ವಾಸ್ತುಪುರುಷನ ತಪಾಸಣೆ
ವಾಸ್ತುಪುರುಷನ ತಪಾಸಣೆ
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ವಾಸ್ತು ಹಾಗೂ ಅದರೊಂದಿಗೆ ತಳುಕು ಹಾಕಿಕೊಂಡಿರುವ ಜ್ಯೋತಿಷದ ಬಗ್ಗೆ ಮಾತನಾಡುತ್ತಿದ್ದಾರೆ. ಯಾವುದೇ ಮನೆ ಕಟ್ಟುವಲ್ಲಿ ಅಥವಾ ಮನೆ ಪ್ರವೇಶದ ಸಂಭ್ರಮದಲ್ಲಿ ವಾಸ್ತುವಿನದೇ ಮಾತು. ವಾಸ್ತುತಜ್ಞರಂತೆ ತೋರಿಪಡಿಸಿಕೊಳ್ಳುವ ನಾನೀಗಾಗಲೇ ತಿಳಿಸಿರುವ ಸುಶಿಕ್ಷಿತರು ಹೊಸ ಮನೆಯನ್ನೊಮ್ಮೆ ಸುತ್ತು ಹಾಕಿ ಬಂದು ವಾಸ್ತುಶಾಸ್ತ್ರದ ಪ್ರಕಾರ ಅದು ಅಲ್ಲಿರಬಾರದಿತ್ತು , ಇದು ಇಲ್ಲಿರಬೇಕಿತ್ತು ಎಂದು ಹೇಳುತ್ತಾರೆ. (ಈವರೆಗೆ ಬಡವರು , ಕೆಲಸಗಾರರು , ಕಟ್ಟಡ ಕಾರ್ಮಿಕರು ವಾಸ್ತು ಕುರಿತಾಗಿ ಮಾತನಾಡಿದ್ದನ್ನು ನಾನು ಕೇಳಿಲ್ಲ.. ಮೇಸ್ತ್ರಿ ಹಂತದಿಂದ ವಾಸ್ತುಜ್ಞಾನ ಚಿಗುರೊಡೆಯುವುದು ಗಮನಾರ್ಹವಾಗಿದೆ.) ಅವರ ಮಾತನ್ನು ಕೇಳಿದ ಇತರರು ಅವರ ವಾಸ್ತುಜ್ಞಾನವನ್ನು ಕಣ್ಣರಳಿಸಿ, ಕಿವಿ ತಿರುಗಿಸಿ ಕೇಳುತ್ತಾರೆ. ಹಾಗಾದರೆ ಇವರ ವಾಸ್ತುಜ್ಞಾನವೆಲ್ಲ ಎಲ್ಲಿಂದ ಬಂದಿತು. ಇದರಲ್ಲಿ ಹುರುಳೆಷ್ಟು ಎಂದು ನಾವು ವಿಚಾರಿಸ ಹೊರಡುವುದಿಲ್ಲ. ನಾವು ತಿಳಿಯದ ಅಥವಾ ಒಳಹೊಕ್ಕು ನೋಡದ ವಾಸ್ತುಶಾಸ್ತ್ರದಂತಹ ವಿಚಾರದಲ್ಲಿ ನಂಬಿಕೆಯೇ ಪ್ರಧಾನವಾಗಿರುತ್ತದೆ. ಇಂತಹ ನಂಬಿಕೆ ಯಾವ ಮಟ್ಟಿಗೆ ಸರಿ ಎಂದು ತಿಳಿಯಲು ಆ ನಂಬಿಕೆಯ ಮೂಲಕ್ಕೆ ಸಾಗುವುದೊಂದೆ ದಾರಿ. ವಾಸ್ತುಶಾಸ್ತ್ರದಂತಹ ನಂಬಿಕೆಗಳ ಮೂಲವನ್ನು ಹುಡುಕಲು ಪರಿಶ್ರಮ ಮತ್ತು ಅದು ನಿಜವಾಗಿಯೂ ಏನಿರಬಹುದೆಂದು ವಿಚಾರಿಸುವ ಕುತೂಹಲ ಮಾತ್ರ ತುಂಬಿರಬೇಕು. ಆದ್ದರಿಂದ ನಿಮ್ಮ ಬಚ್ಚಲು ಮನೆ ಇಲ್ಲಿಯೇ ಇರಬೇಕು , ನೀವು ಇಲ್ಲಿಯೇ ಮಲಗಬೇಕು , ನೀವು ಇಂತಹ ಮೂಲೆಯಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡಬೇಕು ಎಂದು ಹೇಳುವ ವಾಸ್ತುಶಾಸ್ತ್ರಿಯ ಜ್ಞಾನ ಎಲ್ಲಿಂದ ಬಂದಿತೆಂದು ನೋಡಲು ಈಗ ಹೊರಡೋಣ. ವಾಸ್ತುಶಾಸ್ತ್ರ ಪ್ರಾಚೀನವಾದ ಋಷಿ ಪ್ರಣೀತವಾದ ವೈಜ್ಞಾನಿಕ ನೆಲೆಗಟ್ಟಿನ ಮೇಲಿರುವ ಜ್ಞಾನವೆಂದು ಹೇಳುತ್ತಿರುವುದು ಯಾವ ಮಟ್ಟಿಗೆ ಸರಿ ಎಂದು ತಿಳಿಯಲು ಇದಕ್ಕಿಂತ ಒಳ್ಳೆಯ ದಾರಿಯಿಲ್ಲ. ಆದ್ದರಿಂದ ವಾಸ್ತುಪುರುಷನ ತಪಾಸಣೆ ಮತ್ತು ವಾಸ್ತುಗ್ರಂಥಗಳು ಅಧ್ಯಾಯಗಳಲ್ಲಿ ವಾಸ್ತುಶಾಸ್ತ್ರದ ಮೂಲಕ್ಕೆ ಹೋಗಿ ವಾಸ್ತುಶಾಸ್ತ್ರದ ಮೌಲ್ಯ ನಿರ್ಣಯಕ್ಕೆ ಯತ್ನಿಸಲಾಗಿದೆ.
ಈಗ ಎಲ್ಲರೂ ಕನವರಿಸುತ್ತಿರುವ ವಾಸ್ತುಶಾಸ್ತ್ರದಲ್ಲಿ ವಾಸ್ತುಪುರುಷನದು ಪ್ರಮುಖವಾದ ಪರಿಕಲ್ಪನೆ. ವಾಸ್ತುಪುರುಷ ನಿಮ್ಮ ನಿವೇಶನದಲ್ಲಿ ಏಕೆ ನೆಲೆಸಿದ ಎನ್ನುವ ಕಥೆಯನ್ನು ನಾವು ಈಗಾಗಲೇ ತಿಳಿದಿದ್ದೇವೆ. ಈ ವಾಸ್ತುಪುರುಷ ಪ್ರತಿ ನಿವೇಶನದಲ್ಲಿ ಈಶಾನ್ಯದಲ್ಲಿ ತಲೆಯೂರಿ , ನೈರುತ್ಯದಲ್ಲಿ ಕಾಲುಗಳನ್ನಿರಿಸಿಕೊಂಡು ಮುಖ ಹಾಗೂ ಹೊಟ್ಟೆಗಳನ್ನು ನೆಲಕ್ಕ ತಾಗಿಸಿದಂತೆ ಅಡಿಮುಖನಾಗಿ ನಿವೇಶನವೊಂದರಲ್ಲಿ ಅಸ್ತಿತ್ವದಲ್ಲಿರುವನೆಂದು ನಂಬಲಾಗಿದೆ. ಈತನ ಕೈಗಳು ಆಗ್ನೇಯ ಹಾಗೂ ವಾಯುವ್ಯ ದಿಕ್ಕಿನತ್ತ ಚಾಚಿ ಮೇಲಕ್ಕೆ ಬಗ್ಗಿದ್ದರೆ ಮೊಳಕಾಲುಗಳು ಮೊಳಕೈಗೆ ಸಮಾನಾಂತರದಲ್ಲಿದ್ದು ಮಂಡಿ ಮೊಳಕೈ ಗಂಟಿನ ಸನಿಹದಲ್ಲಿದೆ. ವಾಸ್ತುಪುರುಷನ ಈ ಭಂಗಿಯನ್ನು ನಿವೇಶನದೊಂದಿಗೆ ಸಮೀಕರಿಸಿ ವಾಸ್ತುಮಂಡಲ ರಚಿಸಲಾಗಿದೆ. ವಾಸ್ತುಮಂಡಲ ವಾಸ್ತುಪುರುಷನ ಅಂಗಾಂಗಳಿಗೆ ಹೊಂದಾಣಿಕೆಯಾಗುತ್ತದೆ. ಈ ವಾಸ್ತುಮಂಡಲವೇ ವಾಸ್ತುವಿನ್ಯಾಸದ ಮೂಲ. ನಂತರದ ದಿನಗಳಲ್ಲಿ ವಾಸ್ತುಪುರುಷನನ್ನು ಯೋಗಶಾಸ್ತ್ರದಲ್ಲಿ ಪರಿಗಣಿತವಾಗಿರುವ ಆರು ಚಕ್ರಗಳೊಂದಿಗೆ ಸಹ ಹೊಂದಾಣಿಕೆ ಮಾಡಲಾಗಿದೆ.. (ಚಿತ್ರ-೧: ಮುಖ ಅಡಿಯಾಗಿ ಮಲಗಿರುವ ವಾಸ್ತು ಪುರುಷ ಮತ್ತು ಪರಮಶಾಯಿಕ ಮಂಡಲ- ಪುರುಷನಲ್ಲಿ ಚಕ್ರಗಳು ಮತ್ತು ಅವುಗಳ ಸ್ಥಾನ ) ( ಯೋಗ ಶಾಸ್ತ್ರ ಚಿತ್ರ ವಿಚಿತ್ರ ಸಂಗತಿಗಳನ್ನು ಪರಿಗಣಿಸುತ್ತದೆ. ಇಡಾ-ಪಿಂಗಳ-ಸುಷ್ಮಾ ಎನ್ನುವ ನಾಡಿಗಳ ಮೂಲಕ ಆರು ಚಕ್ರಗಳನ್ನು ಪ್ರಜ್ಞೆ ದಾಟಿದಾಗ ಕೈವಲ್ಯ ಜ್ಞಾನ ಲಭ್ಯವೆಂದು ಹೇಳುತ್ತದೆ. ಈವರೆಗೆ ವಿಜ್ಞಾನಿಗಳು , ವೈದ್ಯರು ಅತ್ಯಾಧುನಿಕ ಉಪಕರಣಗಳನ್ನು ಬಳಸಿ , ಅಂಗರಚನೆಯನ್ನು ಅಭ್ಯಸಿಸಿದ್ದಾರೆ. ದೇಹವನ್ನು ತೆರೆದು ಅತ್ಯಂತ ಜಟಿಲವಾದ ಲಕ್ಷಾಂತರ ಶಸ್ತ್ರಕ್ರಿಯೆಗಳನ್ನು ನಡೆಸಿದ್ದಾರೆ. ಅವರಲ್ಲಿ ಯಾರಿಗೂ ಈ ಮೂರೂ ನಾಡಿಗಳು ಎಲ್ಲಿವೆ ಎಂದು ಗೊತ್ತಿಲ್ಲ. ಆದರೆ ಬಾಬಾ/ಶ್ರೀಶ್ರೀ/ಸದ್ಗುರುಗಳಿಗೆ ಮಾತ್ರ ಅವು ಖಚಿತವಾಗಿ ಗೊತ್ತು.-ಅದ್ಭುತ ಜ್ಞಾನ ! )
ಚಿತ್ರ-೧: ಮುಖ ಅಡಿಯಾಗಿ ಮಲಗಿರುವ ವಾಸ್ತು ಪುರುಷ ಮತ್ತು ಪರಮಶಾಯಿಕ ಮಂಡಲ- ಪುರುಷನಲ್ಲಿ ಚಕ್ರಗಳು ಮತ್ತು ಅವುಗಳ ಸ್ಥಾನ
(೧) ಮೂಲಾಧಾರ ಚಕ್ರ - ವಾಸ್ತುಪುರುಷನ ಕಾಲುಗಳು - ಭೂಮಿ ತತ್ವ : ಕಾಲುಗಳು ಮನುಷ್ಯನ ಭಾರವನ್ನು ಹೊರುತ್ತವೆ. ಆತನಿಗೆ ಅವೇ ಅಧಿಷ್ಠಾನ. ಆದ್ದರಿಂದ ಮೂಲಾಧಾರ ಭದ್ರವಾಗಿರಬೇಕು. ಆದ್ದರಿಂದ ಕಟ್ಟಡದ ನೈರುತ್ಯ ಭಾಗ ಬಲವಾಗಿದ್ದು ಕಟ್ಟಡದ ಹೆಚ್ಚಿನ ಭಾರವನ್ನು ಹೊರುವಂತಿರಬೇಕು. ಪಾದಗಳು ಬಿಸಿಯಾಗಿರುತ್ತವೆ. ಆದ್ದರಿಂದ ನೈರುತ್ಯ ದಿಕ್ಕು ಸಹ ಬೆಚ್ಚನೆಯ ನೆಲೆ.
(೨) ಸ್ವಾಧಿಷ್ಠಾನ ಚಕ್ರ - ವಾಸ್ತುಪುರುಷನ ಕೆಳಹೊಟ್ಟೆ ಹೊಕ್ಕಳು ಸನಿಹದ ಮೂತ್ರಪಿಂಡವಿರುವ ಜಾಗ - ನೀರಿನ ತತ್ವ . ವಾಸ್ತುಪುರುಷ ಮಂಡಲದಲ್ಲಿ ಇದು ದಕ್ಶಿಣ ಹಾಗೂ ಪಶ್ಚಿಮದಲ್ಲಿರುತ್ತದೆ. ಆದ್ದರಿಂದ ಬಚ್ಚಲು , ನೀರಿನ ಸಂಗ್ರಹ ಇತ್ಯಾದಿ ಸೌಕರ್ಯಗಳನ್ನು ದಕ್ಷಿಣ ಹಾಗೂ ಪಶ್ಚಿಮ ದಿಕ್ಕುಗಳಲ್ಲಿರಿಸಬೇಕು. ಬಳಸಿದ ನೀರನ್ನು ಹೊರಹಾಕುವ ದಿಕ್ಕುಗಳು ಸಹ ಇವೆ.
