತೋಷಗಳು ದೊರೆಯುತ್ತವೆ, ಅಭಿನಯ ಕೌಶಲ, ಛಾಯಾಚಿತ್ರ ಜ್ಞಾನ,ವಿದ್ಯುನ್ಮಾನ ತಂತ್ರಜ್ಞಾನ, ವಾಣಿಜ್ಯ ಶಾಸ್ತ್ರಗಳಲ್ಲಿ ಇವರು ಪ್ರೌಢಿಮೆ ಸಾಧಿಸುತ್ತಾರೆ. ಊಷ್ಣ ಪ್ರಕೃತಿಯವರಾಗಿದ್ದೂ, ಆಗಾಗ್ಗೆ ಉಷ್ಣ ಸಂಬಧಿ ಖಾಯಿಲೆಗಳನ್ನು ಅನುಭವಿಸಬೇಕಾಗಬಹುದು. ಉತ್ತಮ ಕ್ರೀಡಾ ಪಟುಗಳಾಗಿ ವಿಶ್ವಪ್ರಖ್ಯಾತಿಯನ್ನು ಹೊಂದುವ ಅವಕಾಶ ಇವರಿಗೆ ಇರುತ್ತದೆ. ಅಂಗಸಾಧನೆಗಳ ಮೂಲಕ ದೇಹವನ್ನು ಪುಟಿವ ಚೆಂಡಿನಂತೆ ಇಟ್ಟುಕೊಂಡಿರುತ್ತಾರೆ. ಇವರು ಧಾರ್ಮಿಕ ಶಾಲೆಗಳಲ್ಲಿಯಾಗಲೀ, ಸರ್ಕಾರಿ ಬೋಧನಾ ಸಂಸ್ಥೆಗಳಲ್ಲಾಗಲೀ ವಾಣಿಜ್ಯ ಕೈಗಾರಿಕೆಗಳಲ್ಲಾಗಲಿ ವೃತ್ತಿಯನ್ನು ನಿರ್ವಹಿಸಿ ಯಶಸ್ವಿ ಬದುಕನ್ನು ನಡೆಸುತ್ತಾರೆ.
ಹಸ್ತ :
ಇದರ ಅಧಿಪತಿ ಚಂದ್ರ. ಈ ನಕ್ಷತ್ರದಲ್ಲಿ ಜನಿಸಿವರು ಪ್ರೀಯವಾಗಿ ಮಾತನಾಡುವವರು. ಧರ್ಮ-ನ್ಯಾಯ, ನೀತಿಗಳನ್ನು ಪರಿಪಾಲಿಸುವವರು, ತ್ಯಾಗ ಜೀವಿಗಳೂ ಆಗಿರುತ್ತಾರೆ. ಇವರಿಗೆ ಕುಟುಂಬ ಜೀವನ ಹಿತಕರವಾಗಿರುವುದಿಲ್ಲ. ಆದರೆ ಸಾಮಾಜಿಕ ಜೀವನ ಉತ್ಕೃಷ್ಟವಾಗಿರುತ್ತದೆ. ಹಸ್ತ ನಕ್ಷತ್ರ ಸಂಜಾತರು ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ-ಸಂಸ್ಕೃತಿ ಹಾಗೂ ಭಾಷಾ ವಿಜ್ಞಾನಗಳಲ್ಲಿ ಪರಿಣಿತರಾಗಿರುತ್ತಾರೆ. ಚಂದ್ರನು ನಕ್ಷತ್ರಾಧಿಪತಿಯಾಗಿರುವುದರಿಂದ ಇವರಿಗೆ ಭೂಸಂಪತ್ತಿನಿಂದ ಕೃಷಿ ಮೂಲಕ ಅಪಾರ ಹಣ ಸಂಗ್ರಹವಾಗುವುದು. ಈ ನಕ್ಷತ್ರ ಪೂರ್ಣವಾಗಿ ಕನ್ಯಾ ರಾಶಿಗೆ ಸೇರಿರುವುದರಿಂದ ಪ್ರಜ್ಞಾಕಾರಕನಾದ ಬುಧನ ಪ್ರಭಾವ ಇವರ ಮೇಲಿರುತ್ತದೆ.
