ನವಗ್ರಹಗಳು
ಗ್ರಹ ಎ೦ದರೇನು ?
ಗ್ರಹ ಎ೦ಬುದು ಸಂಸ್ಕೃತದಲ್ಲಿ ಐದಾರು ಅರ್ಥಗಳುಳ್ಳ ಶಬ್ದ. “ಗ್ರಹ ಬಡಿದವನಂತೆ” ನಿಂತ ಅನ್ನುತ್ತೇವೆ. ಇಲ್ಲಿ ಗ್ರಹ ಎ೦ದರೆ ಭೂತ, ಪಿಶಾಚಿ ಎ೦ದರ್ಥ. ಶಕ್ತಿಗ್ರಹ, ಪಾಣಿಗ್ರಹ, ನೀಚಗ್ರಹ ಎ೦ಬಲ್ಲೆಲ್ಲಾ ಗ್ರಹ ಶಬ್ದವು ಬೇರೆ ಬೇರೆ ಅರ್ಥವನ್ನು ಹೇಳುತ್ತದೆ. “ನನಗೆ ಯಾಕೆ ಬೇಕಿತ್ತು ? ನನ್ನ ಗ್ರಹಚಾರ ಮಾರಾಯ” ಎನ್ನುತ್ತಾರೆ ಉಡುಪರು. ಗ್ರಹಗತಿ ಸರಿಯಿತ್ತು, ಅಪಘಾತದಿಂದ ಪಾರಾದೆ. ಅನ್ನುತ್ತಾರೆ ಕಲ್ಬುರ್ಗಿಯವರು. ಗ್ರಹಾನುಕೂಲಕ್ಕಾಗಿ ಗ್ರಹಯಜ್ಞವನ್ನು ಮಾಡಿ ಎನ್ನುತ್ತಾರೆ ಪುರೋಹಿತರು. ಇಲ್ಲಿ ಗ್ರಹವೆಂದರೆ ಆದಿತ್ಯಾದಿ ನವಗ್ರಹಗಳು.
ಗ್ರಹಣ ಎ೦ದರೆ ಹಿಡಿಯುವುದು ಎ೦ದರ್ಥ. ಯಾವುದು ಹಿದಿಯುವವು? ಅವು ಗ್ರಹಗಳು (ಗೃಹ್ಣಂತಿ ಇತಿ ಗ್ರಹಾಃ) ಸೂರ್ಯಚಂದ್ರರನ್ನು ಹಿಡಿಯುವ ರಾಹು ಕೇತುಗಳಷ್ಟೇ ಗ್ರಹರಲ್ಲ. ಆಯಾಯ ದಶಾಕಾಲದಲ್ಲಿ ನಮ್ಮನ್ನೆಲ್ಲ ಹಿಡಿಯುವ ಆದಿತ್ಯಾದಿಗಳೂ ಗ್ರಹರೇ.
ಈ ಗ್ರಹಗಳು ಸಕಲ ಪ್ರಾಣಿ ಜಾತದ ಜೀವನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತಿದ್ದು ತಮ್ಮ ಪ್ರಭಾವವನ್ನು ಬೀರುತ್ತವೆ. ಪರಮೋತ್ಕರ್ಷವನ್ನು ಹೊಂದಿ
ಗದ್ದುಗೆಯನ್ನು ಏರುವುದಕ್ಕೂ,ನೆಲಕಚ್ಚಿ ಪ್ರಪಾತಕ್ಕೆ ಬೀಳುವುದಕ್ಕೂ ಗ್ರಹದ ಸ್ಥಿತಿಗತಿಗಳು ಕಾರಣವಾಗುತ್ತವೆ. ಕಾರಿಕೆಯೊಂದು ಹೀಗೆ ಹೇಳುತ್ತದೆ.
ಗ್ರಹಾ ಗಾವೋ ನರೇಂದ್ರಶ್ಚ ಬ್ರಾಹ್ಮಣಶ್ಚ ವಿಶೇಷತಃ |
ಪೂಜಿತಾಃಪೂಜಯಿಷ್ಯಂತಿ ನಿರ್ದಹಂತ್ಯನಮಾನಿತಾ ||
ಗ್ರಹಗಳು ಗೋವುಗಳು ರಾಜ ಮತ್ತು ಬ್ರಾಹ್ಮಣರು ಈ ನಾಲ್ವರು ಪೂಜಿತರಾದರೆ ಸದಭೀಷ್ಟ ಪ್ರದರು, ಅವಮಾನಿತವಾದರೆ ಸರ್ವನಾಶಕರು ಎ೦ದೂ ಜ್ಯೋತಿಶ್ಶಾಸ್ತ್ರ
ಒಂಬತ್ತು ಗ್ರಹಗಳನ್ನು ಹೆಸರಿಸುತ್ತದೆ. ಸೂರ್ಯ, ಚಂದ್ರ, ಕುಜ, ಬುಧ, ಗುರು ಶುಕ್ರ, ಶನಿ, ರಾಹು, ಕೇತುಗಳೇ ಈ ನವಗ್ರಹರು.
ಮೊತ್ತಮೊದಲು ಈ ಗ್ರಹಗಳ ಸ್ವರೂಪವನ್ನು ಪರಿಚಯಿಸಿಕೊಳ್ಳೋಣ.
ಸೂರ್ಯ
“ಗ್ರಹಾಣಾಮಾದಿರಾದಿತ್ಯಃ” ಎಂಬಂತೆ ಈತ ಗ್ರಹಗಳಲ್ಲಿ ಮೊದಲಿಗೆ. ಆರೋಗ್ಯ ಜ್ಞಾನಗಳನ್ನು ದಯಪಾಲಿಸುವ ದೇವತೆ. ೨ ಕೈಯಲ್ಲಿ ಕೆಂಪು ಕಮಲಗಳು ಕೆಂಪು ರಥದಲ್ಲಿ ರಥಿಕ, ಅರುಣನೇ ಇವಗೆ ಸಾರಥಿ. ರಥಕ್ಕೆ ಕಟ್ಟಿರುವ ಕುದುರೆಗಳು ೭.
ಸೂಕ್ಷ್ಮಗುಂಗುರು ಕೂದಲುಗಳಿಂದ ಒಪ್ಪುವ ತಲೆ. ಆಕರ್ಷಕ ರೂಪ ಚೇತೋಹಾರಿಯಾದ ಗಂಭೀರ ಧ್ವನಿ. ಹೆಚ್ಚು ಎತ್ತರವಿಲ್ಲದ ನಿಲುವು. ಅನುಪಮ ಬುದ್ಧಿ ಚಾತುರ್ಯ. ಗೋರೋಚನದಂತೆ ಕೆಂಪು ಬೆರೆತ ಸುಂದರ ಕಣ್ಗಳು. ಧೈರ್ಯಶಾಲಿ ಪ್ರಚಂಡ. ಪಿತ್ತಪ್ರಕೃತಿ, ಉನ್ನತ ವ್ಯಕ್ತಿತ್ವ. ದೊಡ್ಡ ಕೈಗಳು. ಕೆಂಪುಉಡುಗೆ, ಇದು ರವಿಯನ್ನು ಶಾಸ್ತ್ರಾಕಾರರು ಗುರುತಿಸುವ ಬಗೆ.
ಆದಿತ್ಯ ಮಾರ್ತಾಂಡ ಭಾನು,ರವಿ,ದಿವಾಕರ,ಪ್ರಭಾಕರ ಇವು ಸೂರ್ಯನ ಪ್ರಸಿದ್ಧ ಹೆಸರುಗಳು. ಅದಿತಿ-ಕಶ್ಯಪರ ಮಗ. ಅದೊಂದು ದಿನ ಕಶ್ಯಪರು
ಮನೆಯಲ್ಲಿ ಇರಲಿಲ್ಲ. ಅದಿತಿದೇವಿ ತುಂಬು ಗರ್ಭಿಣಿ. ದೇವರ ಧ್ಯಾನದಲ್ಲಿದ್ದಾಳೆ. ಹೊರಗಿನಿಂದ ಭವತಿ ಭಿಕ್ಷಾಂಧೇಹಿ ಎಂಬ ಮಾಣವಕನ ಧ್ವನಿ. ಬುಧನು
ಭಿಕ್ಷೆಗಾಗಿ ಬಂದಿದ್ದ. ಕರೆದ ಕೂಡಲೇ ಭಿಕ್ಷೆಗೆ ಬರಲಿಲ್ಲವೆಂಬ ಸಿಟ್ಟು ಬುಧನಿಗೆ. ಏನು ಗರ್ಭಿಣಿ ಎಂಬ ಅಹಂಕಾರವೋ? ಗರ್ಭದಲ್ಲಿರುವ ಆ ಶಿಶು ಸತ್ತು ಹೋಗಲಿ
ಎಂಬ ಶಾಪವಾಗಿ ಆ ಸಿಟ್ಟು ಸ್ಪೋಟಗೊಂಡಿತು. ಆಕೆ ತತ್ತರಿಸಿ ಬಿದ್ದಳು. ಮೃತವಾದ ಅಂಡದಮ್ತೆ ಕಾಣಿಸಿದ ಆ ಶಿಶು ಶ್ರೀಹರಿಯ ಮಹಿಮೆಯಿಂದ ಕಶ್ಯಪರ
ಪ್ರಭಾವದಿಂದ ಸತ್ತು ಬದುಕಿತು. ಈ ಮಗುವೇ ಸೂರ್ಯ. ಆದ್ದರಿಂದಲೇ ಮಾರ್ತಾಂಡ ಆದಿತ್ಯ ಎಂಬುದು ಇವನ ಇನ್ನೊಂದು ಹೆಸರು. ಅದಿತಿಯ
ಮಗನೆಂಬ ಕಾರಣದಿಂದ ಮಾತ್ರ ಇವನಿಗೆ ಈ ಹೆಸರಲ್ಲ. ದಿನದಿನವೂ ಉದಯಿಸುತ್ತಾ ಅಸ್ತಮಿಸುತ್ತಾ ಜೀವಜಾತದ ೨೪ ಘಂಟೆಗಳ ಆಯುಷ್ಯವನ್ನು ಕಿತ್ತು
ಸಾಗುವುದರಿಂದ ಇವನಿಗೆ ಈ ಹೆಸರು. (ಆಯುರಾದಾಯ ಯಾತೀತಿ ಆದಿತ್ಯಃ)
ಮನುಷ್ಯ ಪ್ರತಿದಿನವೂ ಸೂರ್ಯಾಸ್ತದ ಸುಂದರ ಸಂಜೆಯನ್ನು ನೋಡಿ ಖುಶಿ ಪಡುತ್ತಾನೆ. ತನ್ನ ವಯಸ್ಸು ಒಂದು ದಿನ ಜಾಸ್ತಿಯಾಯಿತು ಎಂದೇ ಭಾವಿಸುತ್ತಾನೆ.
ಆಯುಷ್ಯದಲ್ಲಿ ಒಂದುದಿನ ಕಡಿಮೆಯಾಯಿತು ಎಂದು ಯೋಚಿಸುವುದಿಲ್ಲ. ಇದು ದುರಂತ.
ಸಂಜ್ಞಾ ಮತ್ತು ಛಾಯಾ ಸೂರ್ಯನ ಹೆಂಡಂದಿರು. ಸಂಜ್ಞೆಯಲ್ಲಿ ಯಮ ಯಮುನೆ ಮತ್ತು ಮನು ಹುಟ್ಟಿದರು. ಛಾಯಾ ದೇವಿಯಲ್ಲಿ ಸಾವರ್ಣಿ ಮತ್ತು ಶನೀಶ್ವರ ಎಂಬ ಈರ್ವರು ಹುಟ್ಟಿದರು. ಈ ಮನ್ವಂತರದ ಅಧಿಪತಿಯಾದ ವೈವಸ್ವತ ಮನು ಸೂರ್ಯನ ಪುತ್ರ. ಗ್ರಹಕೋಟಿಯಲ್ಲಿ ಭಯಂಕರನೆನಿಸಿದ ಶನಿಯೂ ರವಿಕುಮಾರ. ಕರ್ಣ ಸುಗ್ರೀವರು ಸೂರ್ಯಾಂಶ ಸಂಭೂತರು.
ಈ ಗ್ರಹವನ್ನು ಸ್ತುತಿಸುವ ಸ್ತೋತ್ರ ಹೀಗಿದೆ. ಈ ಶ್ಲೋಕವನ್ನು ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹದೋಷವನ್ನು ರಿಹರಿಸಿಕೊಳ್ಳಬಹುದು.
ಜಪಾಕುಸುಮಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ |
ಧ್ವಾಂತಾರಿಂ ಸರ್ವಪಾಪಘ್ನಂ ಪ್ರಣತೋಸ್ಮಿ ದಿವಾಕರಮ್ ||
“ಕೆಂಪುದಾಸವಾಳ ಪುಷ್ಫದ ಕಾಂತಿ, ಕಶ್ಯಪನ ಮಗ, ಮಹಾತೇಜಸ್ವಿ, ಕತ್ತರ ಕಡುವೈರಿ, ಸರ್ವಪಾಪ ನಾಶಕ, ಇಂತಹಾ ದಿವಾಕರನನ್ನು ನಮಿಪೆ”.
ಚಂದ್ರ
ಚಂದ್ರ, ಶಶಿ, ಇಂದು, ಸೋಮ, ಶೀತಗು, ವಿಧು, ಇವು ಚಂದ್ರನ ಪ್ರಸಿದ್ಧ ಹೆಸರುಗಳು. ರಾಜಾನೌ ರವಿಶೀತಗು ಎಂಬಂತೆ ಸೂರ್ಯಚಂದ್ರರು ಗ್ರಹರಾಜರು. ಸೂರ್ಯ ಬೆಳಕು ಕೊಡುವ ದೇವನಾದರೆ, ತಾಪದಿಂದ ಬೆಂದವನಿಗೆ ತಂಪು ಕೊಡುವ ದೇವತೆ ಚಂದ್ರ. ಎರಡು ಕೈಗಳು. ಒಂದರಲ್ಲಿ ಗದೆ, ಇನ್ನೊಂದರಲ್ಲಿ ಅಭಯಮುದ್ರೆ. ಬಿಳಿಯ ಸ್ವಚ್ಛವಾದ ಬಟ್ಟೆಯನ್ನು ಧರಿಸಿದ ಸುಂದರವಾದ ಹತ್ತು ಕುದುರೆಗಳ ಬಿಳಿಯ ರಥದಲ್ಲಿ ಅಸೀನ.
ಸೌಮ್ಯ ಸ್ವಭಾವ, ಸುಂದರವಾದ ಕಣ್ಗಳು, ಮಧುರ ಮಾತು, ಬಿಳಿಬಣ್ಣ, ಬೊಜ್ಜು ಇಲ್ಲದ ಶರೀರ, ಮಧ್ಯವಯಸ್ಕ, ಎತ್ತರದ ನಿಲುವು. ಕಪ್ಪು ಗುಂಗುರು ಕೂದಲು, ಬುದ್ಧಿವಂತಿಕೆ, ಸಾತ್ವಿಕತೆ, ಬಹುಜನ ಮೈತ್ರಿ, ದಯಾಳುತ್ವ, ವೃದ್ಧಸ್ತ್ರೀ ಸಂಪರ್ಕ, ಚಾಂಚಲ್ಯ ಸೌಭಾಗ್ಯ, ಬಿಳಿಯ ಉಡುಗೆ ವು ಚಂದ್ರನ ಲಕ್ಷಣಗಳು.
ಚಂದ್ರ ಸಮುದ್ರ ಮಥನದ ಕಾಲದಲ್ಲಿ ಕ್ಷೀರೋದಾರ್ಣವ ಸಂಭೂತನೂ ಹೌದು. ಅತ್ರಿನೇತ್ರ ಸಮುದ್ಭವನೂ ಹೌದು. ಸ್ವಾಯಂಭುವ ಮನ್ವಂತರದಲ್ಲಿ ಅತ್ರಿಋಷಿಯ ಕಣ್ಣಿನಿಂದ ಜನಿಸಿದ. ಈಗ ನಡೆಯುತ್ತಿರುವ ವೈವಸ್ವತ ಮನ್ವಂತರದಲ್ಲಿ ಧರ್ಮಪ್ರಜಾಪತಿಗೆ ವಸುಘ್ನಿಯಲ್ಲಿ ಹುಟ್ಟಿದ.
