ಕೇಳೋ ಶಿಷ್ಯ ನಿನ್ನ ಭವಿಷ್ಯ
ಮೇಷ: ಈ ವರ್ಷ ನೀವು ಟಗರಿನಂತೆ ದಷ್ಟಪುಷ್ಟ ದೇಹವುಳ್ಳವರಾಗುವಿರಿ. ಅಂದರೆ ನಿಮಗೆ ಹೆಚ್ಚಿನ ಸಲ ಬೇರೆಯವರ ಬಿಲ್ಲಿನಲ್ಲಿ ಬಿಟ್ಟಿ ಊಟ ಮಾಡುವ ಭಾಗ್ಯವಿದೆ. ನಿಮ್ಮ ಹೊಟ್ಟೆ ನಿಮಗಿಂತ ಹೆಚ್ಚು ಪ್ರಗತಿ ಸಾಧಿಸಲಿದೆ. ನಿಮ್ಮವರು ನಿಮಗೆ ಫ್ಲೈಯಿಂಗ್ ಕಿಸ್ ಮಾತ್ರ ಕೊಡೋ ಸ್ಥಿತಿ ನಿರ್ಮಾಣವಾಗಲಿದೆ. ವರ್ಷವಿಡೀ ಖಿನ್ನತೆ ಆವರಿಸಲಿದೆ.
ಸಲಹೆ: ವಾರಕ್ಕೊಮ್ಮೆ ವೃಕೋದರನ ಹೆಸರಲ್ಲಿ ಉಪವಾಸ ವ್ರತ ಕೈಗೊಂಡರೆ ನಿಮ್ಮ ಕಷ್ಟಗಳು ಕಡಿಮೆಯಾಗುತ್ತವೆ.
ವೃಷಭ: ಮುಂದೆ ಬಂದರೆ ಹಾಯುವ ಮತ್ತು ಹಿಂದೆ ಬಂದರೆ ಒದೆಯುವ ಸ್ವಭಾವದ ನೀವು ಎದುರು ಸಿಟ್ಟಿನ ಕೋಪಿಷ್ಟರೆಂದೇ ಪ್ರಸಿದ್ಧರು. ಯಾರೋ ಯಾರಿಗೋ ಬುಲ್ಬುಲ್ ಎಂದು ಕರೆದರೂ ತಮಗೇ ಹೇಳಿದ್ದೆಂದು ಭಾವಿಸಿ ಹಿಂತಿರುಗಿ ಹೋಗಿ ಕಾಲ್ಕೆರೆದು ಜಗಳಕ್ಕೆ ನಿಲ್ಲುವ ಸ್ವಭಾವದಿಂದಾಗಿ ನೀವು ಈ ವರ್ಷವಿಡೀ ಬೇರೆಯವರಿಗೆ ಕಿರಿಕಿರಿ ಕೊಡುವಿರಿ.
ಸಲಹೆ: ಎತ್ತು ಏರಿಗೆ ಎಳೆಯಿತು ಅನ್ನೋ ಥರಾ ಎಲ್ಲದಕ್ಕೂ ಅಡ್ಡದಾರಿಗೆ ಎಳಿಯಬೇಡಿ. ಬುಲ್ಟೆಂಪಲ್ಗೆ ಹೋಗಿ ಹರಕೆ ಹೊತ್ತುಕೊಳ್ಳಿ.
ಮಿಥುನ- ಯಾವಾಗಲೂ ನಿಮ್ಮವರು ನಿಮ್ಮ ಮೈಗೆ ಮೈ ಅಂಟಿಸಿಕೊಂಡೇ ಇರಬೇಕು ಅಂತ ಯಾಕೆ ಅಂದ್ಕೋತೀರಿ ಸದಾಶಿವನಿಗೆ ಅದೇ ಧ್ಯಾನ ಅನ್ನೋ ಥರಾ ಇರ್ಬೇಡೀಪಾ... ಚೆನ್ನಾಗಿರೋಲ್ಲ ಅಂತ ಎಷ್ಟು ಹೇಳಿದರೂ ನೀವು ಕೇಳೋರಲ್ಲ ಬಿಡಿ. ಈ ವರ್ಷ ನಿಮಗೆ ಸಣ್ಣ ಪುಟ್ಟ ಗಂಡಾಂತರ ಕಾದಿದೆ. ಆಹಾರ, ನಿದ್ರೆ, ಮತ್ತೊಂದು ಈ ಮೂರೂ ಕಡಿಮೆಯಾಗೋದ್ರಿಂದ ಭಯ ಸಹಜವಾಗಿಯೇ ಹೆಚ್ಚುವುದು.