ಲೇಖನ-ಗಣಿತ-ವಾಣಿಜ್ಯ ವ್ಯವಹಾರಗಳಲ್ಲಿ ಕುಶಲತ್ವವನ್ನು ಸಂಪಾದಿಸುವುದಲ್ಲದೇ ಸ್ಥಿರ, ಚರಾಸ್ಥಿಗಳ ಮೂಲಕವೂ ಹಣವನ್ನು ಸಂಪಾದಿಸಬಲ್ಲರು. ಇವರಿಗೆ ಕಳತ್ರ ಸೌಖ್ಯ ಅಷ್ಟಾಗಿ ಹಿತಕರವಾಗಿರುವುದಿಲ್ಲ. ಸೂಕ್ಷ್ಮ ಬುದ್ಧಿಯುಳ್ಳವರು, ನಿರ್ಮಲ ಚಿತ್ತರು, ಮನಶಾಸ್ತ್ರದಲ್ಲಿ ಪರಿಣಿತರು, ಇನ್ನೊಬ್ಬರ ಮನಸ್ಸನ್ನು ಸುಲಭವಾಗಿ ಅರ್ಥಮಾಡಿಕೊಂಡು ಅದರಂತೆ ಪ್ರತಿಕ್ರಿಯಿಸುವವರು, ವೇದಾಂತ ಜ್ಞಾನವುಳ್ಳವರು ಆಗಿರುತ್ತಾರೆ. ಇವರು ಯಾಚಕರಿಗೆ ಹಿಂದು ಮುಂದು ನೋಡದೇ ಹಣವನ್ನು ನೀಡಿ ಧಾತೃಶಾಲಿಗಳಾಗುವರು. ಇವರಿಗೆ ಚಂದ್ರನು ಪೂರ್ಣ ನಿರ್ಮಲನಾಗಿ ಜನ್ಮಕಾಲದಲ್ಲಿ ಇದ್ದ ಪಕ್ಷದಲ್ಲಿ ಸರ್ಕಾರೀ ಅಧಿಕಾರ ಲಭಿಸಿ ಕೃಷಿ ಮಾರುಕಟ್ಟೆ ವಿಜ್ಞಾನಕ್ಕೆ ಸಂಬಧಿಸಿದಂತೆ ವೃತ್ತಿಯು ದೊರೆತು ಹಣಕಾಸುಗಳು ಲಭಿಸಿ ಸಂಪದ್ಭರಿತ ಜೀವನವು ಪ್ರಾಪ್ತಿಯಾಗುವುದು. ಇವರು ಮೇಧಾವಿಯಷ್ಟೇ ಅಲ್ಲದೇ ಸಂಶೋಧನೆ ನಡೆಸಿ ಜನಾಂಗದಲ್ಲೇ ಅತ್ಯಂತ ಹೆಚ್ಚಿನ ಕೀರ್ತಿ ಗೌರವಗಳನ್ನು ಸಂಪಾದಿಸುತ್ತಾರೆ. ಸಮಾಜದಲ್ಲಿ ಸುಧಾರಣೆಗಳನ್ನುಂಟು ಮಾಡುವುದರ ಮೂಲಕ ಯಶಸ್ವಿ ವ್ಯಕ್ತಿತ್ವವನ್ನು ಸಂಪಾದಿಸುತ್ತಾರೆ. ದ್ವಿಚಕ್ರ ವಾಹನಗಳ ರಿಪೇರಿ ಕೆಲಸ, ತಾಂತ್ರಿಕ ವಿಜ್ಞಾನಗಳಲ್ಲಿ ಇವರಿಗೆ ಪರಿಣಿತಿ ಇರುವುದು.
ಚಿತ್ತಾ:
ಈ ನಕ್ಶತ್ರಾಧಿಪತಿ ಕುಜ. ಇದರಲ್ಲಿ ಜನಿಸಿದವರು ಅಧಿಕಾರಯುತವಾಗಿ ಜೀವನ ನಡೆಸುವವರು, ಎಲ್ಲಾ ರೀತಿಯ ಸುಖ ಸೌಲಭ್ಯಗಳನ್ನು ಅನುಭವಿಸುವವರು, ವಿಲಾಸಿಗಳು, ಧೀರ್ಘಾಯುಗಳೂ ಆಗುತ್ತಾರೆ. ಕುಜನು ನಕ್ಷತ್ರದ ಅಧಿಪತಿಯಾಗಿರುವುದರಿಂದ ಜಾತಕರು ನೇರವಾಗಿ ಮಾತನಾಡುವವರು, ನ್ಯಾಯಸಮ್ಮತವಾಗಿ ವ್ಯವಹಾರ ನಡೆಸುವವರು, ಧರ್ಮವಂತರು, ಹಾಗೂ ಸಮಾಜದಲ್ಲಿ ಉಚ್ಛಸ್ತರದ ಜೀವನವನ್ನು ನಡೆಸುವವರೂ ಅಗುತ್ತಾರೆ. ಇವರ ಕುಟುಂಬ ಜೀವನ ಸಾಧಾರಣವಾಗಿದ್ದು, ಕೊರತೆಗಳು, ಬೇಡಿಕೆಗಳು ಇದ್ದೇ ಇರುತ್ತವೆ. ಆದರೆ ಮನಸ್ಸಿನಲ್ಲಿ ಆಲೋಚಿಸಿದ್ದನ್ನು ಮಾಡಿಯೇ ತೀರುವ ಚಿತ್ತಾ ನಕ್ಷತ್ರ ವ್ಯಕ್ತಿಗಳು, ಉತ್ತಮ ಅಂಗಸೌಷ್ಟವವನ್ನು ಪಡೆದು ಆರೋಗ್ಯವಂತ ಜೀವನ ನಡೆಸುತ್ತಾರೆ. ಇವರಿಗೆ ಭಾಷಾ ಸಾಹಿತ್ಯಗಳ ಮೇಲೆ ಅಪಾರ ಒಲವಿದ್ದೂ ಅವುಗಳಲ್ಲಿ ಕೆಲವು ವಿಭಾಗಗಳನ್ನು ಕರಗತ ಮಾಡಿಕೊಳ್ಳುತ್ತಾರೆ. ಇವರಿಗೆ ಸಂಸಾರದಲ್ಲಿ ಸುಖ, ಶಾಂತಿಗಳು ಶ್ರಮ ದುಡಿಮೆಯ ಮೂಲಕ ಮಾತ್ರ ಬರುತ್ತವೆ. ಇವರಿಗೆ ಸಂಗೀತ ಕಲೆಯಲ್ಲಿ ಪ್ರೌಢಿಮೆ ಇರುತ್ತದೆ. ಪ್ರಪಂಚ ಜ್ಞಾನವನ್ನು ಪರಿಪೂರ್ಣವಾಗಿ ತಿಳಿದುಕೊಂಡು ಪಾರಮಾರ್ಥಿಕ ವಿಷಯಗಳಲ್ಲಿ ಆಸಕ್ತರಾಗುತ್ತಾರೆ. ಚಿತ್ತಾ ನಕ್ಷತ್ರದವರಿಗೆ ಸ್ವಂತ ಶ್ರಮದ ಹಣದ ಲಾಭ ವಿಶೇಷವಾಗಿ ಉಂಟಾಗುವುದರಿಂದ ಧನ-ಕನಕ-ಗೃಹ-ವಾಹನ-ವಸ್ತ್ರ-ವಜ್ರಾಭರಣಗಳು ಯಥೇಚ್ಛವಾಗಿ ದೊರೆತು ಮಂಗಳಕರ ಜೀವನವುಂಟಾಗುವುದು. ಆದರೆ ಒಂದು ದೌರ್ಬಲ್ಯವೆಂದರೆ ಪರರ ಏಳಿಗೆಯನ್ನು ಸಹಿಸುವುದಿಲ್ಲ. ಏನಾದರೂ ಮಾಡಿ ಸಹ ಜನರ ಏಳಿಗೆಗೆ ದಕ್ಕೆಯನ್ನುಂಟು ಮಾಡುವ ತಂತ್ರೋಪಾಯಗಳನ್ನು ಯೋಚಿಸುತ್ತಾರೆ.