ದಕ್ಷಪ್ರಜಾಪತಿಯು ತನ್ನ ಅರವತ್ತು ಹೆಣ್ಣುಮಕ್ಕಳಲ್ಲಿ ಇಪ್ಪತ್ತೇಳು ಮಕ್ಕಳನ್ನು ಚಂದ್ರನಿಗೆ ಕೊಟ್ಟನು. ಈ ಚಂದ್ರಪತ್ನಿಯರೇ ಇಪ್ಪತ್ತೇಳು ನಕ್ಷತ್ರಗಳು. ಚಂದ್ರನು ರೋಹಿಣೀ ಎಂಬವಳಲ್ಲಿ ಮಾತ್ರ ಅತಿಶಯವಾಗಿ ಅನುರಕ್ತನಾದಾಗ ಉಳಿದವರು ಅಪ್ಪನಲ್ಲಿ ದೂರಿದರು. ಅಪ್ಪ ಅಳಿಯನಿಗೆ ಕ್ಷಯರೋಗ ಬರುವಂತೆ ಶಪಿಸಿದ.
ಚಂದ್ರ ವಿದ್ಯಾಭ್ಯಾಸಕ್ಕಾಗಿ ದೇವಗುರುವಾದ ಬೃಹಸ್ಪತಿಯಲ್ಲಿ ಹೋಗಿದ್ದ. ಸುಂದರಾಂಗನಾದ ಇವನನ್ನು ಗುರುಪತ್ನಿ ತಾರೆ ಮೋಹಿಸಿದಳು. ಆಕೆಯನ್ನು ಚಂದ್ರ
ಬಲಾತ್ಕಾರದಿಂದ ಅಪಹರಿಸಿ ಬುಧನನ್ನು ಪಡೆದ.
ಮತ್ತೊಮ್ಮೆ ಸಮುದ್ರಮಥನ ಕಾಲದಲ್ಲಿ ಸಾಗರದಿಂದ ಆವಿರ್ಭವಿಸಿದ ಚಂದ್ರನನ್ನು ಶಿವ ತಲೆಯಲ್ಲಿ ಧರಿಸಿ ಚಂದ್ರಶೇಖರನೆನಿಸಿದ.
ಅಮೃತಪಾನದ ಸಂದರ್ಭದಲ್ಲಿ ಈತ ಸೂರ್ಯನೊಂದಿಗೆ ಸೇರಿಕೊಂಡು ಮಾಯಾವಿಯಾದ ರಾಹುವನ್ನು ವಿಷ್ಣುವಿಗೆ ಸೂಚಿಸಿದ. ವಿಷ್ಣು ಚಕ್ರಾಯುಧದಿಂದ
ರಾಹುವಿನ ಶಿರವನ್ನು ಭೇದಿಸಿದರೂ ಅಮೃತದ ಪ್ರಭಾವದಿಂದ ರುಂಡವು ರಾಹುಗ್ರಹವೆನಿಸಿ ಚಂದ್ರಸೂರ್ಯರನ್ನು ದ್ವೇಶಿಸತೊಡಗಿತು.
ಈ ಗ್ರಹವನ್ನು ಸ್ತುತಿಸುವ ಸ್ತೋತ್ರ ಹೀಗಿದೆ. ಈ ಶ್ಲೋಕವನ್ನು ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹದೋಷವನ್ನು
ಪರಿಹರಿಸಿಕೊಳ್ಳಬಹುದು.
ದಧಿಶಂಖತುಷಾರಾಭಂ ಕ್ಷೀರೋದಾರ್ಣವ ಸಂಭವಮ್ |
ನಮಾಮಿ ಶಶಿನಂ ಭಕ್ತ್ಯಾ ಶಂಭೋರ್ಮುಕುಟಭೂಷಣಮ್ ||
ಮೊಸರು,ಶಂಖ, ಹಿಮಗಳಂತೆ ಶ್ವೇತಕಾಂತಿ, ಕ್ಷೀರಸಾಗರದಲ್ಲಿ ಉತ್ಪತ್ತಿ, ಶಿವನ ತಲೆಯ ಅಲಂಕಾರ. ಅಂತಹ ಶಶಾಂಕನಿಗೆ ಭಕ್ತಿಯಿಂದ ಬಾಗುವೆ.
ಅಂಗಾರಕ
ಮಂಗಲ ಅಂಗಾರಕನು ಕುಜ,ಭೌಮ ಎಂಬವು ಇವನ ಪ್ರಸಿದ್ಧ ಹೆಸರುಗಳು. ಕೆಂಪುಮಾಲೆಯನ್ನು ಧರಿಸಿರುವ ಕೆಂಪು ಬಟ್ಟೆಯ ಚತುರ್ಭುಜ ಈತ. ಗದಾಶಕ್ತಿ ಖಡ್ಗಶೂಲಗಳನ್ನು ಚತುರ್ಭುಜಗಳಲ್ಲಿ ಧರಿಸಿದ್ದಾನೆ.
ಕುಳ್ಳಶರೀರ, ಪಿಂಗಳ ಕಣ್ಗಳು ಮಸ್ತಾದ ಮೈಕಟ್ಟು, ಕಾಂತಿಯುಕ್ತ ಮುಖ, ಚಂಚಲ ಸ್ವಭಾವ, ಚುರುಕುತನ, ಶೌರ್ಯ, ಪ್ರತಿಭಾಪೂರ್ಣ ಮಾತುಗಳು,
ಗುಂಗುರು ಗುಂಗುರಾದ ಕೆಂಪು ಹರಳು, ತಾಮಸ ಸ್ವಭಾವ, ಸಾಹಸ ಪ್ರಿಯತೆ, ಹಿಂಸಾ ತತ್ಪರತೆ,ಕೆಂಪಾದ ಮೈಬಣ್ಣ, ಕೆಂಪು ಉಡುಗೆಗಳು ಇದು ಕುಜನ ಸ್ವರೂಪದ ಚಿತ್ರ.
ವಿಷ್ಣುವಿನ ಅನುಗ್ರಹದಿಂದ ಭೂದೇವಿಯಲ್ಲಿ ಹುಟ್ಟಿದ ಭೂಮಿಯ ಮಗನಾದ್ದರಿಂದಲೇ ಈತ ಭೌಮ. ಆದ್ದರಿಂದಲೇ ಕುಜ. ತಪಸ್ಸಿನಿಂದ ನವಗ್ರಹಗಳಲ್ಲಿ ಒಬ್ಬನಾದ ದಾಕ್ಷಾಯಿಣೀ ವಿರಹ ಪೀಡಿತನಾದ. ಶಿವನ ಮುಖದ ಬೆವರು ಭೂಮಿಯಲ್ಲಿ ಬಿದ್ದಾಗ ಅದರಿಂದ ಹುಟ್ಟಿದವನು ಕುಜನೆನ್ನುತ್ತದೆ ಬ್ರಹ್ಮವೈವರ್ತ ಪುರಣ.
ಈತ ಅಮಂಗಲ ಫಲಗಳನ್ನು ಸೂಚಿಸುವುದೇ ಹೆಚ್ಚು. ಆದರೂ ಇವನ ಹೆಸರು ಮಂಗಲ. ಇವನ ವಾರ ಮಂಗಲವಾರ. ಈ ದಿನ ಎಲ್ಲಾ ಶುಭಕೆಲಸಗಳಿಗೂ
ಅಯೋಗ್ಯವಾಗಿ ಅಮಂಗಲವಾರವೆನಿಸಿದೆ. ಹೆಚ್ಚೇಕೆ ಕ್ಷೌರಕ್ಕೂ ನಿಷಿದ್ಧವಾದ ದಿನವೆನಿಸಿದೆ. ಹೀಗಿದ್ದರೂ ಈ ಕುಜನಿಗೆ ಮಂಗಲನೆಂಬ ಹೆಸರೇಕೆ? ಕ್ಷೀರಸಾಗರ ಭಟ್ಟರ ಮನೆಯಲ್ಲಿ ಕಾಸಿನ ಮಜ್ಜಿಗೆ ಇಲ್ಲವೆಂಬ ಗಾದೆಯ ಮಾತಿನಂತಾಯಿತಲ್ಲ ?
ನಿಜ,ಮಂಗಲನೆಂದು ಹೇಳಿಯಾದರೂ ಆತ ಮಂಗಲಕರನಾಗಲಿ ಎನ್ನುವ ಪ್ರಾಚೀನ ಭಾವನೆಯೇ ಇದಕ್ಕೆ ಕಾರಣ. ಅರವತ್ತನೆಯ ಸಂವತ್ಸರ ಕ್ಷಯ. ಆದರೆ ಹಾಗೆನ್ನುತ್ತೇವೆಯೇ? ಅಕ್ಷಯನಾಮ ಸಂವತ್ಸರೇ ಎನ್ನುತೇವೆ. ಮನುಷ್ಯನಿಗೆ ಕೆಟ್ಟ ಶಬ್ದ ಹೇಳಲೂ ಹೆದರಿಕೆ!
ಈ ಗ್ರಹವನ್ನು ಸ್ತುತಿಸುವ ಸ್ತೋತ್ರ ಹೀಗಿದೆ. ಈ ಶ್ಲೋಕವನ್ನು ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹದೋಷವನ್ನುಪರಿಹರಿಸಿಕೊಳ್ಳಬಹುದು.
ಧರಣೀ ಗರ್ಭಸಂಭೂತಂ ವಿದ್ಯುತ್ಕಾಂಚನಸನ್ನಿಭಮ್ |
ಕುಮಾರಂ ಶಕ್ತಿಹಸ್ತಂ ಚ ಮಂಗಲಂ ಪ್ರಣಮಾಮ್ಯಹಮ್ ||
ಭೂದೇವಿಯ ಗರ್ಭದಲ್ಲಿ ಜನಿಸಿದ, ಮಿಂಚಿನ ಮತ್ತು ಚಿನ್ನದ ಕಾಂತಿಯಂತೆ ಪಾಟಲಕಾಂತಿಯುಳ್ಳ ಹದಿನಾರು ವರುಷದ ಕುಮಾರನಾದ ಶಕ್ತ್ಯಾಯುಧಧರಿಯಾದ
ಮಂಗಲನಿಗೆ ನನ್ನ ನಮನ.
ಬುಧ
ಚಂದ್ರ (ಸೋಮ)ನ ಮಗನಾದ್ದರಿಂದ ಸೌಮ್ಯನೆಂದು ಪ್ರಸಿದ್ಧನಾಗಿದ್ದಾನೆ. ಹಸಿರು ಬಟ್ಟೆಯನ್ನುಟ್ಟ ಚತುರ್ಭುಜನು, ಖಡ್ಗ ಗುರಾಣಿ ಗದೆಗಳನ್ನು ವರಮುದ್ರೆಯನ್ನೂ ಧರಿಸಿರುವ ಸಿಂಹವಾಹನ.
ಕೆಂಪಾದ ವಿಶಾಲ ಕಣ್ಣುಗಳು,ಸ್ವಚ್ಛವಾದ ಒಳ್ಳೆಯ ಮಾತುಗಳು, ಗರಿಕೆಯ ದಲದಂತೆ ಹಸಿರು ಮೈಬಣ್ಣ, ರಾಜನ್ ಸ್ವಭಾವ, ಸದಾ ಸಂತೋಷ, ಮಧ್ಯಮರೂಪ, ನಿಪುಣ, ಉಡುಗೆ ನಡಿಗೆಗಳಿಂದ ಎಲ್ಲರಣ್ಣೂ ಅನುಕರಿಸುವ ಸ್ವಭಾವ, ಪಾಲಾಶದಂತೆ ಹಸಿರು ಬಣ್ಣದ ಉಡುಗೆಗಳು. ಇವು ಇವನಲ್ಲಿ ಕಾಣುವ ಲಕ್ಷಣಗಳು.
ದೇವಗುರು ಬೃಹಸ್ಪತಿಯ ಭಾರ್ಯೆ ತಾರೆ. ಮುಗ್ದ ಸ್ವಭಾವದ ಅಬಲೆ, ಸುಂದರಾಂಗಳಾದ ಚಂದ್ರ ಆಕೆಯನ್ನು ಬಲಾತ್ಕಾರದಿಂದ ಅಪಹರಿಸಿ ಪರಿಗ್ರಹಿಸಿದ.ಬ್ರಹ್ಮನ ಆದೇಶದ ಮೇರೆಗೆ ಚಂದ್ರ ತಾರೆಯನ್ನು ಬಿಟ್ಟುಕೊಟ್ಟ. ಗರ್ಭಿಣಿಯಾಗಿದ್ದ ಆಕೆಗೆ ಬೃಹಸ್ಪತಿ ಹೇಳಿದ “ಬೇರೆಯವರಿಂದ ಧರಿಸಿದ ಗರ್ಭವನ್ನು ತ್ಯಜಿಸು, ಲ್ಲವಾದರೆ ಸುಟ್ಟುಬಿಡುತ್ತೇನೆ.” ತಾರೆ ನಾಚಿಕೆಯಿಂದ ಗರ್ಭವನ್ನು ತ್ಯಜಿಸಿದಳು. ಬಂಗಾ೪ರದ ಬಣ್ಣದ ಸುಂದರ ಮಗು ಜನಿಸಿತು. ಒಡನೆಯೇ ಬೃಹಸ್ಪತಿಯ ಮನಸ್ಸು ಬದಲಾಯಿತು. ಇದು ನನ್ನ ಮಗು ಎಂದ ಬೃಹಸ್ಪತಿ. “ಅಲ್ಲ ನನ್ನದು ಎಂದ ಚಂದ್ರ.
ವಿವಾದ ಮುಗಿಲು ಮುಟ್ಟಿತ್ತು. ಋಷಿಮುನಿಗಳು ತರೆಯಲ್ಲಿ ಕೇಳಿದರು. “ಸತ್ಯಹೇಳು” ಎಂದು.ನಾಚಿಕೆಯಿಂದ ತಲೆತಗ್ಗಿಸಿದ ಆಕೆ ಬಾಯಿ ಬಿಡಲಿಲ್ಲ. ಆಗ ತಾನೇ ಹುಟ್ಟಿದ ಮಗು ಆರ್ಭಟಿಸಿತು. “ಛೀ ದುರಾಚಾರೇ! ತೆರೆಯ ಹಿಂದೆ ಮಾಡಿದ ಆತ್ಮಘಾತುಕತನವನ್ನು ಮರೆಮಾಚುವೆಯೇಕೆ?ನಾಚಿಕೆಯಾಗುವುದಿಲ್ಲವೇ! ಬಿಚ್ಚುಬಾಯಿ.” ಈತ ಚಂದ್ರನ ಮಗನೆಂದು ಸಾಬೀತಾಯಿತು. ಈ ಮಗುವನ್ನು ಚಂದ್ರನಿಗೆ ಒಪ್ಪಿಸಲಾಯಿತು.ಹುಟ್ಟಿನಿಂದಲೇಅಸಾಧಾರಣ ಬೌದ್ಧಿಕತೆಯನ್ನು ತೋರಿದ ಈ ಅಸಾಧಾರಣ ಜ್ಞಾನಿಗೆ “ಬುಧ”ನೆಂದು ಚತುರ್ಮುಖನೇ ಇಟ್ಟ ಹೆಸರು.
ಈ ಬುಧನಿಗೆ ಇಳೆಯೆಂಬವಳಲ್ಲಿ ಪುರೂರವನೆಂಬ ಮಗ ಜನಿಸಿದ.
ಈ ಗ್ರಹವನ್ನು ಸ್ತುತಿಸುವ ಸ್ತೋತ್ರ ಹೀಗಿದೆ. ಈ ಶ್ಲೋಕವನ್ನು ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹದೋಷವನ್ನು ಪರಿಹರಿಸಿಕೊಳ್ಳಬಹುದು.
ಪ್ರಿಯಂಗು ಕಲಿಕಾಭಾಸಂ ರೂಪೇಣಾಪ್ರತಿಮಂ ಬುಧಮ್|
ಸೌಮ್ಯಂ ಸೌಮ್ಯಗುಣೋಪೇತಂ ನಮಾಮಿ ಶಶಿನಂದನಮ್ ||
ನವಣೆಯ ತೆನೆಯಂತೆ ಹಸಿರುಕಾಂತಿಯುಳ್ಳವ. ರೂಪದಲ್ಲಿ ಸಾಟಿಯಿಲ್ಲ, ಸೋಮನ (ಚಂದ್ರನ) ಮಗ. ಸೌಮ್ಯಸ್ವಭಾವ. ಅಪ್ಪನಾದ ಚಂದ್ರನ ಗುಣಗಳುಳ್ಳವ. ಚಂದ್ರನಿಗೆ ಮಿತ್ರಗ್ರಹವೆನಿಸಿ ಆನಂದಪ್ರದನಾದ ಬುಧನಿಗೆ ನನ್ನ ಪ್ರಣಾಮಗಳು.
