KANNADA ASTROLOGY
(ಜ್ಯೊತಿಷ್ಯ ಎನ್ನುವುದು ಒಂದು ಬೆಳಕಿನ ಶಾಸ್ತ್ರ.ಅದು ಮಾನವನ ಬಾಳಿಗೆ ಒಂದು ಮಾರ್ಗದರ್ಶನ)

ವಾಸ್ತುತಂತ್ರಜ್ಞಾನ

ನೀವು ಮನೆಕಟ್ಟಬೇಕೆಂದಿರುವಿರಾ ?  ನಿಮ್ಮ ವ್ಯಾಪಾದಲ್ಲಿ ಏಳಿಗೆಯಿಲ್ಲವೇ ? ಮಗಳ ಮದುವೆಗೆ ಮುಹೂರ್ತ ಒದಗಿ ಬಂದಿಲ್ಲವೇ ? ಮಗ ದಾರಿ ತಪ್ಪುತ್ತಿದ್ದಾನೆಯೇ? ತಾಯಿಯ ಆರೋಗ್ಯ ಸರಿ ಇಲ್ಲವೇ ? ಮನೆಯಲ್ಲಿ ಸುಖ, ಸಮೃದ್ಧಿಗಳು ನೆಲೆಸಬೇಕೆ ? ಸಂತಾನವಿಲ್ಲವೇ ?ಚಿಂತೆ ಬೇಡ ಬನ್ನಿ-ನಿಮ್ಮ ಎಲ್ಲ ಸಮಸ್ಯೆಗಳಿಗೆ ವಾಸ್ತುಶಾಸ್ತ್ರವೆಂಬ ಏಕ ಗವಾಕ್ಷಿಯಡಿಯಲ್ಲಿ ಪರಿಹಾರಗಳು ದಕ್ಕುತ್ತವೆ.    

ಮನೆ ಬಾಗಿಲು ಪೂರ್ವಕ್ಕೆ ಅಥವಾ ಉತ್ತರಕ್ಕಿದ್ದರೆ  ಮನೆ ಯಜಮಾನನಿಗೆ ಸಮೃದ್ಧಿ. ಪೂರ್ವ ಅಥವಾ ಪಶ್ಚಿಮದ ಬಾಗಿಲಿದ್ದರೆ ಬಹುಸಂತಾನವು ಲಭ್ಯ.  ನೀವು ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡಿರುವಿರಾ ? ಇರಲಿ ಬಿಡಿ.  ವಾಸ್ತುಶಾಸ್ತ್ರದ ನಿಯಮಗಳ ಮುಂದೆ ನಿಮ್ಮ ವೈದ್ಯಕೀಯ ನಿಲ್ಲಲಾರದು. 

ನಿಮ್ಮ ಬಚ್ಚಲು ನೈರುತ್ಯದಲ್ಲಿರಬೇಕು.  ಬಚ್ಚಲಿನಲ್ಲಿರುವ ಬಾಯ್ಲರ್ ಪಶ್ಚಿಮದಲ್ಲಿದ್ದು ಅದರ ಸ್ವಿಚ್ ಆಗ್ನೇಯಯದಲ್ಲಿರಬೇಕು.  ಏಕೆಂದರೆ ಆಗ್ನೇಯ ಅಗ್ನಿ ಇರುವ ದಿಕ್ಕು.  ಬಾಯ್ಲರ್ ನಲ್ಲಿರುವ ನೀರನ್ನು ಕಾಯಿಸುವುದು ಅಗ್ನಿಯಲ್ಲವೇ ? ವಾಸ್ತುಶಾಸ್ತ್ರದ ಪ್ರಕಾರ ಅಗ್ನಿ ಇರುವ ಕಡೆ ನೀರು ಇರಬಾರದಲ್ಲವೇ ? ಛುಪ್ ! ಪ್ರಶ್ನೆಗಳನ್ನು ಎತ್ತಬಾರದು ವಾಸ್ತುಶಾಸ್ತ್ರ ಪ್ರಾಚೀನ ಋಷಿ ಮುನಿಗಳು ತಮ್ಮ ದಿವ್ಯ ದೃಷ್ಟಿಯಿಂದ ಕಂಡುಕೊಂಡ ಸತ್ಯಗಳನ್ನು ಪ್ರಶ್ನಿಸಬಹುದೇ?

ನೀವು ಶಸ್ತ್ರಚಿಕಿತ್ಸೆ ಮಾಡುವ ವೈದ್ಯರೇ? ಹಾಗಾದರೆ ನಿಮ್ಮ ಚಿಕಿತ್ಸೆಯ ಕೊಠಡಿ ಪೂರ್ವ ಅಥವಾ ಈಶಾನ್ಯದಲ್ಲಿರಬೇಕು. ನೀವು ಇವೆರಡು ದಿಕ್ಕಿಗೆ ಮಖ ಮಾಡಿ ಶಸ್ತ್ರ ಚಿಕಿತ್ಸೆ ಮಾಡಬೇಕು.  ರೋಗಿಯ ಯಾವ ಅಂಗವಾಗಿರಲಿ ಅಥವಾ ವೈದ್ಯಕೀಯ ಉಪಕರಣಗಳು ಎಲ್ಲೇ ಇರಲಿ ಲೆಕ್ಕಕ್ಕಿಲ್ಲ. ಏಕೆಂದರೆ ಋಷಿ-ಮುನಿ ಪ್ರಣೀತ ವಾಸ್ತುಶಾಸ್ತ್ರ ಹಾಗೆ ಹೇಳುತ್ತದೆ  

ನಿಮ್ಮ ನಿವೇಶನ  ಚೌಕ ಅಥವಾ ಆಯತಾಕಾರದಲ್ಲಿರದೆ ಬೇರೆ ರೀತಿಯಲ್ಲಿದೆಯೇ ? ನಿಮಗೆ ಹೆಣ್ಣು ಸಂತಾನ ಮಾತ್ರ ಪ್ರಾಪ್ತಿ. ಏಕೆಂದರೆ ನಿಮ್ಮ ನಿವೇಶನದ ಆಕಾರ ನಿಮ್ಮ  X-ವರ್ಣಕಾಯದ Xxಮೇಲೆ ಪ್ರಭಾವ ಬೀರುತ್ತದೆ.