(೩) ಮಣಿಪುರ ಚಕ್ರ - ವಾಸ್ತುಪುರುಷನ ಹೊಕ್ಕಳು ಭಾಗ-ಅಗ್ನಿ ತತ್ವ. ಇದು ಅಗ್ನಿ ಮತ್ತು ತೇಜಸ್ಸಿಗೆ ಸಂಬಂಧಿಸಿದ ಜಾಗ-ಬ್ರಹ್ಮ ಸ್ಥಾನ. ಕಮಲಪೀಠದ ಮೇಲೆ ಬ್ರಹ್ಮ ರಾರಾಜಿಸಿರುವಂತೆ ಕಾಲಿನ ಮೇಲೆ (ಮೂಲಾಧಾರ ಚಕ್ರ) ಹೊಕ್ಕುಳು(ಮಣಿಪುರ ಚಕ್ರ) ವಿರಾಜಮಾನವಾಗಿದೆ. ಬಸಿರಿನಲ್ಲಿರುವ ಕೂಸು ಹೊಕ್ಕುಳ ಬಳ್ಳಿಯ ಮೂಲಕ ತಾಯಿಯಿಂದ ಪೋಷಣೆ ಪಡೆಯುತ್ತದ್ದೆ. ಹೊಕ್ಕುಳು (ಬ್ರಹ್ಮಸ್ಥಾನ) ಜೀವನನ್ನು ಬ್ರಹ್ಮನೊಂದಿಗೆ ಬೆಸೆಯುವ ಮಾರ್ಗ. ಈ ಕೇಂದ್ರದ (ಬ್ರಹ್ಮಸ್ಥಾನ) ಮೂಲಕ ವಾಸ್ತುಪುರುಷ ಉಸಿರಾಡುತ್ತಾನೆ. ಆದ್ದರಿಂದ ಕಟ್ಟಡದ ಈ ಭಾಗವನ್ನು ಮುಚ್ಚದೆ ತೆರೆದಿರಿಸಬೇಕು. ಇಲ್ಲಿ ಏನನ್ನೂ ಕಟ್ಟಬಾರದು.
(೪) ಅನಾಹತ ಚಕ್ರ - ವಾಸ್ತುಪುರುಷನ ಹೃದಯದ ಭಾಗ-ವಾಯು ತತ್ತ್ವ ಇದು ಉಸಿರಾಟಕ್ಕೆ ಆ ಮೂಲಕ ಶ್ವಾಸಕೋಶಗಳಿಗೆ ಸಂಬಂಧಿಸಿದ ವಾಯು ತತ್ತ್ವ . ಕಟ್ಟಡದ ಈ ಭಾಗ ಗಾಳಿಯಾಡುವಂತಿರಬೇಕು .
(೫) ವಿಶುದ್ಧ ಚಕ್ರ -ವಾಸ್ತುಪುರುಷನ ಗಂಟಲಿನ ಭಾಗ-ಆಕಾಶ ತತ್ವ. ಗಂಟಲಿನಿಂದ ಉಗಮವಾಗುವ ಓಂಕಾರ ಮೆದುಳಿನ ಪೆಟ್ಟಿಗೆಯಲ್ಲಿ ಪ್ರತಿಧ್ವನಿತವಾಗಿ ಅನುರಣಿಸುತ್ತದೆ
(೬) ಆಜ್ಞಾ ಚಕ್ರ - ವಾಸ್ತುಪುರುಷನ ಎರಡು ಹುಬ್ಬುಗಳ ನಡುವಿನ ಜಾಗ-ಆಕಾಶ ತತ್ವ. ಕಟ್ಟಡದ ಈ ಭಾಗದಲ್ಲಿ ತೆರೆದ ಜಾಗಗಳಿರಬೇಕು. ವಾಸ್ತುಪುರುಷನ ತಲೆ ಈಶಾನ್ಯಕ್ಕಿದೆ. ತಲೆ ಯಾವಾಗಲೂ ತಂಪಾಗಿರಬೇಕು. ಹವಾಮಾನ ಈಶಾನ್ಯ ದಿಕ್ಕಿನಲ್ಲಿ ಯಾವಾಗಲೂ ತಂಪಾಗಿರುತ್ತದೆ. ಇದು ದೇವರ ಕೋಣೆಗೆ ಪ್ರಶಸ್ತವಾದ ಜಾಗ
ವಾಸ್ತುಪುರುಷನ ದೇಹ ಮತ್ತು ಕಟ್ಟಡದ ನಡುವಿನ ಸಂಬಂಧ ಇಷ್ಟಕ್ಕೆ ನಿಲ್ಲದೆ ಉಳಿದ ಅಂಗಾಂಗಗಳಿಗೂ ವಿಸ್ತರಿಸಿದೆ. ಈತನ ಯಕೃತ್ ಆಗ್ನೇಯ ದಿಕ್ಕಿಗಿದೆ. ಈ ದಿಕ್ಕಿನ ಅಧಿದೇವತೆ ಅಗ್ನಿ. ಆದ್ದರಿಂದ ಇದು ಅಡುಗೆಗೆ ಮೀಸಲಿರಿಸಬೇಕಾದ ಜಾಗ. ವಾಸ್ತುಪುರುಷನ ಗುಲ್ಮ ಮತ್ತು ದೊಡ್ದ ಕರುಳಿನ ಕೊನೆಯ ಭಾಗ ವಾಯು ಅಧಿಪತ್ಯದ ವಾಯುವ್ಯ ದಿಕ್ಕಿನಲ್ಲಿವೆ . ಇವು ದೇಹದಲ್ಲಿ ಆಹಾರ ಸಂಗ್ರಹದ ನೆಲೆಗಳು. ಆದ್ದರಿಂದ ಸಾಮಾನಿನ ಕೋಣೆ , ಸಂಗ್ರಹಗಳ ಜಾಗ ಇದಾಗಿರಬೇಕು ಮೇಲೆ ತಿಳಿಸಿದ ಎಲ್ಲ ದಿಕ್ಕುಗಳು ವಿವಿಧ ಗ್ರಹಗಳು ಮತ್ತು ಅವುಗಳ ಸ್ಥಾನದೊಂದಿಗೆ ಸಂಬಂಧ ಹೊಂದಿವೆ. ಜಾತಕನಕ್ಷೆ ಮತ್ತು ವಾಸ್ತುಮಂಡಲ ಇವೆರಡೂ ಒಂಬತ್ತು ಚೌಕದ ಮನೆಗಳಿಂದಾಗಿವೆ. ಈ ಮೂಲಕ ವಾಸ್ತು ಮತ್ತು ಗ್ರಹಗತಿಗಳ ನಡುವಿನ ಸಂಬಂಧ ಪರಿಪೂರ್ಣಗೊಂಡಿದೆ. ಮುಖ ಅಡಿಯಾದ ಭಂಗಿಯಲ್ಲಿ ವಾಸ್ತುಪುರುಷನಿರುವುದರಿಂದ ಆತನ ಸೂಕ್ಷಾಂಗಗಳಿರುವ ಕಡೆ ಕಟ್ಟಡದ ಯಾವ ಭಾರಗಳೂ ಬರಬಾರದು. ಈ ಸೂಕ್ಷ ಅಂಗಗಳು ಒಳ-ಹೊರಗಿನ ಸಂಚಲನೆಯ ತಾಣಗಳು. ಇದರ ಆಧಾರದ ಮೇಲೆ ವಾಸ್ತುಪಂಡಿತರು ಹೇಳುವ ವಾಸ್ತುರಹಸ್ಯಗಳು ಒಡಮೂಡಿವೆ. ಇದರ ಒಟ್ಟು ಸಾರಾಂಶ ವಾಸ್ತುಮಂಡಲದಲ್ಲಿ ಸೂಚಿತವಾಗಿದೆ.
ವಾಸ್ತುಪುರುಷನ ಬಾಗಿರುವ ಭಂಗಿಯನ್ನನುಸರಿಸಿ ವಾಸ್ತುಮಂಡಲ ರಚಿಸಲ್ಪಟ್ಟಿದೆ. ಚೌಕಾಕಾರದಲ್ಲಿರುವ ಈ ಮಂಡಲವನ್ನು ಹಲವಾರು ಸಣ್ಣ ಚೌಕಗಳಾಗಿ ವಿಭಜಿಸಲಾಗಿದೆ. ಈ ವಿಭಜನೆ ಸನ್ನಿವೇಶಕ್ಕೆ , ಅನ್ವಯಿಸಬೇಕಾದ ರಚನೆಗೆ ತಕ್ಕಂತೆ ಬದಲಾಗುತ್ತದೆ. ಇದರ ಆಧಾರದ ಮೇಲೆ ೩೨ ಕ್ಕೂ ಅಧಿಕ ವಾಸ್ತುಮಂಡಲಗಳನ್ನು ಹೇಳಲಾಗಿದೆ. ಅತ್ಯಂತ ಸರಳವಾದುದು ಒಂದು ಚೌಕ(ಪಾದ) ಇದ್ದರೆ ೨೫೬ ಚೌಕ/ಪಾದದ ತ್ರಿಯುತ ಮಂಡಲ ಸಹ ಇದೆ. ಈ ಮಂಡಲಗಳ ಕೆಲ ಹೆಸರುಗಳು ಹೀಗಿವೆ.. ೧/೧=೧ (ಸಕಲ) , ೨/೨=೪ (ಪೇಚಕ) , ೩/೩=೯ (ಪೀಠ) , ೪/೪=೧೬ (ಮಹಾಪೀಠ) , ೫/೫=೨೫ (ಉಪಪೀಠ) , ೬/೬=೩೬ (ಉಗ್ರಪೀಠ) , ೭/೭=೪೯ (ಸ್ಥಾಂದಿಲ) , ೮/೮=೬೪ (ಮಂಡೂಕ) , ೯/೯=೮೧ (ಪರಮಸಾಯಿಕ) ಹೆಸರಿನ ಮಂಡಲಗಳಿವೆ. ವಿಭಜಿಸಲ್ಪಟ್ಟ ಪ್ರತಿಯೊಂದು ಸಣ್ಣ ಚೌಕವನ್ನು ೪೫ಕ್ಕೂ ಅಧಿಕ ದಿಕ್ಪಾಲಕ/ದೇವತೆ/ಯಕ್ಷ/ಅಸುರ ಇತ್ಯಾದಿಗಳಿಗೆ ನಿಗದಿಪಡಿಸಲ್ಪಟ್ಟಿದೆ. ಇದರಲ್ಲಿ ನೀವು ಎಂದೂ ಕೇಳರದ ರೋಗ , ಮುಖ್ಯ , ಭಲ್ಲಟ , ದಿತಿ , ಸಾತ್ಯಕಿ , ಪಾಪ , ಅಪ ,ಪರ್ಜನ್ಯ , ಶೇಷ , ಜಯ , ಅಸುರ , ಪುಷ್ಯ , ಸತ್ಯ , ಸುಗ್ರೀವ , ಭೃಷ್ , ನಂದಿ , ಆಕಾಶ , ಪಿತೃ , ಮೃಗ , ಭೃಂಗಿರಾಜ , ಗಂಧರ್ವ , ಗೃಹಸ್ವತ್ , ವಿತಾರಿ , ಪುಷ್ಪ , ಸವಿತಾ , ಸವಿತ್ರ, ವಿಬುಧ , ಮುಂತಾದ ದೇವ , ಯಕ್ಷ , ಕಿನ್ನರ , ಕಿಂಪುರುಷ , ಅಸುರರು ಸೇರಿದ್ದಾರೆ.
ಮನೆಯ ನಿರ್ಮಾಣದ ಆರಂಭ , ಮನೆಯ ಪ್ರವೇಶ ಸೇರಿದಂತೆ ನಿರ್ಮಾಣದ ವಿವಿಧ ಘಟ್ಟಗಳಲ್ಲಿ ಇವರಿಗೆ ನಾನಾ ಬಗೆಯ ಶಾಖಾ ಮತ್ತು ಮಾಂಸಾಹಾರದ ಬಲಿ/ನೈವೇದ್ಯ ಅರ್ಪಿಸಿ ಶಾಂತಗೊಳಿಸಬೇಕೆಂದು ವಾಸ್ತುಗ್ರಂಥಗಳು ತಿಳಿಸುತ್ತವೆ. ಭೃಂಗರಾಜನಿಗೆ ಸಮುದ್ರ ಮೀನು , ಮೃಗನಿಗೆ ಒಣಮಾಂಸ , ರುದ್ರಜಯನಿಗೆ ಮಾಂಸ , ರಕ್ತ ಮಿಶ್ರಿತ ಕುರಿಯ ಕೊಬ್ಬಿನ ಬಲಿಯನ್ನು (ಮ.ಮ ೮/೮, ೮/೧೨,೮/೧೪ , ಮಾ.ಸಾ ೮/೧೨ , ೮/೧೩ ) ಅರ್ಪಿಸಬೇಕೆಂದು ಹೇಳುತ್ತವೆ.ಆಧುನಿಕ ಕಾಲದಲ್ಲಿ ಶಾಖಾಹಾರಿಗಳಿರಲಿ ಕಟ್ಟಾ ಮಾಂಸಾಹಾರಿಗಳೇ ತಮ್ಮ ನಿವೇಶನದಲ್ಲಿ ಇಂತಹ ಬಲಿ ನೀಡುವ ಪೂಜೆಯನ್ನು ಒಪ್ಪುವುದಿಲ್ಲ. ಈ ವಿವರಗಳು ವಾಸ್ತುಗ್ರಂಥಗಳಲ್ಲಿ ಇದೆಯೆಂದು ಬಹುತೇಕ ವಾಸ್ತುಪಂಡಿತರಿಗೆ ಗೊತ್ತಿಲ್ಲ. ಅವರ ತಿಳುವಳಿಕೆಯೇನಿದ್ದರೂ ಕುಬೇರ , ವಾಯುವ್ಯ , ಈಶಾನ್ಯ ಇತ್ಯಾದಿಗಳಿಗೆ ಮಾತ್ರ ಸೀಮಿತ. ಇಂತಹ ವಿವರಗಳನ್ನು ಬಲ್ಲ ಶಾಸ್ತ್ರೋಕ್ತವಾಗಿ ಎಲ್ಲ ನಡೆಯಬೇಕು ಎಂದು ಹೇಳುವ ಅತ್ಯಲ್ಪ ಬೆರಳೆಣಿಕೆಯ ವಾಸ್ತುಪಂಡಿತರು ಆಗದ ಹೋಗದ ಇಂತಹುವುಗಳನ್ನು ಹೇಳಿ ಗಿರಾಕಿಗಳನ್ನು ಕಳೆದುಕೊಳ್ಳುವುದೇಕೆ ಎಂಬ ಜಾಣ ವ್ಯಾವಹಾರಿಕ ನಿಲುವು ತಾಳುತ್ತಾರೆ. ಬೇರೆಯವು ಮಾತ್ರ ಶಾಸ್ತ್ರೋಕ್ತವಾಗಿ ನಡೆಯಬೇಕೆಂದು ನಿಮ್ಮನ್ನು ಹೆದರಿಸುತ್ತಾರೆ.