ಗುರು
ದೇವತೆಗಳಿಗೆ ಗುರುವಾದ್ದರಿಂದ ಬೃಹಸ್ಪತಿಗೆ ಗುರುವೆಂದು ಹೆಸರು. ಉಳಿದ ಗ್ರಹಗಳಿಗಿಂತ ದೊಡ್ಡ ಗಾತ್ರದ ಗ್ರಹವಾದ್ದರಿಂದಲೂ ಗುರು. ಹಳದಿ ಬಟ್ಟೆಯನ್ನುಟ್ಟ ಈ ಬಂಗಾರದ ಬಣ್ಣದ ಚತುರ್ಭುಜ, ಕೈಗಳಲ್ಲಿ ದಂಡ, ವರಮುದ್ರೆ, ಜಪಮಾಲೆ, ಕಮಂಡಲುಗಳನ್ನು ಧರಿಸಿದ್ದಾನೆ.
ಪಿಂಗಲ ಬಣ್ಣದ ಕಣ್ಗಳು, ವೇದವಿದ್ಯಾಪ್ರವೀಣ, ಗಂಭೀರ ಹಾಗೂ ಸ್ಪಷ್ಟವಾದ ಸ್ವರ ಪುಟಕ್ಕಿಟ್ಟ ಬಂಗಾರದಂತೆ ಹೊಳೆಯುವ ಮೈಬಣ್ಣ, ಉಬ್ಬಿದ ವಿಶಾಲವದ ಎದೆ, ಗಿಡ್ಡ ಶರೀರ, ಧಾರ್ಮಿಕ, ವಿನಯಶೀಲ, ನಿಪುಣ, ಸ್ಥಿರವಗಿ ನೆಟ್ಟ ದೃಷ್ಟಿಯುಳ್ಳವ, ಸಾಹಸಶೀಲ, ಪೀತವಸ್ತ್ರಧಾರಿ- ಇವು ಗುರುವಿನ ಸ್ವರೂಪ.
ಆಂಗೀರಸ ಹರ್ಷಿಯ ಮಗ. ಪತ್ನಿಯಾದ ತಾರೆಯಲ್ಲಿ ಇವನಿಗೆ ಸ್ವಿಷ್ಣಕೃತ್, ವಡವಾಗ್ನಿ ಮೊದಲಾದ ಆರುಜನ ಮಕ್ಕಳು. ಏಳನೆಯವಳು ಮಗಳು ಸ್ವಾಹಾ. ಕಚನೂ ಇವನ ಮಗ.
ಅಸುರನನ್ನು ಸೋಲಿಸಿ ದೇವತೆಗಳನ್ನು ರಕ್ಷಿಸುವುದರಲ್ಲಿ ಈತನದೇ ದೊಡ್ಡಪಾತ್ರ. ಶುಕ್ರಾಚಾರ್ಯರು ಧೂಮವ್ರತವೆಂಬ ತಪಸ್ಸಿನಲ್ಲಿದ್ದಾಗ ತಾನು ಶುಕ್ರನ ವೇಷದಿಂದ ರಾಕ್ಷಸರಾಜನಲ್ಲಿಗೆ ಹೋಗಿ ನಾಸ್ತಿಕ್ಯವನ್ನು ಬೋಧಿಸಿದ. ಇದರ ಫಲವಾಗಿ ರಾಕ್ಷಸಕುಲ ತಪಸ್ಸು ಮುಗಿಸಿದ ಶುಕ್ರನಿಂದ ಶಾಪಗ್ರಸ್ತವಾಯಿತು.
ದೈತ್ಯ ನಾಶಕ್ಕಾಗಿ ಸರಸ್ವತೀ ತೀರದಲ್ಲಿ ಬೃಹಸ್ಪತ್ಯಾಚಾರ್ಯರ್ಯರು ಮಹಾಯಾಗವೊಂದನ್ನು ಆಚರಿಸಿದ ಬಗ್ಗೆ ಮಹಾಭಾರತದಲ್ಲಿ ಉಲ್ಲೇಖವಿದೆ.ದೇವಗುರುವಾದ ಈತ ಸ್ವಾಭಿಮಾನಿ. ಅವಮಾನ ಅಗೌರವಗಳನ್ನು ಸಹಿಸಲಾರ. ಅದೊಂದು ದಿನ ದೇವಸಭೆಗೆ ಗುರುಗಳು ಆಗಮಿಸಿದಾಗ ದೇವೆಂದ್ರ ಎದ್ದು ನಿಲ್ಲಲಿಲ್ಲ. ಗುರುವಿಗೆ ಸಹನೆಯಾಗಲಿಲ್ಲ. ಯಾವ ಮಾತೂ ಆಡದೆ ಜಾಗ ಖಾಲಿ ಮಾಡಿದರು. ಬೃಹಸ್ಪತ್ಯಾಚಾರ್ಯರು ಎಲ್ಲಿ ಹೋದರೆಂದು ಯಾರಿಗೂ ತಿಳಿಯಲಿಲ್ಲ. ಪುರೋಹಿತರ ಮಂತ್ರಬಲವಿಲ್ಲದ ದೇವಗಣ ಸುಲಭವಾಗಿ ಅಸುರರಿಗೆ ಸೋತಿತು.
ಈ ಗ್ರಹವನ್ನು ಸ್ತುತಿಸುವ ಸ್ತೋತ್ರ ಹೀಗಿದೆ. ಈ ಶ್ಲೋಕವನ್ನು ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹದೋಷವನ್ನು ಪರಿಹರಿಸಿಕೊಳ್ಳಬಹುದು.
ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಮ್ |
ವಂದ್ಯಂ ಚ ತ್ರಿಷು ಲೋಕೇಷು ಪ್ರಣಮಾಮಿ ಬೃಹಸ್ಪತಿಮ್ ||
ದೇವತೆಗಳಿಗೂ ಋಷಿಗಳಿಗೂ ಗುರುವಾದ ಬಂಗಾರದ ಕಾಂತಿಯುಳ್ಳ, ತ್ರಿಲೋಕದಲ್ಲೂ ವಂದ್ಯರಾದ ಬೃಹಸ್ಪತ್ಯಾಚಾರ್ಯರನ್ನು ನಮಿಪೆ.
ಶುಕ್ರ
ಬಿಳಿಯ ಬಟ್ಟೆಯನ್ನು ಧರಿಸಿದ ಬಿಳಿ ಶರೀರದ ದೈತ್ಯ ಮಂತ್ರಿ. ನಾಲ್ಕು ಕೈಗಳಲ್ಲಿ ದಂಡ, ವರಮುದ್ರೆ, ಕಮಂಡಲು, ಜಪಮಾಲೆಯನ್ನು ಧರಿಸಿರುವ ತಪಸ್ವಿ, ಶಾಸ್ತ್ರಾಸ್ತ್ರ ಕೋವಿದ.
ಆಜಾನುಬಾಹು, ಸುಂದರ ಚಾರುವೃತ್ತ ತೊಡೆಗಳು, ಆಕರ್ಷಕ ಮುಖಕಾಂತಿ, ಮನಸೆಳೆಯುವ ಕೇಶರಾಶಿ, ಕಾಮುಕತೆ, ರಾಜಸ ಪ್ರಕೃತಿ, ಕ್ರೀಡಾತತ್ಪರ, ಬುದ್ಧಿವಂತ, ವಿಶಾಲನೇತ್ರ, ಸ್ಥೂಲಭುಜ, ಶುಭ್ರವರ್ಣದ ಬಟ್ಟೆ ಇವು ಶುಕ್ರನ ಲಕ್ಷಣಗಳು.
ಭೃಗು ಮಹರ್ಷಿಯ ಮಗ, ತಾಯಿ ಪುಲೋಮೆ. ಸಹೋದರ ಚ್ಯವನ. ಪತ್ನಿ ಊರ್ಜಸ್ವತಿ, ಮಗಳು ದೇವಯಾನಿ. ಕಂಡಾಮರ್ಕರು ಮಕ್ಕಳು.
ದೈತ್ಯರ ರಕ್ಷಣೆಗಾಗಿ ಬದ್ಧಕಚ್ಛಣದ ಬ್ರಾಹ್ಮಣ. ತಲೆಕೆಳಗೆ ಮಾಡಿ ಧೂಮಪಾನಮಾಡುತ್ತಾ ಸಹಸ್ರವರ್ಷ ತಪಸ್ಸನ್ನಾಚರಿಸಿ ಮೃತಸಂಜೀವಿನೀ ವಿದ್ಯೆಯನ್ನು ಪಡೆದ
ಹಠವಾದಿ. ಆ ಮೂಲಕ ದೇವಾಸುರ ಯುದ್ಧದಲ್ಲಿ ಮಡಿದ ರಾಕ್ಷಸನ್ನು ಪುನಃ ಜೀವಿಸುವಂತೆ ಮಾಡಿದ. ಬಲಿಯು ಕೇಳದಿದ್ದಾಗ ಗಿಂಡಿಯ ತೂತಿನಲ್ಲಿ ಕುಳಿತು ಜಲಧರೆಯನ್ನು ತಡೆದ. ದರ್ಭೆಯಿಂದ ಚುಚ್ಚಿಸಿಕೊಂಡು ಒಕ್ಕಣ್ಣನಾದ.
ಶಿವನ ಶುಕ್ರ (ವೀರ್ಯ) ದಿಂದ ಜನಿಸಿದುದರಿಂದ ಶುಕ್ರನೆನಿಸಿದನೆಂಬ ಕಥೆ ಶಾಂತಿಪರ್ವದಲ್ಲಿದೆ. ಮಿಥುನಭಾವದಲ್ಲಿ ಪ್ರಸಿದ್ಧನಾದ ಅರ್ಧನಾರೀಶ್ವರನ ಶುಕ್ರದಿಂದ ಜನಿಸಿದುದರಿಂದಲೇ ಈತನಿಗೆ ಕಾಮುಕತೆ, ಶುಕ್ರಪ್ರಾಧಾನ್ಯಗಳು ಸ್ವರೂಪಗುಣವಾಗಿದೆ.
ಆದ್ದರಿಂದಲೇ ಈತ ಸ್ತ್ರೀಕಾರಕ.
ಈ ಗ್ರಹವನ್ನು ಸ್ತುತಿಸುವ ಸ್ತೋತ್ರ ಹೀಗಿದೆ. ಈ ಶ್ಲೋಕವನ್ನು ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹದೋಷವನ್ನು ಪರಿಹರಿಸಿಕೊಳ್ಳಬಹುದು.
ಹಿಮಕುಂದಮೃಣಾಲಾಭಂ ದೈತ್ಯಾನಾಂ ಪರಮಂ ಗುರುಮ್ |
ಸರ್ವಶಾಸ್ತ್ರಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಮ್ ||
ಹಿಮ, ದುಂಡುಮಲ್ಲಿಗೆ, ತಾವರೆದಂಟುಗಳಂತೆ ಬಿಳಿಯ ಕಾಂತಿಯುಳ್ಳ, ದೈತ್ಯರ ಪರಮಗುರುವಾದ, ಸರ್ವಶಾಸ್ತ್ರಗಳನ್ನು ಪ್ರವಚನ ಮಾದಬಲ್ಲ
ಭೃಗುಗೋತ್ರೋತ್ಪನ್ನರಾದ ಶುಕ್ರಾಚಾರ್ಯರನ್ನು ವಂದಿಪೆ.
ಶನಿ
ನಾಲ್ಕು ಕೈಗಳಲ್ಲಿ ಬಿಲ್ಲು, ಬಾಣ, ಚರ್ಮ, ಶೂಲಗಳನ್ನು ಧರಿಸಿದ ಗೃಧ್ರವಾಹನ. ಇಂದ್ರನೀಲದಂತೆ ನೀಲಿ ಮೈಬಣ್ಣದ ಈತ ಮಂದಗತಿ. ಮಂದ, ಸ್ಥಿರ, ಶನೈಶ್ಚರ, ರವಿಸುತ ಇವು ಈತನ ಪ್ರಸಿದ್ಧನಾಮಗಳು.
ಕಪ್ಪು ಎನಿಸಿದ ಕಡುನೀಲಿ ಬಣ್ಣದ ಶರೀರ, ಗುಳಿ ಬಿದ್ದ ಕಣ್ಣುಗಳು,ಚಾಡಿ ಹೇಳಿ ಜಗಳ ಹುಟ್ಟಿಸುವ ಸ್ವಭಾವ, ಕೋಲುದೇಹ, ಆಲಸ್ಯ, ಮೂರ್ಖತೆ, ದೊಡ್ಡ ಉಗುರು-ಹಲ್ಲುಗಳು, ರೋಮ ಮುಚ್ಚಿದ ಶರೀರ, ತಾಮಸ ಪ್ರಕೃತಿ, ಅತಿಕೋಪ, ಮುಪ್ಪು, ಅತಿನೀಲಿ ಬಣ್ಣದ ಉಡುಗೆಗಳು. ಇದು ಶಾಸ್ತ್ರಜ್ಞರು ಶನಿಯನ್ನು ಕಂಡ ರೀತಿ.
ಸೂರ್ಯನಿಗೆ ಛಾಯಾದೇವಿಯಲ್ಲಿ ಹುಟ್ಟಿದ ಎರಡನೇ ಮಗ ಶನೈಶ್ಚರ. ಅಣ್ಣ ಸಾವರ್ಣಿ ಮನು. ತಂಗಿ ತಪತಿ. ಶನೈಶ್ಚರ ಮಹಾತ್ಮೆಯನ್ನು ಹೇಳುತ್ತಾ ಕುಳಿತರೆ ರಾತ್ರಿ ಕಳೆದು ಬೆಳಗಾದೀತು. ಈತ ಗ್ರಹಗಳಲ್ಲಿ ತೀಕ್ಷ್ಣಗ್ರಹ, ಸ್ವಾಭಿಮಾನಿ
ಮೇಷಾದಿರಾಶಿಗಳಲ್ಲಿ ಬಹಳ ನಿಧಾನವಾಗಿ ಸಂಚರಿಸುವುದರಿಂದ ಇವರ್ನಿಗೆ “ಶನೈಶ್ಚರ” ಎಂದು ಹೆಸರು. “ಶನೈಃ”ಎಂದರೆ ಮೇಲ್ಭಾಗ ಎಂದರ್ಥ.ಚಂದ್ರನು ಎರಡೂ ಕಾಲುದಿನಗಳಲ್ಲಿ ಒಂದು ರಾಶಿಯನ್ನು ಕ್ರಮಿಸುತ್ತಾನೆ. ಸೂರ್ಯ ಒಂದು ತಿಂಗಳಲ್ಲಿ ಒಂದು ರಾಶಿಯಿಂದ ಸಂಕ್ರಮಿಸುತ್ತಾನೆ. ಆದರೆ ಶನಿ ಎರಡೂವರೆ ವರ್ಷಗಳ ತನಕ ಒಂದು ರಾಶಿಯಿಂದ ಕದಲುವುದಿಲ್ಲ. ಶ್ಥಿರವಾಗಿ ಕುಳಿತು ಬಿಡುತ್ತಾನೆ. ಆದ್ದರಿಂದಲೇ ಈತ ಸ್ಥಿರ. ಮಂದನಾಗಿ ಸಂಚರಿಸುವುದರಿಂದ ಮಂದ. ಶನೈಃ ಶನೈಃ ಸಾಗುವುದರಿಂದ ಶನಿ.