ಸಲಹೆ: ಅರ್ಧ ನಾರೀಶ್ವರನ ಸೇವೆ ಮಾಡಿ. ಪೂರ್ಣ ಫಲ ದೊರೆಯುತ್ತದೆ.
ಕರ್ಕ- ನೀವು ಯಾವತ್ತೂ ವಟವಟಗುಡುವ ವಾಗ್ಮಿಗಳಾಗಿದ್ದರೂ ಕೆಲವರಿಗೆ ನೀವು ಕರಕರೆ ರಾಶಿಯವರು ಎನ್ನಿಸಬಹುದು. ಅದಕ್ಕೆ ತಲೆಕೆಡಿಸಿಕೊಳ್ಳದೇ ನಿಮ್ಮ ಕೊಕ್ಕೆಯಂಥಾ ಕೈ ಕಾಲುಗಳಿಂದ ಶತ್ರುಗಳ ಮೇಲೆ ಹಿಡಿತ ಸಾಧಿಸುವಿರಿ. ಹುಷಾರು, ಯಾರ ಬಾಯಿಗೂ ಆಹಾರವಾಗಬೇಡಿ.
ಸಲಹೆ: ಬಾಯಿಗೊಂಚೂರು ಸೈಲೆನ್ಸರ್ ಅಳವಡಿಸಿಕೊಳ್ಳೀಪಾ.
ಸಿಂಹ- ನಿಮಗೆ ನಿಮ್ಮ ಗಡ್ಡವೇನೋ ಚೆನ್ನಾಗಿ ಕಾಣುತ್ತದೆ. ಹಾಗಂತ ಗಡ್ಡ ಕೆರೆದುಕೊಳ್ಳುತ್ತಾ ಸುಮ್ಮನೇ ಕೂರುವ ಸ್ವಭಾವದವರು ನೀವು. ಯಾರೂ ಹತ್ತಿರ ಸುಳಿಯದೇ ಏಕಾಂಗಿತನ ಕಾಡಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಜಿಂಕೆಮರಿಗಳು ನಿಮ್ಮನ್ನು ನೋಡಿ ದೂರದಿಂದಲೇ ಓಡಿ ಹೋಗಲಿವೆ. ಹಾಗಂತ ಸುಮ್ಮನೇ ಕೂತರೆ ಬೇಟೆ ಬಾಯಿಗೆ ಬಂದು ಬೀಳುವುದಿಲ್ಲ. ಜಿಂಕೆಗಳ ಹಿಂದೆ ತಿರುಗಿ ಅವರನ್ನು ಸೆಳೆಯಲು ನೋಡಿ.
ಸಲಹೆ: ದುರ್ಗಿಯ ಆರಾಧನೆ ಮಾಡಿ.
ಕನ್ಯಾ- ಈ ರಾಶಿಯವರು ಶೀಲಂ ಸರ್ವತ್ರ ವೈ ಧನಂ ಅನ್ನೋವಂತೆ ನಡತೆಗೆ ಹೆಚ್ಚು ಪ್ರಾಮುಖ್ಯ ಕೊಡುವುದರಿಂದ ಎಲ್ಲೆಡೆ ಗೌರವಾದರ ಪಡೆಯುವರು. ಆದರೆ ಕನ್ಯಾ ರಾಶಿಯ ಕನ್ಯೆಯರಿಗೆ ಗಂಡುಗಲಿಗಳು ಸಿಗುವುದು ವಿಳಂಬವಾಗಿ ಈ ವರ್ಷವೂ ನೀವು ಕನ್ಯೆಯರಾಗಿಯೇ ಇರುವ ಛಾನ್ಸ್ ಇದೆ. ಈ ರಾಶಿಯ ಗಂಡುಗಳಿಗೂ ಕನ್ಯಾಮಣಿಗಳು ಸಿಗದೇ ಇರುವ ಸಂಭವವಿರುವುದರಿಂದ ವರ್ಷಪೂರ್ತಿ ಸುಖ ಸಂತೋಷಗಳು ಅವ್ಯಾಹತವಾಗಿ ತುಂಬಿ ತುಳುಕಲಿದೆ.