ಅದೇನೇ ಇರಲಿ ನೀವು ಕಟ್ಟಿಸಬೇಕೆಂದಿರುವ ಮನೆಯ ಯಾವ ಭಾಗದಲ್ಲಿ ಯಾವ ದೇವತೆ ನೆಲೆಸಿರುವನೆಂದು ತಿಳಿಯುವ ಕುತೂಹಲ ನಿಮಗಿದೆಯೇ? ಕನಿಷ್ಟ ಅದಕ್ಕೆ ಅನುಗುಣವಾಗಿಯಾದರೂ ಮನೆಯಿರಬೇಕೆಂಬ ಬಯಕೆ ನಿಮ್ಮದೇ ? ತಾಳಿ ಹಿಗ್ಗದಿರಿ. ದಕ್ಷಿಣ ಭಾರತದ ಮಯಮತ ಮತ್ತು ಉತ್ತರ ಭಾರತದ ವಿಶ್ವಕರ್ಮ ಪ್ರಕಾಶ ಯಾವ ದಿಕ್ಕು ಯಾವ ದೈವದ ನೆಲೆ , ಯಾವ ದಿಕ್ಕಿನಲ್ಲಿ ಏನಿರಬೇಕೆಂಬ ಬಗ್ಗೆ ಪರಸ್ಪರ ವಿರುದ್ಧ ದಿಕ್ಕಿಗೆ ಮುಖ ತಿರುಗಿಸಿವೆ..
ಜಾತಕ ಮತ್ತು ವಾಸ್ತುಪುರುಷ ಮಂಡಲದ ನಡುವಿನ ಸಂಬಂಧ ಮಂಡೂಕ ಮತ್ತು ಪರಮಸಾಯಿಕಗಳಲ್ಲಿ ಹೆಚ್ಚು ಬಿಗಿಯಾಗಿದೆ. ೨೭ ಅಥವಾ ೨೮ ನಕ್ಷತ್ರಗಳನ್ನು ಪರಿಗಣಿಸಿ ೮/೮=೬೪ ಮನೆಗಳ ಮಂಡೂಕ ಮಂಡಲ ಬಂದಿದೆ. ಹಾಗಾಗಿ ಈ ಮಂಡಲದ ಪರಿಧಿಯ ೩೨ ಮನೆಗಳನ್ನು ನಕ್ಷತ್ರ ಹಾಗೂ ಅವುಗಳಿಗೆ ಸಂಬಂಧಿಸಿದ ಪೌರಾಣಿಕ ದೇವತೆಗಳೊಂದಿಗೆ ಗುರುತಿಸಲಾಗಿದೆ. ಇದರಂತೆಯೇ ೮೧ ಮನೆಗಳ ಪರಮಸಾಯಿಕ ಮಂಡಲ ರೂಪುಗೊಂಡಿದೆ. ಆದ್ದರಿಂದ ನೀವೆಂದೂ ಹೆಸರು ಕೇಳದ ಮೇಲೆ ತಿಳಿಸಿದ ನಾನಾ ದೈವಗಳ ಹೆಸರುಗಳು ಇಲ್ಲಿವೆ. ಮಾನಸಾರ , ಮಯಮತ , ವಾಸ್ತುವಿದ್ಯಾ ಸೇರಿದಂತೆ ವಾಸ್ತುಶಾಸ್ತ್ರದ ವಿವಿಧ ಗ್ರಂಥಗಳಲ್ಲಿ ಈ ಮಂಡಲಗಳ ಬಗ್ಗೆ ಸ್ವಲ್ಪ ವ್ಯತ್ಯಾಸಗಳಿವೆಯಾದರೂ ಅವೆಲ್ಲವುಗಳ ಹಿಂದಿರುವ ಪರಿಕಲ್ಪನೆ ಒಂದೇ. ಉದಾಹರಣೆಗೆ ಮಂಡೂಕ/ಪರಮಸಾಯಿಕ ಮಂಡಲಗಳಲ್ಲಿ ೪೫ ದೈವಗಳಿವೆ. ಬ್ರಹ್ಮ ಕೇಂದ್ರ ಭಾಗದಲ್ಲಿದ್ದರೆ ಆತನ ಸುತ್ತಲಿನ ೧೨ ಚೌಕಗಳು(=ಪಾದ) ಆದಿತ್ಯರನ್ನು , ಹೊರಗಿನ ೨೮ ಚೌಕಗಳು ನಕ್ಷತ್ರಗಳನ್ನು ಪ್ರತಿನಿಧಿಸುತ್ತವೆ. ವಾಸ್ತುಮಂಡಲದ ಪ್ರಕಾರ ಎಂಟು ದಿಕ್ಕುಗಳು ಹಾಗೂ ಒಂದು ಕೇಂದ್ರ ಸ್ಥಾನವಿದೆ. ಇವುಗಳಿಗೆ ಒಂಬತ್ತು ದೈವಗಳಿವೆ. ಫೂರ್ವ=ಇಂದ್ರ , ಪಶ್ಚಿಮ=ವರುಣ , ಉತ್ತರ=ಕುಬೇರ , ದಕ್ಷಿಣ=ಯಮ , ಆಗ್ನೇಯ=ಅಗ್ನಿ , ನೈರುತ್ಯ=ನಿರುತ್ , ವಾಯುವ್ಯ=ವಾಯು ಮತ್ತು ಈಶಾನ್ಯ=ಈಶರ ಅಧಿಷ್ಟಾನವಾದರೆ ಕೇಂದ್ರ ಬ್ರಹ್ಮನ ಸ್ಥಾನವಾಗಿದೆ.
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ದಿಕ್ಕುಗಳು ಮನುಷ್ಯ ತನ್ನ ಅನುಕೂಲಕ್ಕಾಗಿ ಮಾಡಿಕೊಂಡಿರುವ ಪರಿಕಲ್ಪನೆಗಳು ಮಾತ್ರ.. ಭೂಮಿಗೆ ಆಗಲಿ , ಆಕಾಶಕ್ಕೆ ಆಗಲಿ ದಿಕ್ಕು ಎನ್ನುವುದಿಲ್ಲ. ಸೂರ್ಯ ಕಾಣಿಸಿಕೊಳ್ಳುವ ದಿಕ್ಕು ಎನ್ನುವುದು ಸಹ ತಾತ್ಕಾಲಿಕ. ಭೂಮಿಯ ಪರಿಭ್ರಮಣೆಯಿಂದಾಗಿ ಅದು ಕ್ಷಣ , ಕ್ಷಣಕ್ಕೂ ಬದಲಾಗುತ್ತದೆ. ಉತ್ತರ ಮತ್ತು ದಕ್ಷಿಣ ಧೃವಗಳ ಸನಿಹದಲ್ಲಿ ಸೂರ್ಯ ಮೂಡುವ ಮತ್ತು ಮುಳುಗುವ ದಿಕ್ಕುಗಳು ಎನ್ನುವುವು ಇಲ್ಲ. ಆದರೂ ಅಲ್ಲಿ ಜನವಸತಿಯಿದೆ. ಕರ್ಕಾಟಕ ಸಂಕ್ರಾತಿ ವೃತ್ತದಾಚೆಯ ಭಾಗಗಳಲ್ಲಿ ಮಧ್ಯರಾತ್ರಿಯಲ್ಲೂ ಸೂರ್ಯ ಗೋಚರಿಸತ್ತಾನೆ. ದಿಕ್ಕುಗಳನ್ನು ಅವುಗಳ ಅಧಿಪತಿಗಳಾದ ದೈವಗಳನ್ನು ಪರಿಗಣಿಸುವ ವಾಸ್ತುಶಾಸ್ತ್ರ ವೈಜ್ಞಾನಿಕ ಹಾಗೂ ಸಾರ್ವತ್ರಿಕ ಹೇಗೆ ಆಗಬಲ್ಲದು. ಅದು ಕೇವಲ ಹಿಂದೂಗಳ ಪೌರಾಣಿಕ ನಂಬಿಕೆಯ ಮೇಲೆ ಇರಬಹುದಾಗಿದೆ.
ವಾಸ್ತುಪುರುಷ ಮಂಡಲದ/ನಿವೇಶನದ ನಾಲ್ಕು ಮೂಲೆಗಳನ್ನು ಸೇರಿಸುವ ವಿಕರ್ಣಗಳು (Diagonals) ಹಾಗೂ ವಿಕರ್ಣಗಳಿಗೆ ಎಳೆದ ಸಮಾಂತರ ರೇಖೆಗಳು (ರಜ್ಜುಗಳು) ವಾಸ್ತುಪುರುಷ ಮಂಡಲದ ಪಾದ ವಿಭಜನೆಯ ರೇಖೆಗಳನ್ನು ಹಲವಾರು ಕಡೆ ಛೇದಿಸುತ್ತವೆ. ಈ ಛೇದಿತ ಬಿಂದುಗಳೇ ಮರ್ಮಸ್ಥಾನಗಳು. ಬ್ರಹ್ಮಸ್ಥಾನವನ್ನು ಛೇದಿಸುವ ಬಿಂದುಗಳು ಮುಖ್ಯ ಮರ್ಮಸ್ಥಾನಗಳು. ಮಯಮತದ ಪ್ರಕಾರ ವಾಸ್ತುಪುರುಷನಿಗೆ ಆರು ಮೂಳೆಗಳು , ಒಂದು ಹೃದಯ , ನಾಲ್ಕು ನಾಡಿ , ನಾಲ್ಕು ಮರ್ಮಸ್ಥಾನಗಳಿವೆ . ಈ. ಮರ್ಮಸ್ಥಾನಗಳು ಮಂಡಲ ಪಾದಗಳ ೧/೮ ಭಾಗದಷ್ಟಿದ್ದು ಅವುಗಳಿರುವಲ್ಲಿ ನಿಮಾರ್ಣ ಸಲ್ಲದೆಂದು ವಾಸ್ತುಗ್ರಂಥಗಳು ತಿಳಿಸುತ್ತವೆ. ಮರ್ಮಸ್ಥಾನದಲ್ಲಿ ಕಟ್ಟಲೇ ಬೇಕಾದ ಅನಿವಾರ್ಯತೆ ಎದುರಾದರೆ ಅವುಗಳ ಜಾಗದಲ್ಲಿ ಬಂಗಾರದಲ್ಲಿ ಮಾಡಿದ ಎತ್ತು , ಹಂದಿ ,ಆನೆ ಅಥವಾ ಆಮೆಯ ತಲೆಯನ್ನು ಇರಿಸಬೇಕೆಂದು ಮನುಷ್ಯಾಲಯ ಚಂದ್ರಿಕೆ ಶಿಫಾರಸ್ಸು ಮಾಡುತ್ತದೆ. ಮರ್ಮಸ್ಥಾನದಲ್ಲಿ ಮೊಳೆ , ಗೂಟ , ಇತ್ಯಾದಿ ಇದ್ದರೆ ಅಥವಾ ಆ ಜಾಗಕ್ಕೆ ಭಂಗ ಬಂದರೆ ಮನೆಯ ಯಜಮಾನನಿಗೆ ಅದಕ್ಕೆ ಸಂವಾದಿಯಾದ ಅಂಗದಲ್ಲಿ ತೊಂದರೆ ಉಂಟಾಗುತ್ತದೆಯೆಂದ ಬೃಹತ್ಸಂಹಿತಾ ತಿಳಿಸುತ್ತದೆ. ಮರ್ಮಸ್ಥಾನವನ್ನು ಮುಚ್ಚಿದರೆ ಮರಣ ಭಯವೆಂದು ಹೇಳಲಾಗಿದೆ. ಆದರೆ ಇನ್ನು ಕೆಲವು ವಾಸ್ತು ಶಾಸ್ತ್ರಗಳು ವಾಸ್ತುಪುರುಷ ತನ್ನ ನೆಲೆಯಿಂದ ಮೇಲೇಳದೆ ಸದಾ ಅದನ್ನು ಕಾಯುತ್ತ ಇರುವಂತೆ ಮಾಡಲು ಮರ್ಮಸ್ಥಾನದಲ್ಲಿ ಗೂಟ ಜಡಿಯಬೇಕೆಂದು ಸೂಚಿಸುತ್ತವೆ. .
ಮೇಲೆ ತಿಳಿಸಿರುವ ವಾಸ್ತುಪುರುಷ ಮತ್ತು ವಾಸ್ತುಮಂಡಲ ಆಧಾರದ ಮೇಲೆ ಈಗಿನ ಎಲ್ಲ ವಾಸ್ತುಪಂಡಿತರು ಹೇಳುವ ಸಲಹೆಗಳು ಅಡಕಗೊಂಡಿವೆ. ಪ್ರತಿ ಹೊಸ ಸಮಸ್ಯೆ ಎದುರಾದಾಗಲೂ ಈ ಕೆಲವು ಸಂಗತಿಗಳನ್ನೇ ವಿವಿಧ ರೀತಿಯಲ್ಲಿ ಅರ್ಥೈಸಿ ಬಳಸುತ್ತಾರೆ. ಇದರಾಚೆಗೆ ಯಾವ ಹೊಸ ಜ್ಞಾನವೂ ಇಲ್ಲ.
