ರಾಶಿ ಲಕ್ಷಣ
ಹನ್ನೆರಡು ರಾಶಿಗಳ ಗುಣಾವಗುಣ
ಮೇಷ: ಈ ರಾಶಿಯ ಅಧಿಪತಿ ಅಂಗಾರಕ. ಜಾತಕನಿಗೆ ಯಾವಾಗಲೂ ಸಾಹಸದಿಂದ ಮುನ್ನಡೆಯುವ ಸ್ವಭಾವ. ಧೈರ್ಯ, ಶೌರ್ಯ ಗಾಂಭೀರ್ಯ, ಮುಂಗೋಪ, ಹಠಮಾರಿತನ, ಸ್ವಾಭಿಮಾನವಿರುತ್ತದೆ. ಹಿಡಿದ ಕೆಲಸ ಆಗುವವರೆಗೂ ಬಿಡುವುದಿಲ್ಲ. ಜಗಳಕ್ಕೆ ಹೆಸರುವಾಸಿ.
ವೃಷಭ: ಇದರ ಅಧಿಪತಿ ಶುಕ್ರ. ಆದ್ದರಿಂದ ಜಾತಕನು ಬಹುಬೇಗ ಎಲ್ಲರನ್ನೂ ಆಕರ್ಷಿಸುತ್ತಾನೆ. ಮಾತಿನಲ್ಲಿ ಬಹಳ ಹರಿತ. ಸ್ತ್ರೀಯರ ವಿಚಾರದಲ್ಲಿ ಬಹಳ ಬೇಗ ವಶವಾಗುವ ಬುದ್ಧಿ. ಸ್ವಾರ್ಥ ಬಹಳ. ಗುಂಪುಗಳಲ್ಲಿ ಬೆರೆಯುವ ಸ್ವಭಾವ. ಅನುರೂಪ ಪತ್ನಿಯುಳ್ಳವರು. ರತಿ ವಿಲಾಸದಲ್ಲಿ ನಿಪುಣರು. ಉದ್ಯೋಗ, ವ್ಯಾಪಾರದಲ್ಲಿ ಶಾಶ್ವತ ಲಾಭವುಳ್ಳವರು. ಸುಖ ಸಂಪತ್ತಿನಿಂದ ಜೀವನ ನಡೆಸುವರು. ಹಠ ಛಲದಿಂದ ಬಾಳುವ ಸ್ವಭಾವವುಳ್ಳವರು.
ಮಿಥುನ: ಅಧಿಪತಿ ಬುಧ ಜಾತಕದವರು. ಸದಾ ಚುರುಕು. ತೀಕ್ಷ್ಣಬುದ್ಧಿ. ಬಹಳ ಕೋಪ. ಚಂಚಲ ಬುದ್ಧಿ. ಇತರರ ಮನಸ್ಸು ಗುಣ ಅರಿಯುವ ಬುದ್ಧಿವಂತಿಕೆ. ಜ್ಯೋತಿಷ ಹಾಗೂ ಗಣಿತದಲ್ಲಿ ಆಸಕ್ತ. ರಾಜಕಾರಣದಲ್ಲಿ ಹೆಚ್ಚು ಒಲವು. ಯಾವಾಗಲೂ ಒಬ್ಬ ಗೆಳೆಯನ ಸಹಾಯ ಇದ್ದೇ ಇರುತ್ತದೆ. ಯಾರಿಗೂ ಹೆದರುವುದಿಲ್ಲ. ಒಳ್ಳೆಯ ಮಾತುಗಾರಿಕೆ.
ಕರ್ಕಾಟಕ: ಅಧಿಪತಿ ಚಂದ್ರ. ದುಂದುವೆಚ್ಚ ಮಾಡಲು ಇಷ್ಟಪಡುವುದಿಲ್ಲ. ವಿಚಾರದಲ್ಲಿ ತುಂಬಾ ಶ್ರದ್ಧೆ. ನ್ಯಾಯ ಸಂಬಂಧ ವಿಚಾರ ಮಾಡುವುದು. ಪ್ರಕೃತಿ ಪ್ರಿಯರು ಆಗಿರುತ್ತಾರೆ. ಹಾಸ್ಯ ಸ್ವಭಾವದ ಮಾತುಗಾರರು. ಶತ್ರುಗಳನ್ನು ಉಂಟುಮಾಡಿಕೊಳ್ಳುವುದಿಲ್ಲ. ಲೇಖನ, ಕಥೆ, ಕಾದಂಬರಿಯಲ್ಲಿ ಆಸಕ್ತಿ ಹಾಗೂ ಬರಹಗಾರರಾಗಿರುತ್ತಾರೆ. ಅತ್ಯುತ್ತಮರೆಂದು ಹೊಗಳಿಕೆಗೆ ಪಾತ್ರರಾಗುವರು.