ವಾಸ್ತುಪಂಡಿತರು ಯಾವ ಕಾರಣಕ್ಕಾಗಿ ನಿಮಗೆ ತಮ್ಮ ಅಮೂಲ್ಯ , ಸನಾತನ ವಾಸ್ತುಜ್ಞಾನದ ಸಲಹೆಯನ್ನೂ ನೀಡುತ್ತಾರೆಂದು ಮೇಲಿನಂತಹ ಕಟ್ಟಪ್ಪಣೆಗಳನ್ನು ನೀಡುತ್ತಾರೆಂದು ನಿಮಗೆ ಗೊತ್ತೇ ?  ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯ .ಸಮೃದ್ಧಿ ಮತ್ತು ಒಳಿತಿಗಾಗಿ. ಆಧುನಿಕ ಜಗತ್ತಿಗೆ ಮೈಯೊಡ್ಡಿಕೊಂಡಿರುವ  ನೀವು ಸ್ವಲ್ಪವೇ ಸ್ವಲ್ಪ ಆಲೋಚಿಸಿದರು ಸಾಕು ಇದು ಎಷ್ಟೊಂದು ಹಾಸ್ಯಾಸ್ಪದವೆಂದು ತಕ್ಷಣವೇ ಮನದಟ್ಟಾಗುತ್ತದೆ. ಮನುಷ್ಯ ತನ್ನ ಜೀವನವನ್ನು ಉತ್ತಮಗೊಳಿಸಲು , ಕನಸುಗಳನ್ನೂ ಸಾಕಾರಗೊಳಿಸಿಕೊಳ್ಳಲು  ಪಟ್ಟ ಪರಿಶ್ರಮ ಮತ್ತು ಅದರಲ್ಲಿ ಗಳಿಸಿದ ಯಶಸ್ಸು ನಮ್ಮ ಕಣ್ಣಿಗೆ ನಿರಂತರ ರಾಚುತ್ತಲೇ ಇದೆ. ಕೆಲದಶಕಗಳ ಹಿಂದೆ ಅನೂಹ್ಯವೆಂದು ಭಾವಿಸಲಾಗಿದ್ದ ಸಂಗತಿಗಳು ಇಂದು ಜನಸಾಮಾನ್ಯನ ಒಡನಾಡಿಗಳಾಗಿವೆ. ಮನುಷ್ಯ ಯಂತ್ರ ಮತ್ತು ತಾಂತ್ರಿಕ ಸಿದ್ಧಿಗಳ ಮೂಲಕ ಹೆಚ್ಚು ಪ್ರಬಲನಾಗಿದ್ದಾನೆ. ವೈದ್ಯಕೀಯ , ಜೀವವೈದ್ಯಕಿಯ , ಸಂಪರ್ಕ , ಸಾರಿಗೆ , ನಿರ್ಮಾಣ ಹೀಗೆ ನೂರಾರು ರಂಗಗಳಲ್ಲಾಗಿರುವ ಕ್ರಾಂತಿಗಳಿಂದ ನಮ್ಮ ಜೀವನ ಹಿಂದೆಂದಿಗಿಂತಲೂ ಹೆಚ್ಚು ಆರಾಮ ಮತ್ತು ಆರೋಗ್ಯಕರವಾಗಿದೆ. 

ಯಾವ ವಾಸ್ತುಶಾಸ್ತ್ರವು ತಪ್ಪಿಸದ ಬರಗಳನ್ನು ಆಧುನಿಕ ಆಣೆಕಟ್ಟುಗಳು ತಪ್ಪಿಸಿವೆ. ಕರಾಳ ದೈವ ಸ್ವರೂಪ ತಾಳಿದ್ದ ಪ್ಲೇಗ್ , ಸಿಡುಬು  ರೋಗಗಳು ಮರೆಯಾಗಿ ಹೋಗಿವೆ. ಎಂತಹ ವಾಸ್ತು ಅನುಗುಣವಾದ ಮನೆಯಲ್ಲಿದ್ದರೂ ತಡೆಯಲಾಗದ ಪೋಲಿಯೋ ರೋಗ ವಿಜ್ಞಾನದ ದೆಸೆಯಿಂದ  ಭೂಮಿಯಿಂದ ಮರೆಯಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಅಷ್ಟೇ ಅಲ್ಲ ಯಾವುದಾದರು ವಾಸ್ತುಪಂಡಿತ ತಾನು ಹಾಗು ತನ್ನ ಕುಟುಂಬದ ಸದಸ್ಯರು ಅನಾರೋಗ್ಯಕ್ಕೆ ಒಳಗಾದಾಗ ಆಧುನಿಕ ವೈದ್ಯಕೀಯ ವಿಧಾನಗಳಿಗೆ ಮೊರೆ ಹೋಗುತ್ತಾನೆಯೋ ಅಥವಾ ತನ್ನ ಮನೆಯ ವಾಸ್ತುವನ್ನು ಬದಲಿಸಿಕೊಳ್ಳುವನೋ ವಿಚಾರಿಸಿರಿ. ಖಂಡಿತವಾಗಿಯೂ ಸುಖ , ಸಮೃದ್ಧಿಗಾಗಿ ಆತ ಎಡತಾಕುವುದು ಆಧುನಿಕ ವೈದ್ಯಕೀಯ ಕೇಂದ್ರಗಳಿಗೆ. ಅಷ್ಟೇ ಅಲ್ಲ ವಾಸ್ತುಶಾಸ್ತ್ರದ ವೈಜ್ಞಾನಿಕತೆಯ ಬಗ್ಗೆ ಹುಯಿಲೆಬ್ಬಿಸುವವರು ತಮ್ಮ ಮನೆ, ಕಛೇರಿಗಳನ್ನು ಯಾವ ವಿಧಾನಗಳಿಂದ ಕಟ್ಟಿರುವರೆಂದು ಒಮ್ಮೆ ಕುತೂಹಲಕ್ಕೆ ಗಮನಿಸಿರಿ. ನಿಮ್ಮ  ಅಂಜಿಕೆಯನ್ನೇ ಬಂಡವಾಳವಾಗಿಸಿಕೊಂಡು ನಿಮ್ಮ ನಿವೆಶನವನ್ನು ವಾಸ್ತುಪುರುಷನಿಗೆ ಒಪ್ಪಿಸುವುದರಲ್ಲೇ ಅವರ ಹಿತಾಸಕ್ತಿ ಅಡಗಿದೆ. ವಾಸ್ತುಪಂಡಿತರು ತಮ್ಮ ಸುಖಕ್ಕಾಗಿ ಎಲ್ಲ ಆಧುನಿಕ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಾರೆ. ತಮ್ಮ ಧನ ಸಮೃದ್ಧಿಗಾಗಿ ನಿಮ್ಮ ಮೇಲೆ ವಾಸ್ತು ಬಳಸುತ್ತಾರೆ.         

ನಮಗೆ  ವಾಸ್ತುಶಾಸ್ತ್ರ ಅಥವಾ ವಾಸ್ತು  ಎಂದರೆ ಕುಬೇರ, ಆಗ್ನೇಯ , ಆಯ, ವ್ಯಯ ಇತ್ಯಾದಿಗಳೇ  ನೆನಪಿಗೆ ಬರುತ್ತವೆ. ಆಧುನಿಕ ಕಾಲದಲ್ಲಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ದೊರೆಯುವ ಐದು ವರ್ಷಗಳ ಈಗ ಆರ್ಕಿಟೆಕ್ಚರ್ ಎನ್ನಲಾಗುವ ತಂತ್ರಜ್ಞಾನವನ್ನು ಸಹ ನಾವು ವಾಸ್ತುಶಿಲ್ಪ ಎಂದೆ ಕರೆಯುತ್ತಿದ್ದೇವೆ. ಇದರಿಂದ ಪ್ರಾಚೀನ ಪಾರಂಪರಿಕ ವಾಸ್ತುಶಿಲ್ಪ ಮತ್ತು ಈಗಿನ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಲಿಸುವ ಆಧುನಿಕ ವಿದ್ಯೆ ಒಂದೇ ಎಂಬ ತಪ್ಪು ತಿಳುವಳಿಕೆ ಮೂಡುತ್ತಲಿದೆ. ಆದ್ದರಿಂದ ಪಾರಂಪರಿಕವಾದುದನ್ನು ವಾಸ್ತುಶಾಸ್ತ್ರ ಎಂತಲೂ ಆಧುನಿಕ ವಿದ್ಯೆಯನ್ನು ವಾಸ್ತುಶಿಲ್ಪ ಎನ್ನುವ ಬದಲು  ವಾಸ್ತುತಂತ್ರಜ್ಞಾನ ಎಂದು ಕರೆದಿದ್ದೇನೆ. ವಾಸ್ತುಶಾಸ್ತ್ರದ ಹಾವಳಿಯ ಈ ದಿನಗಳಲ್ಲಿ  ಈ ವ್ಯತ್ಯಾಸವನ್ನು ಸೂಚಿಸುವ ಪರ್ಯಾಯ  ಶಬ್ದಗಳು ಸಾರ್ವತ್ರಿಕವಾಗುವ ಅನಿವಾರ್ಯವಾತೆ ಇದೆ.