ಸ್ವಾತಿ:
ಈ ನಕ್ಷತ್ರಾಧಿಪತಿ ರಾಹು. ಈ ನಕ್ಷತ್ರ ಸಂಜಾತರು ತೇಜಸ್ಸುಗಳಿಂದ ಕೂಡಿದ ದೇಹವನ್ನು ಪಡೆದಿರುವವರು, ವಿಶಾಲವಾದ ನೇತ್ರಗಳನ್ನು ಹೊಂದಿರುವವರು, ಅಜಾನುಭಾಹು ವ್ಯಕ್ತಿತ್ವವನ್ನು ಹೊಂದಿರುವವರು, ಆರೋಗ್ಯವಂತರೂ ಆಗಿರುತ್ತಾರೆ. ಇವರಿಗೆ ಕುಟುಂಬ ಜೀವನದಲ್ಲಿ ವಿಶೇಷವಾದ ಸುಖಸಂಪತ್ತುಗಳು ದೊರಕುವವು. ಗೃಹ ನಿರ್ಮಾಣ ಭಾಗ್ಯ ಇವರಿಗಿರುತ್ತದೆ. ಗುಣ ನಡವಳಿಕೆಗಳು ಪೂರ್ಣವಾಗಿ ಸತ್ವಯುತವೆನಿಸಿದರೂ ಮಾತಿನಿಂದ ಒರಟಾಗಿರುತ್ತಾರೆ. ಇವರಿಗೆ ರಾಹುವು ಅಧಿಪತಿಯಾಗಿರುವುದರಿಂದ ಜೀವನದಲ್ಲಿ ಸುಖ ದುಃಖಗಳ ಮಿಶ್ರಣವಿರುತ್ತದೆ. ಪಿತ್ರಾರ್ಜಿತ ಆಸ್ತಿ ಅಥವಾ ಐಶ್ವರ್ಯವಂತಿಕೆ ಇವರಿಗೆ ಇರುವುದು ಅಪರೂಪ. ಆದರೆ ಸ್ವಸಾಮರ್ಥ್ಯದಿಂದ ಇವರು ಆಸ್ತಿ ಅಂತಸ್ತುಗಳನ್ನು ಗಳಿಸಿ ಐಶ್ವರ್ಯವಂತ ಜೀವನ ನಡೆಸುತ್ತಾರೆ. ಸ್ವಾತಿ ನಕ್ಷತ್ರದಲ್ಲಿ ಜನಿಸಿದವರು ವೈದ್ಯ-ತಂತ್ರಜ್ಞಾನ-ಸಾಹಿತ್ಯ-ಶೃಂಗಾರಗಳಲ್ಲಿ ಪ್ರೌಢಿಮೆಯನ್ನು ಸಾಧಿಸಿ ಜನಪ್ರೀಯರಾಗುತ್ತಾರೆ. ಇವರಿಗೆ ವಾಣಿಜ್ಯ ವ್ಯವಹಾರಗಳು ಚಿಕ್ಕಂದಿನಿಂದಲೇ ಮನಸ್ಸಿನಲ್ಲಿ ರೂಪಿತವಾಗಿ ವ್ಯಾಪಾರ ಜೀವನವನ್ನು ಪ್ರಾರಂಭಿಸುವ ಸಾಧ್ಯತೆ ಬಹಳಷ್ಟು ಇರುವುದು. ಧರ್ಮ-ನ್ಯಾಯ-ನೀತಿಗಳ ಕಟ್ಟು ಪಾಡುಗಳೊಂದಿಗೇ ಜೀವಿಸುವ ಸ್ವಾತಿ ನಕ್ಷತ್ರ ವ್ಯಕ್ತಿಗಳು ಸಾಹಸಿಗಳು ಹಾಗೂ ವ್ಯವಹಾರ ಕುಶಲಿಗಳು. ಇವರಿಗೆ ಅಲೌಕಿಕ ವಿಷಯಗಳೆಂದರೆ ಬಹಳ ಆಸಕ್ತಿ, ಮಾಂತ್ರಿಕ ಶಕ್ತಿಗಳು, ನಿಗೂಢಾತ್ಮಕ ಹಾಗೂ ರಹಸ್ಯಾತ್ಮಕ ವಿಚಾರಗಳೆಂದರೆ ಅವುಗಳ ಬಗ್ಗೆ ಅನೇಕ ದಿನಗಳು ಚಿಂತಿಸುವರು. ದೇವತಾ ಪೂಜೆಯನ್ನು ನಡೆಸಿ ಅಜ್ಞಾನ ಅಂಧಕಾರಗಳನ್ನು ದೂರ ಮಾಡಿಕೊಳ್ಳುವವರು ಆಗಿರುತ್ತಾರೆ. ಆದರೆ ಇವರು ಮನಸ್ಸಿನಲ್ಲಿ ಆಲೋಚಿಸಿದಂತೆ ಕಾರ್ಯಗಳು ನಡೆಯದೇ ಬೇರೆಯ ರೀತಿಗಳಲ್ಲೇ ನಡೆದು ಇವರಿಗೆ ಫಲಪ್ರದವಾಗುತ್ತವೆ. ಹಾಗೆಯೇ ಅಭಿನಯ, ಕಲೆ, ಕೃತಕ ವ್ಯಕ್ತಿತ್ವಗಳನ್ನು ಹಾಕಿಕೊಳ್ಳುವುದು ಇವರಿಗೆ ಸಿದ್ಧಿಸುತ್ತದೆ.
