ದ್ವಾದಶ ಭಾವಗಳು
ದ್ವಾದಶ ಭಾವ ವಿಚಾರ
ಈ ಮಾಲಿಕೆಯ ಹಿಂದಿನ ಲೇಖನದಲ್ಲಿ ದ್ವಾದಶ ಭಾವಗಳ ಸಂಜ್ಞೆ ಮತ್ತು ಕೇಂದ್ರಾದಿ ಭಾವಗಳ ಪರಿಚಯಮಾಡಿಕೊಂಡದ್ದಾಯಿತು. ಈ ಲೇಖನದಲ್ಲಿ ಈ ಹನ್ನೆರಡು ಭಾವಗಳಿಂದ ಯಾವ ಯಾವ ವಿಚಾರಗಳನ್ನು ಮಾಡಬೇಕು ಎಂಬುವುದನ್ನು ನೋಡೋಣ. ಪ್ರಾಯಶಃ ಎಲ್ಲ ಜ್ಯೋತಿಷ್ಯ ಗ್ರಂಥಗಳಲ್ಲಿ ಈ ಬೆಗ್ಗೆ ಅನೇಕ ವಿಚಾರಗಳನ್ನು ಹೇಳಲಾಗಿದೆ. ಈ ಲೇಖನಕ್ಕಾಗಿ ನಾನು ಪರಾಶರ ಹೋರಾ ಮತವನ್ನು ಅನುಸರಿಸಿದ್ದೇನೆ. (ಇದು ಪ್ರಾಚೀನ ಮತ್ತು ಪ್ರಚಲಿತ.)
ಲಗ್ನಭಾವದಿಂದ ಶರೀರ (ತನು), ರೂಪ, ಬಲಾಬಲ, ಸುಖ-ದುಃಖ, ಸ್ವಭಾವಾದಿಗಳನ್ನು ವಿವೇಚಿಸಬೇಕು.
ದ್ವಿತೀಯ ಭಾವದಿಂದ – ಧನ-ಧಾನ್ಯ, ಕುಟುಂಬ, ಮೃತ್ಯು, ಶತ್ರು, ಧಾತು, ರತ್ನ
ತೃತೀಯ ಭಾವದಿಂದ – ಪರಾಕ್ರಮ, ಭೃತ್ಯ (ಸೇವಕರು), ಅಣ್ಣತಮ್ಮಂದಿರು, ಉಪದೇಶ, ಯಾತ್ರೆ, ತಂದೆ-ತಾಯಿಗಳ ಮರಣ
ಚತುರ್ಥ ಭಾವದಿಂದ – ವಾಹನ, ಬಂಧುಗಳು, ತಾಯಿಯ ಸೌಖ್ಯ, ನಿಧಿ, ಗೃಹಸುಖ, ಬೇಸಾಯ
ಪಂಚಮ ಭಾವದಿಂದ – ಯಂತ್ರ, ಮಂತ್ರ, ವಿದ್ಯೆ, ಬುದ್ಧಿ, ಪುತ್ರ, ರಾಜ್ಯ, ಹಾನಿ
ಷಷ್ಠ್ಯ ಭಾವದಿಂದ – ಶಂಕೆ, ಶತ್ರುಗಳು, ವ್ರಣಗಳು, ರೋಗಗಳು, ಸೋದರಮಾವನ ಮರಣ ವಿಚಾರ, ಪತ್ನಿ, ಅತ್ತೆ ಆದಿ ಸಂಭಂದಿಕರು
ಸಪ್ತಮ ಭಾವದಿಂದ – ಹೆಂಡತಿ, ಯಾತ್ರೆ, ವಾಣಿಜ್ಯ (ವ್ಯಾಪಾರ), ನಷ್ಟದೃಷ್ಟಿ, ತನ್ನ ಮರಣ
ಅಷ್ಟಮ ಭಾವದಿಂದ – ಆಯುಷ್ಯ, ಸಂಗ್ರಾಮ, ಶತ್ರು, ದುರ್ಗ, ಕಳೆದುಕೊಂಡ ಸಂಪತ್ತು, ಪೂರ್ವಜನ್ಮ ವಿಚಾರ
ನವಮ ಭಾವದಿಂದ – ಭಾಗ್ಯ, ಧರ್ಮ, ತೀರ್ಥಯಾತ್ರೆ, ದೈವಕೃಪೆ
ದಶಮ ಭಾವದಿಂದ – ಕರ್ಮ, ರಾಜ್ಯ, ಮಾನ, ತಂದೆ, ಪಿತೃಗಳು, ವಿದೇಶವಾಸ, ಋಣ (ಸಾಲ)
ಏಕಾದಶ ಭಾವದಿಂದ – ಪುತ್ರ, ಸ್ತ್ರೀ, ಕುಟುಂಬ, ಆಯ (ಲಾಭ), ವೃದ್ಧಿ, ಪಶು ಸಮೃದ್ಧಿ
ದ್ವಾದಶ ಭಾವದಿಂದ – ವ್ಯಯ, ಶತ್ರುಗಳು, ಖರ್ಚುಗಳು, ದುಃಖ, ನಷ್ಟ ಇತ್ಯಾದಿ.