ಗ್ರಹಗಳು ಗೋಚಾರರೀತ್ಯಾ ರಾಶಿಗಳಲ್ಲಿರುವ ಕಾಲಮಾನ
ರವಿ 1 ತಿಂಗಳು
ಚಂದ್ರ 1 ದಿನ
ಕುಜ 2 1/2 ತಿಂಗಳು
ಬುಧ ೧ ತಿಂಗಳು
ಗ್ರು ೧೨ ತಿಂಗಳು
ಶುಕ್ರ ೧ ತಿಂಗಳು
ಶನಿ ೩೦ ತಿಂಗಳು
ರಾಹು – ಕೇತು ೨೦ ತಿಂಗಳು
“ಶಂ ನಯತೀತಿ ಶನಿಃ” ಎಂಬ ವಿವಕ್ಷೆಯಿಂದ ಶನಿ ಎಂದರೆ ಮಂಗಳ ಸುಖಕಾರಕ ಎಂದರ್ಥ. ಏನಿದು? ಹಗಲು ಇರುವ ಕಾಯಿ ಹಾಗಲಕಾಯಿ ಎನ್ನುವಷ್ಟು ಅಬದ್ಧವಾದ ಅರ್ಥವನ್ನು ಮಾಡುತ್ತಿರುವಿರಲ್ಲಾ! ಕಾಟ ಕೊಡುವ ಶನಿ ಸುಖಕಾರಕನೇ? ಎನ್ನಬೇಡಿ. ಕಷ್ಟ ಕೊಡುವುದೂ ಸುಖಕ್ಕಾಗಿಯೇ. ಶನಿಗ್ರಹದ ಕಾಟವಿದೆಯೆಂದು ತಿಳಿದಾಗ ದೇವರ ನೆನಪಾಗುತ್ತದೆ. ಪೂಜೆ, ಜಪಗಳು ಆರಂಭವಾಗುತದೆ. “ಸಂಕಟಬಂದಾಗ ವೆಂಕಟರಮಣ” ಎಲ್ಲವೇ? ಪರಮಾತ್ಮನೂ ಹೇಳುತ್ತಾನೆ “ಯಸ್ಯಾನುಗ್ರಮಿಚ್ಛಾಮಿ ತಸ್ಯ ವಿತ್ತಂ ಹರಾಮ್ಯಹಮ್” ಒಬ್ಬನನ್ನು ಮೇಲೆತ್ತಬೇಕೆಂದು ಬಯಸಿದರೆ ಅವನಿಗೆ ಕಾಟ ಕೊಡಲಾರಂಭಿಸುತ್ತೇನೆ. ಶನಿಯ ಕಾಟ ಕಹಿಯಾದ ಔಷಧಿಯಂತೆ ಪರಿಣಾಮದಲ್ಲಿ ಅಮೃತೋಪಸಮವಾದ ಸುಖಕ್ಕಾಗಿ.
ಏಳುವರೆ ಶನಿ :
ಈ ಶನಿ ತಾನು ಒಂದು ರಾಶಿಯಲ್ಲಿರುವ ಎರಡೂವರೆ ವರ್ಷದಲ್ಲಿ ಆ ರಾಶಿಯೇ ಜನ್ಮರಾಶಿಯಾಗಿ ಉಳ್ಳಜನರನ್ನು ಕಾಡುತ್ತಾನೆ. ಆ ರಾಶಿಯಲ್ಲಿದ್ದಾಗ ಮಾತ್ರವಲ್ಲ,
ಅದರ ಇಕ್ಕೆಲಗಳಲ್ಲಿರುವ ರಾಶಿಯಲ್ಲಿದ್ದಗಲೂ ಕಾದುತ್ತಾನೆ. ಹೀಗೆ ವೃಷಭರಾಶಿಯಲ್ಲಿರುವ ವ್ಯಕ್ತಿಗೆ ಮೇಷರಾಶಿಯಲ್ಲಿ ಶನಿಯಿದ್ದಾಗಲೇ ಶನಿಕಾಟ ಪ್ರಾರಂಭವಾಗುತ್ತದೆ. ಮಿಥುನರಾಶಿಯಲ್ಲಿ ಶನಿಚರಿಸುವ ಎರಡೂವರೆವರ್ಷಗಳ ಕಾಲವೂ ಇರುತ್ತದೆ. ಹೀಗೆ ೨ ಳಿ + ೨ ಳಿ + ೨ ಳಿ = ೭ಳಿ ವರ್ಷಗಳ
ದೀರ್ಘಕಾಲದ ಶನಿಸಂಚಾರವನ್ನು ಕನ್ನಡದಲ್ಲಿ ಏಳೂವರೆ ಶನಿ ಎಂದು ಕರೆದರೆ ಹಿಂದಿಯಲ್ಲಿ ಸಾಡೇಸಾತ್ ಎನ್ನುತ್ತಾರೆ. ಒಮ್ಮೆ ಏಳೂವರೆ ಶನಿ ಮುಗಿದು ಮತ್ತೆ
ಇಪ್ಪತ್ತೆರಡೂವರೆ ವರ್ಷಗಳಿಗೆ ಈ ೭ಳಿ ಶನಿ ಸಂಚಾರ ಪ್ರಾಪ್ತವಾಗುತ್ತದೆ.
ದೇವತಾರಾಧನೆ, ಗ್ರಹಪೂಜೆಗಳಿಂದ ವಿಮುಖರಾದ ಜನರಿಗೆ ಸಂಕಟವನ್ನು ಕೊಡುವವನಾದ್ದರಿಂದಲೇ ಶನಿಗ್ರಹ ಹೆಚ್ಚು ಪ್ರಚಾರದಲ್ಲಿದ್ದಾನೆ. ಶ್ರೀಮದ್ವಾದಿರಾಜ
ತೀರ್ಥರು ತಾವು ರಚಿಸಿದ ಮೂರು ಶ್ಲೋಕದ ನವಗ್ರಹಸ್ತೋತ್ರದಲ್ಲಿ ಶನಿಯು ಮಂಗಳವನ್ನು ಕೊಡಲಿ ಎಂದು ಸ್ತುತಿಸಿ ಕೊನೆಯ ಒಂದು ಶ್ಲೋಕದಲ್ಲಿ ಪ್ರತ್ಯೆಕವಾಗಿ
ಶನಿಯನ್ನು ಸ್ತುತಿಸಿದ್ದಾರೆ.
ಶನೇ ದಿನಮಣೇಃ ಸೂನೋ ಹ್ಯನೇಕಗುಣಸನ್ಮಣೇ |
ಅರಿಷ್ಟಂ ಹರ ಮೇsಭೀಷ್ಟಂ ಕುರು ಮಾಕುರು ಸಂಕಟಮ್ ||
ಉಳಿದ ಗ್ರಹರಿಗಿಲ್ಲದ ಮರ್ಯಾದೆ ಈ ರವಿಕುವರನಿಗೆ, ಪೆಟ್ಟು ಕೊಡುವವನೇ ದೊಡ್ಡಪ್ಪನಲ್ಲವೇ ?
ಈ ಗ್ರಹವನ್ನು ಸ್ತುತಿಸುವ ಸ್ತೋತ್ರ ಹೀಗಿದೆ. ಈ ಶ್ಲೋಕವನ್ನು ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹದೋಷವನ್ನು ಪರಿಹರಿಸಿಕೊಳ್ಳಬಹುದು.
ನೀಲಾಂಜನಗಿರಿಪ್ರಖ್ಯಂ ರವಿಸೂನುಂ ಯಮಾಗ್ರಜಮ್ |
ಛಾಯಾಮಾರ್ತಾಂಡಸಂಭೂತಂ ಪ್ರಣಮಾಮಿ ಶನೈಶ್ಚರಮ್ ||
ಇಂದ್ರನೀಲಪರ್ವತದಂತೆ ನೀಲಕಾಂತಿಯುಳ್ಳ ರವಿಕುವರನಾದ, ಮಹಾತೇಜಸ್ವಿಯಾದ, ಛಾಯಾದೇವಿಯಲ್ಲಿ ಸೂರ್ಯನಿಗೆ ಜನಿಸಿದ, ಶನಿಶ್ಚರನಿಗೆ ಶಿರ
ಬಾಗುವೆ.
ರಾಹು
ನಾಲ್ಕು ಕೈಗಳು, ಖಡ್ಗ, ಚರ್ಮ, ಶೂಲ, ವರಮುದ್ರೆಗಳು ಕೈಗಳಲ್ಲಿ ವಿಕೃತವಾದ ಕರಾಳಮುಖ, ಕಪ್ಪು ಸಿಂಹಾಸನದಲ್ಲಿ ಎರಿರುವ ಕಪ್ಪು ಬಟ್ಟೆಯ ಭಯಂಕರಗ್ರಹ.
ಕಪ್ಪಾದ ಮೈಬಣ್ಣ, ದೀರ್ಘವಾದ ಕೂಲು ಶರೀರ. ವ್ರಣಾದಿಪೀಡೆ, ಪಾಷಡವಾದಿ, ಬಿಕ್ಕಳಿಕೆಯ ತೊದಲು ಮಾತು, ಸುಳ್ಳುಗಾರಿಕೆ, ಕಪಟ,ಕುಷ್ಠಾದಿರೋಗ, ಪರನಿಂದೆ, ಬುದ್ಧಿಹೀನತೆ, ಇವು ರಾಹುವಿನ ಲಕ್ಷಣ.
ದಕ್ಷನ ಮಗಳಾದ ಸಿಂಹಿಕೆಯ ಮಗ. ಅಮೃತಪ್ರಾಶನ ಸಂದರ್ಭದಲ್ಲಿ ವಿಷ್ಣು ಇವನ ಶಿಚ್ಛೇದವನ್ನು ಮಾಡಿದನು. ವೇಷ ಪಲ್ಲಟಿಸಿದ ರಾಹುವನ್ನು ವಿಷ್ಣುವಿಗೆ ಸೂಚಿಸಿದವರು ಸೂರ್ಯ ಚಂದ್ರರು. ಆದ್ವೇಷದಿಂದ ಈತ ಗ್ರಹಣಕಾಲದಲ್ಲಿ ಸೂರ್ಯ ಚಂದ್ರರನ್ನು ನುಂಗುತ್ತಾನೆ ಎಂಬುದು ಶಾಸ್ತ್ರ ಸಂಪ್ರದಾಯದ ಮಾತು.
ಚಂದ್ರ ಸೂರ್ಯನನ್ನು ಹಿಡಿಯುವುದರಿಂದಲೇ ಈತ ಗ್ರಹವೆನಿಸಿದ್ದಾನೆ. ಈ ಬಗ್ಗೆ ವಿಶೇಷ ವಿಷಯವನ್ನು ಮುಂದೆ ಹೇಳಲಾಗುತ್ತದೆ.
ಯಾರು ಈ ರಾಹು! ಕೇತು!
ವಿಷ್ಣುಚಕ್ರದಿಂದ ಕತ್ತರಿಸಲ್ಪಟ್ಟ ರಾಕ್ಷಸನ ರುಂಡಮುಂಡಗಳೇ ರಾಹುಕೇತುಗಳು. ಈ ರಾಹುಕೇತುಗಳೇ ಸೂರ್ಯ ಚಂದ್ರರನ್ನು ಹಿಡಿದು ಕಬಳಿಸುತ್ತಾ ದ್ವೇಷಸಾಧನೆ
ಮಾಡುತ್ತಾರೆ ಎಂಬುದು ಸಾಮಾನ್ಯ ಭಾವನೆ. ರಾಕ್ಷಸರಾದ ಈ ರಾಹು ಕೇತುಗಳು ಲೋಕಕ್ಕೆ ಉಪಕಾರ ಮಾಡುವ ದೇವತೆಗಳಲ್ಲ. ಹಿಂಸಾಪ್ರಿಯ ರಾಕ್ಷಸರು.
ಸ್ವಭಾವತಃ ಕ್ರೂರಿಗಳು. ಬ್ರಹ್ಮದ್ವೇಷಿಗಳು. ಇವರನ್ನು ಪೂಜಿಸಬಹುದೇ? ಒಂದು ವೇಳೆ ಪೂಜೆಯಿಂದ ಅಭೀಷ್ಟ ದೊರೆತರೂ ಇದು ತಾಮಸ ಪೂಜೆಯಾಗಿಲ್ಲವೇ? ತತ್ಕಾಲಕ್ಕೆ ಸತ್ಪಲ ದೊರೆತರೂ ಕೊನೆಯಲ್ಲಿ ಅನರ್ಥವಲ್ಲವೇ? ಲೋಕವನ್ನು ಕಾಪಾಡುವ ಸೂರ್ಯಚಂದ್ರರನ್ನು ಶಾಶ್ವತವಾಗಿ ದ್ವೇಷಿಸುವ
ಇವರು ಆಗಾಗ ಗ್ರಹಣ ಮಾಡಿ ಲೋಕಕ್ಕೆ ಅನಿಷ್ಟ ತರುವರು. ಇಂತಹ ರಾಹು ಕೇತುಗಳನ್ನು ಚಂದ್ರ ಸೂರ್ಯರ ಜೊತೆಗೆ ಪ್ರತಿಷ್ಠಾಪಿಸಿ ಪೂಜಿಸುವುದು ಎಷ್ಟೊಂದು ಅಬದ್ಧ!! ಬರಿಯ ರುಂಡವನ್ನೇ ರಾಹುವೆಂದು ಕರೆಯುವುದಾದರೆ “ಖಡ್ಗಚರ್ಮಧರಂ ಭೀಮಂ..” ಎಂಬುದಾಗಿ “ಕರಾಲವದನಃ ಖಡ್ಗಚರ್ಮಶೂಲೀ
ವರಪ್ರದಃ” ಎಂದೂ ಖಡ್ಗ ಚರ್ಮ, ಶೂಲ, ವರಮುದ್ರೆಗಳನ್ನು ಧರಿಸಿದ ಚತುರ್ಭುಜನನ್ನಾಗಿ ಸ್ತೋತ್ರಮಾಡುವುದು ಹೇಗೆ ಸರಿಯಾದೀತು? ಕತ್ತಿನಿಂದ ತರಿಯಲ್ಪಟ್ಟ ತಲೆಗೆ ಕೈಯಿದೆಯೇ? ಒಂದು ವೇಳೆ ಎದೆಯಿಂದಲೇ ಕತ್ತರಿಸಿರುವುದರಿಂದ ಕೈಯಿರುವುದು ಸರಿಯೆಂದು ವಾದಿಸುವುದಾದರೆ ಕೇತುವಿಗೆ ಕೈಯಿರಬಾರದು. “ಧೂಮ್ರಾಃ ದ್ವಿಬಾಹವಃ ಸರ್ವೇ” ಎಂದು ಕೇತುಗಳನ್ನು ದ್ವಿಬಾಹುಗಳೆಂದು ಸ್ತುತಿಸುತ್ತೇವೆ. ಅಲ್ಲದೆ ನಾಲ್ಕು ಕೈಗಳುಳ್ಳ ರಾಹು ರಾಕ್ಷಸನೆನಿಸುವುದು ಹೇಗೆ? ಯಾವ ರಾಕ್ಷಸನಿಗೆ ನಾಲ್ಕು ಕೈಗಳಿವೆ? ನಾಲ್ಕು ಕೈಗಳು ದೇವತಾಶಕ್ತಿಯ ದ್ಯೋತಕಗಳಲ್ಲವೇ?
ರಾಹುವಿನ ಕಬಂಧವೇ ಕೇತುವಾದರೆ ನೂರು ಜನ ಕೇತುಗಳೆನ್ನುವುದು ಎಂತು? “ಯೇ ಬ್ರಹ್ಮಪುತ್ರಾಃ ಬ್ರಹ್ಮಸಮಾನ ವಕ್ತ್ರಾಃ” ಎಂಬುದಾಗಿ ಕೇತುಗಳನ್ನು ಬ್ರಹ್ಮಪುತ್ರರು, ಬ್ರಹ್ಮನಂತಹ ಮುಖದವರು ಎಂದು ಸ್ತುತಿಸುವುದು ಹೇಗೆ ಸಾಧ್ಯ? ನವಗ್ರಹಪ್ರತಿಮೆಗಳ ಬಗ್ಗೆ ಹೇಳುತ್ತಾ ನವಗ್ರಹಕಾರಿಕೆಯಲ್ಲಿ “ಸರ್ವೇ ಕಿರೀಟಿನಃ ಕಾರ್ಯಾಃ” ಎಲ್ಲಾ ಗ್ರಹಗಳಿಗೂ ಕಿರೀಟವಿರುವಂತೆ ಪ್ರತಿಮೆಯನ್ನು ಮಾಡಬೇಕೆಂದು ಹೇಳುತ್ತದೆ. ತಲೆಯಿಲ್ಲದೆ ಕಿರೀಟವಿಡುವುದೆಂತು?
ಹೀಗೆ ಸಮಸ್ಯೆಗಳನ್ನು ಬಿಡಿಸುತ್ತಾ ಹೊರಟರೆ ಚಕ್ರವ್ಯೂಹಕ್ಕೆ ಹೊಕ್ಕ ಅನುಭವವಾಗುತ್ತದೆ. ಪೂರ್ವೋತ್ತರ ವಿರೋಧ ಬರದಂತೆ ಈ ಕಗ್ಗಂಟುಗಳನ್ನು ಬಿಡಿಸುವ ಬಗೆಯನ್ನು ವಿದ್ವಾಂಸರಾದ ಶ್ರೀಯುತ ಹಯವದನ ಪುರಾಣಿಕರು “ಅಭಿಷೇಕ” ಎಂಬ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾದ “ರಾಹು ಕೇತು” ಎಂಬ ತಮ್ಮ ಲೇಖನದಲ್ಲಿ ವಿಮರ್ಶಾತ್ಮಕವಾಗಿ ತಿಳಿಸಿದ್ದಾರೆ. ತಿಳಿಯಲೇ ಬೇಕಾದ ವಿಷಯ ಇಷ್ಟು “ಶಿರಸ್ತು ತಸ್ಯ ಗ್ರಹತಾಮವಾಪ ಸುರೈಃ ಸಮಾವಿಷ್ಯಮಥೋ ಸಬಾಹುಃ”
(ಮ.ಭಾ.ತಾ.) ಎಂಬ ಮಧ್ವಾಚಾರ್ಯರ ಮಾತಿನಂತೆ ದೇವತೆಗಳ ಸನ್ನಿಧಾನವುಳ್ಳ ರಾಹುವಿನ ತಲೆ ಗ್ರಹವೆನಿಸಿತು. ಇಲ್ಲಿ ರಾಹುವಿನ ತಲೆ ಅಧಿಷ್ಠಾನ ಮಾತ್ರ. ಅದರಲ್ಲಿ ದೇವತಾಸನ್ನಿಧಾನವಿದೆ. ಶಾಲಗ್ರಮದಲ್ಲಿ ಹರಿಸಾನ್ನಿಧ್ಯವಿರುವಂತೆ. ದುಂಡಗಿನ ಶಾಲಗ್ರಮದಲ್ಲಿ ಚತುರ್ಭುಜನಾದ ಹರಿಯಿರುವಂತೆ ದುಂದಗಿನ ರಾಹು ಶಿರದಲ್ಲಿ ಚತುರ್ಭುಜದೇವತೆಯನ್ನುಧ್ಯಾನಿಸುವುದು ಅಸಂಗತವಾಗದು. ಆ ದೇವತೆಯನ್ನು ಉದ್ದೇಶಿಸಿಯೇ ಪೂಜೆ, ಹೋಮಗಳನ್ನು ಮಾಡಬೇಕು.
“ರಾಹುಜ್ಯೇಷ್ಠಂ ಕೇತುಕಮ್” ಎಂಬ ವಚನಾನುಸಾರ ರಾಹುವಿನ ಶಿರದಲ್ಲೆ ಸನ್ನಿಹಿತರಾದ ಕೇತುಗಳೆಂಬ ನೂರು ದೇವತೆಗಳು ಕೇತುಗ್ರಹಕ್ಕೆ ಅರ್ಪಿಸಿದ ಪೂಜೆ
ಆಹುತಿಗಳನ್ನು ಸ್ವೀಕರಿಸುತ್ತಾರೆ. ಈ ದೇವತೆಗಳು ಬ್ರಹ್ಮಪುತ್ರರು, ಬ್ರಹ್ಮಸಮಾನವಕ್ತ್ರರು, ಬ್ರಹ್ಮಜ್ಞಾನಿಗಳು. ಇವರೇ ಕೇತುಗಳು. ರಾಹುವಿನ ಕಬಂಧವೇ ಕೇತುಗ್ರಹವೆನ್ನುವುದಕ್ಕೆ ಪ್ರಮಾಣವಿಲ್ಲ. ರಾಹು ಪುಚ್ಛವೆನಿಸಿದ ಅದೂ ಒಂದು ಕೇತುವೇ. ಸಾವಿರಾರು ಧೂಮಕೇತುಗಳಲ್ಲಿ ಅದೂ ಒಂದು ಕೇತುವೇ. ಸಾವಿರಾರು ಧೂಮಕೇತುಗಳಲ್ಲಿ ಅದೂ ಒಂದು. ಅದರೆ ಗ್ರಹವಲ್ಲ.
ಈ ರಾಹುಕೇತುಗಳ ಜೊತೆ ಸೂರ್ಯ, ಚಂದ್ರರನ್ನು ದ್ವೇಷಿಸುವ ರಾಹುವೆಂಬ ರಾಕ್ಷಸನೂ ಹರಿಯ ಅನುಗ್ರಹದಿಂದ ಇದ್ದಾನೆ. ತತ್ವವನ್ನು ತಿಳಿಯದೆ ಪೂಜಿಸಿದಲ್ಲಿ ಆ ಪೂಜೆ ರಾಕ್ಷಸನ ಪಾಲಾದೀತು. ತಿಳಿದು ಪೂಜಿಸಬೇಕು.
ಇನ್ನೊಂದು ದೃಷ್ಟಿಕೋನದಿಂದ ನೋಡುವುದಾದರೆ ರಾಹು-ಕೇತುಗಳು ರಾಶಿಚಕ್ರದ ಎರಡು ಬಿಂದುಗಳು. ರಾಶಿಚಕ್ರದ ಮಧ್ಯದಲ್ಲಿ ಗುರುತಿಸಬಹುದಾದ ಪರಸ್ಪರ
ವಿರುದ್ಧ ದಿಕ್ಕಿನಲ್ಲಿರುವ ಎರಡು ಕಪ್ಪು ಬಿಂದುಗಳು. ಭೂಮಿಗೆ ಉತ್ತರ ಧ್ರುವ ದಕ್ಷಿಣದ್ರುವಗಳಿರುವಂತೆ. ಆದ್ದರಿಂದಲೇ ರಾಶಿಚಕ್ರದಲ್ಲಿ ರಾಹು, ಕೇತುಗಳ ಮಧ್ಯೆ
ಸರಿಯಾಗಿ ಆರು ರಾಶಿಯ ಅಂತರವಿರುತ್ತದೆ. ಅಂದರೆ ಕೇತುವಿನಿಂದ ಏಳನೇ ರಾಶಿಯಲ್ಲಿ ರಾಹುವಿರುತ್ತಾನೆ. ಅವನಿಂದ ಏಲನೇ ಕೋಣೇಯಲ್ಲಿ ಕೇತುವಿರುತ್ತಾನೆ. ಉದಾಹರಣೆಗೆ ರಾಹು ಮೇಷದಲ್ಲಿದ್ದರೆ ಕೇತು ತುಲಾದಲ್ಲಿರುತ್ತಾನೆ. ರಾಹು ವೃಷಭಕ್ಕೆ ಚಲಿಸಿದ ಕ್ಷಣದಲ್ಲಿಯೇ ಕೇತು ವೃಶ್ಚಿಕಕ್ಕೆ ವಾಲಿರುತ್ತಾನೆ. ಗಡಿಯಾರದ ಮುಳ್ಳಿನ ತುದಿ ಹನ್ನೆರಡರಲ್ಲಿದ್ದಾಗ ಅದರ ಹಿಂತುದಿ ಅಲ್ಲಿರಲೇಬೇಕು. ಮುಂಬದಿ ಒಂದಕ್ಕೆ ಸಾಗಿದ ಕ್ಷಣದಲ್ಲಿಯೇ ಹಿಂತುದಿ ಏಳಕ್ಕೆ ವಾಲುತ್ತದೆ. ಹಾಗೆಯೇ ರಾಹುಕೇತುಗಳು ರಾಶಿಚಕ್ರದ ಹನ್ನೆರಡು ಬಿಂದುಗಳನ್ನು ಮಧ್ಯದಿಂದ ಭಾಗಿಸುವ ಮುಳ್ಳಿನ ಇಕ್ಕೆಲದ ಎರಡು ಬಿಂದುಗಳು. ರಾಶಿಚಕ್ರದಲ್ಲಿ ತಿರುಗುತ್ತಾ ಹುಣ್ಣಿಮೆ ಅಮಾವಾಸ್ಯೆಗಳಂದು ಚಂದ್ರ, ಸೂರ್ಯರು ರಾಹು, ಕೇತುಗಳಿರುವ ಸ್ಥಾನಕ್ಕೆ ಬಂದರೆ ಗ್ರಹಣವಾಗಿದೆಯೆಂದು ತಿಳಿಯಬೇಕು. ರಾಹುವನ್ನು ಕಪ್ಪುಬಣ್ಣದ ನೆರಳು, ಕತ್ತಲೆ ಎಂಬ ಭಾವದಿಂದಲೇ ಛಾಯಾಗ್ರಹ, ತಮಃ ಎಂದು ಕರೆಯಲಾಗುತ್ತದೆ.
ಈ ಗ್ರಹವನ್ನು ಸ್ತುತಿಸುವ ಸ್ತೋತ್ರ ಹೀಗಿದೆ. ಈ ಶ್ಲೋಕವನ್ನು ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹದೋಷವನ್ನು ಪರಿಹರಿಸಿಕೊಳ್ಳಬಹುದು.
ಯೋ ವಿಷ್ಣುನೈವಾಮೃತಂ ಪೀಯಮಾನಂ ಶಿರಚ್ಛಿತ್ವಾಗ್ರಹಭಾವೇನಯುಕ್ತಃ |
ಯಶ್ಚಂದ್ರಸೂರ್ಯೌ ಗ್ರಸತೇ ಪರ್ವಕಾಲೇ ರಾಹುಂ ಸದಾ ಶರಣಮಹಂ ಪ್ರಪದ್ಯೇ ||
ಅಮೃತವನ್ನು ಕುಡಿಯುತ್ತಿರುವ ತಲೆಯನ್ನು ವಿಷ್ಣು ಕತ್ತರಿಸಿದ. (ದೇವತಾ ಸಾನಿಧ್ಯದಿಂದ) ಅದೆ ತಲೆ ಗ್ರಹವೆನಿಸಿತು. (ದೈತ್ಯಪ್ರವೃತ್ತಿಯಿಂದ) ಈ
ರಾಹು ಹುಣ್ಣಿಮೆ ಅಮಾವಾಸ್ಯೆಗಳಂದು ಚಂದ್ರ ಸೂರ್ಯರನ್ನು ನುಂಗುತ್ತಾನೆ. ಇಂತಹಾ ರಾಹುವನ್ನು ಸರ್ವದಾ ಮೊರೆಹೊಂದುತ್ತೇನೆ.
ಕೇತು
ಕೇತುಗಳು ನೂರು ಜನ. ಬ್ರಹ್ಮನ ಮಕ್ಕಳು. ಎರಡು ಕೈ, ವಿಚಿತ್ರಾಯುಧಧಾರಿಗಳು, ಗೃಧ್ರಾಸನಸ್ಥಿತರು
ಉಗ್ರವಾದ ಕೆಂಪು ಕಣ್ಣುಗಳು, ವಿಷಕಾರುವ ಮಾತು, ದೀರ್ಘಶರೀರ, ಶಸ್ತ್ರಧಾರಿ ಕೈಗಳು, ಆಚಾರಹೀನ, ಕಂದುಬಣ್ಣ, ದೂಮಸೇವನೆ, ಕಜ್ಜಿ, ಬೇನೆಗಳುಳ್ಳ ಶರೀರ, ಕ್ರೂರ ಸ್ವಭಾವ, ಇವು ಕೇತುವಿನ ಬಗ್ಗೆ ಶಾಸ್ತ್ರ ಕೊಡುವ ಮಾಹಿತಿ.
ಯಾರು ಈ ರಾಹು! ಕೇತು!
ವಿಷ್ಣುಚಕ್ರದಿಂದ ಕತ್ತರಿಸಲ್ಪಟ್ಟ ರಾಕ್ಷಸನ ರುಂಡಮುಂಡಗಳೇ ರಾಹುಕೇತುಗಳು. ಈ ರಾಹುಕೇತುಗಳೇ ಸೂರ್ಯ ಚಂದ್ರರನ್ನು ಹಿಡಿದು ಕಬಳಿಸುತ್ತಾ ದ್ವೇಷಸಾಧನೆ
ಮಾಡುತ್ತಾರೆ ಎಂಬುದು ಸಾಮಾನ್ಯ ಭಾವನೆ. ರಾಕ್ಷಸರಾದ ಈ ರಾಹು ಕೇತುಗಳು ಲೋಕಕ್ಕೆ ಉಪಕಾರ ಮಾಡುವ ದೇವತೆಗಳಲ್ಲ. ಹಿಂಸಾಪ್ರಿಯ ರಾಕ್ಷಸರು.
ಸ್ವಭಾವತಃ ಕ್ರೂರಿಗಳು. ಬ್ರಹ್ಮದ್ವೇಷಿಗಳು. ಇವರನ್ನು ಪೂಜಿಸಬಹುದೇ? ಒಂದು ವೇಳೆ ಪೂಜೆಯಿಂದ ಅಭೀಷ್ಟ ದೊರೆತರೂ ಇದು ತಾಮಸ ಪೂಜೆಯಾಗಿಲ್ಲವೇ? ತತ್ಕಾಲಕ್ಕೆ ಸತ್ಪಲ ದೊರೆತರೂ ಕೊನೆಯಲ್ಲಿ ಅನರ್ಥವಲ್ಲವೇ? ಲೋಕವನ್ನು ಕಾಪಾಡುವ ಸೂರ್ಯಚಂದ್ರರನ್ನು ಶಾಶ್ವತವಾಗಿ ದ್ವೇಷಿಸುವ
ಇವರು ಆಗಾಗ ಗ್ರಹಣ ಮಾಡಿ ಲೋಕಕ್ಕೆ ಅನಿಷ್ಟ ತರುವರು. ಇಂತಹ ರಾಹು ಕೇತುಗಳನ್ನು ಚಂದ್ರ ಸೂರ್ಯರ ಜೊತೆಗೆ ಪ್ರತಿಷ್ಠಾಪಿಸಿ ಪೂಜಿಸುವುದು ಎಷ್ಟೊಂದು ಅಬದ್ಧ!! ಬರಿಯ ರುಂಡವನ್ನೇ ರಾಹುವೆಂದು ಕರೆಯುವುದಾದರೆ “ಖಡ್ಗಚರ್ಮಧರಂ ಭೀಮಂ..” ಎಂಬುದಾಗಿ “ಕರಾಲವದನಃ ಖಡ್ಗಚರ್ಮಶೂಲೀ ವರಪ್ರದಃ” ಎಂದೂ ಖಡ್ಗ ಚರ್ಮ, ಶೂಲ, ವರಮುದ್ರೆಗಳನ್ನು ಧರಿಸಿದ ಚತುರ್ಭುಜನನ್ನಾಗಿ ಸ್ತೋತ್ರಮಾಡುವುದು ಹೇಗೆ ಸರಿಯಾದೀತು? ಕತ್ತಿನಿಂದ ತರಿಯಲ್ಪಟ್ಟ ತಲೆಗೆ ಕೈಯಿದೆಯೇ? ಒಂದು ವೇಳೆ ಎದೆಯಿಂದಲೇ ಕತ್ತರಿಸಿರುವುದರಿಂದ ಕೈಯಿರುವುದು ಸರಿಯೆಂದು ವಾದಿಸುವುದಾದರೆ ಕೇತುವಿಗೆ ಕೈಯಿರಬಾರದು. “ಧೂಮ್ರಾಃ ದ್ವಿಬಾಹವಃ ಸರ್ವೇ” ಎಂದು ಕೇತುಗಳನ್ನು ದ್ವಿಬಾಹುಗಳೆಂದು ಸ್ತುತಿಸುತ್ತೇವೆ. ಅಲ್ಲದೆ ನಾಲ್ಕು ಕೈಗಳುಳ್ಳ ರಾಹು ರಾಕ್ಷಸನೆನಿಸುವುದು ಹೇಗೆ? ಯಾವ ರಾಕ್ಷಸನಿಗೆ ನಾಲ್ಕು ಕೈಗಳಿವೆ? ನಾಲ್ಕು ಕೈಗಳು ದೇವತಾಶಕ್ತಿಯ ದ್ಯೋತಕಗಳಲ್ಲವೇ?