ಇಂಜಿನಿಯರ್ ಗಳು , ವಾಸ್ತುತಂತ್ರಜ್ಞರು ಮತ್ತು ವಿಜ್ಞಾನಿಗಳು ಭಾರತದ ಪ್ರಾಚೀನ ವಾಸ್ತುಶಾಸ್ತ್ರದ ಅಧ್ಯಯನ  ನಡೆಸಿಲ್ಲ. ಹಾಗೇನಾದರು ನಡೆಸಿದರೆ ಅದರ ಮಹತ್ವ ಗೊತ್ತಾಗುತ್ತಿತ್ತು ಎಂದು ಆಗಾಗ್ಗೆ ಪತ್ರಿಕೆಗಳಲ್ಲಿ , ದೂರದರ್ಶನ ಕಾರ್ಯಕ್ರಮಗಳಲ್ಲಿ ಹೇಳಿಕೆಗಳು ಕಾಣಿಸಿಕೊಳ್ಳುತ್ತವೆ.  ವಾಸ್ತುಶಾಸ್ತ್ರ ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಇದೆಯೇ ಇಲ್ಲವೇ ಎನ್ನುವುದನ್ನು ತಿಳಿಯಲು ಎಲ್ಲ ವಾಸ್ತುಗ್ರಂಥಗಳ ಎಲ್ಲ ಶ್ಲೋಕಗಳನ್ನು ಓದಬೇಕಾದ ಅಗತ್ಯವಿಲ್ಲ. ಅನ್ನ ಬೆಂದಿದೆಯೋ ಇಲ್ಲವೋ ಎಂದು ಅರಿಯಲು ಒಂದು ಅಗುಳು ಸಾಕು. ಅದರಂತೆ ವಾಸ್ತುಶಾಸ್ತ್ರದ ಹುರುಳನ್ನು ಅರಿಯಲು ಒಬ್ಬ ಸಿವಿಲ್ ಇಂಜಿನಿಯರ್ ಗೆ  ಅದರಲ್ಲಿ ಮೂಲ ಪರಿಕಲ್ಪನೆಗಳ ಪರಿಚಯವಿದ್ದರೆ ಸಾಕು. ವಾಸ್ತುಶಾಸ್ತ್ರದ ಮೂಲ ಪರಿಕಲ್ಪನೆ ನಿವೇಶನವನ್ನು ಮತ್ತು ಅದರಲ್ಲಿ ಕಟ್ಟಬೇಕಾಗಿರುವ ಮನೆಯ ಸ್ವರೂಪವನ್ನು ಅಲೌಕಿಕವಾದ ಕಾರಣಗಳೊಂದಿಗೆ ಬೆಸೆಯುತ್ತದೆ. ವಾಸ್ತುಶಾಸ್ತ್ರ ದಿಕ್ಕುಗಳು , ಗ್ರಹ , ನಕ್ಷತ್ರಗಳು , ಜಾತಿ-ವರ್ಣಗಳು ಭೂಮಿಯ ಮೇಲೆ ಜೀವಿಸುತ್ತಿರುವ ಮನುಷ್ಯರ ಮೇಲೆ ಪ್ರಭಾವ ಬೀರುತ್ತವೆಯೆಂದು ನಂಬುತ್ತದೆ. ಇದು ಸಂಪೂರ್ಣ ಸುಳ್ಳು. ಇಂತಹ ಯಾವುದೇ ಸಂಬಂಧವನ್ನು ಸ್ಥಾಪಿಸಲು ಮೌಢ್ಯ ನಂಬಿಕೆಗಳ ಹೊರತಾಗಿ ಬೇರೆ ಯಾವುದೇ ಆಧಾರಗಳಿಲ್ಲ.   ಮನುಷ್ಯರ ಜೀವನದಲ್ಲಿ ಕಾಣಿಸಿಕೊಳ್ಳುವ ನೋವು-ನಲಿವು , ಸೋಲು-ಗೆಲುವುಗಳಿಗೆ ಅವರ ಜೀವನದ ಆಗು ಹೋಗುಗಳಾಚೆ ಬೇರೇನೋ ಇದೆಯೆಂದು  ತೋರಿಸಲು ಆಗಿಲ್ಲ. ಭೂಕಂಪ, ನೆರೆ , ಬಿರುಗಾಳಿ ಮುಂತಾದ ನೈಸರ್ಗಿಕ ವಿದ್ಯಾಮಾನ ಹಾಗೂ ಗ್ರಹ , ನಕ್ಷತ್ರಗಳ ನಡುವೆ ಯಾವುದೇ ಕ್ರಮಬದ್ಧ ಸಂಬಂಧ ಇರುವುದು ಸಹ ಈವರೆಗೆ ಸಾಬೀತಾಗಿಲ್ಲ. ಯಾವೊಬ್ಬ ವಾಸ್ತುಪಂಡಿತ , ಜ್ಯೋತಿಷಿ ಇವುಗಳ ಬಗ್ಗೆ ನಂಬಲರ್ಹವಾದ ವೈಜ್ಞಾನಿಕ ವಿಧಾನದಲ್ಲಿ ದತ್ತಾಂಶ ಸಂಗ್ರಹಿಸಿ , ವಿಶ್ಲೇಷಿಸಿ ಮಂಡಿಸಿಲ್ಲ.  ಆದರೆ ಈ ಎಲ್ಲ ನೈಸರ್ಗಿಕ ವಿದ್ಯಾಮಾನಗಳನ್ನು  ವಿಜ್ಞಾನ ಸಾಕಷ್ಟು ಖಚಿತವಾಗಿ ತನ್ನ ವಿವಿಧ ಶಾಖೆಗಳ ಮೂಲಕ ವಿವರಿಸುವಲ್ಲಿ ಯಶಸ್ವಿಯಾಗಿದೆ. ಅಮೂರ್ತವೆನಿಸುವ ಮನಶ್ಶಾಸ್ತ್ರ , ದೈವ ನಿಯಂತ್ರಿತವೆಂದು ಪರಿಗಣಿಸಲಾಗಿದ್ದ ಜೀವವಿಜ್ಞಾನದಲ್ಲೂ ಸಹ ಸಂಶೋಧನೆಯ ದಾಪುಗಾಲಿಕ್ಕುತ್ತಿದೆ..            

ಕೆಲವೊಮ್ಮೆ ವ್ಯಕಿಗಳ ವೈಯುಕ್ತಿಕ ಜೀವನ ಮತ್ತು  ಅಂತರಿಕ್ಷದ ಕಾಯಗಳ ಸ್ಥಾನ , ನಿವೇಶನದಲ್ಲಿ ಕಟ್ಟಿದ ಮನೆಯ ಯೋಜನೆ ಮುಂತಾದವುಗಳ ನಡುವೆ ಏನೋ ಸಂಬಂಧ ಇರುವಂತೆ ಭಾಸವಾಗುವ ಘಟನೆಗಳು ನಡೆದಿರುವಂತೆ ಭಾಸವಾಗುತ್ತದೆ. ಆದರೆ ಇಂತಹ ಘಟನೆಗಳಿಗೆ ವಾಸ್ತು, ಜ್ಯೋತಿಷ್ಯಗಳೇ ಕಾರಣಗಳೆಂದು ಹೇಳಲು ಸಾಧ್ಯವಿಲ್ಲ. ಅಂತಹ ಘಟನೆಗಳ ಸಾಧ್ಯಸಾಧ್ಯತೆಯನ್ನು ಹುಡುಕುವ ಮೊದಲು ಅದನ್ನು ಕುರಿತಾಗಿ ಹೇಳುವ ಸಂಗತಿಗಳ ಮೂಲ ಪರಿಕಲ್ಪನೆಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸಬೇಕು. ವಾಸ್ತುಶಾಸ್ತ್ರ ಯಾವುದೇ ನಿರ್ದಿಷ್ಟ ಭೌತಿಕ , ಪರಿಶೀಲನೆಗೆ ಒಳಪಡುವ ಪರಿಕಲ್ಪನೆಗಳ ಮೇಲೆ ರೂಪುಗೊಂಡಿಲ್ಲವಾದ್ದರಿಂದ ಅದರ ಹೇಳಿಕೆಗಳನ್ನು ಪರೀಕ್ಷಿಸಲು ಹೊರಡುವುದು ಕಾಲ ವ್ಯರ್ಥವಲ್ಲದೆ ಮತ್ತೇನಿಲ್ಲ. ಯಾಕೆಂದರೆ ನಿರ್ದಿಷ್ಟ ತಳಹದಿ ಇಲ್ಲದ ಯಾವುದನ್ನು ಹುಡುಕಿದರೂ ಅದರಲ್ಲಿ ಕೊನೆಗೆ ಸಿಗುವುದು ಜೊಳ್ಳು ಮಾತ್ರ .  