ಇವರ ಸಂಪತ್ತು ಶಾಶ್ವತವಾಗಿ ಉಳಿದುಕೊಂಡು ಬರದೆ ಅಲ್ಪ ಸ್ವಲ್ಪ ನಷ್ಟವಾಗುವ ಸಾಧ್ಯತೆ ಬಹಳಷ್ಟು ಇರುವುದು. ಸ್ವಾತಿ ನಕ್ಷತ್ರ ಜಾತಕರು ಧರ್ಮಾಭಿಮಾನಿಗಳಲ್ಲದೇ ದೇವತಾಭಿಮಾನಿಗಳೂ ಹೌದು. ದೇವತಾ ವರದಿಂದ ಯಾವುದೇ ಕಷ್ಟಗಳನ್ನು ಸಹಿಸಿಕೊಂಡು ಮುನ್ನುಗ್ಗಿ ಯಶಸ್ವಿ ಬದುಕನ್ನು ಕಾಣುತ್ತಾರೆ.
ಮಖೆ(ಮಘ)
ನಕ್ಷತ್ರದ ಅಧಿಪತಿಯು ಕೇತು. ಈ ನಕ್ಷತ್ರದಲ್ಲಿ ಜನಿಸಿದವರು ಧರ್ಮಶಾಸ್ತ್ರಗಳನ್ನು ತಿಳಿದವರು.ಶ್ರೀಮಂತರು, ಜನಾನುರಾಗಿಗಳು ಆಗುತ್ತಾರೆ. ನಕ್ಷತ್ರ ಅಧಿಪತಿ ಕೇತುವಾಗಿರುವುದರಿಂದ ಯಾವೂದೇ ವ್ಯವಹಾರದ ಪೂರ್ವಾಪರವನ್ನು ತಿಳಿದುಕೊಂಡು ಅದರಂತೆ ವ್ಯವಹಾರವನ್ನು ಯಶಸ್ವಿಗೊಳಿಸಿಕೊಳ್ಳುತ್ತಾರೆ. ಸಾಮಾಜಿಕ ಪರಿಸರದಲ್ಲಿ ಇದುವರೆಗೂ ನಡೆದುಕೊಂಡು ಬಂದಿರುವ ನಿಯಮಗಳನ್ನು ಪರಿಶೀಲಿಸಿ ಅದರಂತೆ ತಮ್ಮ ಬುದ್ಧಿಶಕ್ತಿಯಿಂದ ತಮ್ಮ ಸ್ವಕಾರ್ಯವನ್ನು ನೆರವೇರಿಸಿಕೊಂಡು ಶ್ರೀಮಂತರಾಗುವರು.ಇವರಿಗೆ ಪಿತ್ರಾರ್ಜಿತ ಆಸ್ತಿ ಅಲ್ಪಸ್ವಲ್ಪವಿದ್ದರೂ ಅದನ್ನು ಕಡೆಗಣಿಸಿ ತವ್ವ ಸ್ವಸಾಮರ್ಥ್ಯದಿಂದ ಧನ-ಕನಕ-ಗೃಹ-ವಾಹನ-ವಸ್ತ್ರ-ವಜ್ರಾಭರಣಗಳನ್ನು ಯಥೇಚ್ಛವಾಗಿ ಶ್ರಮ ದುಡಿಮೆಯಿಂದ ಸಂಪಾದಿಸುತ್ತಾರೆ. ಇವರು ಕಲೆ-ಸಾಹಿತ್ಯ, ಭಾಷಾ ವಿಜ್ಞಾನ, ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಪ್ರೌಢಿಮೆ ಸಾಧಿಸಿ ಸಂಶೋಧನೆ ನಡೆಸುವ ಸಾಮರ್ಥ್ಯವನ್ನು ಹೊಂದುತ್ತಾರೆ. ಇವರಿಗೆ ಕುಟುಂಬದಲ್ಲಿ ನಾನಾ ವಿಧದ ತಾಪತ್ರಯಗಳು ಕಂಡುಬಂದರೂ ಅದನ್ನು ಎದುರಿಸುವ ದೃಢ ಸಂಕಲ್ಪ ಇವರಿಗಿರುವುದು. ಮಾತೃವಿನ ಮಾತನ್ನು ಶಿರಸಾವಹಿಸಿ ನಡೆಯುವರು. ಧರ್ಮವಂತರು, ಆಚಾರ-ವಿಚಾರಗಳ ಪ್ರಕಾರ ಮುಂದುವರಿಯುವವರು ಆಗುತ್ತಾರೆ. ಇವರ ಮಾತು ಸ್ಪಷ್ಟವಾಗಿಯೂ ತೀಕ್ಷ್ಣವಾಗಿಯೂ ಇರುತ್ತದೆ. ವಿನಾಕಾರಣ ಯಾರೊಡನೆಯೂ ವಿರೋಧವನ್ನು ಕಟ್ಟಿಕೊಳ್ಳುವುದಿಲ್ಲ. ಶಾಸ್ತ್ರ ವಿಚಾರಗಳಲ್ಲಿ ಅಪಾರ ಪ್ರೌಢಿಮೆ ಪಡೆದಿರುವ ಮಖೆ ನಕ್ಷತ್ರ ಜಾತಕರು ತಮಗಿಷ್ಟ ಬಂದ ರೀತಿಯಲ್ಲಿ ನಡೆದುಕೊಂಡು ಶಾಸ್ತ್ರದ ಚೌಕಟ್ಟಿನಲ್ಲಿ ಜೀವಿಸುವವರು ಆಗುತ್ತಾರೆ.