ಯಾವುದೇ ಭಾವವು ಶುಭಗ್ರಹದಿಂದ ಸ್ಥಿತ, ದೃಷ್ಟ ಅಥವಾ ತನ್ನ ರಾಶಿಯ ಸ್ವಾಮಿಯಿಂದ ಸ್ಥಿತ ಅಥವಾ ದೃಷ್ಟವಾದರೆ, ಯುವಾದಿ ಶುಭ ಅವಸ್ಥೆಗಳಲ್ಲಿರುವಾಗ, ಆ ಭಾವದ ವೃದ್ಧಿಯಾಗುತ್ತದೆ. ಇದರ ವಿಪರೀತ ಸ್ಥಿತಿಯಿರುವಾಗ ಫಲ ಸಹ ವಿಪರೀತವಾಗಿರುತ್ತದೆ.
ಈ ಮೇಲೆ ಹೇಳಲ್ಪಟ್ಟ ವಿಚಾರಗಳಲ್ಲದೆ ಇನ್ನೂ ಅನೇಕ ಸೂಕ್ಷ್ಮ ವಿಷಯಗಳನ್ನು ಲಗ್ನಾದಿ ದ್ವಾದಶಭಾವಗಳಿಂದ ತಿಳಿಯಬಹುದು. ಮುಂದಿನ ಲೇಖನಗಳಲ್ಲಿ ಈ ದ್ವಾದಶ ಭಾವಗಳನ್ನು ಒಂದೊಂದಾಗಿ ವಿವರವಾಗಿ ನೋಡೋಣ.
ಲಗ್ನಾದಿ ದ್ವಾದಶ ಭಾವಗಳು-ಸ್ಥಾನಗಳು
ಜಾತಕ ಅಥವಾ ಕುಂಡಲಿಗಳಲ್ಲಿ ಹನ್ನೆರಡು ಮನೆಗಳಿರುತ್ತವೆ, ಅವುಗಳನ್ನು ಭಾವ ಅಥವಾ ಸ್ಥಾನಗಳೆಂದು ಕರೆಯಲಾಗುತ್ತದೆ. ಈ ಹನ್ನೆರಡು ಭಾವಗಳು ಮನುಷ್ಯನ ಜೀವನದ ವಿವಿಧ ವಿಷಯಗಳ ಸೂಚಕಗಳಾಗಿವೆ. ದ್ವಾದಶ ಭಾವಗಳ ಸೂಕ್ಷ್ಮ ಪರಿಚಯವು ಜ್ಯೋತಿಷ್ಯ ಮತ್ತು ಫಲನಿರ್ದೇಶಕ್ಕೆ ಅತ್ಯಂತ ಅವಶ್ಯಕ. ಈ ಲೇಖನದಲ್ಲಿ ಇವುಗಳ ಸ್ಥೂಲ ಪರಿಚಯವನ್ನು ಮಾಡಿಕೊಳ್ಳೋಣ. ನಮ್ಮ ದೇಶದಲ್ಲಿ ಜಾತಕವನ್ನು ಬರೆಯುವ ಅನೇಕ ಪ್ರಕಾರಗಳಿವೆ. ಮುಖ್ಯವಾಗಿ ಉತ್ತರದೇಶ ಮತ್ತು ದಕ್ಷಿಣದೇಶೀಯ ಎಂಬ ಎರಡು ಪ್ರಕಾರಗಳು ಪ್ರಸಿದ್ಧ. ನಾನು ಹೆಚ್ಚು ಉತ್ತರದೇಶೀಯ ಕುಂಡಲಿಪ್ರಕಾರವನ್ನು ಅನುಸರಿಸುತ್ತೇನೆ, ಈ ಪ್ರಕಾರಕ್ಕೆ ಕೆಲವು ಸೌಲಭ್ಯಗಳಿವೆ. ಆದರೆ ಎಲ್ಲ ಲೇಖನಗಳಲ್ಲಿ ಮೇಲೆ ಹೇಳಿದ ಎರಡೂ ಪ್ರಕಾರಗಳನ್ನು ಕೊಡುತ್ತೇನೆ. (ಕೆಳಗೆ ಕೊಟ್ಟಿರುವ ಎರಡು ಚಿತ್ರಗಳನ್ನು ನೋಡಿ, ಸ್ಥಾನಗಳನ್ನು ಎಣಿಸುವ ಪ್ರಕಾರವನ್ನು ತಿಳಿದುಕೊಳ್ಳಿ). ಈ ಜಾತಕಗಳನ್ನು ನೋಡುವ (ಅಥವಾ ಓದುವ) ರೀತಿಯು ಸ್ವಲ್ಪ ಭಿನ್ನವಾಗಿದ್ದು ಈ ಬಗ್ಗೆ ಮುಂಬರುವ ಲೇಖನಗಳಲ್ಲಿ ಹೇಳುತ್ತೇನೆ.
ಜಾತಕವನ್ನು ಜನ್ಮ ಕುಂಡಲಿ, ಜನ್ಮ ಪತ್ರಿಕೆ, ಜನ್ಮ ಚಕ್ರ ಇತ್ಯಾದಿ ದೇಶ-ಭಾಷಾನುಸಾರಿಯಾಗಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಜನ್ಮ ಸಮಯದ ಗ್ರಹಗಳ ಗತಿ ಮತ್ತು ಆಕಾಶದಲ್ಲಿ ಅವುಗಳ ಸ್ಥಾನವಿಶೇಷಗಳನ್ನು ಗಣಿತಾಗತವಾಗಿ ಚಿತ್ರಿಸುವುದನ್ನೆ ಜಾತಕವೆಂದು ಸ್ಥೂಲವಾಗಿ ಕರೆಯಬಹುದು. ಜಾತಕಗಳ ರಚನೆಗೆ ಪಂಚಾಂಗಗಳು ಅವಶ್ಯಕ.