ಇದೇನಿದು ನಾವು ಕೇಳುತ್ತಿರುವು ನಿರ್ಮಾಣ ತಂತ್ರಜ್ಞಾನವನ್ನೇ ಅತವಾ ಪುರಾಣದ ಕಥೆಗಳನ್ನೇ ಎಂದು ಕೆಲ ಕಾಲ ತಬ್ಬಿಬ್ಬಾಗಿದ್ದರೆ ಸಾವರಿಸಿಕೊಳ್ಳಿರಿ. ಅಬ್ಬ ಯಾರು ಏನೇ ಹೇಳಲಿ , ಅದೇನೇ ಇರಲಿ ನಾನು ವಾಸ್ತುಪುರುಷ ಮಂಡಲದ ಪ್ರಕಾರ ಮನೆಯನ್ನು ಯೋಜಿಸಿ ನಿರ್ಮಿಸಿ ಸುಖವಾಗಿ ಇರಬಹುದೆಂದು ನೀವು ಭಾವಿಸಿರಬಹುದು ಅಥವಾ ನಿಮಗೆ ವಾಸ್ತುಪಂಡಿತರು ಭರವಸೆ ನೀಡಿರಬಹುದು. ಆದರೆ ಒಂದು ನಿಮಿಷ ತಾಳಿ! ಏಕೆಂದರೆ ನೀವು ಯಾವ ವಾಸ್ತುಗ್ರಂಥವನ್ನು ಅನುಸರಿಸಬೇಕೆಂದು ಮೊದಲೇ ನಿರ್ಧರಿಸಿಕೊಳ್ಳಿ. ಏಕೆಂದರೆ ಎಲ್ಲ ಸಮಯ, ಎಲ್ಲ ಕಡೆಗಳಲ್ಲಿ ಒಂದೇ ನಿಯಮವನ್ನು ಹೇಳಲು ವಾಸ್ತುಶಾಸ್ತ್ರ ವಿಜ್ಞಾನವೇನು ಅಲ್ಲ. ಅದನ್ನು ಮೀರಿದುದು ಅದು ! ವಾಸ್ತುಪುರುಷನ ತಲೆ ಈಶಾನ್ಯದಲ್ಲಿ ಇರುತ್ತದೆ ಎನ್ನುವುದು ಸಾಮಾನ್ಯ ನಂಬಿಕೆಯಾದರೂ ಸಮರಂಗಣ ಸೂತ್ರಧಾರ (ಸ.ಸೂ ೨೫/೨ ) ೬೪ ಚೌಕಗಳ ಮಂಡಲದಲ್ಲಿ ಆತನ ತಲೆ ಪೂರ್ವಕ್ಕಿದ್ದು ,೮೧ ಚೌಕಗಳ ಮಂಡಲದಲ್ಲಿ ಈಶಾನ್ಯಕ್ಕಿರಬೇಕು. ಇದು ರಾಜರ ಮಂಡಲ ಎನ್ನುತ್ತದೆ. ಹಯಶೀರ್ಷ ಪಂಚರಾತ್ರ ೬೪ ಚೌಕಗಳ ಮಂಡಲ ದೇವಾಲಯ ನಿರ್ಮಾಣಕ್ಕೆ , ೮೧ ಚೌಕಗಳ ಮಂಡಲ ಬ್ರಾಹ್ಮಣರ ಮನೆಗಳ ಯೋಜನೆಗೆ ಪ್ರಶಸ್ತವೆಂದರೆ (ಹ.ಪಾಂ ೮-೧೫೦) ,ಈಶಾನ ಶಿವಗುರುದೇವ ಪದ್ಧತಿ ೬೪ ಚೌಕಗಳ ಮಂಡಲ ಬ್ರಾಹ್ಮಣರಿಗೆ, ೮೧ ಚೌಕಗಳ ಮಂಡಲ ಕ್ಷತ್ರಿಯರ ಮನೆಗಳಿಗೆ ಮೀಸಲಿರಿಸಿದೆ. ನೀವು ಬ್ರಾಹ್ಮಣ ಅಥವಾ ಕ್ಷತ್ರಿಯ ಅಗಿಲ್ಲದಿದ್ದರೆ ಯಾವ ಮಂಡಲವನ್ನು ಅನುಸರಿಸಬೇಕೆಂದು ಚಿಂತಿತರಾಗಿದ್ದೀರಾ? ಸಲ್ಲದು . ಏಕೆಂದರೆ ಅದನ್ನು ನಿಮಗೆ ತಿಳಿಸದೇ ವಾಸ್ತುಪಂಡಿತ ನಿರ್ಧರಿಸುತ್ತಾನೆ.
ಇಲ್ಲಿಗೆ ವಾಸ್ತುಮಂಡಲಕ್ಕೆ ಅನುಗುಣವಾಗಿ ಮನೆಕಟ್ಟಿಸಬೇಕೆಂಬ ನಿಮ್ಮ ಆಸೆ ಕೈಗೂಡುಬಹುದೆಂದು ನಿರಾಳವಾಗದಿರಿ. ವಾಸ್ತುಶಾಸ್ತ್ರಗಳು ವಾಸ್ತುಪುರುಷನ ಕಾಲು ಇರುವಲ್ಲಿ ಹೆಚ್ಚು ಭಾರ ಹಾಕುವಂತೆ ಹೇಳುತ್ತವೆ. ಆ ಸನಾತನ ಜ್ಞಾನವನ್ನೇ ವಾಸ್ತುಪಂಡಿತ ನಿಮಗೆ ಧಾರೆ ಎರೆದಿದ್ದಾನೆ. ಆದರೆ ನಿಲ್ಲಿ ! ನಿಮ್ಮ ವಾಸ್ತುಪುರುಷನ ಯಾವ ಕಡೆ ತಲೆ ಇರಿಸಿ ನೆಲೆಸಿದ್ದಾನೆ ಎನ್ನುವ ಬಗ್ಗೆ ವಾಸ್ತುಗ್ರಂಥಗಳಲ್ಲಿ ಒಮ್ಮತವಿಲ್ಲ. ಬೃಹತ್ ಸಂಹಿತ (LII . 51) , ಈಶಾನಶಿವ ಗುರುದೇವ ಪದ್ಧತಿ ( III Ch. XXVI) , ಮನುಷ್ಯಾಲಯ ಚಂದ್ರಿಕೆ (2/ 28) , ರಾಜ ವಲ್ಲಭ (2/. 18) , ಶಿಲ್ಪರತ್ನ ( 6/28) ಎಷ್ಟು ಚೌಕಗಳ ಮಂಡಲದಲ್ಲಿ ವಾಸ್ತುಪುರುಷ ಯಾವ ಕಡೆ ತಲೆ ಇರಿಸಿರುತ್ತಾನೆ ಎನ್ನುವ ಬಗ್ಗೆ ಪರಸ್ಪರ ವಿರುದ್ಧ ಅಭಿಪ್ರಾಯ ತಾಳಿವೆ. ಇವುಗಳಲ್ಲಿ ಕೆಲವು ಆತನ ತಲೆ ಪೂರ್ವಕ್ಕಿದೆ ಎಂದರೆ ಇನ್ನು ಕೆಲವು ಈಶಾನ್ಯ ಎನ್ನುತ್ತವೆ. ( ಚಿತ್ರ-: ವಾಸ್ತುಪುರುಷನ ಭಂಗಿ ಮಯಮತ ನಿರೂಪಿಸಿದಂತೆ)
ವಾಸ್ತುಪುರುಷ ಯಾವ ಕಡೆ ತಲೆಮಾಡಿ ಮಲಗಿರುವನೆಂಬ ಗೋಜಲು ಇಲ್ಲಿಗೆ ಮುಗಿಯಲಿಲ್ಲ. ಕೆಲ ಗ್ರಂಥಗಳು ಮುಖ ಅಡಿಯಾಗಿ ಬಿದ್ದಿರುವ ಅಲುಗದ ವಾಸ್ತು ಪುರುಷನನ್ನು ಪರಿಗಣಿಸುತ್ತವೆಯಾದರೂ ಇನ್ನು ಕೆಲವು ವಾಸ್ತುಗ್ರಂಥಗಳು ಇದನ್ನು ಒಪ್ಪುದೆ ಗಡಿಯಾರದ ಮುಳ್ಳಿನಂತೆ ತಿರುಗುವ ವಾಸ್ತು ಪುರುಷನನ್ನು ಗ್ರಹಿಸುತವೆ. ಅಲುಗದೆ ಹಾಗೆ ಬಿದ್ದಿರಲು ವಾಸ್ತುಪುರುಷನೇನು ಮರದ ಕೊರಡಲ್ಲ. .ಇವುಗಳ ಪ್ರಕಾರ ಸೂರ್ಯ ಯಾವ ರಾಶಿಯಲ್ಲಿರುವನೋ ಆ ರಾಶಿಯಲ್ಲಿ ಪುರುಷನ ಕಾಲುಗಳಿರುತ್ತವೆ. ಕೆಲ ಗ್ರಂಥಗಳು ಹೆಚ್ಚು ಶಾಶ್ವತವಾದ ಅರಮನೆ ದೇವಾಲಯಗಳಿಗ ಸ್ಥಿರ ಪುರುಷ, ಉಳಿದ ಕಡೆ ತಿರುಗುವ ಪುರುಷ ಪರಗಣಿಸಬೇಕೆನ್ನುತ್ತವೆ. ವಾಸ್ತುವಿದ್ಯಾ ಮತ್ತು ಜ್ಯೋತಿಷ ರತ್ನಮಾಲ ತಿರುಗುವ ಪುರುಷನನ್ನು ಎಲ್ಲ ಬಗೆಯ ನಿರ್ಮಾಣಕ್ಕೂ ಅನ್ವಯಿಸಬಹುದೆಂದು ಹೇಳುತ್ತವೆ.
ವಾಸ್ತುಪುರುಷ ಭಾದ್ರಪದ , ಆಶ್ವೀಜ , ಕಾರ್ತೀಕದಲ್ಲಿ ( ಆಗಸ್ಟ್-ಅಕ್ಟೋಬರ್) ಪೂರ್ವಕ್ಕೆ ತಲೆಮಾಡಿ , ಮಾರ್ಗಶಿರ, ಪುಷ್ಯ, ಮಾಘಗಳಲ್ಲಿ (ನವೆಂಬರ್-ಫೆಬ್ರವರಿ) ದಕ್ಷಿಣಕ್ಕೆ ತಲೆಮಾಡಿ , ಫಾಲ್ಗುಣ,ಚೈತ್ರ,ವೈಶಾಖದಲ್ಲಿ (ಮಾರ್ಚ್-ಮೇ) ಪಶ್ಚಿಮಕ್ಕೆ ತಲೆಮಾಡಿ, ಜ್ಯೇಷ್ಠ , ಆಷಾಢ , ಶ್ರಾವಣದಲ್ಲಿ (ಮೇ-ಆಗಸ್ಟ್) ಉತ್ತರಕ್ಕೆ ತಲೆಮಾಡಿ ಮಲಗಿರುತ್ತಾನೆ ಎನ್ನುತ್ತದೆ ಒಂದು ಗ್ರಂಥ.. ಹೀಗ ಸೂರ್ಯನನ್ನು ಅನುಸರಿಸಿ ಗಡಿಯಾರದ ಮುಳ್ಳಿನಂತೆ ತಿರುಗುವ ವಾಸ್ತು ಪುರುಷ ವರ್ಷದಲ್ಲಿ ೩ ತಿಂಗಳು ಮಲಗಿರುತ್ತಾನೆ.(೯೦ ಡಿಗ್ರಿ ತಿರುಗಿಕೆ ). ಚಳಿಗಾಲದಲ್ಲ ಮಲಗಿ ವಸಂತದಲ್ಲಿ ಏಳುವ ಈತ ಈ ಕಾಲದಲ್ಲಿ ಎಚ್ಚರವಿರದ ಕಾರಣ ನೀವು ನೆರವೇರಸುವ ಪೂಜೆ ಸ್ವೀಕರಿಸಲಾರನು. ಮತ್ತ ನಿಮ್ಮನ್ನ ರಕ್ಷಿಸಲಾರನು. ಆದ್ದರಿಂದ ಈ ಮೂರು ತಿಂಗಳಲ್ಲಿ ನೀವು ಕಟ್ಟಡ ಕಟ್ಟುವುದು ಅಥವಾ ಮನೆ ಪ್ರವೇಶ ಮಾಡುವುದು ತಪ್ಪೆಂದು ವಾಸ್ತು ಪಂಡಿತರು ತಿಳಿಸುತ್ತಾರೆ.
ಆದರೆ ವಾಸ್ತುಪುರುಷ ಮಲಗುವ ಈ ಕಾಲದಲ್ಲಿ ಒಮ್ಮತವಿಲ್ಲ. ಚಾವುಂಡರಾಯ ಕನ್ನಡದಲ್ಲಿ ಬರೆದಿರುವ ಲೋಕೋಪಕಾರದ ವಾಸ್ತುಪುರುಷನೂ (ಲೋಕ/ ೩/೨೪) ಸಹ ಗಡಿಯಾರದ ಮುಳ್ಳಿನಂತೆ ಸುತ್ತುವ ಚರಪುರುಷ. ಕೆಲವು ತಮಿಳು ವಾಸ್ತುಗ್ರಂಥಗಳ ಪ್ರಕಾರ ವಾಸ್ತುಪುರಷ ಪ್ರತಿ ಮೂರು ತಿಂಗಳಿಗೆ ಒಮ್ಮೆ ಒಂದು ತಿಂಗಳಿನ ಕಾಲ ಮಲಗಿರುತ್ತಾನೆ. ಅದೇನೇ ಇರಲಿ ಈ ನಿದ್ರೆಯ ಅವಧಿಯಲ್ಲಿ ಯಾವುದೇ ನಿರ್ಮಾಣ ಚಟುವಟಿಕ ಸಲ್ಲದು. ಇನ್ನು ಮುಂದುವರೆದು ಶ್ರೀ ಲಲಿತಾ ನವರತ್ನಂ ಮನೈ ಆದಿ ಸಾಸ್ತಿರಂ ಎನ್ನುವ ತಮಿಳು ವಾಸ್ತುಗ್ರಂಥ ವಾಸ್ತುಪುರುಷ ವರ್ಷದಲ್ಲಿ ಎಂಟು ಸಲ ಮಾತ್ರ ನಿರ್ದಿಷ್ಟ ಗಳಿಗೆಯಲ್ಲಿ ಎದ್ದು ೩ ಗಂಟೆ ೧೮ ನಿಮಿಷಗಳ ಕಾಲ ತನ್ನ ಕರ್ತವ್ಯ ಮುಗಿಸಿ ಮತ್ತೆ ನಿದ್ರೆಗೆ ಜಾರುತ್ತಾನೆ. ಆತ ಜಾಗ್ರತನಾಗಿರುವ ಅತ್ಯಲ್ಪಾವಧಿಯಲ್ಲ ನೀವು ಆತನನ್ನು ಒಲಿಸಿಕೊಳ್ಲಬೇಕು. ಹಾಗೆ ಒಲಿಸಿಕೊಳ್ಲಲು ಎಚ್ಚತ್ತಿರುವ ೩ ಗಂಟೆ ೧೮ ನಿಮಿಷಗಳನ್ನು ನರಮಾನವರಾದ ನಿಮಗೆ ಆತ ನೀಡಲಾರ ಎಂದು ನಿಮ್ಮನ್ನು ಎಚ್ಚರಿಸುತ್ತದೆ.. ವಾಸ್ತುಪುರುಷ ಎಚ್ಚರವಿರುವ ಕಾಲದಲ್ಲಿ ೫ ಅವಧಿಗಳು. ಮೊದಲನೆಯ ಅವಧಿ ಆತನ ಶೌಚ ಕರ್ಮಗಳಿಗೆ , ಎರಡನೇ ಅವಧಿ ಸ್ನಾನ , ಮೂರನೇ ಅವಧಿ ಪೂಜೆ , ನಾಲ್ಕನೇ ಅವಧಿ ಭೋಜನ , ಐದನೇ ಅವಧಿ ಕರ್ತವ್ಯ ನಿರ್ವಹಣೆ. ಆತನ ಮೊದಲನೇ ಅವಧಿಯಲ್ಲಿ ಮನೆಯ ನಿರ್ಮಾಣ ಪ್ರಾರಂಭಿಸಿದರೆ ರಾಜ ಭಯ , ಎರಡನೇ ಅವಧಿಯಲ್ಲಿ ಪ್ರಾರಂಭಿಸಿದರೆ ದುಃಖ , ಮೂರನೇ ಅವಧಿಯಲ್ಲಿ ಪ್ರಾರಂಭಿಸಿದರೆ ದಾರಿದ್ರ್ಯ , ನಾಲ್ಕನೇ ಅವಧಿಯಲ್ಲಿ ಪ್ರಾರಂಭಿಸಿದರೆ ಪುತ್ರ ಸಂತಾನ , ಐದನೇ ಅವಧಿಯಲ್ಲಿ ಪ್ರಾರಂಭಿಸಿದರೆ ಸಂಪತ್ತು ದಕ್ಕುತ್ತದೆಯೆಂದು ಹೇಳಲಾಗಿದೆ. ಆದ್ದರಿಂದ ನೀವು ಯಾವ ವಾಸ್ತುಗ್ರಂಥವನ್ನು ಅನುಸರಿಸಬೇಕೆಂದು ಮೊದಲೇ ನಿರ್ಧರಿಸಿಕೊಳ್ಳಿ. ಇಲ್ಲದಿದ್ದರೆ ವಾಸ್ತುಪುರುಷ ಎದ್ದಿರುವ ಕಾಲದ ಬಗ್ಗೆ ನಿಮಗೂ ನಿಮ್ಮ ವಾಸ್ತುಪಂಡಿತನಿಗೂ ಗೋಜಲುಂಟಾಗುವುದರಲ್ಲಿ ಸಂಶಯವಿಲ್ಲ. ಇದರಿಂದ ಸರ್ವ ವಿನಾಶವಾದೀತು ಜೋಕೆ.