ರಾಹುವಿನ ಕಬಂಧವೇ ಕೇತುವಾದರೆ ನೂರು ಜನ ಕೇತುಗಳೆನ್ನುವುದು ಎಂತು? “ಯೇ ಬ್ರಹ್ಮಪುತ್ರಾಃ ಬ್ರಹ್ಮಸಮಾನ ವಕ್ತ್ರಾಃ” ಎಂಬುದಾಗಿ ಕೇತುಗಳನ್ನು ಬ್ರಹ್ಮಪುತ್ರರು, ಬ್ರಹ್ಮನಂತಹ ಮುಖದವರು ಎಂದು ಸ್ತುತಿಸುವುದು ಹೇಗೆ ಸಾಧ್ಯ? ನವಗ್ರಹಪ್ರತಿಮೆಗಳ ಬಗ್ಗೆ ಹೇಳುತ್ತಾ ನವಗ್ರಹಕಾರಿಕೆಯಲ್ಲಿ “ಸರ್ವೇ ಕಿರೀಟಿನಃ ಕಾರ್ಯಾಃ” ಎಲ್ಲಾ ಗ್ರಹಗಳಿಗೂ ಕಿರೀಟವಿರುವಂತೆ ಪ್ರತಿಮೆಯನ್ನು ಮಾಡಬೇಕೆಂದು ಹೇಳುತ್ತದೆ. ತಲೆಯಿಲ್ಲದೆ ಕಿರೀಟವಿಡುವುದೆಂತು?
ಹೀಗೆ ಸಮಸ್ಯೆಗಳನ್ನು ಬಿಡಿಸುತ್ತಾ ಹೊರಟರೆ ಚಕ್ರವ್ಯೂಹಕ್ಕೆ ಹೊಕ್ಕ ಅನುಭವವಾಗುತ್ತದೆ. ಪೂರ್ವೋತ್ತರ ವಿರೋಧ ಬರದಂತೆ ಈ ಕಗ್ಗಂಟುಗಳನ್ನು ಬಿಡಿಸುವ ಬಗೆಯನ್ನು ವಿದ್ವಾಂಸರಾದ ಶ್ರೀಯುತ ಹಯವದನ ಪುರಾಣಿಕರು “ಅಭಿಷೇಕ” ಎಂಬ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾದ “ರಾಹು ಕೇತು” ಎಂಬ ತಮ್ಮ ಲೇಖನದಲ್ಲಿ ವಿಮರ್ಶಾತ್ಮಕವಾಗಿ ತಿಳಿಸಿದ್ದಾರೆ. ತಿಳಿಯಲೇ ಬೇಕಾದ ವಿಷಯ ಇಷ್ಟು “ಶಿರಸ್ತು ತಸ್ಯ ಗ್ರಹತಾಮವಾಪ ಸುರೈಃ ಸಮಾವಿಷ್ಯಮಥೋ ಸಬಾಹುಃ”
(ಮ.ಭಾ.ತಾ.) ಎಂಬ ಮಧ್ವಾಚಾರ್ಯರ ಮಾತಿನಂತೆ ದೇವತೆಗಳ ಸನ್ನಿಧಾನವುಳ್ಳ ರಾಹುವಿನ ತಲೆ ಗ್ರಹವೆನಿಸಿತು. ಇಲ್ಲಿ ರಾಹುವಿನ ತಲೆ ಅಧಿಷ್ಠಾನ ಮಾತ್ರ. ಅದರಲ್ಲಿ ದೇವತಾಸನ್ನಿಧಾನವಿದೆ. ಶಾಲಗ್ರಮದಲ್ಲಿ ಹರಿಸಾನ್ನಿಧ್ಯವಿರುವಂತೆ. ದುಂಡಗಿನ ಶಾಲಗ್ರಮದಲ್ಲಿ ಚತುರ್ಭುಜನಾದ ಹರಿಯಿರುವಂತೆ ದುಂದಗಿನ ರಾಹು ಶಿರದಲ್ಲಿ ಚತುರ್ಭುಜದೇವತೆಯನ್ನುಧ್ಯಾನಿಸುವುದು ಅಸಂಗತವಾಗದು. ಆ ದೇವತೆಯನ್ನು ಉದ್ದೇಶಿಸಿಯೇ ಪೂಜೆ, ಹೋಮಗಳನ್ನು ಮಾಡಬೇಕು.
“ರಾಹುಜ್ಯೇಷ್ಠಂ ಕೇತುಕಮ್” ಎಂಬ ವಚನಾನುಸಾರ ರಾಹುವಿನ ಶಿರದಲ್ಲೆ ಸನ್ನಿಹಿತರಾದ ಕೇತುಗಳೆಂಬ ನೂರು ದೇವತೆಗಳು ಕೇತುಗ್ರಹಕ್ಕೆ ಅರ್ಪಿಸಿದ ಪೂಜೆ
ಆಹುತಿಗಳನ್ನು ಸ್ವೀಕರಿಸುತ್ತಾರೆ. ಈ ದೇವತೆಗಳು ಬ್ರಹ್ಮಪುತ್ರರು, ಬ್ರಹ್ಮಸಮಾನವಕ್ತ್ರರು, ಬ್ರಹ್ಮಜ್ಞಾನಿಗಳು. ಇವರೇ ಕೇತುಗಳು. ರಾಹುವಿನ ಕಬಂಧವೇ ಕೇತುಗ್ರಹವೆನ್ನುವುದಕ್ಕೆ ಪ್ರಮಾಣವಿಲ್ಲ. ರಾಹು ಪುಚ್ಛವೆನಿಸಿದ ಅದೂ ಒಂದು ಕೇತುವೇ. ಸಾವಿರಾರು ಧೂಮಕೇತುಗಳಲ್ಲಿ ಅದೂ ಒಂದು ಕೇತುವೇ. ಸಾವಿರಾರು ಧೂಮಕೇತುಗಳಲ್ಲಿ ಅದೂ ಒಂದು. ಅದರೆ ಗ್ರಹವಲ್ಲ.
ಈ ರಾಹುಕೇತುಗಳ ಜೊತೆ ಸೂರ್ಯ, ಚಂದ್ರರನ್ನು ದ್ವೇಷಿಸುವ ರಾಹುವೆಂಬ ರಾಕ್ಷಸನೂ ಹರಿಯ ಅನುಗ್ರಹದಿಂದ ಇದ್ದಾನೆ. ತತ್ವವನ್ನು ತಿಳಿಯದೆ ಪೂಜಿಸಿದಲ್ಲಿ
ಆ ಪೂಜೆ ರಾಕ್ಷಸನ ಪಾಲಾದೀತು. ತಿಳಿದು ಪೂಜಿಸಬೇಕು.
ಇನ್ನೊಂದು ದೃಷ್ಟಿಕೋನದಿಂದ ನೋಡುವುದಾದರೆ ರಾಹು-ಕೇತುಗಳು ರಾಶಿಚಕ್ರದ ಎರಡು ಬಿಂದುಗಳು. ರಾಶಿಚಕ್ರದ ಮಧ್ಯದಲ್ಲಿ ಗುರುತಿಸಬಹುದಾದ ಪರಸ್ಪರ
ವಿರುದ್ಧ ದಿಕ್ಕಿನಲ್ಲಿರುವ ಎರಡು ಕಪ್ಪು ಬಿಂದುಗಳು. ಭೂಮಿಗೆ ಉತ್ತರ ಧ್ರುವ ದಕ್ಷಿಣದ್ರುವಗಳಿರುವಂತೆ. ಆದ್ದರಿಂದಲೇ ರಾಶಿಚಕ್ರದಲ್ಲಿ ರಾಹು, ಕೇತುಗಳ ಮಧ್ಯೆ ಸರಿಯಾಗಿ ಆರು ರಾಶಿಯ ಅಂತರವಿರುತ್ತದೆ. ಅಂದರೆ ಕೇತುವಿನಿಂದ ಏಳನೇ ರಾಶಿಯಲ್ಲಿ ರಾಹುವಿರುತ್ತಾನೆ. ಅವನಿಂದ ಏಲನೇ ಕೋಣೇಯಲ್ಲಿ ಕೇತುವಿರುತ್ತಾನೆ. ಉದಾಹರಣೆಗೆ ರಾಹು ಮೇಷದಲ್ಲಿದ್ದರೆ ಕೇತು ತುಲಾದಲ್ಲಿರುತ್ತಾನೆ. ರಾಹು ವೃಷಭಕ್ಕೆ ಚಲಿಸಿದ ಕ್ಷಣದಲ್ಲಿಯೇ ಕೇತು ವೃಶ್ಚಿಕಕ್ಕೆ ವಾಲಿರುತ್ತಾನೆ. ಗಡಿಯಾರದ ಮುಳ್ಳಿನ ತುದಿ ಹನ್ನೆರಡರಲ್ಲಿದ್ದಾಗ ಅದರ ಹಿಂತುದಿ ಅಲ್ಲಿರಲೇಬೇಕು. ಮುಂಬದಿ ಒಂದಕ್ಕೆ ಸಾಗಿದ ಕ್ಷಣದಲ್ಲಿಯೇ ಹಿಂತುದಿ ಏಳಕ್ಕೆ ವಾಲುತ್ತದೆ. ಹಾಗೆಯೇ ರಾಹುಕೇತುಗಳು ರಾಶಿಚಕ್ರದ ಹನ್ನೆರಡು ಬಿಂದುಗಳನ್ನು ಮಧ್ಯದಿಂದ ಭಾಗಿಸುವ ಮುಳ್ಳಿನ ಇಕ್ಕೆಲದ ಎರಡು ಬಿಂದುಗಳು. ರಾಶಿಚಕ್ರದಲ್ಲಿ ತಿರುಗುತ್ತಾ ಹುಣ್ಣಿಮೆ ಅಮಾವಾಸ್ಯೆಗಳಂದು ಚಂದ್ರ, ಸೂರ್ಯರು ರಾಹು, ಕೇತುಗಳಿರುವ ಸ್ಥಾನಕ್ಕೆ ಬಂದರೆ ಗ್ರಹಣವಾಗಿದೆಯೆಂದು ತಿಳಿಯಬೇಕು. ರಾಹುವನ್ನು ಕಪ್ಪುಬಣ್ಣದ ನೆರಳು, ಕತ್ತಲೆ ಎಂಬ ಭಾವದಿಂದಲೇ ಛಾಯಾಗ್ರಹ, ತಮಃ ಎಂದು ಕರೆಯಲಾಗುತ್ತದೆ.
ಈ ಗ್ರಹವನ್ನು ಸ್ತುತಿಸುವ ಸ್ತೋತ್ರ ಹೀಗಿದೆ. ಈ ಶ್ಲೋಕವನ್ನು ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹದೋಷವನ್ನು ಪರಿಹರಿಸಿಕೊಳ್ಳಬಹುದು.
ಯೇಬ್ರಹ್ಮಪುತ್ರಾಃ ಬ್ರಹ್ಮಸಮಾನ ವಕ್ತ್ರಾಃ
ಬ್ರಹ್ಮೋದೃವಾಃ ಬ್ರಹ್ಮವಿಧಃ ಕುಮಾರಾಃ |
ಬ್ರಹ್ಮೋತ್ತಮಾ ವರದಾ ಜಾಮದಗ್ನ್ಯಾಃ
ಕೇತೂನ್ ಸದಾ ಶರಣಮಹಂ ಪ್ರಪದ್ಯೇ ||
ಇವರು ಬ್ರಹ್ಮಪುತ್ರರು ಚತುರ್ಮುಖಬ್ರಹ್ಮನ ಮುಖದಂತೆ ಮುಖವುಳ್ಳವರು. ಬ್ರಾಹ್ಮಣವಂಶ ಸಂಜಾತರು. ಬ್ರಹ್ಮಜ್ಞಾನಿಗಳು. ಹದಿಹರಯದ ಕುಮಾರರು.
ಬ್ರಾಹ್ಮಣ ಶ್ರೇಷ್ಠರು. ವರಪ್ರದರು. ಜಮದ್ಗ್ನಿಗೋತ್ರೋತ್ಪನ್ನರು. ಇಂತಹ ಕೇತುಗಳನ್ನು ನಾನು ಸದಾ ಶರಣು ಹೋಗುತ್ತೇನೆ.
ನವಗ್ರಹಗಳಿಗೆ ಸಂಬಂಧಿಸಿದ ಧಾನ್ಯ, ಜನ್ಮಭೂಮಿ, ಸ್ಥಾನ, ಅಧಿದೇವತೆ, ರತ್ನ ಮೊದಲಾದವುಗಳ ಮಾಹಿತಿ
ಸೂರ್ಯಾದಿ ನವಗ್ರಹಗಳಿಗೆ ಸಂಬಂಧಿಸಿದ ಧಾನ್ಯ, ಜನ್ಮಭೂಮಿ, ಸ್ಥಾನ, ಅಧಿದೇವತೆ, ರತ್ನ ಮೊದಲಾದವುಗಳ ಮಾಹಿತಿಯನ್ನು ಈ ಕೆಳಗಿನ ಕೋಷ್ಟಕವು ನೀಡುತ್ತದೆ.
ಗ್ರಹಾರಾಧನೆ
ಗ್ರಹಗಳಿಂದ ಸೂಚಿತವಾದ ದೋಷದ ನಿವೃತ್ತಿಗಾಗಿ ಗ್ರಹಾರಾಧನೆಯನ್ನು ಶಾಸ್ತ್ರ ಹೇಳುತ್ತದೆ. “ದುಷ್ಟಾರಿಷ್ಟೇ ಸಮಾಯಾತೇ ಕರ್ತವ್ಯಂ ಗ್ರಹಶಾಂತಿಕಮ್” ಎಂಬುದಾಗಿ. ಮಳೆ, ಆಯುಷ್ಯ, ಆರೋಗ್ಯ, ಪುಷ್ಟಿ ಮೊದಲಾದ ಉದ್ದೇಶದಲ್ಲೂ ಗ್ರಹಗಳನ್ನು ಆರಾಧಿಸುವುದಿದೆ. ಈ ಗ್ರಹಾರಾಧನೆ ಸಾಮಾನ್ಯವಾಗಿ ಐದು ವಿಧ. ಪೂಜೆ, ಅಧ್ವರ, ಜಪ, ಸ್ತೋತ್ರ, ದಾನ ಎಂಬುದಾಗಿ.
ಪೂಜೆ :
ನವಗ್ರಹಪೂಜೆಯಲ್ಲಿ ನವಗ್ರಹಪ್ರತಿಮೆಗಳು ಅಥವಾ ಆಯಾಯ ಧಾನ್ಯಗಳು ಪ್ರತೀಕವೆನಿಸುತ್ತವೆ. ಆದಿತ್ಯಾದಿ ನವಗ್ರಹದ ಪ್ರತಿಮೆ ಇರುವಲ್ಲಿಗೆ ಹೋಗಿ ಅಭಿಷೇಕಾದಿ ಪೂಜೆಗಳನ್ನು ಮಾಡಿಸಿ ಪ್ರದಕ್ಷಿಣೆ ನಮಸ್ಕಾರಗಳ ಮೂಲಕ ಗ್ರಹಪ್ರೀತಿಯನ್ನು ಸಂಪಾದಿಸಬಹುದು. ಈ ಸಂದರ್ಭದಲ್ಲಿ ಆಯಾಯ ಗ್ರಹಗಳಿಗೆ ಪ್ರಿಯವಾದ ನೈವೇದ್ಯವನ್ನು ನಿವೇದಿಸಾಹುದು. ಸೂರ್ಯನಿಗೆ ಗುಡಾನ್ನ ಚಂದ್ರನಿಗೆ ಪಾಯಸ, ಕುಜನಿಗೆ ಪರಿಮಳಿಸುವ ಗಂಜಿ, ಬುಧನಿಗೆ ಕ್ಷೀರನ್ನ, ಗುರುವಿಗೆ ಮೊಸರನ್ನ, ಶುಕ್ರನಿಗೆ ಘೃತಾನ್ನ, ಶನಿಗೆ ಎಳ್ಳುಮಿಶ್ರಿತಾನ್ನ (ಕೃಸರ) ರಾಹುವಿಗೆ ಕುಂಬಳಕಾಯಿ ಮತ್ತು ಉದ್ದುಮಿಶ್ರಿತವಾದ ಅನ್ನ (ಮಾಂಸ ಪ್ರತ್ಯಾಮ್ನಾಯ) ಹಾಗೂ ಕೇತುವಿಗೆ ಚಿತ್ರಾನ್ನವು ಅತ್ಯಂತ ಪ್ರಿಯವಾದ ಅನ್ನವೆನಿಸಿದ್ದು ಇದರ ನೈವೇದ್ಯ, ಆಹುತಿಗಳು ಗ್ರಹಪ್ರೀತಿಕರವೆಂದು ನವಗ್ರಹಕಾರಿಕೆ ಹೇಳುತ್ತದೆ.