ಹೋರಾದಯಸ್ತನುಕುಟುಂಬಸಹೋತ್ಥಬಂಧು-
ಪುತ್ರಾರಿಪತ್ನಿಮರಣಾನಿ ಶುಭಾಸ್ಪದಾಯಾಃ |
ರಿಃಫಾಖ್ಯಮಿತ್ಯುಪಚಯಾನ್ಯರಿಕರ್ಮಲಾಭ-
ದುಶ್ಚಿಕ್ಯಸಂಜ್ಞಿತಗೃಹಾಣಿ ನ ನಿತ್ಯಮೇಕೇ || (ಬೃಹಜ್ಜಾತಕ ೧-೧೫)
ಕುಂಡಲಿಯ ಮೊದಲನೇಯ ಮನೆಯನ್ನು ಲಗ್ನವೆಂದು ಕರೆಯಲಾಗುತ್ತದೆ. ಇದು ಜನ್ಮಕಾಲದಲ್ಲಿ ಪೂರ್ವದಿಕ್ಕಿನಲ್ಲಿ ರಾಶಿಚಕ್ರದ ಮೇಲೆ ಉದಯಿಸುವ ಬಿಂದುವಾಗಿರುತ್ತದೆ (ಇದರ ಬಗ್ಗೆ ಮುಂದೆ ನೋಡೋಣ). ಲಗ್ನವನ್ನು ತನುವೆಂದು, ಎರಡನೇಯ ಮನೆಯನ್ನು ಕುಟುಂಬ, ಮೂರನ್ನು ಸಹೋತ್ಥ (ಭ್ರಾತಾ), ನಾಲ್ಕನ್ನು ಬಂಧು, ಐದನ್ನು ಪುತ್ರ, ಆರನ್ನು ಅರಿ (ಶತ್ರು), ಎಳನ್ನು ಪತ್ನಿ, ಎಂಟನ್ನು ಮರಣ, ಒಂಬತ್ತನ್ನು ಶುಭ, ಹತ್ತನ್ನು ಆಸ್ಪದ, ಹನ್ನೊಂದನ್ನು ಆಯ ಮತ್ತು ಹನ್ನೆರಡನೇಯ ಮನೆಯನ್ನು ರಿಃಫವೆಂದು ಕರೆಯಲಾಗುತ್ತದೆ.
ಈ ಸ್ಥಾನಗಳಿಗೆ ಭಾವವೆಂಬ ಸಂಜ್ಞೆಯು ಇರುತ್ತದೆ. ಮೇಲೆ ಹೆಳಲ್ಪಟ್ಟ ಸ್ಥಾನಗಳಿಗೆ ಜ್ಯೋತಿಷ್ಯದಲ್ಲಿ ಅನೇಕ ಪಾರಿಭಾಷಿಕ ಸಂಜ್ಞೆಗಳಿವೆ, ಅವುಗಳನ್ನು ಭಾವಗಳಿಂದ ಸೂಚಿತ ಕಾರಕತ್ವವೆಂದು ಸ್ಥೂಲವಾಗು ಹೇಳಬಹುದು. ಹನ್ನೆರಡು ಭಾವಗಳಿಂದ ತಿಳಿಯಲ್ಪಡುವ ವಿಷಯಗಳನ್ನು ಮುಂದಿನ ಲೇಖನದಲ್ಲಿ ನೋಡೋಣ.
ಮೇಲ್ಕಂಡ ಹನ್ನೆರಡು ಮನೆಗಳ ಪೈಕಿ ಕೆಲವನ್ನು ಸೇರಿಸಿಕೊಂಡು ಅನೇಕ ಸಂಜ್ಞೆಗಳನ್ನು ಮಾಡಲಾಗಿದೆ. ಉದಾಹರಣೆಗೆ ಕೇಂದ್ರವೆಂದರೆ 1,4,7,10ನೇಯ ಸ್ಥಾನಗಳು. ಇವುಗಳಲ್ಲಿ ಮಹತ್ವವಾದವುಗಳನ್ನು ನೋಡೋಣ.
ಕೇಂದ್ರ: 1-4-7-10, ಪಣಪರ: 2-5-8-11, ಆಪೋಕ್ಲಿಮ: 3-6-9-12
ತ್ರಿಕೋಣ: 5-9, ಉಪಚಯ: 3-6-10-11, ಅನುಪಚಯ: ಉಪಚಯಗಳನ್ನು ಹೊರತುಪಡಿಸಿ ಉಳಿದ ಸ್ಥಾನಗಳು,
ಇವುಗಳಲ್ಲದೇ ಇನ್ನೂ ಅನೇಕ ಸಂಜ್ಞೆಗಳಿರುತ್ತವೆ, ಪ್ರಾಸಂಗಿಕವಾಗಿ ಅವುಗಳ ಬಗ್ಗೆ ತಿಳಿದುಕೊಳ್ಳೋಣ