ವಾಸ್ತುಪುರುಷನ ತಲೆ, ಬೆನ್ನು , ಕಾಲು ಮತ್ತು ಕೈಗಳಿರುವ ಜಾಗಗಳಲ್ಲಿ ಯಾವ ನಿರ್ಮಾಣವನ್ನು ಮಾಡಬಾರದು. ಹಾಗೆ ಮಾಡಿದರೆ ಮನೆಯಲ್ಲಿರುವವರಿಗೆ ನಾನಾ ಕಂಟಕಗಳು ಎದುರಾಗುತ್ತವೆ. ಕಳ್ಳಕಾಕರ ಭಯ ಸದಾ ಕಾಡುತ್ತದೆ. ವಾಸ್ತುಪುರುಷನ ಹೊಟ್ಟೆಯ ಜಾಗ ನಿರ್ಮಾಣಕ್ಕೆ ಅತ್ಯಂತ ಪ್ರಶಸ್ತವಾದುದು ವಾಸ್ತುಪುರುಷ ತನಗೆ ಬೇಸರವಾದಂತೆ ತಲೆಯೂರುವ ದಿಕ್ಕನ್ನು ಬದಲಿಸುತ್ತಾನೆ. ಆದ್ದರಿಂದ ನೀವು ಎಲ್ಲಿ . ಏನನ್ನು ಕಟ್ಟಿದರೂ ತಪ್ಪೇ. ಆತನ ಹೊಟ್ಟೆಯೊಂದೇ ನಿಮಗೆ ಉಳಿದುರುವುದು. ಅದರ ಮೇಲೆಯೇ ನಿಮ್ಮ ಸಮಸ್ತ ಅನುಕೂಲಗಳಿಗೆ ತಕ್ಕುದಾದ ಮನೆಕಟ್ಟಿ ಆನಂದದಿಂದಿರಬೇಕು. ಇಷ್ಟೆಲ್ಲಾ ತಿಳಿದ ನಂತರವೂ ನೀವು ವಾಸ್ತುಶಾಸ್ತ್ರವನ್ನು ಅನುಸರಿಸಿ ಮನೆಕಟ್ಟಬೇಕೆಂದಿದ್ದರೆ ಆತನ ಹೊಟ್ಟೆಯ ಭಾಗಕ್ಕೆ ಸರಿಹೊಂದುವಂತೆ ನಿಮಗೆ ಸರಿಯೆನಿಸುವ ಮನೆಯನ್ನು ಯೋಜಿಸುವ ಹೊಣೆ ವಾಸ್ತುಪಂಡಿತನಿಗಿರಲಿ. ಏಕೆಂದರೆ ವಾಸ್ತುತಂತ್ರಜ್ಞ ಅಲ್ಲಿ ಸಲ್ಲಲಾರ.
ವಾಸ್ತುಪಂಡಿತರು ಸೇರಿದಂತೆ ಬಹುತೇಕ ಜನಕ್ಕೆ ತಿಳಿಯದ ಮತ್ತೊಂದು ಪರಿಕಲ್ಪನೆ ರಾಜವಲ್ಲಭ,ವಾಸ್ತುವಿದ್ಯಾ , ಜೋತಿಷ ರತ್ನಮಾಲ ಮುಂತಾದ ಗ್ರಂಥಗಳು ವಾಸ್ತುಪುರುಷನಿಗೆ ಬದಲಾಗಿ ಸುತ್ತುತ್ತಿರುವ ಹಾವನ್ನು ಪರಿಗಣಿಸಿದರೆ ಇನ್ನು ಕೆಲವು ಹಾವು ಮತ್ತು ವಾಸ್ತುಪುರುಷ ಎರಡನ್ನೂ ಪರಿಗಣಿಸುತ್ತವೆ. ಹಾವು , ವಾಸ್ತುಪುರುಷ ಸುತ್ತುವುದು ನೂರಾರು ಬಗೆಯ ಗೋಜಲಿಗೆ ಕಾರಣವಾಗಿದೆ. ಒಂದರಲ್ಲಿರುವ ವಿಚಾರ ಇನ್ನೊಂದರಲ್ಲಿರುವ ವಿಚಾರಕ್ಕೆ ತದ್ವಿರುದ್ಧವಾಗಿರುತ್ತದೆ. . ಜೋತಿಷ ರತ್ನಮಾಲ ಮನೆ , ಅರಮನೆ, ದೇವಾಲಯ , ಕೊಳಗಳಿಗೆ ಸಂಬಂಧಿಸಿದಂತೆ ಹಾವು ಬೇರೆ ಬೇರೆ ಬಗೆಯಲ್ಲಿ ತಿರುಗುತ್ತದೆಯೆಂದು ಹೇಳುತ್ತದೆ, ರಾಜವಲ್ಲಭ ತಿಳಿಸುವ ಹಾವಿನ ಚಲನೆಯ ಚಿತ್ರವನ್ನು ಗಮನಿಸಿರಿ. ನಿಮಗೆ ಇದನ್ನು ನಿಮ್ಮ ವಾಸ್ತುಪಂಡಿತ ಹೇಳಿಲ್ಲವೇ ? ಹಾಗಾದರೆ ಆತನನ್ನು ಮರೆಯದೆ ಕೇಳಿ. ಏಕೆಂದರೆ ಯಾವ ಮಂಡಲದಲ್ಲಿ ಯಾವ ರಹಸ್ಯ ಹಾವು ಅಡಗಿದೆಯೋ ಅದರಿಂದ ನಿಮಗೆ ಏನು ಕಂಟಕ ಕಾದಿದೆಯೋ ಬಲ್ಲವರಾರು. ( ಚಿತ್ರ : ನಿವೇಶನ ಸುತ್ತುವ –ವಾಸ್ತುಪುರುಷನನ್ನು ಹೋಲುವ-ಹಾವು)
ಆಯಾದಿ ಪ್ರಕರಣ-ಓತಿಕ್ಯಾತನಿಗೆ ಬೇಲಿ ಸಾಕ್ಷಿ
ಓತಿಕ್ಯಾತನಿಗೆ ಬೇಲಿ ಸಾಕ್ಷಿ , ಕಳ್ಳ ದೇವರಿಗೆ ಕುಡುಕ ಪೂಜಾರಿ ಎನ್ನುವಂತಹ ಅದ್ಭುತವಾದ ಅನುಭವದ ನುಡಿಗಳನ್ನು ಜನ ಬಳಕೆಗೆ ತಂದಿದ್ದಾರೆ. ಬನ್ನಿ ಈಗ ಆಯಾದಿಗಳೆಂಬ ಎಂಬ ವಾಸ್ತುವಿನ ಪೂಜಾರಿಗಳ ಪರಿಚಯ ಮಾಡಿಕೊಳ್ಳೋಣ.
ನಾನು ಈ ಹಿಂದೆ ಹೇಳಿದಂತೆ ನಮ್ಮ ಬಹುತೇಕ ಚಿಂತನೆ ಇಹದ ಆಶೆ ಪರದ ಸೆಳೆತಗಳಿಗೆ ಸಿಲುಕಿ ನಜ್ಜುಗುಜ್ಜಾಗಿದೆ. ಪ್ರಾಚೀನವಾದ ನಮ್ಮ ಯಾವ ಲೌಕಿಕ ಚಿಂತನೆಯೂ ಎಲ್ಲಿಯೂ ಎಂದಿಗೂ ಕಾಣದ ಆಧ್ಯಾತ್ಮ್ದದ , ಪರದ ಗುಂಗಿನಿಂದ ಹೊರಬರಲಾಗಿಲ್ಲ. ವಾಸ್ತುಶಾಸ್ತ್ರವೂ ಇದಕ್ಕೆ ಹೊರತಲ್ಲ. ಆದ್ದರಿಂದಲೇ ಅಷ್ಟದಿಕ್ಪಾಲಕರು ನಮ್ಮ ನಿವೇಶನ ಪ್ರವೇಶಿಸಿ , ನಮ್ಮ ಮನೆಗಳಲ್ಲಿ ನೆಲೆಸಿ ನಮ್ಮ ಲೌಕಿಕ ಜೀವನವನ್ನು ನಿಯಂತ್ರಿಸುವಂತಾಯಿತು. ನಿಮಗೆ ವ್ಯಾಪಾರದಲ್ಲಿ ನಷ್ಟವಾಯಿತೆ ಅದಕ್ಕೆ ನೀವು ಕುಬೇರ ಮೂಲೆಯಲ್ಲಿ ಪಾತ್ರೆಗಳನ್ನು ಇಟ್ಟಿದ್ದೇ ಕಾರಣ. ನಿಮ್ಮ ಮಗ ಪರೀಕ್ಷೆಯಲ್ಲಿ ಢುಮುಕಿ ಹೊಡೆದನೇ ಅಲ್ಲಿ ನೋಡಿ ನಿಮ್ಮ ಮನೆಯ ಈಶಾನ್ಯದಲ್ಲಿ ಏನಾಗಿದೆ ಎಂದು ವಾಸ್ತು ಪಂಡಿತರು ತೋರಿಸುತ್ತಾರೆ. ನಿವೇಶನವನ್ನು ಅಷ್ಟ ದಿಕ್ಪಾಲಕರಿಗೆ ಒಪ್ಪಿಸದ ಮೇಲೆ ಅವರಿರುವ ದಿಕ್ಕು, ರಾಶಿಗಳು ಸಹ ನಮ್ಮ ಮೇಲೆ ಸಹಜವಾಗಿ ತಮ್ಮ ಹಕ್ಕನ್ನು ಸ್ಥಾಪಿಸಿದವು. ವಾಸ್ತುಶಾಸ್ತದ ಸಮರ್ಥನೆಗೆ ಜ್ಯೋತಿಷ್ಯ ನಿಂತಿತು. ಗ್ರಹ-ವಿಗ್ರಹಗಳ ನಡುವೆ ಅವಿನಾವ ಸಂಬಂಧ ತಾನಾಗಿಯೇ ಸ್ಥಾಪಿತವಾಯಿತು.
ನಿಮ್ಮ ತಲೆ ತಿರುಗುವಂತಹ , ಯಾವ ತರ್ಕ , ಊಹೆ , ವಿವರಣೆಗಳಿಗೆ ಎಟುಕದಂತದ 'ತಾನಾಗಿಯೇ ಸಾಧಿತವಾದ' ಋಷಿ-ಮುನಿ ಪ್ರಣೀತವಾದ ವಾಸ್ತುಶಾಸ್ತ್ರದ ಆಯಾದಿ ವರ್ಗಗಳ ಪರಿಚಯ ಮಾಡಿಕೊಳ್ಳೋಣ. ಈಗ ನೀವು ಯಾವ ಪ್ರಶ್ನೆಯನ್ನು ಕೇಳುವಂತಿಲ್ಲ. ಹಾಗೆ ಕೇಳಿದರೆ ಪ್ರಾಚೀನ ವಾಸ್ತುಶಾಸ್ತ್ರವನ್ನು ನೀವು ಅನುಮಾನಿಸಿದಂತಾಗುತ್ತದೆ. ಇಲ್ಲಿ ನೀವು ಏನನ್ನೂ ಕೇಳಬಾರದು ಹೇಳಿದಂತೆ ಮಾಡಬೇಕು ಎನ್ನುವುದೊಂದೇ ಮಂತ್ರ. ಇದರಿಂದ ನಿಮಗೆ ಕಸಿವಿಸಿ ಎನಿಸುತ್ತದೆಯೇ-ಎನಿಸಲಿ. ಇದು ವಾಸ್ತುಶಾಸ್ತ್ರದ ಆಯ ಪ್ರಕರಣ.
ಆಯ ಎಂದರೆ ಆದಾಯ-ಬರುವುದು. ಮನೆಯ ವಿಸ್ತೀರ್ಣದ ಮೇಲೆ ಅದರ ಒಡೆಯನ ಜೀವನದ ಆಗುಹೋಗುಗಳು ನಿಂತಿವೆಯೆಂದು ಆಯಾದಿ ಪ್ರಕರಣ ತಿಳಿಸುತ್ತವೆ. ಮಾನವನ ಜೀವನದ ಮೇಲೆ ಪ್ರಭಾವ ಬೀರುವ ಇವನ್ನು ಕೆಲವು ಗ್ರಂಥಗಳು ಆರು (ಆಯಾದಿ ಷಡ್ವರ್ಗ-ಮನಸಾರ) ಎಂದರೆ ಇನ್ನು ಕೆಲವು ಒಂಬತ್ತು(ನವ ವರ್ಗ-ಸಮರಾಂಗಣ ಸೂತ್ರಧಾರ) ಎನ್ನುತ್ತವೆ. ಈ ವರ್ಗದ ಅಂಗಗಳು ಆಯ , ವ್ಯಯ , ನಕ್ಷತ್ರ , ಯೋನಿ , ವಾರ , ತಿಥಿ , ಅಂಶ , ಯುತಿ , ಆಯು ಇತ್ಯಾದಿ. ಇವು ಆರು , ಒಂಬತ್ತು ಅಥವಾ ಬೇರೆ ಯಾವುದೇ ಸಂಖ್ಯೆಯಿರಲಿ ಇವುಗಳ ಹೂರಣ ಒಂದೇ. ನಿಮ್ಮ ನಿವೇಶನ/ಮನೆಯ ವಿಸ್ತೀರ್ಣ, ಎತ್ತರ ಇತ್ಯಾದಿಗಳ ಆಧಾರದ ಮೇಲೆ ನಿಮ್ಮ ಜೀವನಗತಿಯನ್ನು ನಿರ್ಧರಿಸುವುದು. ಆಯಾದಿ ವರ್ಗಗಳು ಆರು /ಒಂಬತ್ತು/ಹದಿನಾರು ಎಷ್ಟಿರಬೇಕೆಂಬ ನಿರ್ಧಾರವನ್ನು ವಾಸ್ತುಪಂಡಿತರಿಗೆ ಬಿಡೋಣ. ನಾವು ಆಯಾದಿಗಳ ಪರಿಕಲ್ಪನೆಯನ್ನು ಮಾತ್ರ ನೋಡೋಣ.