ಕಳೆದ ಐದು ಶತಮಾನಗಳಿಂದ ನಮಗೆ ದಕ್ಕಿರುವ ವೈಜ್ಞಾನಿಕ ಅರಿವಿನಿಂದ ನಾವು ವ್ಯಕ್ತಿಯೊಬ್ಬನ ಮೇಲೆ ಪ್ರಭಾವ ಬೀರಬಲ್ಲ ಅಂತರಿಕ್ಷದ ಬಲಗಳಾಗಲಿ , ಇಂದ್ರ , ಕುಬೇರ , ಇತ್ಯಾದಿ ಅಗೋಚರ ಶಕ್ತಿಗಳಾಗಲಿ (ಪುರಾಣದಲ್ಲಿ ಖಂಡಿತ ಇವೆ) ,ಇಲ್ಲವೆಂದು  ವಿಶ್ವಾಸದಿಂದ  ಹೇಳಬಹುದು. ಮುಂದಿನ ದಿನಗಳಲ್ಲಿ ವಿಜ್ಞಾನ ಇಂತಹ ಯಾವುದಾದರೂ ಬಲಗಳನ್ನು ಅನಾವರಣಗೊಳಿಸಬಹುದು ಎಂಬ ಆಶೆಯನ್ನು ಸಹ ತಾಳುವಂತಿಲ್ಲ. ಏಕೆಂದರೆ ಅಸ್ತಿತ್ವದಲ್ಲಿರುವ ನೈಸರ್ಗಿಕ ಬಲಗಳ ಸ್ವರೂಪವನ್ನು ಸುದೀರ್ಘ ಕಾಲದಿಂದ ಕೂಲಂಕಷವಾಗಿ ಪ್ರಯೋಗ , ಸಿದ್ಧಾಂತಗಳ ಮೂಲಕ ಪರೀಕ್ಷಿಸಿಲಾಗಿದೆ ತಪ್ಪೆಂದು ಕಂಡುಬಂದಲ್ಲಿ ಪರಿಷ್ಕರಿಸಲಾಗಿದೆ. ಹೆಚ್ಚಿನ ಸಂಶೋಧನೆ ಕೈಗೊಳ್ಳಲಾಗಿದೆ ಯಾವ ನೈಸರ್ಗಿಕ ಬಲದ ಸ್ವರೂಪವೂ ವಾಸ್ತು ಅಥವಾ ಜ್ಯೋತಿಷ್ಯ ಶಾಸ್ತ್ರದ ಯಾವ ಪರಿಕಲ್ಪನೆಗಳಿಗೂ ಆಧಾರ ಒದಗಿಸುವ ಅತ್ಯಂತ ಕ್ಷೀಣ ಸಾದ್ಯತೆಗಳು ಸಹ ಇಲ್ಲ. ಈ ನೈಸರ್ಗಿಕ ಬಲಗಳನ್ನು ಬೇರೆ ರೀತಿಯಲ್ಲಿ ಪರೀಕ್ಷಿಸಿ ನೋಡಬೇಕಾದ ಸಂಗತಿಗಳನ್ನು ವಾಸ್ತು/ಜ್ಯೋತಿಷ್ಯಗಳು ಮುಂದಿರಿಸಲು ಸಾಧ್ಯವಾಗಿಲ್ಲ.   ಆದ್ದರಿಂದ ಈ ಪುಸ್ತಕದಲ್ಲಿ ವಾಸ್ತುಶಾಸ್ತ್ರದ ಅಸಂಬದ್ಧ ಪರಿಕಲ್ಪನೆಗಳನ್ನು ಮಾತ್ರ ವಿಚಾರಣೆ ಕೈಗೆತ್ತಿಕೊಂಡು ಉಳಿದವುಗಲನ್ನು ಓದುಗರ ವೈಚಾರಿಕ ಚಿಂತನೆಗೆ ಒಪ್ಪಿಸಲಾಗಿದೆ.  

ವಾಸ್ತುಶಾಸ್ತ್ರ ಅದರ ಸಿದ್ಧಾಂತದ ಮೂಲದಲ್ಲಿಯೇ ಪರಸ್ಪರ ವಿರುದ್ಧವಾದ ಅಸಂಗತಗಳ ಗೂಡು. ಆದ್ದರಿಂದ ವಾಸ್ತುಶಾಸ್ತ್ರದ ಹೇಳಿಕೆಗಳನ್ನು ಯಾರು ಬೇಕಾದರೂ ತಮ್ಮ ಮೂಗಿನ ನೇರಕ್ಕೆ ಅರ್ಥೈಸಬಹುದು-ಫಲ ಜ್ಯೋತಿಷ್ಯದಂತೆ. ಆಧುನಿಕ ವಾಸ್ತುತಂತ್ರಜ್ಞಾನ , ಸಿವಿಲ್ ಇಂಜಿನಿಯರಿಂಗ್  ಶಿಸ್ತುಗಳನ್ನು ಅವುಗಳ ಮೂಲ ತತ್ವಗಳನ್ನು ವಾಸ್ತುಶಾಸ್ತ್ರದೊಂದಿಗೆ ಯಾವುದೇ ರೀತಿಯಲ್ಲಿ ಹೋಲಿಸಲು ಸಾಧ್ಯವಿಲ್ಲ.  ಹಾಗೂ ಹೋಲಿಕೆಗೆ ಸಾಮಾನ್ಯವೆನಿಸುವ ಅಂಶಗಳೇ ಇಲ್ಲ. ವಾಸ್ತುಶಾಸ್ತ್ರದ ಬೆನ್ನು ಹಿಂದೆ ಬಿದ್ದಿರುವ ಜನರನ್ನು ಆಧುನಿಕತೆಯತ್ತ  ತರುವ ಪ್ರಯತ್ನಗಳು ಸಫಲವಾಗದೆ ತಮ್ಮ ವೃತ್ತಿಯನ್ನು ಬಿಡಲಾಗದೆ ವಾಸ್ತುತಂತ್ರಜ್ಞರು ಅನುಭವಿಸುತ್ತಿರುವ ವೇದನೆ ಅಷ್ಟಿಷ್ಟಲ್ಲ. ಕಿಂಚಿತ್ ವೈಜ್ಞಾನಿಕ ಜ್ಞಾನವಿಲ್ಲದ , ಯಾವುದೇ ತಾಂತ್ರಿಕ ಅರಿವಿಲ್ಲದ ಪುರಾಣ , ಪುಣ್ಯಕಥೆಗಳನ್ನು ಬಡಬಡಿಸುವ  ವಾಸ್ತುಪಂಡಿತನೊಂದಿಗೆ ವಾಸ್ತುತಂತ್ರಜ್ಞ ಸ್ಪರ್ಧಿಸಬೇಕಾದ , ಚರ್ಚಿಸಬೇಕಾದ ಸಂಗತಿಯೇ ಕಳವಳಕಾರಿಯಾಗಿದೆ.  