ಸಲಹೆ: ಗಣಪತಿ ಅಥವಾ ಆಂಜನೇಯನ ಪ್ರದಕ್ಷಿಣೆ ಹಾಕಿದರೆ ಸಮಸ್ಯೆಗಳು ಪರಿಹಾರವಾಗಲಿವೆ.
ತುಲಾ- ಅದೆಷ್ಟು ಚಂಚಲ ಮನಸ್ಸು ಕಣ್ರೀ ನಿಮ್ಮದು... ತಕ್ಕಡಿಯಾದ್ರೂ ಕೆಲವೊಮ್ಮೆ ಸ್ಥಿರವಾಗುತ್ತೆ. ನೀವು ಮಾತ್ರ ಹಾಗಲ್ಲ. ದೇವಸ್ಥಾನಕ್ಕೆ ಅಂತ ಹೊರಟವ್ರು ಸಂತೆಗೆ ಹೋಗಿ ದುಡ್ಡೆಲ್ಲ ಖರ್ಚು ಮಾಡಿಕೊಂಡು ಅದೇ ಬೇಜಾರಿನಲ್ಲಿ ಬಾರಿನಲ್ಲಿ ಸಾಲ ಮಾಡಿಕೊಂಡು ಹೆಂಡತಿಯಿಂದಲೂ ಬೈಸಿಕೊಳ್ಳುವಿರಿ.
ಸಲಹೆ: ತೂಗಾಟ, ತೂರಾಟ ಬಿಡುವ ಸಂಕಲ್ಪ ಮಾಡಿ, ಚಂಚಲಾಧೀಶ್ವರಿ ಮಹಾಲಕ್ಷ್ಮಿಉಪಾಸಿಸಿ.
ವೃಶ್ಚಿಕ- ಹಲ್ಲುದುರಿದರೂ ಬಾಲದಿಂದ ಕಚ್ಚುತ್ತೇನೆ ಎನ್ನುವ ಡೇಂಜರ್ ವ್ಯಕ್ತಿತ್ವದ ನೀವು ಹಗೆತನ ಸಾಧಿಸುವಲ್ಲಿ ಪರಿಣಿತರು. ನಿಮ್ಮಿಂದ ಕಚ್ಚಿಸಿಕೊಂಡವರು ಬದುಕುವವರು ಕಡಿಮೆಯೇ. ಈ ವರ್ಷವಿಡೀ ನೀವು ಕೋರ್ಟು ಖಟ್ಲೆಗಳಲ್ಲಿ ಜಯ ಸಾಧಿಸುವಿರಿ. ಆದರೆ ದುಡ್ಡು ಕಳಕೊಳ್ಳೋದು ಗ್ಯಾರಂಟಿ.
ಸಲಹೆ: ನಾಗಾರಾಧನೆ ಮಾಡಿ. ವಿಷಕ್ಕೆ ವಿಷವೇ ಮದ್ದು.
ಧನುಸ್ಸು- ಕಂಡ ಕಂಡವರೆದುರೆಲ್ಲಾ ತಗ್ಗಿ ಬಗ್ಗಿ ದೈನ್ಯತೆಗೆ ಸಿಲುಕುವಿರಿ. ನಿಮ್ಮ ವಿನಯತೆಯೇ ನಿಮಗೆ ಮುಳುವಾಗಬಹುದು. ಆಗಾಗ ಸಮಯಕ್ಕೆ ತಕ್ಕಂತೆ ಬಾಣ ಪ್ರಯೋಗ ಮಾಡುತ್ತಾ ಇರಿ. ನಿಮ್ಮ ಸಾಮರ್ಥ್ಯದ ಪ್ರದರ್ಶನ ಆಗುತ್ತಿರಲಿ. ಈ ವರ್ಷ ಆರ್ಚರಿ ವಿಭಾಗದ ಕ್ರೀಡಾಳುಗಳಿಗೆ ಶುಭಫಲವಿದೆ.