ಕಟ್ಟಬೇಕೆಂದಿರುವ ಮನೆಯ ತಳಪಾಯದ ಉದ್ದ , ಅಗಲ , ಎತ್ತರ , ವಿಸ್ತೀರ್ಣಗಳನ್ನು ನಿರ್ಧರಿಸಿಕೊಳ್ಳಬೇಕು. ಇವುಗಳನ್ನು ವಾಸ್ತುಶಾಸ್ತ್ರದಲ್ಲಿರುವ ನಿರ್ದಿಷ್ಟ ಸಂಖ್ಯೆಗಳಿಂದ ಭಾಗಿಸಬೇಕು. ಹಾಗೆ ಭಾಗಿಸಿದಾಗ ಕೊನೆಯಲ್ಲಿ ದಕ್ಕುವ ಶೇಷಗಳು ಆಯ-ವ್ಯಯ-ನಕ್ಷ್ತತ್ರ-ಯೊನಿ-ವಾರ-ತಿಥಿ ಇತ್ಯಾದಿಗಳಗಳನ್ನು ನಿರ್ಧರಿಸುತ್ತವೆ. ಇದಲ್ಲದೆ ಯಾವ ಜಾತಿಯವರಿಗೆ ಯಾವ ಆಯದ ಮನೆಯಿರಬೇಕು ಎನ್ನುವುದ ಸಹ ನಿರ್ದೇಶಿಸಲ್ಪಟ್ಟಿದೆ. ಹಲವಾರು ವಾಸ್ತುಶಾಸ್ತ್ರದ ಗ್ರಂಥಗಳು ತಮ್ಮದೇ ಆದ ರೀತಿಯಲ್ಲಿ ಈ ಲೆಕ್ಕಾಚಾರಗಳನ್ನು ನೀಡಿವೆ. ಇವುಗಳಲ್ಲಿ ಒಮ್ಮತವೇನಿಲ್ಲ.
ನಿವೇಶನದ ಉದ್ದ , ಅಗಲಗಳನ್ನು ಅಳೆಯಲು ಕಿಸ್ಕು ಹಸ್ತವನ್ನು ಏಕಮಾನವಾಗಿ ಹೇಳಿದೆ. ಆದರೆ ಇದು ಎಷ್ಟಿರಬೇಕೆಂದು ಒಂದೊಂದು ಗ್ರಂಥ ಒಂದೊಂದು ನಿಲುವು ತಳೆದಿವೆ. ಒಂದು ಗ್ರಂಥ ಅಂಗುಲ = ೧ ೩/೮ ಇಂಚು ,ಒಂದು ಹಸ್ತ=೨೪ ಅಂಗುಲ (=೨ ಅಡಿ ೯ ಅಂಗುಲ) ಎಂದರೆ ಇನ್ನೊಂದು ಗ್ರಂಥ ಅಂಗುಲ=೧.೩ ಇಂಚು , ಹಸ್ತ = ೨೮ . ೩ ಅಂಗುಲ ಎನ್ನುತ್ತದೆ. ಮತ್ತೊಂದು ಗ್ರಂಥದಲ್ಲಿ ಅಂಗುಲ=೦.೭೫ ಇಂಚು , ಹಸ್ತ = ೧೮ ಅಂಗುಲ ಎಂದಾಗಿದೆ. ಆಡು ಭಾಷೆಯಲ್ಲಿ ಹೇಳಬೇಕೆಂದರೆ ಒಂದು ಹಸ್ತ ಒಂದು ಮೊಳ ಅಥವಾ ಒಂದು ಮಾರು ಯಾವುದಕ್ಕೆ ಸಮ ಎಂಬ ಗೋಜಲು ವಾಸ್ತುಶಾಸ್ತ್ರದ ಗ್ರಂಥಗಳಲ್ಲಿದೆ. ಇತ್ತೀಚಿನ ಕೆಲವು ವಾಸ್ತು ಪಂಡಿತರು ಇದನ್ನು ಮನೆ ಕಟ್ಟಿಸುವ ಯಜಮಾನನ ಮೊಳಕ್ಕೆಗೆ ಸಮೀಕರಿಸದ್ದಾರೆ. ಏಕೆಂದರೆ ಬೆಂಗಳೂರಿನಂತಹ ನಗರಗಳಲ್ಲಿ ಬಹುತೇಕ ದಕ್ಕುವ ನಿವೇಶನಗಳು ಮಾರಿನ ಲೆಕ್ಕದಲ್ಲಿ ಸಣ್ಣವೆಂದು ಭಾಸವಾಗುತ್ತದೆ. ೩೦/೪೦ ಅಡಿ ನಿವೇಶನ ೯/೧೨ ಮಾರುಗಳಿಷ್ಟರುತ್ತದೆ. ನಿಮ್ಮ ಜೀವನದ ಆಗುಹೋಗುಗಳು ಆಯಾದಿ ವರ್ಗಗಳ ಮೇಲೆ ಅವಲಂಬಿತವಾಗಿರುವುದರಿಂದ ಮತ್ತು ಈ ವರ್ಗಗಳು ಅಳತೆಯ ಮೇಲೆ ನಿಂತಿರುವುದರಿಂದ ಇದನ್ನು ಒತ್ತಿ ಹೇಳಲಾಗಿದೆ.
ಆಯ : ಇದು ನೀವು ಕಟ್ಟ್ಟಬೇಕೆಂದಿರುವ ಮನೆಯ ಉದ್ದ,ಅಗಲ,ವಿಸ್ತೀರ್ಣದ ಮೇಲೆ ನೀವು ಆರ್ಥಿಕತೆಯ ಮಟ್ಟದಲ್ಲಿ ಏನಾಗಿರುವಿರಿ , ಏನಾಗಬೇಕೆಂದಿರುವಿರಿ ಎಂದು ನಿರ್ದರಿಸುವುದೇ ಇದು. ಉದಾಹರಣೆಗೆ ನೀವು ೪೦ ಉದ್ದ/೩೦ ಅಗಲ ಅಳತೆಯ ೧೨೦೦ ಚದರ ವಿಸ್ತೀರ್ಣದ ಮನೆಯನ್ನು ಕಟ್ಟಬೇಕೆಂದಿರುವಿರಿ (ಇದು ನಿವೇಶನದ ಅಳತೆಯಲ್ಲ-ಮನೆಯ ಬುನಾದಿ ಮಟ್ಟದ ಅಳತೆ). ವಿವಿಧ ವಾಸ್ತು ಶಾಸ್ತ್ರದ ಗ್ರಂಥಗಳು ಹೇಳುವಂತೆ ಇಂತಹ ಮನೆಯಲ್ಲಿರುವ ನಿಮ್ಮ ಆರ್ಥಿಕ ಸ್ಥಿತಿ ಹೇಗೆ ನಿರ್ಧರಿತವಾಗುವುದೆಂದು ತಿಳಿಯೋಣ. ಇಲ್ಲಿ ನೀವು ಒಂದು ಸಂಗತಿಯನ್ನು ಗಮನಿಸಿರಬಹುದು. ಮನೆಯ ಅಳತೆಯನ್ನು ೩೦/೪೦ ಎಂದು ನಾನು ನಮೂದಿಸರುವೆನೇ ಹೊರತು ಅದು ಮೊಳ,ಮಾರು , ಅಂಗುಲ ,ಅಡಿ. ಮೀಟರ್ ಯಾವ ಅಳತೆಯಲ್ಲಿರಬೇಕೆಂದು ಹೇಳಿಲ್ಲ .ಉದ್ದ , ಅಗಲಗಳನ್ನು ಯಾವ ಮಾನದಲ್ಲಿ ಅಳೆಯಬೇಕೆಂಬ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಇದು ಸೋಜಿಗದ ಸಂಗತಿಯೇನೂ ಅಲ್ಲ. ಯಾವುದೇ ನಿರ್ದಿಷ್ಟ ಭೌತಿಕ ಕಾರಣವಿಲ್ಲದೆ ಕೇವಲ ಕಾಲ್ಪನಿಕ ಅಂಶಗಳ ಮೇಲೆ ರೂಪುಗೊಂಡಿರುವ ಇಂತಹ ವಿಷಯಗಳಲ್ಲಿ ಇದು ಸಾಮಾನ್ಯ. (ಚಿತ್ರ : ಆಯಗಳು)
ವಿವಿಧ ವಾಸ್ತುಶಾಸ್ತ್ರದ ಗ್ರಂಥಗಳು ಆಯವನ್ನು ಹಲವಾರು ಬಗೆಯಲ್ಲಿ ಲೆಕ್ಕಹಾಕುತ್ತವೆಯಾದರೂ ಉದಾಹರಣೆಗಾಗಿ ಒಂದನ್ನು ಮಾತ್ರ ಇಲ್ಲಿ ನೀಡಿದ್ದೇನೆ.
(೧) ಆಯ = (ವಿಸ್ತಿರ್ಣ/೮) ರ ಶೇಷ = ೩೦x೪೦/೮ = ೧೨೦೦/೮ = ೧೫೦ ಶೇಷ =೦
ವಿಸ್ತೀರ್ಣವನ್ನು ೮ ರಿಂದ ಭಾಗಿಸಿದಾಗ ದಕ್ಕುವ ಶೇಷಕ್ಕೆ ಅನುಗುಣವಾಗಿ ಯಾವ ಆಯದಲ್ಲಿ ಮನೆಯಿದೆಯೆಂದು ತಿಳಿದುಬರುತ್ತದೆ.
ಶೇಷ =೧ , ಆಯ = ಧ್ವಜ , ಶೇಷ =೨ , ಆಯ = ಧೂಮ , ಶೇಷ =೩ , ಆಯ = ಸಿಂಹ , ಶೇಷ =೪ , ಆಯ = ಶ್ವಾನ , ಶೇಷ =೫ , ಆಯ = ವೃಷಭ , ಶೇಷ =೬ , ಆಯ = ಖರ , ಶೇಷ = ೭ , ಆಯ = ಗಜ , ಶೇಷ =೦ , ಆಯ = ಕಾಕ. ಈ ಆಯಗಳು ಯಾವ ದಿಕ್ಕಿನಲ್ಲಿರುತ್ತವೆ ಮತ್ತು ಯಾರಿಗೆ ಅನುಕೂಲವಾಗಿರುತ್ತವೆ ಎಂಬ ವಿವರಣೆ ಮುಂದಿದೆ..
ಆಯ ಹಾಗೂ ದಿಕ್ಕುಗಳು ( ೧=ಪೂರ್ವ ದಿಕ್ಕು )
ಆಯ - ದಿಕ್ಕು - ಅನ್ವಯ ವರ್ಣ/ಕಾರ್ಯ -ಅಧಿದೈವ-ಮನೆಯಬಾಗಿಲು-ಫಲಾಫಲ ಇವುಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ
(೧) ಧ್ವಜ - ಪೂರ್ವ - ಬ್ರಾಹ್ಮಣ-ಹದ್ದು-ಪಶ್ಚಿಮ ಬಾಗಿಲು-ಧನ ಲಾಭ (೨) ಧೂಮ-ಆಗ್ನೇಯ-ಅಗ್ನಿ ಸಂಬಂಧಿ ಚಟುವಟಿಕೆಗಳಲ್ಲಿ ನಿರತರು-ಬೆಕ್ಕು-ಗೋಳಾಟ (೩) ಸಿಂಹ-ದಕ್ಷಿಣ-ಕ್ಷತ್ರಿಯ, ಆಯುಧಶಾಲೆ-ಸಿಂಹ-ಉತ್ತರದ ಬಾಗಿಲು-ಐಭೋಗ (೪) ಶ್ವಾನ-ನೈರುತ್ಯ-ಕೆಳಮಟ್ಟದ ಕೆಲಸ ಮಾಡುವ ಕೂಲಿಕಾರ,ಆಯುಧಶಾಲೆ-ನಾಯಿ-ಮಹಾಪಾಪ (೫) ವೃಷಭ-ಪಶ್ಚಿಮ-ವೈಶ್ಯ ,ವ್ಯಾಪಾರ , ಕುದುರೆ ಲಾಯ , ಅಡುಗೆಮನೆ -ಹಾವು-ಪೂರ್ವ ಬಾಗಿಲು-ಸಂಪತ್ತಿನ ವೃದ್ಧಿ (೬) ಖರ-ವಾಯುವ್ಯ-ಅಗಸ, ಗೋಶಾಲೆ ,ಸಂಗೀತ ಕೋಣೆ-ಇಲಿ-ಭಯ, ಪೀಡೆ (೭) ಗಜ-ಉತ್ತರ-ಶೂದ್ರ , ಆನೆಲಾಯ , ಮಲಗುವ ಕೋಣೆಗಳು , ಹೆಂಗಸರ ಖಜಾನೆ-ಆನೆ-ದಕ್ಷಿಣ ಬಾಗಿಲು-ಯಶಸ್ಸು (೮) ಕಾಕ-ಈಶಾನ್ಯ-ಆಯಗಾರರು, ಕುಶಲಕರ್ಮಿಗಳು,ಪೂಜಾಮಂದಿರ-ಹಂದಿ-ಸಾವು
ಮೇಲಿನವುಗಳಲ್ಲಿ ಹದ್ದು-ಹಾವು , ಬೆಕ್ಕು-ಇಲಿ , ಸಿಂಹ-ಆನೆ , ನಾಯಿ-ಹಂದಿ ಪರಸ್ಪರ ವಿರುದ್ಧ ವರ್ಗಗಳು ಇವುಗಳು ಒಂದಕ್ಕೊಂದು ಎದುರಾಗದಂತೆ ಎಚ್ಚರವಹಿಸಬೇಕು
(೨) ಆಯ = (ಉದ್ದ x ೮/೧೨) ರ ಶೇಷ. ಈ ಶೇಷಕ್ಕೆ ಅನುಗುಣವಾಗಿ ನಿಮಗೆ ದಕ್ಕುವ ಫಲಾಫಲಗಳು ಹೀಗಿವೆ.