ಆಧುನಿಕ ವಾಸ್ತುತಂತ್ರಜ್ಞಾನದ ಮೂಲ ಸಿದ್ಧಾಂತಗಳು ವೈಜ್ಞಾನಿಕ ಅಡಿಗಲ್ಲಿನ ಮೇಲಿದ್ದು ಪುರೋಗಾಮಿಯಾಗಿವೆ. ವಾಸ್ತುತಂತ್ರಜ್ಞಾನ ಬಳಕೆ , ಸುರಕ್ಷೆ , ಭದ್ರತೆ , ನೈರ್ಮಲ್ಯ , ತಾಳಿಕೆ , ಪ್ರಸ್ತುತತೆ, ಚೆಲುವು , ಆರ್ಥಿಕ ಸಮರ್ಥನೆ , ಉತ್ತಮತರ   ನಿರ್ಮಾಣ ಸಾಮಗ್ರಿಗಳ ಸಮರ್ಪಕ ಬಳಕೆಯನ್ನು ಪ್ರತಿಪಾದಿಸುತ್ತದೆ. ತನ್ನೊಂದಿಗೆ ಖಚಿತ ,ವೈಜ್ನಾನಿಕ ನೆಲೆಯ ಮೇಲೆ ಸುಭದ್ರವಾಗಿ ಸ್ಥಾಪಿತವಾಗಿರುವ ಸಿವಿಲ್ ಇಂಜಿನಿಯರಿಂಗ್ ನೊಂದಿಗೆ ಸದಾ ಜೊತೆಯಲ್ಲಿದ್ದು ಆ ಮೂಲಕ ತಂತ್ರಜ್ಞಾನ , ವಿಜ್ಞಾನದೊಂದಿಗೆ ಬೆಸೆದುಕೊಂಡಿದೆ. ವಾಸ್ತುಶಾಸ್ತ್ರ ಇದಕ್ಕೆ ತದ್ವಿರುದ್ಧವಾಗಿ ಋಷಿ , ಮುನಿಗಳ , ವೇದ , ಪುರಾಣಗಳ ಅಡಿಯಾಳಾಗಿದೆ. ವಾಸ್ತುಶಾಸ್ತ್ರದ ಎಲ್ಲ ಚಿಂತನೆಗಳು ೧೦ ನೇ ಶತಮಾನ ದಾಟಿ ಮುಂದೆ ಸಾಗದೆ , ನಿಂತ ನೀರಾಗಿವೆ.      

ವಾಸ್ತುಶಾಸ್ತ್ರ ಮತ್ತು ವಾಸ್ತುತಂತ್ರಜ್ಞಾನಗಳ ಮಾರ್ಗಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿವೆ. ವಾಸ್ತುತಂತ್ರಜ್ಞಾನ ನಿಮಗೆ ಅನುಕೂಲಕರವಾದ , ಸುಭದ್ರವಾದ ಆಸರೆಯನ್ನು ಒದಗಿಸುವ ಭರವಸೆ ನೀಡುತ್ತದೆ. ಆದರೆ ತನ್ನ ಪರಿಮಿತಿಯಾಚೆಗಿರುವ ಅದರಲ್ಲಿ ವಾಸಿಸುವ ನಿಮ್ಮ  ಆರೋಗ್ಯದ ಬಗ್ಗೆ ಏನನ್ನು ಹೇಳುವುದಿಲ್ಲ. ನಿಮಗೆ ಸಂತಾನ ಭಾಗ್ಯ ಇರುವುದೋ ಇಲ್ಲವೋ ಎನ್ನುವುದನ್ನು ಎಂದಿಗೂ ಉಹಿಸಲು ಹೋಗುವುದಿಲ್ಲ. ಅಂತಹ ಊಹೆಗಳಿಗೆ ಆಸ್ಪದವನ್ನು ಕಲ್ಪಿಸುವುದಿಲ್ಲ. ವಾಸ್ತುತಂತ್ರಜ್ಞಾನ  ಬೆಂಕಿಯಿಂದ ಸುರಕ್ಷಿತವಾದ ಮನೆಯನ್ನೂ ಕಟ್ಟಿಕೊಡಲು ಸಮರ್ಥ . ಆದರೆ ನಿಮ್ಮ ನಿರ್ಲಕ್ಷ್ಯ ಅಥವಾ ಉದ್ಧೇಶಿತವಾಗಿ ಬೆಂಕಿ ಇಡುವ ಶತ್ರುಗಳನ್ನು ತಡೆಹಿಡಿಯುವ ಭರವಸೆ ನೀಡುವುದಿಲ್ಲ. ಆದರೆ ವಾಸ್ತುಶಾಸ್ತ್ರ  ಭೌತಿಕ ವಲಯನ್ನು ಮೀರಿ ಆಧ್ಯಾತ್ಮ ವಲಯದಲ್ಲಿ ನಿಮ್ಮನ್ನು ಪ್ರಭಾವಗೊಳಿಸಬಲ್ಲುದಾಗಿ  ಕೊಚ್ಚಿಕೊಳ್ಳುತ್ತದೆ. ಇಂತಹ ಸಂಗತಿಗಳನ್ನು ವೈಚಾರಿಕ ಹಿನ್ನೆಲೆಯಲ್ಲಿ  ಪ್ರಶಿಸಿದಂತೆಲ್ಲ ವಾಸ್ತುಪಂಡಿತರು ಹುಸಿ ವೈಜ್ಞಾನಿಕ ವಿವರಣೆಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ.   

ಆಧುನಿಕ ತತ್ವಜ್ಞಾನಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಕಾರ್ಲ್ ಪೋಪ್ಪರ್  ಯಾವುದೇ ಜ್ಞಾನ ಸತ್ಯವೆಂದು ಸಾಧಿಸಲು ಅಥವಾ ಪರಿಷ್ಕರಿಸಲು ಅದು ‘ಹುಸಿಕರಣ’ಗೊಳಿಸಲು (Falsification) ಮುಕ್ತವಾಗಿರಬೇಕೆಂಬ ಸಿದ್ಧಾಂತವನ್ನು ಮಂಡಿಸಿದ್ದಾನೆ. ಇದು ಬಹುತೇಕ ವಿಜ್ನಾನಿಗಳ ಮನ್ನಣೆ ಗಳಿಸಿದೆ. ವಿಜ್ಞಾನ ಹುಸಿಕರಣಗೊಳಿಸಲು ಸದಾ ತೆರೆದು ಕೊಂಡಿರುತ್ತದೆ. ಆದರೆ ವಾಸ್ತುಶಾಸ್ತ್ರ ಅಂತಹ ಅವಕಾಶಗಳನ್ನೇ ಹೊಂದಿಲ್ಲ. ನಿಮಗೆ ಯಾವುದೇ ಸಂಕಷ್ಟ ಎದುರಾಯಿತೆಂದು ಭಾವಿಸೋಣ . ನೀವು ವಾಸ್ತುಪಂಡಿತನನ್ನು ಸಂಪರ್ಕಿಸುತ್ತಿರಿ. ಆತ  ನಿಮಗೆ ಕೆಲವು ಸಲಹೆಗಳನ್ನು ನೀಡುತ್ತಾನೆ. ಅಂತಹ ಸಲಹೆಗಳ ಫಲಿತಾಂಶ ಭಾರಿ ಸಂಭಾವ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ. ನಿಮಗೆ ಒಳ್ಳೆಯದಾದರೆ ವಾಸ್ತುಶಾಸ್ತ್ರ ಅದು ತನ್ನಿಂದ ಘಟಿಸಿದಂತೆ ಘೋಷಿಸುತ್ತದೆ. ಒಂದು ವೇಳೆ ಆಗದಿದ್ದರೆ ಅದಕ್ಕೆ ಬೇರೊಂದು ಕಾರಣವನ್ನು ಹುಡುಕುತ್ತದೆ. ನಿಮ್ಮ ಕಾರ್ಖಾನೆ ಸರಿಯಾಗಿ ನಡೆಯದಿದ್ದರೆ ದಕ್ಷಿಣ ಬಾಗಿಲನ್ನು ಮುಚ್ಚುವಂತೆ ಹೇಳಲಾಗುತ್ತದೆ. ಅದರ  ನಂತರವು ನಿಮಗೆ ಇನ್ನು ಹೆಚ್ಚಿನ ನಷ್ಟವುಂಟಾದರೆ  ನಿಮ್ಮ  ಹಣೆಯ ಬರಹ , ಜನ್ಮ ಕುಂಡಲಿ  ಅಥವಾ ಬೇರೆಯ ಪರಿಹಾರಕ್ಕೆ ಮೊರೆ ಹೋಗಲು ಹೇಳಲಾಗುತ್ತದೆ. ಆದ್ದರಿಂದ ವಾಸ್ತುಶಾಸ್ತ್ರ ಯಾವುದೇ ಖಚಿತ , ಪರಿಶೀಲನಾರ್ಹ  ಜ್ನಾನವನ್ನು ನೀಡುವುದಿಲ್ಲ.