ಸಲಹೆ: ಶಿವಧನುಸ್ಸನ್ನು ಮುರಿದ ರಾಮನ ಧ್ಯಾನ ಮಾಡಿದರೆ ಆರಾಮವಾಗಿರಬಹುದು.
ಮಕರ- ನಿಮ್ಮನ್ನು ಯಾರೂ ನಂಬುವುದಿಲ್ಲ. ನೀವು ಅತ್ತರೂ ನಿಮ್ಮದು ಮೊಸಳೆ ಕಣ್ಣೀರು ಎಂದು ಜನ ಹಂಗಿಸುತ್ತಾರೆ. ಈ ವರ್ಷದ ಉತ್ತರಾರ್ಧದ ಮಳೆಗಾಲದಲ್ಲಿ ನಿಮಗೆ ಸುಭಿಕ್ಷೆ ಕಾದಿದೆ. ಜೂನ್ನಂತರ ನಿಮ್ಮ ಜೋಳಿಗೆ ತುಂಬಲಿದೆ. ಆದರೆ ಟೇಬಲ್ ಕೆಳಗೆ ಕೈ ಚಾಚಿ ಸಿಕ್ಕಿಬೀಳಬೇಡಿ. ನೀವು ಅತ್ತರೂ ಯಾರೂ ಬರಲ್ಲ.
ಸಲಹೆ: ಮಕರ ತಿಂಗಳಿನಲ್ಲಿ ವಿಷ್ಣುವಿನ ಪೂಜೆ ಮಾಡಿಸಿ.
ಕುಂಭ- ತುಂಬಿದರೆ ತುಳುಕುವುದಿಲ್ಲ. ತುಂಬದಿದ್ದರೆ ಮಾತ್ರ ನೀವು ಮಹಾಘಟ. ನಿಮ್ಮ ಕೊಡದಂಥ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಸ್ವಲ್ಪ ಪರಿಶ್ರಮಬೇಕಾಗಬಹುದು. ಕೊಡವನ್ನು ಎಲ್ಲೂ ಸೋರದಂತೆ ನೋಡಿಕೊಂಡರೆ ಮಾತ್ರ ಈ ವರ್ಷ ಸುಖವಾಗಿರಬಹುದು. ಇಲ್ಲದಿದ್ದರೆ ಸಾಲಗಾರರಾಗುವ ಮೂಲಕ ತೆನಾಲಿ ರಾಮನಂತೆ ಗಡಿಗೆಯಲ್ಲಿ ತಲೆ ಮುಚ್ಚಿಕೊಂಡು ತಿರುಗಾಡಬೇಕಾದೀತು.
- ಸಲಹೆ: ಕುಂಭಕರ್ಣನನ್ನು ಪ್ರಾರ್ಥಿಸಿ.
ಮೀನ- ನೀವಿರುವ ಜಾಗದಿಂದ ಹೊರ ಬಂದರೆ ನಿಮಗೆ ಉಸಿರುಕಟ್ಟಿಸುವ ವಾತಾವರಣವೆನ್ನಿಸುವುದರಿಂದ ಫಾರಿನ್ನಿಗೆ ಹೋಗುವ ಅವಕಾಶ ಬಂದರೂ ತಿರಸ್ಕರಿಸುವ ಸಂಭವವಿದೆ. ಏಪ್ರಿಲ್, ಮೇ ಬೇಸಿಗೆಯಲ್ಲಿ ಕೆಲಸದ ಸ್ಥಾನ ಬದಲಿಸಬೇಕಾದ ಸಂದರ್ಭಕ್ಕೆ ರೆಡಿಯಾಗಿರಿ. ಮೋಸದ ಗಾಳಕ್ಕೆ ಬೀಳುವ ಸಂಭವವಿರುವುದರಿಂದ ಇದ್ದಲ್ಲೇ ತಿಮಿಂಗಿಲಗಳಾಗುವ ಬಗ್ಗೆ ಯೋಚಿಸಿ
.
ಸಲಹೆ: ದುರ್ಗಿಯ ಆರಾಧನೆ ಮಾಡಿ.