ಮಖೆ ನಕ್ಷತ್ರದಲ್ಲಿ ಜನಿಸಿದವರಿಗೆ ಸುಖ ಸಂಸಾರ ದೊರೆಯುವ ಸಾಧ್ಯತೆ ಕಡಿಮೆ. ಸಂತಾನಭಾಗ್ಯವಿದ್ದಾಗ್ಯೂ ಪುರೋಭಿವೃದ್ಧಿಗಾಗಿ ನಿರಂತರ ಶ್ರಮಿಸುವ ಅವಶ್ಯಕತೆ ಇವರಿಗಿದ್ದೇ ಇರುತ್ತದೆ. ಇವರು ತ್ಯಾಗಿಗಳು, ಸದಾಚಾರವುಳ್ಳವರು, ಜನಾನುರಾಗಿಗಳು ಆಗುವುದಲ್ಲದೇ, ವಂಶದಲ್ಲೇ ಅತಿ ಹೆಚ್ಚಿನ ಕೀರ್ತಿಗೆ ಪಾತ್ರರಾಗುವರು.
ಹುಬ್ಬಾ(ಪೂ.ಫಾ)
ಪೂರ್ವಾ ಫಾಲ್ಗುಣಿ ನಕ್ಷತ್ರವನ್ನು ಸಾಮಾನ್ಯವಾಗಿ ಹುಬ್ಬಾ ಹೆಸರಿನಿಂದ ಕರೆಯುವರು. ಈ ನಕ್ಷತ್ರದ ಅಧಿಪತಿ ಶುಕ್ರ. ಹುಬ್ಬಾ ನಕ್ಷತ್ರದಲ್ಲಿ ಜನಿಸಿದವರು ಸಾಹಸಿಗಳು, ಧರ್ಮಶಾತ್ರಗಳನ್ನು ತಿಳಿದವರು, ಜನಪ್ರೀಯರು ಆಗುತ್ತಾರೆ. ಇವರ ಕುಟುಂಬ ಜೀವನ ಅತ್ಯಾಕರ್ಷಕವಾಗಿದ್ದು ಇವರು ಪುತ್ರ-ಕಳತ್ರರನ್ನು ಸುಖವಾಗಿ ಇಡುವರು. ಇವರಿಗಾಗಿ ಯಾವುದೇ ತ್ಯಾಗಕ್ಕೆ ಸಿದ್ಧರಾಗುವವರು ಆಗುತ್ತಾರೆ. ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಭವಿಷ್ಯಜ್ಞಾನ ಅತ್ಯುತ್ತಮವಾಗಿದ್ದು, ಮುಂದಾಲೋಚನೆ ಅಧಿಕವಾಗಿರುವುದು. ಹುಬ್ಬಾ ನಕ್ಶತ್ರ ಜಾತಕರು ಬಾಲ್ಯದಲ್ಲಿ ಎಷ್ಟೇ ಕಷ್ಟ ನಷ್ಟಗಳನ್ನು ಅನುಭವಿಸಿದರೂ 30 ನೇ ವಯಸ್ಸಿನ ನಂತರ ಉತ್ತಮ ವೃತ್ತಿ ಜೀವನ ಆರಂಬಿಸಿ ಸುಖ ಜೀವನವನ್ನು ಹೊಂದುತ್ತಾರೆ. ಲೇಖನ-ಕಲೆ-ಗಣಿತ-ವಾಣಿಜ್ಯ ಶಾಸ್ತ್ರಗಳಲ್ಲಿ ಪ್ರೌಢಿಮೆ ಪಡೆಯುವ ಇವರು ಉತ್ತಮ ಸರ್ಕಾರಿ ವೃತ್ತಿಗಳಿಸಿ ಜನಪ್ರೀಯರಾಗುತ್ತಾರೆ. ಇವರಿಗೆ ಶಾಸ್ತ್ರ ಸಂಪ್ರದಾಯಗಳ ಆಚರಣೆಯಲ್ಲಿ ಮನಸ್ಸಿರುತ್ತದೆ. ಹಾಗೇಯೇ ಶುಕ್ರನ ಪ್ರಭಾವದಿಂದ ಜಾತಭ್ರಷ್ಟತೆಯನ್ನು ಹೊಂಡುವ ಸಾಧ್ಯತೆಯೂ ಇರುತ್ತದೆ. ಇವರು ಹಣವನ್ನು ಸಂಪಾದಿಸಿ ಕೂಡಿಟ್ಟು ಆನಂದಿಸುತ್ತಾರೆ.ಆದರೆ ವಿಲಾಸ ಜೀವನಗಳಿಗೂ ಇವರು ಹಣವನ್ನು ಉಪಯೋಗಿಸುತ್ತಾರೆ. ಧರ್ಮ ಚಿಂತನೆಗಳಿಂದ ವರ್ಷದಲ್ಲಿ ಅನೇಕ ದಿನಗಳು ಇವರು ಸದ್ಗುಣ ಸಂಪನ್ನರಾಗಿ ಜೀವನ ನಡೆಸುತ್ತಾರೆ. ಇವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಅಪಾರ ಪ್ರೌಢಿಮೆ ಗಳಿಸುವ ಸಾಧ್ಯತೆ ಇದೆ. ಇವರು ಸ್ವಭಾವದಲ್ಲಿ ಮುಂಗೋಪಿಗಳಾದರೂ ಮನಸ್ಸು ನಿಷ್ಕಲ್ಮಷವಾಗಿರುವುದು. ಹುಬ್ಬಾ ನಕ್ಷತ್ರದಲ್ಲಿ ಜನಿಸಿದವರು ಬಡತನದಲ್ಲಿದ್ದರೂ ಸ್ವಾಭಿಮಾನವನ್ನು ಹೊಂದಿದವರು, ಯಾಚಕ ವೃತ್ತಿಯನ್ನು ಕೈಗೊಳ್ಳದೆ ಉಪವಾಸದಿಂದಲಾದರೂ ತಮ್ಮ ಬದುಕನ್ನು ನಡೆಸುತ್ತಾರೆ. ಇವರು ಜೀವನಕಾಲದಲ್ಲಿ ಅಪಾರ ಜನಪ್ರೀಯತೆಯನ್ನು ಗಳಿಸುತ್ತಾರೆ.ಇವರು ಜನಿಸಿದಾಗ ಶುಕ್ರದಶೆಯನ್ನು ಹೊಂದುವುದರಿಂದ ಮಾತಾಪಿತೃಗಳಿಗೆ ಸಂಪದ್ಭರಿತ ಜೀವನ ಪ್ರಾಪ್ತಿಯಾಗುವುದು.