ಅಧ್ವರ :
ಅಧ್ವರ ಎಂದರೆ ಹೋಮ. ನವಗ್ರಹಾಂತರ್ಯಾಮಿ ಲಕ್ಷ್ಮೀನರಸಿಂಹನನ್ನು ಉದ್ದೇಶಿಸಿ ಅಗ್ನಿಯಲ್ಲಿ ಆಹುತಿಯನ್ನು ಕೊಡುವುದು. ನವಗ್ರಹಗಳ ಮಂತ್ರದಿಂದ ಪ್ರತ್ಯೇಕ ಪ್ರತ್ಯೇಕವಾಗಿ ಸಮಿತ್, ಚರು ಮತ್ತು ಆಜ್ಯಗಳಿಂದ ೨೮ ಅಥವಾ ೧೦೮ ಸಂಖ್ಯೆಯ ಆಹುತಿಗಳನ್ನು ಕೊಡಬೇಕು. ಚರು ಎಂದರೆ ಅನ್ನ, ಆಯಾಯ ಗ್ರಹಗಳಿಗೆ ಪ್ರಿಯವಾದ ಅನ್ನವನ್ನು ಹಿಂದೆ ಹೇಳಿದೆ.
ಸೂರ್ಯಾದಿಗ್ರಹಗಳಿಗೆ ಗುಡಾನ್ನವೇ ಮೊದಲಾದ ಆಯಾಯ ಅನ್ನದಿಂದಲೇ ಹೋಮಿಸುವುದು ಅತ್ಯಂತ ಉಚಿತ. ಹಾಗೆಯೇ ಪ್ರತಿಯೊಂದು ಗ್ರಹಗಳಿಗೂ ಅದರದೇ ಆದ ಸಮಿತ್ತುಗಳಿವೆ.
ಸೂರ್ಯನಿಗೆ ಅರ್ಕ (ಎಕ್ಕ) ಚಂದ್ರನಿಗೆ ಪಲಾಶ (ಮುತ್ತುಗ) ಕುಜನಿಗೆ ಖದಿರ, ಬುಧನಿಗೆ ಅಪಾಮಾರ್ಗ (ಉತ್ತರಣೆ) ಗುರುವಿಗೆ ಅಶ್ವತ್ಥ, ಶುಕ್ರನಿಗೆ ಔದುಂಬರ (ಅತ್ತಿ) ಶನಿಗೆ ಶಮೀ, ರಾಹುವಿಗೆ ದೂರ್ವ (ದರ್ಭೆ) ಹಾಗೂ ಕೇತುವಿಗೆ ಕುಶ (ಗರಿಕೆ). ಈ ಸಮಿತ್ತುಗಳಿಂದ, ಗುಡಾನ್ನಾದಿ ಚರುವಿನಿಂದ ಮತ್ತು ದನದ ತುಪ್ಪದಿಂದ ಹೋಮಿಸುವುದೇ ನವಗ್ರಹಹೋಮ.
ಈ ನವಗ್ರಹ ಸಮಿಧೆಗಳು ಇಂದಿಗೂ ಯಥೇಷ್ಟ ಉಪಲಬ್ಧವಿದೆ. ಹಾಗಿದ್ದೂ ಎಲ್ಲಾ ಗ್ರಹಗಳಿಗೂ ಅರಳೀಕಡ್ದಿಯನ್ನೇ ಹೋಮಿಸುವ ಅಬದ್ಧ ಆಚಾರ ಅನೇಕ ಕಡೆ ಕಾಣಿಸುತ್ತದೆ. ಇದು ಯಜಮಾನರ ಅಜ್ಞಾನವನ್ನೂ ಪುರೋಹಿತರ ಔದಾಸೀನ್ಯವನ್ನೂ ಎತ್ತಿ ತೋರಿಸುತ್ತದೆ. ಹೋಮಕ್ಕೆ ಬೇಕಾದ ಸಮಿಧೆಗಳನ್ನು ಪ್ರಯತ್ನಪೂರ್ವಕವಾಗಿ ಸಂಪಾದಿಸುವ, ಸಮಿಧೆಗಳ ಪೂರ್ವತಯಾರಿ ಸಾಧ್ಯವಾಗದಿದ್ದಲ್ಲಿ ಹೋಮವನ್ನೇ ಮುಂದೆ ಹಾಕಿ ಸಾಮಗ್ರಿ ದೊರೆತ ಮೇಲೆಯೇ ಹೋಮಿಸುವ ಶಿಷ್ಟಪ್ರವೃತ್ತಿ ಉಡುಪಿಯ ಕಡೆಯಲ್ಲಿ ಇನ್ನೂ ಉಳಿದಿದೆ. ವಿಹಿತ ಸಮಿಧೆಗಳನ್ನು ಹೋಮಿಸದೆ ಯಾವುದೋ ಕಾದಿಯನ್ನು ಅಗ್ನಿಯಲ್ಲಿ ಹೋಮಿಸಿದರೆ ಫಲ ದೊರೆತೀತೇ? ಆಯಾ ಸಮಿಧೆಗಳ ಹುತಕಾಲದಲ್ಲಿ ಉದ್ಭವಿಸಿದ ಧೂಮವೂ ದೋಷನಾಶಕವಲ್ಲವೇ? ದ್ರವ್ಯಗಳು ಸಿಗದೇ ಅನಿವಾರ್ಯವಾದಾಗ ಪ್ರತ್ಯಾಮ್ನಾಯವಾಗಿ ಬದಲಿದ್ರವ್ಯಗಳನ್ನು ಸ್ವೀಕರಿಸುವುದಕ್ಕೆ ಶಾಸ್ತ್ರದ ಅನುಮತಿಯಿದೆ. ಇಂದು ಈ ಸಮಿತ್ತುಗಳು ಯಥೇಚ್ಛವಾಗಿ ಲಭ್ಯವಿದ್ದರೂ ಕಡೆಗಣಿಸುವುದು ಪೌರೋಹಿತ್ಯದ ಅಧಃಪತನವನ್ನು ತಿಳಿಸುತ್ತದೆ. ಆದ್ದರಿಂದ ಪೌರೋಹಿತರು ಆಯಾಯ ಸಮಿತ್ತುಗಳಿಲ್ಲದೆ ಗ್ರಹಯಜ್ಞ ಸಾಧ್ಯವಿಲ್ಲವೆಂಬ ದೃಢನಿಲುವನ್ನು ತಾಳಬೇಕು. “ಹೇಗಾದರೂ ನಡೆಯುತ್ತದೆ, ಚಲ್ತಾ ಹೈ” ಎಂಬ ಭಾವದಿಂದ ಅಶಾಸ್ತ್ರೀಯವಾದ ರಾಜಿ ಪಂಚಾಯಿತಿಗೆ ಹೋಮ ಮಾಡುವ ಯಜಮಾನರೂ ಆಸ್ಪದವೀಯಬಾರದು. ಏಕೆಂದರೆ ಆ ಒಂದೊಂದು ಸಮಿಧೆಯ ಹೋಮಕ್ಕೂ ಶಾಸ್ತ್ರಕಾರರು ಫಲಹೇಳುತ್ತಾರೆ.
ಅರ್ಕೇಣ ವ್ಯಾಧಿನಾಶಃ ಸ್ಯಾತ್ ಫಲಾಶೈಃ ಸರ್ವಸಂಪದಃ |
ಖದಿರೇಣಾರ್ಥಸಿದ್ಧಿಃಸ್ಯಾತ್ ಅಪಾಮಾರ್ಗಃ ಸುಪುತ್ರದಃ ||
ಆಶ್ವತ್ಥೇನ ಪ್ರಜಾವೃದ್ಧಿಃ ಸೌಭಾಗ್ಯಂ ಸ್ಯಾದೌದುಂಬರಾತ್ |
ಶಮಿನಾ ಪಾಪಶಮನಂ ದೂರ್ವಯಾಯುಷ್ಯ ವರ್ಧನಮ್ ||
ಕುಶೇನ ಬ್ರಹ್ಮವರ್ಚಃಸ್ಯಾದಿತ್ಯೇತದ್ಸಮಿಧಾಂ ಫಲಮ್|
ಅರ್ಕ (ಎಕ್ಕೆ)ದಿಂದ ಪ್ರಾರಂಭಿಸಿ ಕುಶದ ತನಕ ಒಂಬತ್ತು ಸಮಿತ್ತುಗಳಿಂದ ಆದಿತ್ಯಾದಿ ನವಗ್ರಹಗಳಿಗೆ ಕ್ರಮವಗಿ ಹೋಮಿಸಿದಾಗ ದುಷ್ಟ ರಾಜಗ್ರಹಗಳು ದಯಪಾಲಿಸುವ ಫಲವನ್ನು ಈ ಕಾರಿಕೆ ಹೇಳುತ್ತದೆ. ಸರಳ ಸಂಸ್ಕೃತದ ಈ ಶ್ಲೋಕಗಳು ಕನ್ನಡ ಬಲ್ಲವನಿಗೂ ಅರ್ಥವಾಗುವಂತಿದೆ.
ಗ್ರಹಗಳಿಗೆ ಕೊಟ್ಟ ಆಹುತಿಯ ದಶಾಂಶ ಸಂಖ್ಯೆಯಲ್ಲಿ ಅಧಿದೇವತೆ, ಪ್ರತ್ಯಧಿದೇವತೆಗಳಿಗೂ ಆಹುತಿಯನ್ನು ಕೊದಬೇಕು. ಅಧಿದೇವತೆ, ಪ್ರತ್ಯಧಿದೇವತೆಗಳನ್ನು ಹಿಂದಿನ ಕೋಷ್ಟಕದಲ್ಲಿ ಕೊಟ್ಟಿದೆ.
ಕೊನೆಯಲ್ಲಿ ದುರ್ಗಾ, ಗಣಪತಿ,ಕ್ಷೇತ್ರಪಾಲ, ವಾಸ್ತೋಷ್ಪತಿ, ತ್ರ್ಯಂಬಕ, ಅಭಯಂಕರೇಂದ್ರ, ಇಂದ್ರಾ ಎಂಬ ಎಂಟು ಪರಿವಾರ ದೆವತೆಗಳನ್ನು ಈಮ್ದ್ರಾದಿ ದಿಕ್ಪಾಲಕರನ್ನೂ ಪೂಜಿಸಿ ನವಗ್ರಹ ದಶಾಂಶಸಂಖ್ಯೆಯಲ್ಲಿ ಆಹುತಿ ಕೊದಬೇಕು.
ಜಪ :
ನವಗ್ರಹಗಳಿಗೆ ಸಂಬಂಧಿಸಿದ ಒಂಬತ್ತು ವೇದಮಂತ್ರಗಳಿವೆ. ಇದರ ಉಪದೇಶವಿದ್ದವರು ಜಪಮಾಡಬೇಕು. ಈ ಮಂತ್ರಗಳಲ್ಲಿ “ಆ ಕೃಷ್ಣೇನ” ಎಂಬ ಸೂರ್ಯನ ಮಂತ್ರ ಹಿರಣ್ಮಯ ರಥದಲ್ಲಿ ಭುವನಪ್ರದಕ್ಷಿಣೆ ಬರುವ ಸೂರ್ಯನನ್ನು ಹೇಳುತ್ತದೆ. ಆದರೆ ಮುಂದಿನ ಮಂತ್ರಗಳು ಸಂಬಂಧಿಸಿದ ಗ್ರಹವನ್ನು ಹೆಸರಿಸುವುದೇ ಇಲ್ಲ. ಉದಾಹರಣೆಗೆ “ಶಮಗ್ನಿರಗ್ನಿಭಿಃ” ಎಂಬ ಶನಿಯ ಮಂತ್ರ ಶನಿಯ ಬಗ್ಗೆ ಮಾತೇ ಎತ್ತುವುದಿಲ್ಲ. “ಕಯಾನ” ಎಂಬ ರಾಹುಮಂತ್ರ ರಾಹುವಿನ ಗೋಜಿಗೇ ಹೋಗುವುದಿಲ್ಲ. ಹಾಗಿದ್ದರೂ ಅವು ಆಯಾಯ ಗ್ರಹಗಳಿಗೆ ಪ್ರಿಯವಾದ ಮಂತ್ರಗಳು. ಅಂದರೆ ಆ ಮಂತ್ರದ ಮೂಲಕ ಪರಮಾತ್ಮನನ್ನು ಧ್ಯಾನಿಸಿದಾಗ ಗ್ರಹಪ್ರೀತಿಯುಂತಾಗುತ್ತದೆ.
ಯಾವ ಗ್ರಹಗಳ ಜಪ ಎಷ್ಟು ಮಾಡಬೇಕೆಂಬುದರ ಬಗ್ಗೆಎರಡು ಕ್ರಮವಿದೆ. ಒಂದು ಕ್ರಮದಂತೆ ಜಪಸಂಖ್ಯೆಯನ್ನು ಕೋಷ್ಟಕದಲ್ಲಿ ಕೊಡಲಾಗಿದೆ. ಇನ್ನೊಂದು ಕ್ರಮದಂತೆ ಆಯಾಯ ಗ್ರಹಗಳ ದಶಾವರ್ಷಕ್ಕೆ ಅನುಗುಣವಾಗಿ ಜಪ ಮಾಡಬೇಕು. ಅಂದರೆ ಆದಿತ್ಯನ ದಶಾವರ್ಷ ೬ ವರ್ಷವಾದ್ದರಿಂದ ೬,೦೦೦ ಸಂಖ್ಯೆಯಲ್ಲಿ ಆದಿತ್ಯನ ಜಪವಾಗಬೇಕು. ಹಾಗೆಯೇ ಚಂದ್ರನಿಗೆ ೧೦,೦೦೦, ಕುಜನಿಗೆ ೭,೦೦೦, ಬುಧನಿಗೆ ೧೭,೦೦೦, ಗುರುವಿಗೆ ೧೬,೦೦೦, ಶುಕ್ರನಿಗೆ ೨೦,೦೦೦, ಶನೈಶ್ಚರನಿಗೆ ೧೯,೦೦೦, ರಾಹುವಿಗೆ ೧೮,೦೦೦, ಹಾಗೂ ಕೇತುವಿಗೆ ೭,೦೦೦ ಸಂಖ್ಯೆಯಲ್ಲಿ ಜಪವಾಗಬೇಕು. ಸ್ವಂತ ಕರ್ತೃವೇ ಇಷ್ಟು ಜಪಮಡುವುದು ದುಃಸಾಧ್ಯವಾದ್ದರಿಂದ ಶ್ರೋತ್ರಿಯ ಬ್ರಾಹ್ಮಣರ ಮೂಲಕ ಮಾಡಿಸಬಹುದು. ಯಥಾಶಕ್ತಿ ಗಾಯತ್ರೀ ಜಪದಿಂದಲೂ ಗ್ರಹದೋಷವನ್ನು ಪರಿಹರಿಸಿಕೊಳ್ಳಬಹುದು.
ಸ್ತೋತ್ರ :
ಪುರಾಣಗಳಲ್ಲಿ ಬಂದ ಅಥವಾ ಅಪರೋಕ್ಷ ಜ್ಞಾನಿಗಳಿಂದ ರಚಿತವಾದ ನವಗ್ರಹ ಸ್ತೋತ್ರಗಳಿವೆ. ಇವನ್ನು ಪಠಿಸುವುದೂ ಗ್ರಹಪ್ರೀತಿ ಸಾಧಕವಾಗಿದೆ. ನಮಃ ಸೂರ್ಯಾಯ ಸೋಮಾಯ ಎಂಬುದು ಪ್ರಸಿದ್ಧ ಸ್ತೋತ್ರ. ಶ್ರೀಮದ್ವಾದಿರಾಜ ತೀರ್ಥರು ರಚಿಸಿರುವ ಗ್ರಹ ಸ್ತೋತ್ರ ಚಿಕ್ಕದಾಗಿದ್ದು ನಿತ್ಯ ಪಠನೆಗೆ ಯೋಗ್ಯವಾಗಿದೆ. ಅನುಸಂಧಾನಕ್ಕಾಗಿ ಅರ್ಥದೊಂದಿಗೆ ಇಲ್ಲಿ ಕೊಡಲಾಗಿದೆ.