ವಾಸ್ತುಶಾಸ್ತ್ರ ಬದಲಾಗುತ್ತಿರುವ ಜೀವನ ಪದ್ದತಿಯನ್ನು ಪರಿಗಣಿಸುವುದೇ ಇಲ್ಲ. ಆಧುನಿಕ ಉಪಕರಣಗಳು , ವಸ್ತು ವೈವಿಧ್ಯತೆಗಳು ವಾಸ್ತುಶಾಸ್ತ್ರವನ್ನು ಹೊಕ್ಕಿರಿಯುತ್ತಿವೆ. ಗಣಕಗಳನ್ನು ಎಲ್ಲಿರಿಸಬೇಕು ?  ಕಾರ್ಖಾನೆಯಲ್ಲಿ ಕುಲುಮೆ ಎಲ್ಲಿರಬೇಕು ? ಎನ್ನುವಂತಹ ಪ್ರಶ್ನೆಗಳು ಎದುರಾದಾಗ ಹಳಸಲು ವಾಸ್ತುಶಾಸ್ತ್ರದಲ್ಲಿ ಅಗ್ನಿ , ಕುಬೇರ , ವರುಣ ಇತ್ಯಾದಿ ದೈವಗಳು ನೆರವಿಗೆ ಬರಬಹುದಲ್ಲದೆ  ಹೊಸ ಅರಿವಿಗೆ ಅಲ್ಲಿ ಸ್ಥಾನವಿಲ್ಲ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಅಪಾರ್ಟ್^ಮೆಂಟ್ ಸಂಸ್ಕೃತಿ ತೀವ್ರ ಗತಿಯಲ್ಲಿ ಹರಡುತ್ತಿದೆ. ಇಲ್ಲಿ ವಿವಿಧ ನಂಬಿಕೆಯ ಜಾತಿ , ವರ್ಗದ ಜನ ಒಂದೇ ಕಡೆ ನೆಲೆಸುವ ಅನಿವಾರ್ಯತೆ ಎದುರಾಗಿದೆ. ನಾನು , ನನ್ನ ನಿವೇಶನ ಎನ್ನುವಂಥ ಹೇಳಿಕೆಗಳು ಅಪ್ರಸ್ತುತವಾಗಿವೆ. ಇಂತಹ ಸನ್ನಿವೇಶದಲ್ಲೂ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ವಾಸ್ತುಪಂಡಿತರು ತಮ್ಮ ‘ಅಪಾರವಾದ ಜ್ನಾನವನ್ನು ಮನೆಗಳನ್ನು ಬಿಡಿಬಿಡಿಯಾಗಿ ಪರಿಗಣಿಸಿ ವಾಸ್ತುದೈವಗಳನ್ನು ಪ್ರತಿಷ್ಠಾಪಿಸುತ್ತಾರೆ. ಎಲ್ಲ ಮನೆಗಳು ಒಂದು ವ್ಯವಸ್ಥೆಯಾಗಿ ಹೇಗಿರಬೇಕೆಂದು ನಿರ್ಧರಿಸುವಲ್ಲಿ ವಿಫಲರಾಗುತ್ತಾರೆ. ಇವರಿಗೆ ಆಧುನಿಕ ನಗರ ನಿರ್ಮಾಣ , ನಿರ್ಮಾಣ ಕುರಿತಾದ ಕಾನೂನುಗಳು ಅವುಗಳ ಹಿಂದಿರುವ ವೈಜ್ಞಾನಿಕ ಕಾರಣಗಳು ಏನೆಂದು ತಿಳಿದಿಲ್ಲ.  

ಹಾಗಾದರೆ ವಾಸ್ತುಶಾಸ್ತ್ರದ ಅಂತಿಮ ಫಲಿತಾಂಶ ಅಥವಾ ಗುರಿ ಏನೆಂಬ ಪ್ರಶ್ನೆ ನಮ್ಮೆದುರು ನಿಲ್ಲುತ್ತದೆ. ಜೀವನುದುದ್ದಕ್ಕೂ ಸಾವಿರಾರು ಧಾರ್ಮಿಕ , ಸಾಂಪ್ರದಾಯಿಕ ನಂಬಿಕೆ , ಆಚರಣೆಗಳಿಂದ ತುಂಬಿತುಳುಕುತ್ತಿರುವ ಇವುಗಳ ಮೂಲಕ ತಾತ್ಕಾಲಿಕ ಭಾವುಕ ತೃಪ್ತಿ ಪಡೆಯುತ್ತಿರುವ ನಮ್ಮ ಸಮಾಜದಲ್ಲಿ ‘ನನ್ನ ಮನೆ ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿದೆ’ ಎನ್ನುವ ಸಾಂದರ್ಭಿಕ ನೆಮ್ಮದಿಯನ್ನು ವಾಸ್ತುಶಾಸ್ತ್ರ ತರುತ್ತದೆ. ಆದರೆ ವಾಸ್ತವ ಜೀವನದ ಆಗು-ಹೋಗುಗಳೆದುರು  ಇದು ಸಹ ದೀರ್ಘ ಕಾಲ ನಿಲ್ಲದು.  ವಾಸ್ತುಶಾಸ್ತ್ರ ಜನರನ್ನು ಕಾಲದಲ್ಲಿ ಹಿಂದಕ್ಕೆಳೆದೊಯ್ದು ಭೌತಿಕ ಜಗತ್ತಿನ ವಸ್ತುನಿಷ್ಠತೆಯಿಂದ ಭ್ರಮಾತ್ಮಕ ಜಗತ್ತಿನತ್ತ ಸೆಳೆಯುತ್ತದೆ. ಯಾರದೇ ಜೀವನದಲ್ಲಿ ಸಹಜವಾಗಿ ಮೂಡಿಬರುವ ಏಳು-ಬೀಳುಗಳನ್ನು ಎಂದಿಗೂ ಕಾಣದ ಕಾರಣಗಳಿಗೆ ಒಪ್ಪಿಸುತ್ತದೆ. ಗೊತ್ತಿರುವ  ಸಂಗತಿಗಳನ್ನೂ  ಗೊತ್ತಿರದ , ಎಂದಿಗೂ ಗೊತ್ತಾಗದ ಸಂಪೂರ್ಣ ಅಜ್ಞಾತ ಸಂಗತಿಗಳಿಂದ ಮುಚ್ಚಿಡುತ್ತದೆ.  ಕಾರ್ಖಾನೆ ನಷ್ಟದಲ್ಲಿ ನಡೆಯುತ್ತಿರುವ ಕಾರಣಗಳು ಕಣ್ಣೆದುರಿಗಿರುವಾಗ ಅವುಗಳಿಗೆ ಕುಬೇರ , ಈಶಾನ್ಯರ ಮೂಲಕ ಪರಿಹಾರ ಪಡೆಯುವಲ್ಲಿ ನಸು ಬೆಳಕಿನಿಂದ ಕಗ್ಗತ್ತಲ ಕಡೆ ಸಾಗುವುದರ ಹೊರತು ಬೇರೆ ಯಾವ ಉದ್ದೇಶವು ಸಾಧನೆಯಾಗುವುದಿಲ್ಲ.. ಎಂದರೆ ಅಂತಿಮವಾಗಿ ವಾಸ್ತುಶಾಸ್ತ್ರ ನಂಬಿಕೆಯ ಮೇಲಿರುವ ಪೊಳ್ಳು ವಿದ್ಯೆಯಲ್ಲದೆ ಬೇರೆ ಆಗಿರಲು ಸಾಧ್ಯವಿಲ್ಲ.  ಆದರೆ ಅದು ವಾಸ್ತುಪಂಡಿತನಿಗೆ  ಜೀವನೋಪಾಯವನ್ನು ಒದಗಿಸಿ ಅವನನ್ನು ಬೆಳಕಿನತ್ತ ಒಯ್ಯುವುದಂತು ಖಂಡಿತ.