ಉತ್ತರಾ(ಉ.ಫಾ)
ಈ ನಕ್ಷತ್ರಕ್ಕೆ ಅಧಿಪತಿ ಸೂರ್ಯನಾಗುತ್ತಾನೆ. ಉತ್ತರಾ ನಕ್ಷತ್ರದಲ್ಲಿ ಹುಟ್ಟಿದವರು ನ್ಯಾಯಾನ್ಯಾಯ ಪರಿಪಾಲಿಸಿ ಜೀವಿಸುವವರು. ಧನಿಕರು, ಶ್ರೇಷ್ಠ ಶ್ರೇಣಿಯ ಅಧಿಕಾರಿಗಳೂ ಆಗುತ್ತಾರೆ. ಇವರಿಗೆ ಸೂರ್ಯನು ಅಧಿದೇವತೆಯಾಗಿರುವುದರಿಂದ ಆತ್ಮಜ್ಞಾನದ ತಿಳುವಳಿಕೆ ಹೆಚ್ಚಾಗಿರುವುದು. ತಂತ್ರಜ್ಞಾನ, ಸಾಹಿತ್ಯ-ಸಂಸ್ಕೃತಿ-ಸಂಗೀತ ಕಲಾಶಾಸ್ತ್ರಗಳಲ್ಲಿ ಪ್ರೌಢಿಮೆ ಸಾಧಿಸುತ್ತಾರೆ. ಇವರ ವಿದ್ಯೆಯು ಅಪೂರ್ಣವಾಗಿ ಉಪಯೋಗಿಸಲ್ಪಡುವುದರಿಂದ ಸಂಶೋಧನೆ ಹಾಗೂ ವಿಶ್ಲೇಷಣೆಗಳಿಂದ ಬಹಳ ಹಿಂದೆ ಸಾಗುವರು. ಇವರು ಅಧ್ಯಾತ್ಮಿಕ ಜ್ಞಾನದಲ್ಲಿ ವಿಶೇಷ ಪರಿಣಿತಿ ಸಾಧಿಸಿದ್ದು, ಧರ್ಮ ನ್ಯಾಯ ನೀತಿಗಳಿಂದ ಜೀವನ ನಡೆಸುತ್ತಾರೆ. ಆದರೆ ಬೌದ್ಧಿಕ ಜ್ಞಾನದಲ್ಲಿ ವಿಶೇಷವಾಗಿ ಒಲವು ತೋರಿಸಿದರೂ ಅದರಲ್ಲಿ ಸಾಧನೆ ನಡೆಸುವದಿಲ್ಲ. ನಕ್ಷತ್ರಾಧಿಪತಿ ರವಿಯಾಗಿರುವುದರಿಂದ ವ್ಯಕ್ತಿಯು ಗಣಿತ-ತಂತ್ರಜ್ಞಾನ-ವಾಣಿಜ್ಯ ಮುಂತಾದುವುಗಳಲ್ಲಿ ಪ್ರೌಢಿಮೆ ಸಾಧಿಸುತ್ತಾನೆ. ಈತನಿಗೆ ಕುಟುಂಬ ಜೀವನದಲ್ಲಿ ಸುಖಬಿರುವುದಿಲ್ಲ. ಸಂಪಾದಿಸಿದ ಹಣವೆಲ್ಲಾ ಕಟುಂಬ ನಿರ್ವಹಣೆಗೆ ಸಾಕಾಗಿ ಏನೂ ತನಗಾಗಿ ಉಳಿಯುವದಿಲ್ಲ. ಆದರೆ, ರವಿಯ ಯೋಗದಿಂದ ಈತನಿಗೆ ಧನ-ಕನಕ-ಗೃಹ-ವಾಹನ-ವಸ್ತ್ರಾದಿಗಳು ಯಥೇಚ್ಚವಾಗಿ ಲಭಿಸಿ ಐಶ್ವರ್ಯವಂತ ಜೀವನವು ಪ್ರಾಪ್ತವಾಗುವದು. ಮಾತಿನಲ್ಲಿ ವಿಶೇಷ ಜಾಣ್ಮೆಯಿದ್ದರೂ ವ್ಯವಹಾರ ಕುಶಲಿಗಳ ಮುಂದೆ ಸೋಲನ್ನೊಪ್ಪುವರು. ಶತ್ರುಗಳ ಕಾಟದಿಂದ ವೈರಾಗ್ಯ ಭಾವನೆಯನ್ನು ಹೊಂದುವವರಾಗುತ್ತಾರೆ. ಇವರು ಮುನ್ನುಗ್ಗಿ ಸಾಹಸ ಕಾರ್ಯ ಪ್ರದರ್ಶಿಸುವಲ್ಲಿ ವಿಫಲರಾಗುತ್ತಾರೆ. ಕಂಪ್ಯೂಟರ್ ಗಣಿತಗಳಲ್ಲಿ ಇವರು ಯಶಸ್ವಿ ಕಾರ್ಯ ನಿರ್ವಹಿಸಲು ಸಮರ್ಥರು. ಇವರಿಗೆ ಕಳತ್ರ ಪುತ್ರರಿಂದ ಅಸಾಧ್ಯನೋವು ಯಾತನೆಗಳು ಪ್ರಾಪ್ತವಾಗುತ್ತವೆ. ಆದರೆ ಇವರು ದೈವೀಕ ಶಕ್ತಿಯಿಂದ ಇವುಗಳಿಗೆ ತಲೆಬಾಗದೇ ಆಧ್ಯಾತ್ಮಿಕ ಜೀವನವನ್ನು ನಡೆಸಿ ಕೃತಾರ್ಥರಾಗುವರು.