ಶೇಷ =೧ = ದಾರಿದ್ರ್ಯ ಆವರಿಸುವುದು , ೨ = ಹೆಂಡತಿಗೆ ಅನಾರೋಗ್ಯ , ೩=ಐಶ್ವರ್ಯ ಪ್ರಾಪ್ತಿ , ೪=ಜಯಶಾಲಿ , ೫=ಅನಿರೀಕ್ಷಿತ ಆನಂದಮಯ ಜೀವನ ೬= ಆಶೆಗಳು ಕೈಗೂಡುತ್ತವೆ , ೭ = ಆಧ್ಯಾತ್ಮದತ್ತ ಒಲವು ಹೆಚ್ಚುತ್ತದೆ. ೮ =ಜೀವನದ ಸವಿಯಲ್ಲಿ ಹೆಚ್ಚಳ ೧೦=ಸಂಪತ್ತಿನಲ್ಲಿ ಹೆಚ್ಚಳ , ೧೧= ಖ್ಯಾತಿ
ಕುತೂಹಲಕ್ಕಾಗಿ ಆಯ ಲೆಕ್ಕ ಹಾಕಲು ನೀಡಿರುವ ಎರಡು ವಿಧಾನಗಳನ್ನು ಬಳಸಿಕೊಂಡು ನಿಮ್ಮ ಮನೆಯ ಆಯ ನಿರ್ಣಯ ಮಾಡಿರಿ. ಎರಡು ಒಂದಕ್ಕೊಂದು ತಾಳೆಯಾಗಲಿಲ್ಲವೇ? ಚಿಂತಿಸಬೇಡಿ. ಅವು ತಾಳೆಯಾಗುವ ಸಾಧ್ಯತೆಗಳಿಲ್ಲ. ಏಕೆಂದರೆ ಎರಡು ವಿಧಾನಗಳಿಗೂ ಯಾವುದೇ ತಳಹದಿ ಅಥವಾ ಸಂಬಂಧವಿಲ್ಲ. ಮೊದಲನೇ ವಿಧಾನದಲ್ಲಿ ನಿಮ್ಮ ಮನೆಯ ಆಯ ನಿರ್ಣಯಿಸಿದ ಒಬ್ಬ ವಾಸ್ತುಪಂಡಿತ ನಿಮಗೆ ಸುಖ , ಸಮೃದ್ಧಿಗಳ ಭರವಸೆ ನೀಡಿದರೆ ಎರಡನೇ ವಿಧಾನ ಬಳಸಿದಾತ ದಾರಿದ್ರ್ಯದ ಸೂಚನೆಯನ್ನು ಸಹ ನೀಡಲು ಸಾಧ್ಯ. ಹೀಗೆ ಆಯದ ಶಿಫಾರಸ್ಸುಗಳು ಬಗೆಬಗೆಯಾಗಿ ಸಾಗುತ್ತವೆ. ಇಲ್ಲಿ ನೀಡಿರುವ ಸಂಗತಿಗಳನ್ನು ವಾಸ್ತುಶಾಸ್ತ್ರದ ಗ್ರಂಥಗಳು ಬೇರೆಯಾಗಿ ಹೇಳುತ್ತಿರಬಹುದು. ಒಟ್ಟಾರೆಯಾಗಿ ಮನೆಯ ಆಯ ನಿಮ್ಮ ಜೀವನವನ್ನು ಆದಷ್ಟು ಸಂಕೀರ್ಣವಾಗಿ ಪ್ರಭಾವಿಸುತ್ತದೆ ಎಂದು ತಿಳಿದರೆ ಸಾಕು.
ನೀವು ಆಯವನ್ನು ಅರ್ಥೈಸಿಕೊಂಡು ಹೊರಬರುತ್ತಿದಂತೆಯೇ ವ್ಯಯ ಎದುರಾಗುತ್ತದೆ. ಇದೇನೆಂದು ನೋಡೋಣ.
ವ್ಯಯ : ಆಯದಂತೆಯೇ ವ್ಯಯವನ್ನು ಲೆಕ್ಕ ಹಾಕಲು ವಿವಿಧ ಗ್ರಂಥಗಳು ವಿವಿಧ ಶಿಫಾರಸ್ಸುಗಳನ್ನು ಮಾಡಿವೆ. ಅವುಗಳಲ್ಲಿ ಕೆಲವು ಹೀಗಿವೆ.
(೧) ವ್ಯಯ= (ವಿಸ್ತೀರ್ಣ x 3 /8) ರ ಶೇಷ. (೨) ವ್ಯಯ= (ಅಗಲ x ೯ /೧೦) ರ ಶೇಷ.
ಆಯದ ಶೇಷ ಯಾವಾಗಲೂ ವ್ಯಯದ ಶೇಷಕ್ಕಿಂತ ಅಧಿಕವಾಗಿರಬೇಕು.
(೧) ಆಯ=ವ್ಯಯ : ತೊಂದರೆಯಿಲ್ಲ (೨) ಆಯ > ವ್ಯಯ : ಸರ್ವತೋಮುಖ ಅಭಿವೃದ್ಧಿ (೩) ಆಯ < ವ್ಯಯ : ನಷ್ತ , ಅಮಂಗಳಕರ
ನಕ್ಷತ್ರ : ನೀವು ನಿಮ್ಮ ಕಟ್ಟಡದ ಉದ್ದ , ಅಗಲ , ವಿಸ್ತೀರ್ಣದ ಆಯ-ವ್ಯಯಗಳಲ್ಲಿ ಉತ್ತೀರ್ಣರಾದೆವೆಂಬ ಹಿಗ್ಗಿನಲ್ಲಿ ಹೊರಬರುತ್ತಿದ್ದಂತೆಯೇ ನಕ್ಷತ್ರ್ದ ಎದುರಾಗುತ್ತದೆ.
(೧) ನಕ್ಷತ್ರ = (ಉದ್ದ X 8 /27) ರ ಶೇಷ. ಶೇಷ = ಬೆಸ ಸಂಖ್ಯೆಯಾದರೆ ಮಂಗಳ. ಸಮಸಂಖ್ಯೆಯಾದರೆ ಅಮಂಗಳಕರ.
(೨) ನಕ್ಷತ್ರ = (ವಿಸ್ತೀರ್ಣ x 8/27) ರ ಶೇಷ. ಶೇಷ =೦
ಮನೆಯ ಮಾಲಿಕನ ಜನ್ಮ ರಾಶಿಯಿಂದ ಕಟ್ಟಡದ ರಾಶಿಯನ್ನು ನಿರ್ಧರಿಸಬೇಕು. ಇದನ್ನು ೯ ರಿಂದ ಭಾಗಿಸಬೇಕು. ಇದರ ಶೇಷ = ೨.೪.೬.೮.೯ ಬಂದರೆ ಕಟ್ಟಡ ಹಾಗೂ ಅದರ ಮಾಲಿಕನ ನಡುವೆ ಸಾಮರಸ್ಯವಿದೆಯೆಂದು ಅರ್ಥ.
ಯೋನಿ : ಆಯ , ವ್ಯಯಗಳಂತಹುದೇ ಮತ್ತೊಂದು 'ಅದ್ಭುತ' ಪರಿಕಲ್ಪನೆ ಯೋನಿಯದು. ನಿಮ್ಮ ಕಟ್ಟಡದ ಸ್ಥಿರತೆಗೆ ಇದು ಬಹು ಮುಖ್ಯವೆಂದು ವಾಸ್ತು ಪಂಡಿತರು ನಿಮಗೆ ತಪ್ಪದೇ ತಿಳಿಸುತ್ತಾರೆ.
(೧) ಯೋನಿ= (ಅಗಲ x 3 /8) ರ ಶೇಷ (೨) ಯೋನಿ =(ವಿಸ್ತೀರ್ಣ/೮) ರ ಶೇಷ
ಶೇಷ ಬೆಸ ಸಂಖ್ಯೆಯಾದರೆ ಮಂಗಳಕರ , ಸಮಸಂಖ್ಯೆಯಾದರೆ ಅಮಂಗಳಕರ , ಸೊನ್ನೆಯಾದರೆ ಕಟ್ಟಡದ ಅಗಲವನ್ನು ಬದಲಾಯಿಸಬೇಕು.
ವಾರ : (೧) ವಾರ = (ಕಟ್ಟಡದ ಸುತ್ತಳತೆ x 9 /7) ರ ಶೇಷ (2) ವಾರ = (ಕಟ್ಟಡದ ಎತ್ತರ x 9 /7) ರ ಶೇಷ
ಶೇಷ : ೧ = ಆದಿತ್ಯವಾರ, ೩= ಮಂಗಳವಾರ , ೮/೦= ಶನಿವಾರ ಈ ಮೂರು ಕಟ್ಟಡ ನಿರ್ಮಾಣ ಪ್ರಾರಂಭಿಸಲು ಒಳ್ಳೆಯ ದಿನಗಳಲ್ಲ. ೨=ಸೋಮವಾರ , ೪-ಬುಧವಾರ , ೫-ಗುರುವಾರ , ೬=ಶುಕ್ರವಾರ ಕಟ್ತಡ ನಿರ್ಮಾಣ ಪ್ರಾರಂಭಿಸಲು ಒಳ್ಳೆಯ ದಿನಗಳು.
ಈಗ ಜನರಲ್ಲಿ ಮಂಗಳವಾರ ಮತ್ತು ಶನಿವಾರ ಒಳ್ಳೆಯ ದಿನಗಳಲ್ಲ . ಈ ದಿನಗಳಂದು ಯಾವ ಕೆಲಸವನ್ನೂ ಪ್ರಾರಂಭಿಸಬಾರದು ಎನ್ನುವ ನಂಬಿಕೆಯ ಮೂಲ ಇಲ್ಲಿದೆ.
ತಿಥಿ : (೧) ತಿಥಿ = (ಕಟ್ತಡದ ಸುತ್ತಳತೆ x 9) / 30
ಶೇಷ = ೦ , ೧, ೪ ,೮ , ೯ , ೧೧ , ೧೪ ಮತ್ತು ೩೦ ಒಳ್ಳೆಯಯವಲ್ಲ. ೬ ಸಾಧಾರಣ . ೨ , ೧೨, ೩ , ೧೩, ೫, ೧೫, ೭ , ೧೦ ಉತ್ತಮ
ಈಗ ತಿಳಿಸಿರುವ ಆಯಾದಿ ಆರು ವರ್ಗಗಳಲ್ಲದೆ ಅಂಶ ಸಾಧನ , ರಾಶಿ ಸಾಧನ , ತಾರಾಬಲ , ಆಯುವು ಮುಂತಾದ ಬೇರೆ ಪ್ರಾಚಲಗಳು (Parameters) ಸಹ ವಿವಿಧ ವಾಸ್ತು ಗ್ರಂಥಗಳಲ್ಲಿವೆ.
ಇವುಗಳೆಲ್ಲವುಗಳ ಹಿಂದಿರುವ ಪರಿಕಲ್ಪನೆ ಒಂದೇ ರೀತಿಯಲ್ಲಿರುವುದನ್ನು ಗಮನಿಸಬಹುದು. ಈ ಸಂಗತಿಗಳಲ್ಲಿ ಇಂತಹ ವಿಚಾರಗಳೇ ತುಂಬಿ ತುಳುಕುತ್ತವೆ. ಆದ್ದರಿಂದ ಸಮ-ಬೆಸದಲ್ಲಿ ಯಾವುದು ಉತ್ತಮ , ತಿಥಿಗಳಲ್ಲಿ ಯಾವುದು ಮಂಗಳ ಯಾವುದು ಅಮಂಗಳ ಎಂದು ಬರೆಯುವಲ್ಲಿ ಹಿಂದೆ ಮುಂದಾದರೆ ಅಥವಾ ಒಂದು ಗುಂಪು ಇನ್ನೊಂದು ಗುಂಪಿನಲ್ಲಿ ಸೇರಿದರೆ ಅಂತಹ ವ್ಯತ್ಯಾಸವೇನೂ ಆಗುವುದಿಲ್ಲ. ವಾಸ್ತುಪಂಡಿತರ ದೃಷ್ಟಿಯಲ್ಲಿ ಮಾತ್ರ ಇವು ಸನಾತನ ಅವ್ಯಯ ಸತ್ಯಗಳು. ನಾನಾ ಗ್ರಂಥಗಳಲ್ಲಿರುವ ಇವುಗಳನ್ನು ನೋಡುತ್ತ ಹೋದರೆ ಕೊನೆ ಮೊದಲಿಲ್ಲದ ಕಗ್ಗತ್ತಲೆಯ ಕಾಡಿನಲ್ಲಿ ಅಲೆದಂತಾಗುತ್ತದೆ.
ವರಾಹಮಿಹಿರನ ಬೃಹತ್ಸಂಹಿತೆಯಲ್ಲಿ ಆಯಾದಿ ವರ್ಗಗಳ ಬಗ್ಗೆ ಒಂದು ಮಾತನ್ನೂ ಹೇಳಿಲ್ಲ. ಚಾವುಂಡರಾಯ ಲೋಕೊಪಕಾರದಲ್ಲಿ ಮನೆಯ ಕ್ಷೇತ್ರಫಲವನ್ನು ೩, ೯ , ೭ , ೮ , ೪ , ೯ ರಿಂದ ಗುಣಿಸಿ ೮ ,೮,೮ ,೨೭ ,೧೨ , ೩೦ , ೭ ರ ಕ್ರಮದಲ್ಲಿ ಭಾಗಿಸಿ ಇವುಗಳನ್ನು ಪಡೆಯಬೇಕೆನ್ನುತ್ತಾನೆ. (ಲೋಕ ೩/೨೦-೨೨), ಆದರೆ ಮುಹೂರ್ತ ಮಾಧವೀಯ ಎನ್ನುವ ಗ್ರಂಥ ಕ್ಷೇತ್ರಫಲವನ್ನು ೩ , ೮ ,೩ ,೮,೮,೫ ರಿಂದ ಗುಣಿಸಿ ೮ , ೧೨, ೧೪ , ೨೭ , ೨೭ , ೩೦ ರಿಂದ ಭಾಗಿಸಬೇಕೆನ್ನುತ್ತದೆ.