ಸಿಂಹ: ಅಧಿಪತಿ ಸೂರ್ಯ. ಹಠ, ಸಿಟ್ಟು, ಉಗ್ರ ಸ್ವಭಾವ. ಯಾರನ್ನೂ ನಂಬುವುದಿಲ್ಲ. ವಿಚಾರದಲ್ಲಿ ಗುಟ್ಟು ಮಾಡುವುದಿಲ್ಲ. ಧೈರ್ಯದಿಂದ ಕೆಲಸಗಳಲ್ಲಿ ಮುನ್ನುಗ್ಗುವ ಪ್ರವೃತ್ತಿ. ಹೆಚ್ಚು ಮುತುವರ್ಜಿ ವಹಿಸುವರು. ಎಲ್ಲರನ್ನೂ ಹಿಡಿತದಲ್ಲಿ ಇಟ್ಟುಕೊಳ್ಳುವ ಸ್ವಭಾವ. ನಾನು, ನನ್ನದು ಎನ್ನುವ ವಿಚಾರ ಬಹಳ. ಯಾವಾಗಲೂ ಆದಷ್ಟು ಶಾಂತತೆಯಿಂದ ಇರಲು ಪ್ರಯತ್ನಿಸಬೇಕು.
ಕನ್ಯಾ: ಅಧಿಪತಿ ಬುಧ. ಉದ್ಯೋಗ ವ್ಯಾಪಾರದಲ್ಲಿ ಒಲವು. ಸಂಬಂಧದಲ್ಲಿ ಪ್ರೀತಿ, ವಿಶ್ವಾಸ ಕಡಿಮೆ. ವೇದಾಂತಿಗಳು, ವಿಚಾರವಂತರು. ಲೆಕ್ಕಾಚಾರ ಆಚಾರವಂತರು. ಒಂದೊಂದು ಸಲ ನಿರ್ದಯಿಗಳು.
ತುಲಾ: ಶುಕ್ರ ಅಧಿಪತಿ. ವಿದ್ಯಾವಂತರು, ಗುಣವಂತರು. ಪ್ರೀತಿ, ವಿಶ್ವಾಸ ವ್ಯಕ್ತಪಡಿಸುವರು. ಸಿಟ್ಟು ಬಂದರೆ ಸಮಾಧಾನ ಪಡಿಸುವುದು ಕಷ್ಟ. ಮಾತಿನಲ್ಲಿ ಎಲ್ಲರನ್ನೂ ಆಕರ್ಷಿಸುವರು. ಜ್ಞಾಪಕ ಶಕ್ತಿ ಬಹಳ. ಯಾವುದನ್ನೂ ಸುಲಭವಾಗಿ ಮರೆಯುವುದಿಲ್ಲ. ಧರ್ಮವಂತರು. ಡಂಭಾಚಾರ ಹಾಗೂ ಹೊಗಳುಭಟರಾಗಿರುತ್ತಾರೆ.
ವೃಶ್ಚಿಕ: ಅಂಗಾರಕ (ಮಂಗಳ) ಅಧಿಪತಿ. ಧೈರ್ಯ, ಶೌರ್ಯ, ಸಾಹಸ ಹಾಗೂ ಧೀರರೆನಿಸಿಕೊಳ್ಳುವರು. ದಯೆ, ಕರುಣೆ, ಉಪಕಾರದ ಗುಣ ಹಾಗೂ ಧರ್ಮಿಷ್ಟರು ಆಗಿರುವರು. ಹಾಗೆಯೇ ತಮ್ಮ ಪ್ರತಿಷ್ಠೆ ಉಳಿಸಿಕೊಳ್ಳಲು ಹೀನ ಕಾರ್ಯಕ್ಕೂ ಕೈ ಹಾಕಿ ತೊಂದರೆಗೆ ಸಿಲುಕುವರು. ಅಹಂಕಾರ, ಸಿಟ್ಟು ತೋರಿಸುವರು.