ರೋಹಿಣಿ
ಈ ನಕ್ಷತ್ರಕ್ಕೆ ಅಧಿದೇವತೆ ಚಂದ್ರ. ರೋಹಿಣಿ ನಕ್ಷತ್ರದಲ್ಲಿ ಜನಿಸಿದವರು ಪ್ರೀಯವಾಗಿ ಮಾತನಾಡುವವರು, ಸದಾ ಹಸನ್ಮುಖಿಗಳು ಆಗಿರುತ್ತಾರೆ. ಆದರೆ ಇವರ ಮನಸ್ಸಿನಲ್ಲಿ ಕುಟಿಲ ತಂತ್ರ ಮತ್ತು ರಾಗ ದ್ವೇಷ ಭಾವನೆಗಳು ಸದಾ ರೂಪುಗೊಳ್ಳುತ್ತಿರುತ್ತವೆ. ಸಾಮಾನ್ಯವಾಗಿ ಮೃದು ಸ್ವಭಾವದವರಾದ ಈ ನಕ್ಷತ್ರದವರು ದ್ವೇಷ ಸಾಧನೆಯನ್ನು ತಂತ್ರೋಪಾಯಗಳಿಂದ ನೆರವೇರಿಸಿಕೊಳ್ಳುತ್ತಾರೆ. ಇವರು ನಸು ಮುಂಗೋಪವನ್ನು ಹೊಂದಿದ್ದೂ, ಸಾಹಸಿಗಳಾಗಿರುತ್ತಾರೆ.ಇವರಿಗೆ ಎಲ್ಲಾ ವಿಧವಾದ ಅಷ್ಟೈಶ್ವರ್ಯಗಳು ಲಭಿಸಿ ಐಶ್ವರ್ಯವಂತ ಜೀವನವು ಪ್ರಾಪ್ತವಾಗುವುದು. ಇವರು ಕಲೆ-ಶೃಂಗಾರ-ವಾಣಿಜ್ಯಶಾಸ್ತ್ರ, ತಂತ್ರಜ್ಞಾನಗಳಲ್ಲಿ ಪ್ರೌಢಿಮೆ ಸಾಧಿಸಿ ಯಶಸ್ವೀ ಬದುಕನ್ನು ನಡೆಸಬಲ್ಲರು. ಇವರ ಕುಟುಂಬ ಜೀವನ ಹಿತಕರವಾಗಿದ್ದೂ ಸ್ತ್ರೀ ಸಂತಾನವನ್ನು ಹೆಚ್ಚಾಗಿ ಪಡೆಯುವರು. ಪುತ್ರ-ಮಿತ್ರ-ಕಳತ್ರರಲ್ಲಿ ಒಂದೇ ಸಮನಾದ ಪ್ರೀತಿಯನ್ನು ಹೊಂದಿದವರು. ಸರ್ಪಯೋನಿಗೆ ಸೇರಿದ ಈ ನಕ್ಷತ್ರದವರು ಕಾಮಕಲೆಯಲ್ಲಿ ವಿಶೇಷವಾದ ಪರಿಣಿತಿ ಪಡೆದು ಸುಖದಾಂಪತ್ಯವನ್ನು ನಡೆಸುತ್ತಾರೆ. ಶ್ರೀಕೃಷ್ಣನು ರೋಹಿಣಿ ನಕ್ಷತ್ರದಲ್ಲಿ ಜನಿಸಿದ್ದನೆಂದು ಪುರಾಣಗಳು ತಿಳಿಸುತ್ತವೆ. ಇವರು ತಮ್ಮ ಆಯುಷ್ಯದ ಕೊನೆ ಭಾಗದಲ್ಲಿ ನಿರ್ಲಿಪ್ತರಾಗಿ, ಏಕಾಂಗಿಯಾಗಿ ಆಧ್ಯಾತ್ಮಿಕ ಉನ್ನತಿಗಾಗಿ ತಪಸ್ಸನ್ನು ಆಚರಿಸುತ್ತಾರೆ.