ವಾಸ್ತುಶಾಸ್ತ್ರದ ವಿಮರ್ಶೆಯೊಂದಿಗೆ ವಾಸ್ತುಪಂಡಿತರ ಇತಿಮಿತಿಗಳನ್ನು  ನಾವು ನೋಡದೆ ಹೋದರೆ ಅಪಚಾರವೆಸಗಿದಂತಾಗುತ್ತದೆ. ನಿರ್ಮಾಣ ಸಾಮಗ್ರಿ , ನಿರ್ಮಾಣ ತಂತ್ರಜ್ಞಾನ , ನಿರ್ಮಾಣದ ಹಂತಗಳು , ನಿರ್ಮಾಣದ ಸಾಮಾನ್ಯ ರೂಪು-ರೇಷೆಗಳನ್ನು  ಎಳ್ಳುಕಾಳು ಮುಳ್ಳುಮೊನೆಯಷ್ಟು ಅರಿಯದ ಇವರು ಭಾರ ಇಲ್ಲಿ ಹೆಚ್ಚಿರಬೇಕು , ಅಲ್ಲಿ ಕಡಿಮೆ ಇರಬೇಕು ಎಂದು ಬಡಬಡಿಸುವುದನ್ನು ಕಂಡರೆ ಕನಿಕರ ಉಂಟಾಗುತ್ತದೆ. ವಾಸ್ತುತಂತ್ರಜ್ಞ ರೂಪಿಸಿದ ಯೋಜನೆಯನ್ನು ಪರಿಗಣಿಸಿ ಸಿವಿಲ್ ಇಂಜಿನಿಯರ್ ಕಟ್ಟದ ರಚನೆಯ ವ್ಯವಸ್ಥೆ ,ಅದರ ಕಂಬ , ತೊಲೆಗಳ ಜಾಲ , ಬಳಕೆಯ ಆಧಾರದ ಮೇಲೆ  ಲೆಕ್ಕಾಚಾರಗಳಿಂದ ಯಾವ ಕಂಬಗಳಲ್ಲಿ ಎಷ್ಟು ಹೊರೆ ಬರುತ್ತದೆಯೆಂದು ನಿರ್ಧರಿಸುತ್ತಾನೆ. ಹೊರಗೆ ಕಾಣುವಂತೆ ಕಂಬಗಳಲ್ಲಿ ಭಾರಗಳು ಇರುವುದಿಲ್ಲ. ಅಷ್ಟೇ ಅಲ್ಲ ಕಟ್ಟಡಡ ರಚನೆಯ ವಿನ್ಯಾಸಗಳಲ್ಲಿ ಕಂಬಗಳ ಮೇಲೆ ಬರುವ ಹೊರೆಗಳಿಗಿಂತಲೂ  ಅವುಗಳಲ್ಲಿರುವ ಭ್ರಾಮ್ಯತೆ (MomentMoments) , ಕೃಶತೆ (SlendernessSlenderness ಇತ್ಯಾದಿ ಅಂಶಗಳು ಹೆಚ್ಚು ಪ್ರಭಾವಶಾಲಿಗಳಾಗಿರುತ್ತವೆ. ಇಳಿಜಾರಿನ ಛಾವಣಿಯ ಪರಿಕಲ್ಪನೆ ವಾಸ್ತುಶಾಸ್ತ್ರದಲ್ಲಿಲ್ಲ. ಇಂತಹ ರಚನೆಗಳನ್ನು ಆಧರಿಸಿರುವ ಕಂಬಗಳಲ್ಲಿ ನೇರ ಹೊರೆ ಹೆಚ್ಚಿಗಿರದಿದ್ದರು , ಬೇರೆ ರೀತಿಯಲ್ಲಿ ಮೇಳೈಸುವ ಬಲ ಮತ್ತು ಭ್ರಾಮ್ಯತೆಗಳು ನಿರ್ಧಾರಾತ್ಮಕವಾಗಿರುತ್ತವೆ. 