ಆಯ , ವ್ಯಯ ಇತ್ಯಾದಿ ಲೆಕ್ಕಾಚಾರ ಕುರಿತಾದಂತೆ ಒಂದು ವಾಸ್ತುಗ್ರಂಥದ ಹೇಳಿಕೆ ಇನ್ನೊಂದರೊಂದಿಗೆ ಹೊಂದಾಣಿಕೆಯಾಗುವುದಿಲ್ಲ. ಈ ಲೆಕ್ಕಾಚಾರಗಳ ಸೂತ್ರಗಳಂತೆಯೇ ಅವುಗಳ ಫಲಿತಾಂಶ ಯಾವ ಪರಿಣಾಮ ತರುತ್ತದೆ ಎನ್ನುವುದರಲ್ಲಿ ಸಹ ಒಮ್ಮತವಿಲ್ಲ. ಸೂತ್ರಗಳಲ್ಲಿರುವ ಸಂಖ್ಯೆಗಳು ೭ ದಿನ , ೮/೧೦ ದಿಕ್ಕುಗಳು ೨೭ ನಕ್ಷತ್ರ , ೩೦ ದಿನ ಗಳನ್ನು ಸೂಚಿಸುತ್ತವೆ. ಇವು ಮನೆಯ ನಿರ್ಮಾಣಕ್ಕೆ ಹೇಗೆ ಸಂಬಂಧಿಸಿವೆಯೆಂದು ಯಾರಿಗೂ ಗೊತ್ತಿಲ್ಲ. ಮಯಮತ , ಮಾನಸಾರದಂತಹ ವಾಸ್ತುಶಾಸ್ತ್ರದ ಆಕರ ಗ್ರಂಥಗಳು ಈ ಬಗ್ಗೆ ಏನನ್ನೂ ತಿಳಿಸುವುದಿಲ್ಲ. ವಾರ , ತಿಥಿ ಲೆಕ್ಕಾಚಾರದಲ್ಲಿ ಅಶುಭವೆಂದು ಮಾನಸಾರ ಹೇಳುವ ಫಲಿತಾಂಶಗಳನ್ನೇ ಕೆಲವು ಗ್ರಂಥಗಳು ಶುಭವೆಂದು ಪರಿಗಣಿಸುತ್ತವೆ. ಮಾನಸಾರ ಗ್ರಂಥದ ಅಧ್ಯಯನಕ್ಕೆ ಜೀವನವನ್ನೇ ಮೀಸಲಿಟ್ಟ ಪಿ.ಕೆ. ಆಚಾರ್ಯರಿಗೆ ಈ ಸೂತ್ರಗಳ ಹಿನ್ನೆಲೆ ಏನು ? ಇವು ಎಲ್ಲಿಂದ ಹೇಗೆ ಬಂದವೆಂದು ನಿರ್ಧರಿಸಲು ಆಗಲಿಲ್ಲ.
ಆಯಾದಿ ವರ್ಗಗಳನ್ನು ನಿರ್ಧರಿಸುವಲ್ಲಿ ಹಲವಾರು ಲೆಕ್ಕಾಚಾರಗಳನ್ನು ನೀಡಲಾಗಿದೆ. ವಿಸ್ತಿರ್ಣ , ಉದ್ದ , ಅಗಲಗಳನ್ನು ೩ , ೮ , ೯ ರಿಂದ ಗುಣಿಸಿ ೮ ,೯ , ೧೦ , ೧೨ ಸಂಖ್ಯೆಗಳಿಂದ ಭಾಗಿಸಲಾಗಿದೆ. ಒಂದು ಕಡೆ ಬೆಸ ಶುಭವಾದರೆ , ಇನ್ನೊಂದು ಕಡೆ ಸಮ ಮಂಗಳಕರ. ಕೆಲವು ವಾರ , ತಿಥಿಗಳು ಒಳ್ಳೆಯವಾದರೆ ಇನ್ನು ಕೆಲವು ಅಪಾಯಕಾರಿ. ಇವೆಲ್ಲ ಹೇಗೆ ಬಂದವು ? ಇವುಗಳಿಗೆ ಏನಾದರೂ ಆಧಾರವಿದೆಯೇ ? ಎಂದು ಯಾವುದೇ ವಾಸ್ತು/ಜ್ಯೋತಿಷ್ಯ ಪಂಡಿತನನ್ನು ನೀವು ಕೇಳಿರಿ. ಪುಂಖಾನುಪುಂಖವಾಗಿ 'ಮಯಸಾರ' ಮಯಮತ' 'ಸಮರಂಗ ಸೂತ್ರಧಾರ' 'ಗ್ರಹಗತಿ' ಪ್ರಾಚೀನ ಋಷಿ-ಮುನಿ ಪ್ರಣೀತ ಎಂದು ಬಡಬಡಿಸುತ್ತಾರೆಯೇ ಹೊರತು ಎಂದಿಗೂ ಸಮಾಧಾನಕಾರವಾದ ಭೌತಿಕ ವಿದ್ಯಾಮಾನ ಆಧಾರಿತ ವಿವರಣೆ ನೀಡುವುದಿಲ್ಲ.
ನಿಮ್ಮ ಜಾತಿಗೆ ಅನುಗುಣವಾಗಿ ನಿಮ್ಮ ಮನೆಯ ಆಯ ಇರಬೇಕೆಂದು ವಾಸ್ತುಶಾಸ್ತ್ರಗಳು ಹೇಳುತ್ತವೆ. ನೀವು ಶೂದ್ರರಾಗಿದ್ದರೆ (ಬಹುತೇಕ ಹಿಂದೂಗಳು ) ನಿಮಗೆ ಶ್ವಾನ ಆಯ ಪಾಪ ಫಲಗಳೇ ಖಚಿತ. ನೀವು ಎಡತಾಕುವ ಅಮೋಘ ಪ್ರಾಚೀನ ವಾಸ್ತುಶಾಸ್ತ್ರ ಹೇಳುವ ಪಂಡಿತ ಅಪ್ಪಿ ತಪ್ಪಿಯೂ ನೀವು ಶೂದ್ರರು , ಶಾಸ್ತ್ರದ ಪ್ರಕಾರ ನಿಮ್ಮದು ಶ್ವಾನ ಆಯ ಎಂದು ಹೇಳುವುದಿಲ್ಲ. ಏಕೆಂದರೆ ಅದರಿಂದ ನೀವು ಮುನಿಸಿಕೊಂಡರೆ ಆತನ ಆಯದಲ್ಲಿ ವ್ಯಯವಾಗುತ್ತದೆ. ಆದ್ದರಿಂದ ತನಗೆ ಅನುಕೂಲವಾಗುವ ವಾಸ್ತುವಿದ್ಯೆಯನ್ನು ನಿಮಗೆ ದಾಟಿಸಿ ತಾನು ಸುರಕ್ಷಿತವಾಗಿ ಸಮೃದ್ಧನಾಗಲು ಬಯಸುತ್ತಾನೆ. ಆಧುನಿಕ ಕಾಲದಲ್ಲಿ ವಾಸದ ನಿವೇಶನ ದಕ್ಕುವುದೇ ದುರ್ಲಭ , ವೆಚ್ಚದಾಯಕವಾಗಿರುವಾಗ ನೀವು ಯಾವ ಬಗೆಯ ಆಯದ ಮನೆಯನ್ನೂ ಕಟ್ಟಲು ಸಹ ಸಾಧ್ಯವಿಲ್ಲ. ಏಕೆಂದರೆ ಆಧುನಿಕ ಕಾನೂನು ವಿಧಿಸಿದ ತೆರವುಗಳನ್ನು ( Set Backs) ನೀವು ಮನೆಯ ಸುತ್ತಲೂ ಬಿಡಲೇಬೇಕು. ಇವೆಲ್ಲವು ವಾಸ್ತುಪಂಡಿತನಿಗೆ ಬೇಡ. ನಿಮ್ಮನ್ನು ವಶಪಡಿಸಿಕೊಳ್ಳಲು ಈಶಾನ್ಯ , ಅಗ್ನಿ ಮೂಲೆ , ಕುಬೇರ ಸ್ಥಾನಗಳೇ ಸಾಕು. ಕುರಿಯ ಬಲಿಗೇಕೆ ಹೆಚ್ಚಿನ ಮಂತ್ರಗಳು ಎನ್ನುವುದೇ ಅತನ ಧೋರಣೆ.
ಆಯಾದಿ ಆರು ವರ್ಗಗಳು ಕಟ್ಟಡದ ಅಳತೆಗಳನ್ನು ನಿರ್ಧರಿಸಿ ಆ ಮೂಲಕ ನಿರ್ಮಾಣ ತಂತ್ರಜ್ಞಾನಕ್ಕೆ ಮಹತ್ತರ ಕೊಡುಗೆ ನೀಡುತ್ತವೆಯೆಂದು ವಾಸ್ತುಶಾಸ್ತಗಳನ್ನು ಆಧರಿಸಿ ಹೇಳಲಾಗುತ್ತದೆ. ಆಯಾದಿ ಆರು ವರ್ಗಗಳ ಮೇಲೆ ಮನೆಗಳು ಬೀರುವ ಪರಿಣಾಮಗಳನ್ನು ಹೇಳಲಾಗಿದೆ. ಅವುಗಳು ಹೀಗಿವೆ. (ನಿಮ್ಮದು ೩೦/೪೦ ಅಳತೆಯ ಮನೆಯಾಗಿದ್ದರೆ ಅದು ಅಗಲ, ಎತ್ತರಗಳಲ್ಲಿ ಹೇಗಿರಬಹುದೆಂದು ಪಕ್ಕದಲ್ಲಿ ನೀಡಿದ್ದೇನೆ)
-ಶಾಂತಿಕ : (ಎತ್ತರ=ಅಗಲ) . ಸುಖ, ಶಾಂತಿ ತರುತ್ತದೆ. ( ೩೦ ,೩೦)
- ಪೌಷ್ಟಿಕ : (ಎತ್ತರ=ಅಗಲ/೪) . ಸಿರಿ , ಸಮೃದ್ಧಿಗಳನ್ನು ತರುತ್ತದೆ. ( ೭.೫ , ೩೦)
-ಜಯಾದಾ : (ಎತ್ತರ = ಅಗಲ/೨). ಜೀವನದಲ್ಲಿ ಯಶಸ್ಸನ್ನು ತರುತ್ತದೆ. (೧೫,೩೦)
-ಧನದಾ: (ಎತ್ತರ=೩/೪ ಅಗಲ) . ಸಂಪತ್ತನ್ನು ತರುತ್ತದೆ.(೨೨ , ೩೦)
-ಅದ್ಭುತ : (ಎತ್ತರ= ೨ ಅಗಲ) . ಆಕರ್ಷಕವಾಗಿರುತ್ತದೆ. ( ೬೦ ,೩೦)
ನೀವು ಈಗ ವಾಸಿಸುತ್ತಿರುವ ಅಥವಾ ಕಟ್ಟಿಸುತ್ತಿರುವ ಮನೆ ಮೇಲಿನ ಯಾವುದಕ್ಕೆ ಸೇರಿದೆಯೆಂದು ನಿರ್ಧರಿಸಬಲ್ಲಿರಾ ? ಅಥವಾ ಇಂತಹ ಅಳತೆಯ ಮನೆಗಳನ್ನು ಎಲ್ಲಾದರು ನೋಡಿರುವಿರಾ? ಅಥವಾ ಮುಂದೆ ಇಂತಹ ಮನೆ ಕಟ್ಟಿಸಬೇಕೆಂದಿರುವಿರಾ? ಸಾಧ್ಯವೇ ಇಲ್ಲ . ಏಕೆಂದರೆ ವಾಸ್ತುಶಾಸ್ತ್ರದ ಈ ಕಲ್ಪನೆಗಳು ಅವ್ಯಾವಹಾರಿಕ . ದಿಕ್ಪಾಲಕರಿಗೆ ನಿಮ್ಮ ಮನೆಯನ್ನೂ ಒಪ್ಪಿಸಿದ ವಾಸ್ತುಪಂಡಿತ ಇಂತಹ ವಿಚಾರಗಳನ್ನು ನಿಮಗೆ ತಿಳುಸುವುದಿಲ್ಲ. ಏಕೆಂದರೆ ವಾಸ್ತುಶಾಸ್ತ್ರದಲ್ಲಿ ಇಂತಹುವು ಇವೆಯೆಂದು ಆತನಿಗೆ ತಿಳಿದಿಲ್ಲ. ತಿಳಿದಿದ್ದರೂ ಇಂತಹ ಮನೆ ನಿಮ್ಮ ಆಧುನಿಕ ಜೀವನಕ್ಕೆ ಪ್ರಶಸ್ತವಾದುದಲ್ಲ. ನೀವು ಅದನ್ನು ತಕ್ಷಣವೇ ತಿರಸ್ಕರಿಸುತ್ತಿರಿ. ಆದ್ದರಿಂದಲೇ ತಮ್ಮ ಬೇಳೆ ಬೇಯುವಷ್ಟು ವಾಸ್ತುಶಾಸ್ತ್ರವನ್ನು ಮಾತ್ರ ವಾಸ್ತುಪಂಡಿತರು ಹೊರತೆಗೆಯುತ್ತಾರೆ
ಅಗ್ನಿಪುರಾಣ ನಿಮ್ಮ ಸೌಖ್ಯಕ್ಕೆ ನಿಮ್ಮ ಮನೆಯೊಂದೇ ವಾಸ್ತುವಿಗೆ ಅನುಗುಣವಾಗಿದ್ದರೆ ಸಾಲದು. ಅದಿರುವ ಊರು ಸಹ ವಾಸ್ತು ತತ್ವಗಳನ್ನು ಪಾಲಿಸಿರಬೇಕು ಎನ್ನುತ್ತದೆ.(ಅ,ಪು೧೦೧-೧) . ಮಾನಸಾರ ಮನೆಯಿರುವ ಜಾಗಕ್ಕೆ ಅನುಗುಣವಾಗಿ ಅದರ ನಿವಾಸಿಯ ಗುಣಗಳಿರುತ್ತವೆ ಎನ್ನುತ್ತದೆ. (ಮಾ.ಸಾ ೩೬.೧-೯೬) ಮನುಷ್ಯ ನಿರ್ಮಿಸಿದ್ದೆಲ್ಲವು ಎರಡನೆ ಹಂತದ ವಾಸ್ತು. ಮನೆಯ ನಿವೇಶನವೇ ಪ್ರಾಥಮಿಕ ವಾಸ್ತು ಎಂದು ಮಯಮತ ಸಾರುತ್ತದೆ. (ಮ.ಮ ೨.೬) ವಾಸ್ತುಶಾಸ್ತ್ರಗಳ ಈ ಹೇಳಿಕೆಗಳನ್ನು ಗಮನಿಸಿದರೆ ಭಾರತದಲ್ಲಿ ಬಹುತೇಕ ಊರುಗಳ ವಾಸ್ತುವಿನ್ಯಾಸವೇ ಸರಿಯಿಲ್ಲ. ಭೂಮಿಗೆ ಹೋಲಿಸಿದಂತೆ ಭಾರತದ ವಾಸ್ತು ಹೇಗಿದೆಯೆಂದು ವಾಸ್ತುಪಂಡಿತರು ಮಾತ್ರ ಹೇಳಬಲ್ಲರು. ಆದ್ದರಿಂದ ಯಾವುದೇ ಭೌತಿಕ ಪರಿಶೀಲನಾರ್ಹ ಸಂಗತಿಗಳನ್ನು ಪರಿಗಣಿಸದ ಕೇವಲ ಹಿಂದೂಗಳ ಪೌರಾಣಿಕ ದೈವ , ನಂಬಿಕೆಗಳ ಮೇಲಿರುವ ವಾಸ್ತುಶಾಸ್ತ್ರದ ಯೋಜನಾ ತತ್ವಗಳಿಗೆ ಯಾವುದೇ ಬೆಲೆಯಿಲ್ಲ.