ಧನಸ್ಸು: ಲಕ್ಷಣ ಶರೀರ. ಸುಂದರ ರೂಪ, ವಿಶಾಲ ಎದೆ, ಸತ್ಯಸಂಧತೆಗೆ ಹೆಸರಾದವರು. ಇತರ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಬುದ್ಧಿ. ಶಾಂತಿ, ದಯೆ, ಕರುಣೆ, ಧರ್ಮಕ್ಕೆ ಕಟ್ಟುಬಿದ್ದು ಆಚರಣೆ ಮಾಡುವ ಬುದ್ಧಿ. ದೈವ ಭಕ್ತಿಯುಳ್ಳವರು. ನಡೆನುಡಿಗಳಿಂದ ಜನರಿಗೆ ಉಪಕಾರ ಮಾಡುವ ಮನೋಭಾವವುಳ್ಳವರು. ಅಂದುಕೊಂಡ ಕೆಲಸ ಆಗುವವರೆಗೂ ಹಾಗೂ ಮಾತು ಕೊಟ್ಟ ಮೇಲೆ ಉಳಿಸಿಕೊಳ್ಳುವ ಪ್ರವೃತ್ತಿಯನ್ನು ಹೊಂದಿರುವರು.
ಮಕರ: ಶನಿ ಅಧಿಪತಿ. ಎಲ್ಲಾ ವಿಚಾರ, ಕೆಲಸಗಳಲ್ಲಿ ನಿಧಾನ. ಸ್ವಂತ ಪ್ರತಿಭೆಯಿಂದ ಮೇಲೆ ಬಂದು ಜೀವನದಲ್ಲಿ ಸಂತೋಷ ಇದ್ದರೂ ಕೂಡಾ ಹುಟ್ಟಿದಾಗಿನಿಂದ ಕಷ್ಟಗಳನ್ನು ಎದುರಿಸುವರು. ಜೀವನ ರಂಗದಲ್ಲಿ ಹೋರಾಡಿ, ಕಷ್ಟದ ಪೆಟ್ಟುಗಳನ್ನು ಪಡೆದು ಕೊನೆಗೆ ಬಲಶಾಲಿಗಳಾಗುವರು. ಸ್ವಾಭಿಮಾನ ಜಾಸ್ತಿ. ಯಾವ ಕಾರ್ಯ ವಹಿಸಿದರೂ ಶ್ರದ್ಧೆಯಿಂದ ಮಾಡುವರು.
ಕುಂಭ: ಶನಿ ಅಧಿಪತಿ. ತಮ್ಮದೇ ಮಾರ್ಗದಲ್ಲಿ ಜೀವನ ನಡೆಸುವರು. ದುಡಿಮೆಗಾರರು. ಈ ರಾಶಿಯಲ್ಲಿ ಪೂರ್ಣ ಜ್ಞಾನ ಸಂಪಾದಿಸಿದರೆ ಅನುಕೂಲ. ಇಲ್ಲದಿದ್ದ ಪಕ್ಷದಲ್ಲಿ ತಂದೆ ತಾಯಿ, ಬಂಧು ಬಳಗದಿಂದ ವಂಚಿತರಾಗುವರು. ಸಮುದ್ರದಲ್ಲಿ ಪ್ರಯಾಣ, ಬೇರೆ ದೇಶಕ್ಕೆ ಪ್ರಯಾಣದ ಕಡೆ ಗಮನ ಜಾಸ್ತಿ.
ಮೀನ: ಗುರು (ಬೃಹಸ್ಪತಿ) ಅಧಿಪತಿ. ತಂದೆ ತಾಯಿಯಲ್ಲಿ, ಗುರು ಹಿರಿಯರಲ್ಲಿ ಭಕ್ತಿಯುಳ್ಳವರಾಗಿರುವರು. ಸತ್ಕಾರ್ಯದಲ್ಲಿ ತೊಡಗುವರು. ನೀರಿನ ಬಗ್ಗೆ ತುಂಬಾ ಆಕರ್ಷಣೆಯುಳ್ಳವರು. ನದಿ, ಸರೋವರ ಮುಂತಾದ ಜಾಗಗಳು ಪ್ರಿಯವಾದವುಗಳಾಗಿರುತ್ತವೆ. ಗಲಾಟೆ, ತಂಟೆ, ತಕರಾರಿಗೆ ಹೋಗುವುದಿಲ್ಲ. ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇರುತ್ತದೆ.