ಮೃಗಶಿರಾ
ಈ ನಕ್ಶತ್ರದ ಅಧಿಪತಿ ಕುಜ ಅಥವಾ ಮಂಗಳ. ಮೃಗಶಿರಾ ನಕ್ಷತ್ರ ಮಹಾ ನಕ್ಷತ್ರ ಇದರಲ್ಲಿ ಜನಿಸಿದವರು ಹೆಚ್ಚಿನ ಆತ್ಮಶಕ್ತಿಯನ್ನು ಹೊಂದಿ ಐಶ್ವರ್ಯವಂತ ಬದುಕನ್ನು ನಡೆಸುತ್ತಾರೆ. ಇವರು ನೇರವಾಗಿ ಸಂಕೋಚವಿಲ್ಲದೇ ಮಾತನಾಡುವವರು, ನಿಷ್ಠುರ ಚಿತ್ತರು, ಸಮಾಜದಲ್ಲಿ ಗಣ್ಯ ಸ್ಥಾನಮಾನಗಳನ್ನು ಹೊಂದಿ ನಿಷ್ಕಾಮವಾಗಿ ಕೆಲಸವನ್ನು ನಿರ್ವಹಿಸುವವರು ಆಗುತ್ತಾರೆ. ವಾಣಿಜ್ಯ, ಕಲೆ, ವಿಜ್ಞಾನ-ಸಾಹಿತ್ಯಗಳಲ್ಲಿ ಪೂರ್ಣ ಪ್ರೌಢಿಮೆ ಹೊಂದುತ್ತಾರೆ. ಇವರು ಶೀಲವಂತರಾಗಿದ್ದೂ ವಿಶೇಷವಾಗಿ ಸ್ತ್ರೀ ದ್ವೇಷವನ್ನು ಹೊಂದಿ ಬ್ರಹ್ಮಚರ್ಯೆಯಲ್ಲಿ ಉಗ್ರ ತಪಸ್ಸನ್ನು ಮಾಡುತ್ತಾರೆ. ಆದರೆ ಇವರು ಬಂಧು ಜನರಿಂದ ಅತೀವ ಹಿಂಸೆಯನ್ನು ಅನುಭವಿಸಿ ಹಣಕಾಸಿನ ನಷ್ಟವನ್ನು ಮಾಡಿಕೊಳ್ಳುತ್ತಾರೆ. ಹಠ ಸ್ವಭಾವದಿಂದ ಸಂಸಾರವನ್ನು ಬಡತನದಿಂದಲೇ ನಡೆಸಿ ಹಣವನ್ನು ಕೂಡಿಡುತ್ತಾರೆ. ಈ ನಕ್ಷತ್ರ ಸಂಜಾತರು ಸ್ವಾರ್ಥವನ್ನು ಅಧಿಕವಾಗಿ ಹೊಂದಿದ್ದೂ, ಪುತ್ರ-ಕಳತ್ರರಲ್ಲಿ ಅತೀಯಾದ ವ್ಯಾಮೋಹವನ್ನು ಹೊಂದಿರುತ್ತಾರೆ. ಉತ್ತಮವಾದ ಅಧಿಕಾರವನ್ನು ಪಡೆದು ಪವಿತ್ರ ಜೀವನವನ್ನು ನಡೆಸುತ್ತಾರೆ.ಇವರಿಗೆ ಸಂಸ್ಕಾರ ವಿಶೇಷಗಳು ತಿಳಿದಿದ್ದೂ, ಶಾಸ್ತ್ರ,ಸಂಪ್ರದಾಯಗಳ ಆಚರಣೆಯಲ್ಲಿ ಆಸಕ್ತಿ ಇರುತ್ತದೆ. ಹುಟ್ಟಿದಾಗ ಇವರಿಗೆ ಮಂಗಳನ ದಶೆ ನಡೆದುಬಂದು ಆಕಾಲದಲ್ಲಿ ಕುಟುಂಬದಲ್ಲಿ ಹಿತಕರ ಜೀವನ ಏರ್ಪಡಿಸುವದು ಹಾಗೂ ಪಿತೃವಿನ ಲಾಭ ಮತ್ತು ಮಾತೃವಿನ ಸುಖ-ಸಂಪತ್ತುಗಳು ಪ್ರಾಪ್ತಿಯಾಗುತ್ತವೆ.
ಆರಿದ್ರಾ
ಈ ನಕ್ಷತ್ರದ ಅಧಿದೇವತೆ ರಾಹು. ಈ ನಕ್ಷತ್ರದಲ್ಲಿ ಜನಿಸಿದವರು ಅತ್ಯುಗ್ರಕೋಪವುಳ್ಳವರಾಗಿ ಸ್ವಜನರನ್ನು ದೂಷಿಸಿ ಹಿಂಸೆಗೆ ಗುರಿ ಮಾಡುವರು. ಹಠ ಸಾಧನೆಯಿಂದ ಕ್ಲಿಷ್ಟಕಾರ್ಯವನ್ನೂ ಸಹ ಮಾಡಿ ಜಯಿಸುವರು. ಕುಟುಂಬ ಜೀವನದಲ್ಲಿ ಹಂತ ಹಂತವಾಗಿ ಅಭಿವೃದ್ಧಿಯನ್ನು ಹೊಂದುವವರು. ಒರಟು ಸ್ವಭಾವದಿಂದ ಮಿತ್ರರಿಂದ ಅಪಮಾನಿತರಾಗುವರು. ವ್ಯವಹಾರಗಳಲ್ಲಿ ಜಯ ಸಾಧಿಸುವರು. ನಿಷ್ಕಲ್ಮಶ ಹೃದಯವುಳ್ಳವರೂ, ಗರ್ವ ಅಹಂಕಾರಗಳನ್ನು ಮಾತಿನಿಂದಲೇ ಪ್ರಶರ್ಶಿಸುವವರು ಆಗಿರುತ್ತಾರೆ. ಇವರು ದೇವರನ್ನು ಆರಾಧಿಸಿ ಋಜು ಮಾರ್ಗದಲ್ಲಿ ನಡೆಯಲು ಪ್ರಯತ್ನಿಸುತ್ತಾರೆ. ವಿಜ್ಞಾನ-ಗಣಿತ-ತಂತ್ರಜ್ಞಾನ ಹಾಗೂ ಸಂಗೀತ ನೃತ್ಯಗಳಲ್ಲಿ ಪ್ರೌಢಿಮೆ ಸಾಧಿಸುತ್ತಾರೆ. ಇವರಿಗೆ ಧನ ಸಂಪತ್ತು ವಿಶೇಷವಾಗಿ ಕೂಡಿಕೊಂಡು ಬರುವದು. ನಿಷ್ಠಾವಂತ ದುಡಿಮೆಯಿಂದ ಹಂತಹಂತವಾಗಿ ಜೀವನದಲ್ಲಿ ಎಲ್ಲಾರೀತಿಯ ಸುಖ-ಸಂತೋಷಗಳನ್ನು ಪಡೆಯುತ್ತಾರೆ. ಇವರು ಹುಟ್ಟಿದಾಗ ರಾಹುದಶೆಯು ನಡೆದು ಬಂದು ಉತ್ತಮ ಅದೃಷ್ಟ ಜೀವನವನ್ನು ತರಬಲ್ಲದು.