ವಾಸ್ತುಪಂಡಿತ ಏನೇ ಹೇಳಲಿ ಎಂತಹುದೇ ಪರಿಹಾರ ಸೂಚಿಸಲಿ-ಸಣ್ಣ ಮನೆಯ ಹೊರತು-ನಿಮ್ಮ ಮನೆಯನ್ನು ಮಾರ್ಪಡಿಸಲು ನೀವು  ಇಂಜಿನಿಯರ್ ಮೊರೆ ಹೋಗುತ್ತಿರಿ. ಇದರ ಅರ್ಥವೆಂದರೆ ವಾಸ್ತುಪಂಡಿತನನ್ನು ನೀವು ನಿಮ್ಮ ಭ್ರಮಾತ್ಮಕ ನಂಬಿಕೆಯ  ಮೂಲದ ಅಗತ್ಯಗಳಿಗೆ ಬಳಸಿಕೊಂಡು ನೈಜ ವಾಸ್ತವ ಸಂಗತಿಗಳಿಗೆ ವಸ್ತುನಿಷ್ಠ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಆದ್ದರಿಂದ ಆಧಾರವಿಲ್ಲದ ವಾಸ್ತುಶಾಸ್ತ್ರಡ ಮೊದಲ ಹಂತ ಅನಗತ್ಯ. ವಾಸ್ತುಶಾಸ್ತ್ರ ಮತ್ತು ವಾಸ್ತುಪಂಡಿತರು ಎಷ್ಟು ಅಪ್ರಸ್ತುತ ಎನ್ನುವುದನ್ನು ಸಣ್ಣ ಉದಾಹರಣೆಯ ಮೂಲಕ ನೋಡಬಹುದು. ಸಾಮಾನ್ಯವಾಗಿ ವಾಸ್ತುತಂತ್ರಜ್ಞ ರೂಪಿಸಿದ ಯೋಜನೆಯನ್ನು ವಾಸ್ತುಪಂಡಿತರಿಗೆ ತೋರಿಸುವ ಪರಿಪಾಠ ಇತ್ತೀಚಿಗೆ ವಿಕೃತ ಮಟ್ಟಕ್ಕೆ ಬೆಳೆದಿದೆ. ವಾಸ್ತುಪಂಡಿತರ ಜ್ಞಾನ ಎಂಟು ದಿಕ್ಕುಗಳಿಗೆ ಸೀಮಿತ . ವಾಸ್ತುತಂತ್ರಜ್ಞ ರೂಪಿಸಿದ ಯೋಜನೆಯನ್ನು ನೋಡಿ ಇದು ಅಲ್ಲಿರಬೇಕು , ಈ ಬಾಗಿಲು ಆ ಕಡೆ ತಿರುಗಿರಬೇಕು ಎನ್ನುವಂತಹ ಹೇಳಿಕೆಗಳನ್ನೇ ತಿರುಗಿಸಿ ತಿರುಗಿಸಿ ಹೇಳಬಲ್ಲನಷ್ಟೇ. ತಾನಾಗಿಯೇ ನಿಮಗೆ ಅನುಕೂಲಕರವಾದ , ಆಧುನಿಕ ಅಗತ್ಯಗಳನ್ನೂ ಪೂರೈಸಬಲ್ಲ ಒಂದು  ಯೋಜನೆಯನ್ನು ಸ್ವಯಂ ನೀಡಲಾರ.  ನಿರ್ಮಿಸಬೇಕೆಂದಿರುವ ಕಟ್ಟಡ ವಿಭಿನ್ನವಾದಷ್ಟು  , ಅದರ ಬಳಕೆ ಹೊಸತಾದಷ್ಟು ,   ಅದರ ಅಗತ್ಯತೆ ನಿರ್ದಿಷ್ಟವಾದಷ್ಟು ವಾಸ್ತುಪಂಡಿತ ಕಂಗಾಲಾಗುತ್ತಾನೆ. ಆದರೆ ವಾಸ್ತುತಂತ್ರಜ್ಞ ಅದನ್ನು ಕ್ರಮಬದ್ಧ ಮಾರ್ಗಗಳಿಂದ ಎದುರಿಸುತ್ತಾನೆ.ಕೆಲವರ್ಷಗಳ ಹಿಂದೆ ಸರ್ಕಾರ ನಿರ್ಮಿಸಲಿರುವ ಜ್ಞಾನ ನಗರ (Knowledge City) ಹೇಗಿರಬೇಕೆಂದು ವಾಸ್ತುಪಂಡಿತರೊಬ್ಬರು ಲೇಖನವನ್ನೂ ಬರೆದಿದ್ದಾರೆ. ಅಲ್ಲಿಯೂ ಸಹ ಅವರ ‘ಅಪಾರ ಜ್ಞಾನ’ ಎಂಟು ದಿಕ್ಕುಗಳನ್ನು , ದೈವಗಳನ್ನು ಮೀರಿ ಹೋಗಲಾಗಿಲ್ಲ. ಇದು ವಾಸ್ತುಶಾಸ್ತ್ರದ ಕೊರತೆ.

ಪ್ರತಿಯೊಬ್ಬ ಗ್ರಾಹಕನಿಗೂ ತಾನು ಖರೀದಿಸುವ ಉತ್ಪನ್ನ , ಪಡೆಯುವ ಸೇವೆಗೆ ಖಚಿತ ಫಲಿತಾಂಶ , ನಿರ್ದಿಷ್ಟ ಪರಿಣಾಮಗಳು ದಕ್ಕಬೇಕು. ಹಾಗಾದಾಗ ಮಾತ್ರ ಗ್ರಾಹಕ ತಾನು ಮಾಡಿದ ವೆಚ್ಚ , ಪಟ್ಟ ಪರಿಶ್ರಮ ಸಾರ್ಥಕವೇ ಅಲ್ಲವೇ ಎಂದು ನಿರ್ಧರಿಸಬಲ್ಲ. ವಾಸ್ತು ಮತ್ತು , ಜ್ಯೋತಿಷ್ಯಗಳಿಗೆ ಈ ಹಂಗುಗಳಿಲ್ಲ. ಯಾವುದೇ ಹೊಣೆಗಾರಿಕೆಯಿಲ್ಲ. ಲೌಕಿಕ ಸಮಸ್ಯೆಗಳನ್ನು    ಅಲೌಕಿಕಗೊಳಿಸಿ , ಫಲಿತಾಂಶಗಳನ್ನು ವ್ಯಕ್ತಿಗತಗೊಳಿಸಿ, ಹೊಣೆಗಾರಿಕೆಯನ್ನು ಹಣೆಬರಹ , ತಾರಾ-ಗ್ರಹಗಳಲ್ಲಿರಿಸಿ , ಭವಿಷ್ಯದ ನೆಮ್ಮದಿಯನ್ನು ಅತಾರ್ಕಿಕವಾಗಿ ಬಿಂಬಿಸುವ ವಾಸ್ತುಶಾಸ್ತ್ರ ಜೀವನದ  ಸಹಜವಾದ ಏಳು-ಬೀಳುಗಳನ್ನು ಮುಖಾಮುಖಿಯಾಗಿ ಎದುರಿಸದೆ ಮಾನಸಿಕ ದುರ್ಬಲರನ್ನಾಗಿ ಮಾಡುತ್ತದೆ. 

ವಾಸ್ತುಶಾಸ್ತ್ರಗಳಲ್ಲಿರುವ ಮನೆಯನ್ನು ಯೋಜಿಸುವ ವಿಧಾನ ಮತ್ತು ಇತರ ಬಹುತೇಕ ಮಾರ್ಗದರ್ಶಿ  ಸೂತ್ರಗಳು ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಇವೆಯೆಂದು ವಾಸ್ತುಪಂಡಿತರು ಯಾವ ಸಂಕೋಚವೂ ಇಲ್ಲದೆ ಘಂಟಾಘೋಷವಾಗಿ ಸಾರುತ್ತಾರೆ. ಆದರೆ ವಾಸ್ತುಶಾಸ್ತ್ರದಲ್ಲಿರುವ ಯಾವ ತತ್ವವನ್ನು ಇಲ್ಲಿಯವರೆಗೂ ಯಾವ ಪಂಡಿತನೂ ವೈಜ್ಞಾನಿಕ ಮಾರ್ಗಗಳಾದ ಪ್ರಯೋಗ-ದತ್ತಾಂಶ ಸಂಗ್ರಹ-ವಿಶ್ಲೇಷಣೆ –ಪರಿಷ್ಕರಣೆ-ವಾದ–ಸಿದ್ಧಾಂತಗಳ  ಮಾರ್ಗಗಳಿಂದ ಸಾಧಿಸಿ ತೋರಿಸಿಲ್ಲ. ಪ್ರತಿಸಲ ವೈಚಾರಿಕ ನೆಲೆಗಟ್ಟಿನಲ್ಲಿ ಪ್ರಶ್ನಿಸಿದಾಗ ವೇದೋಪನಿಷತ್ತುಗಳಲ್ಲಿ  ,ಪುರಾಣದ ಕಥೆಗಳಲ್ಲಿ ಮರೆಯಾಗುತ್ತಾರೆ. ಮುಂದಿನ ಪುಟಗಳಲ್ಲಿ ವಾಸ್ತುಶಾಸ್ತ್ರದಲ್ಲಿ ಏನಿದೆ , ಅದು ವೈಜ್ನಾನಿಕವೇ , ಈ ಕಾಲಕ್ಕೆ ಅದು ಪ್ರಸ್ತುತವೆ ಎನ್ನುವುದನ್ನು ವಾಸ್ತುಶಾಸ್ತ್ರವನ್ನು ಪರಿಚಯಿಸುತ್ತಲೇ ಅನಾವರಣಗೊಳಿಸುವ ಯತ್ನ ಮಾಡಲಾಗಿದೆ. 

 
This website was created for free with Own-Free-Website.com. Would you also like to have your own website?
Sign up for free