ಭಾಸ್ವಾನ್ಮೇ ಭಾಸಯೇತ್ತತ್ವಂ ಚಂದ್ರಶ್ಚಾಹ್ಲಾದಕೃದ್ಭವೇತ್ |
ಮಂಗಲೋ ಮಂಗಲಂ ದದ್ಯಾತ್ ಬುಧಶ್ಚ ಬುಧತಾಂ ದಿಶೇತ್ ||
ಗುರುರ್ಮೇ ಗುರುತಾಂ ದದ್ಯಾತ್ ಕವಿಶ್ಚ ಕವಿತಾಂ ದಿಶೇತ್ |
ಶನಿಶ್ಚ ಶಂ ಪ್ರಾಪಯತು ಕೇತುಃ ಕೇತುಂ ಜಯೇರ್ಪಯೇತ್ ||
ರಾಹುರ್ಮೇ ನಾಶ(ರಾಹ)ಯೇದ್ರೋಗಂ ಗ್ರಹಾಃ ಸಂತು ಕರಗ್ರಹಾಃ |
ನವಂ ನವಂ ಮಮೈಶ್ಚರ್ಯಂ ದಿಶಂತ್ವೇತೇ ನವಗ್ರಹಾಃ ||
ಶನೇ ದಿನಮಣೇಃ ಸೂನೋ ಹ್ಯನೇಕ ಗುಣಸನ್ಮಣೇ |
ಅರಿಷ್ಟಂ ಹರ ಮೇಭೀಷ್ಟಂ ಕುರು ಮಾ ಕುರು ಸಂಕಟಮ್ ||
ಹರೇರನುಗ್ರಹಾರ್ಥಾಯ ಶತ್ರೂಣಾಂ ನಿಗ್ರಹಾಯ ಚ |
ವಾದಿರಜಯತಿಪ್ರೋಕ್ತಂ ಗ್ರಹಸ್ತೋತ್ರಂ ಸದಾ ಪಠೇತ್ ||
ಸುಂದರ ಪ್ರಾಸಗಳಿಂದ ಕೂಡಿದ ಸುಂದರ ಸ್ತೋತ್ರವಿದು. “ಸೂರ್ಯನು ನನ್ನ ಮನದಲ್ಲಿ ಭಗವತ್ತತ್ವವನ್ನು ಬೆಳಗಲಿ. ಚಂದ್ರ ಆಹ್ಲಾದವನ್ನು ಕೊಡಲಿ, ಮಂಗಳನು ಮಂಗಲಕರನಾಗಲಿ ಬುಧನು ಬುದ್ಧಿಮತ್ತೆಯನ್ನು ದಯಪಾಲಿಸಲಿ, ಗುರುವು ಗುರುತ್ವವನ್ನು ಕರುಣಿಸಲಿ, ಶುಕ್ರನು ಕವಿತ್ವವನ್ನೀಯಲಿ,ಶನಿಯು ಶುಭಪ್ರದನಾಗಲಿ, ಕೇತುವು ನನ್ನ ಜಯದ ಪತಾಕೆಯನ್ನು ಹಾರಿಸಲಿ,ರಾಹುವು ರೋಗವನ್ನು ಕಳೆಯಲಿ, ಸಮಸ್ತಗ್ರಹಗಳೂ ಕೈಹಿಡಿದು ಎತ್ತಲಿ, ಈ ನವಗ್ರಹಗಳೂ ಹೊಚ್ಚ ಹೊಸದಾದ ಐಶ್ವರ್ಯವನ್ನು ಕರುಣಿಸಲಿ. ಶನಿಯೇ! ದಿನಮಣಿಯ ಮಗನೇ! ಅಗಣಿತಗುಣಿಯೇ! ನನ್ನ ಅರಿಷ್ಟವನ್ನು ಕಳೆ. ಅಭೀಷ್ಟವನ್ನುಕೊಡು. ಸಂಕಟ ಉಂಟುಮಾಡಬೇಡ. ಶ್ರೀ ಹರಿಯ ಅನುಗ್ರಹಕ್ಕಾಗಿ ಮತ್ತು ಶತ್ರುಗಳ ನಿಗ್ರಹಕ್ಕಾಗಿ ಶ್ರೀವಾದಿರಾಜ ಯತಿಗಳಿಂದ ಪ್ರೋಕ್ತವಾದ ಈ ಗ್ರಹ ಸ್ತೋತ್ರವನ್ನು ನಿತ್ಯವೂ ಪಠಿಸಬೇಕು. ಎಂದಿದ್ದಾರೆ ಇಲ್ಲಿ ಶ್ರೀ ವಾದಿರಾಜರು.
ಇದು ಸಮಸ್ತ ಗ್ರಹಗಳನ್ನು ಸ್ತುತಿಸಿದಂತಾಯಿತು. ನಿರ್ದಿಷ್ಟ ಗ್ರಹವೊಂದರಿಂದ ಸೂಚಿತವಾದ ದೋಷದ ನಿವೃತ್ತಿಗಾಗಿ ಪ್ರತ್ಯೇಕ ಪ್ರತ್ಯೇಕವಾಗಿ ಗ್ರಹಗಳನ್ನು ಸ್ತುತಿಸುವ ಸ್ತೋತ್ರಗಳೂ ಇವೆ. ವೇದಮಂತ್ರದ ಬಗ್ಗೆ ತಿಳಿಯದವರೂ ಈ ಗ್ರಹಸ್ತೋತ್ರವನ್ನು ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹದೋಷವನ್ನು ಪರಿಹರಿಸಿಕೊಳ್ಳಬಹುದು. ಅಂತಹ ಸುಲಭವಾಗಿ ಪಠಿಸಬಹುದಾದ ಚಿಕ್ಕ ಶ್ಲೋಕಗಳನ್ನು ಇಲ್ಲಿ ಕೊಟ್ಟಿದೆ.
ರವಿ :
ಜಪಾಕುಸುಮಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ |
ಧ್ವಾಂತಾರಿಂ ಸರ್ವಪಾಪಘ್ನಂ ಪ್ರಣತೋಸ್ಮಿ ದಿವಾಕರಮ್ ||
“ಕೆಂಪುದಾಸವಾಳ ಪುಷ್ಫದ ಕಾಂತಿ, ಕಶ್ಯಪನ ಮಗ, ಮಹಾತೇಜಸ್ವಿ, ಕತ್ತರ ಕಡುವೈರಿ, ಸರ್ವಪಾಪ ನಾಶಕ, ಇಂತಹಾ ದಿವಾಕರನನ್ನು ನಮಿಪೆ”
ಚಂದ್ರ :
ದಧಿಶಂಖತುಷಾರಾಭಂ ಕ್ಷೀರೋದಾರ್ಣವ ಸಂಭವಮ್ |
ನಮಾಮಿ ಶಶಿನಂ ಭಕ್ತ್ಯಾ ಶಂಭೋರ್ಮುಕುಟಭೂಷಣಮ್ ||
ಮೊಸರು,ಶಂಖ, ಹಿಮಗಳಂತೆ ಶ್ವೇತಕಾಂತಿ, ಕ್ಷೀರಸಾಗರದಲ್ಲಿ ಉತ್ಪತ್ತಿ, ಶಿವನ ತಲೆಯ ಅಲಂಕಾರ. ಅಂತಹ ಶಶಾಂಕನಿಗೆ ಭಕ್ತಿಯಿಂದ ಬಾಗುವೆ.
ಅಂಗಾರಕ :
ಧರಣೀ ಗರ್ಭಸಂಭೂತಂ ವಿದ್ಯುತ್ಕಾಂಚನಸನ್ನಿಭಮ್ |
ಕುಮಾರಂ ಶಕ್ತಿಹಸ್ತಂ ಚ ಮಂಗಲಂ ಪ್ರಣಮಾಮ್ಯಹಮ್ ||
ಭೂದೇವಿಯ ಗರ್ಭದಲ್ಲಿ ಜನಿಸಿದ, ಮಿಂಚಿನ ಮತ್ತು ಚಿನ್ನದ ಕಾಂತಿಯಂತೆ ಪಾಟಲಕಾಂತಿಯುಳ್ಳ ಹದಿನಾರು ವರುಷದ ಕುಮಾರನಾದ ಶಕ್ತ್ಯಾಯುಧಧರಿಯಾದ ಮಂಗಲನಿಗೆ ನನ್ನ ನಮನ.
ಬುಧ :
ಪ್ರಿಯಂಗು ಕಲಿಕಾಭಾಸಂ ರೂಪೇಣಾಪ್ರತಿಮಂ ಬುಧಮ್|
ಸೌಮ್ಯಂ ಸೌಮ್ಯಗುಣೋಪೇತಂ ನಮಾಮಿ ಶಶಿನಂದನಮ್ ||
ನವಣೆಯ ತೆನೆಯಂತೆ ಹಸಿರುಕಾಂತಿಯುಳ್ಳವ. ರೂಪದಲ್ಲಿ ಸಾಟಿಯಿಲ್ಲ, ಸೋಮನ (ಚಂದ್ರನ) ಮಗ. ಸೌಮ್ಯಸ್ವಭಾವ. ಅಪ್ಪನಾದ ಚಂದ್ರನ ಗುಣಗಳುಳ್ಳವ. ಚಂದ್ರನಿಗೆ ಮಿತ್ರಗ್ರಹವೆನಿಸಿ ಆನಂದಪ್ರದನಾದ ಬುಧನಿಗೆ ನನ್ನ ಪ್ರಣಾಮಗಳು.
ಗುರು :
ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಮ್ |
ವಂದ್ಯಂ ಚ ತ್ರಿಷು ಲೋಕೇಷು ಪ್ರಣಮಾಮಿ ಬೃಹಸ್ಪತಿಮ್ ||
ದೇವತೆಗಳಿಗೂ ಋಷಿಗಳಿಗೂ ಗುರುವಾದ ಬಂಗಾರದ ಕಾಂತಿಯುಳ್ಳ, ತ್ರಿಲೋಕದಲ್ಲೂ ವಂದ್ಯರಾದ ಬೃಹಸ್ಪತ್ಯಾಚಾರ್ಯರನ್ನು ನಮಿಪೆ.
ಶುಕ್ರ :
ಹಿಮಕುಂದಮೃಣಾಲಾಭಂ ದೈತ್ಯಾನಾಂ ಪರಮಂ ಗುರುಮ್ |
ಸರ್ವಶಾಸ್ತ್ರಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಮ್ ||
ಹಿಮ, ದುಂಡುಮಲ್ಲಿಗೆ, ತಾವರೆದಂಟುಗಳಂತೆ ಬಿಳಿಯ ಕಾಂತಿಯುಳ್ಳ, ದೈತ್ಯರ ಪರಮಗುರುವಾದ, ಸರ್ವಶಾಸ್ತ್ರಗಳನ್ನು ಪ್ರವಚನ ಮಾದಬಲ್ಲ ಭೃಗುಗೋತ್ರೋತ್ಪನ್ನರಾದ ಶುಕ್ರಾಚಾರ್ಯರನ್ನು ವಂದಿಪೆ.
ಶನಿ :
ನೀಲಾಂಜನಗಿರಿಪ್ರಖ್ಯಂ ರವಿಸೂನುಂ ಯಮಾಗ್ರಜಮ್ |
ಛಾಯಾಮಾರ್ತಾಂಡಸಂಭೂತಂ ಪ್ರಣಮಾಮಿ ಶನೈಶ್ಚರಮ್ ||
ಇಂದ್ರನೀಲಪರ್ವತದಂತೆ ನೀಲಕಾಂತಿಯುಳ್ಳ ರವಿಕುವರನಾದ, ಮಹಾತೇಜಸ್ವಿಯಾದ, ಛಾಯಾದೇವಿಯಲ್ಲಿ ಸೂರ್ಯನಿಗೆ ಜನಿಸಿದ, ಶನಿಶ್ಚರನಿಗೆ ಶಿರ ಬಾಗುವೆ.
ರಾಹು :
ಯೋ ವಿಷ್ಣುನೈವಾಮೃತಂ ಪೀಯಮಾನಂ ಶಿರಚ್ಛಿತ್ವಾಗ್ರಹಭಾವೇನಯುಕ್ತಃ |
ಯಶ್ಚಂದ್ರಸೂರ್ಯೌ ಗ್ರಸತೇ ಪರ್ವಕಾಲೇ ರಾಹುಂ ಸದಾ ಶರಣಮಹಂ ಪ್ರಪದ್ಯೇ ||
ಅಮೃತವನ್ನು ಕುಡಿಯುತ್ತಿರುವ ತಲೆಯನ್ನು ವಿಷ್ಣು ಕತ್ತರಿಸಿದ. (ದೇವತಾ ಸಾನಿಧ್ಯದಿಂದ) ಅದೆ ತಲೆ ಗ್ರಹವೆನಿಸಿತು. (ದೈತ್ಯಪ್ರವೃತ್ತಿಯಿಂದ) ಈ ರಾಹು ಹುಣ್ಣಿಮೆ ಅಮಾವಾಸ್ಯೆಗಳಂದು ಚಂದ್ರ ಸೂರ್ಯರನ್ನು ನುಂಗುತ್ತಾನೆ. ಇಂತಹಾ ರಾಹುವನ್ನು ಸರ್ವದಾ ಮೊರೆಹೊಂದುತ್ತೇನೆ.
ಕೇತು :
ಯೇಬ್ರಹ್ಮಪುತ್ರಾಃ ಬ್ರಹ್ಮಸಮಾನ ವಕ್ತ್ರಾಃ
ಬ್ರಹ್ಮೋದೃವಾಃ ಬ್ರಹ್ಮವಿಧಃ ಕುಮಾರಾಃ |
ಬ್ರಹ್ಮೋತ್ತಮಾ ವರದಾ ಜಾಮದಗ್ನ್ಯಾಃ
ಕೇತೂನ್ ಸದಾ ಶರಣಮಹಂ ಪ್ರಪದ್ಯೇ ||
ಇವರು ಬ್ರಹ್ಮಪುತ್ರರು ಚತುರ್ಮುಖಬ್ರಹ್ಮನ ಮುಖದಂತೆ ಮುಖವುಳ್ಳವರು. ಬ್ರಾಹ್ಮಣವಂಶ ಸಂಜಾತರು. ಬ್ರಹ್ಮಜ್ಞಾನಿಗಳು. ಹದಿಹರಯದ ಕುಮಾರರು. ಬ್ರಾಹ್ಮಣ ಶ್ರೇಷ್ಠರು. ವರಪ್ರದರು. ಜಮದ್ಗ್ನಿಗೋತ್ರೋತ್ಪನ್ನರು. ಇಂತಹ ಕೇತುಗಳನ್ನು ನಾನು ಸದಾ ಶರಣು ಹೋಗುತ್ತೇನೆ.
ವೇದಮಂತ್ರಗಳನ್ನು ಪಠಿಸುವಲ್ಲಿ ಅಶಕ್ತರಾದವರು ಆಯಾಗ್ರಹಗಳ ಸ್ತೋತ್ರವನ್ನು ಆವೃತ್ತಿಮಾಡಿ ಪಠಿಸಬಹುದು. ಶನೈಶ್ಚರ ಗ್ರಹ ಸೂಚಿತ ದೋಷದ ಪರಿಹಾರಕ್ಕಾಗಿ ಸ್ವತಃ ಶನೈಶ್ಚರಣೇ ನರಸಿಂಹದೇವರನ್ನು ಸ್ತುತಿಸಿರುವ ಶನೈಶ್ಚರಕೃತ ನರಸಿಂಹಸ್ತೋತ್ರವನ್ನು ಪಠಿಸುವುದು ಉತ್ತಮ.
ಸ್ತೋತ್ರವನ್ನು ಪಠಿಸುವುದು ಅರ್ಥಾನುಸಂಧಾನ, ಭಕ್ತಿ, ಶ್ರದ್ಧೆಗಳ ಸಂಗಮವಾದರೆ ತ್ರಿವೇಣಿಸಂಗಮವಾದಂತೆ ಪೂರ್ಣ ಫಲದಾಯಕವಾಗುತ್ತದೆ.
ದಾನ :
ಗ್ರಹಚಾರದೋಷ ಪರಿಹಾರದ ಹಲವು ಮಾರ್ಗಗಳಲ್ಲಿ ದಾನವೂ ಒಂದು. ನವಗ್ರಹಗಳಿಗೆ ಸಂಬಂಧಿಸಿದ ಧಾನ್ಯ, ಪ್ರತಿಮೆ, ರತ್ನ, ವಸ್ತ್ರಗಳನ್ನು ದಾನಕೊಡುವುದರ ಮೂಲಕ ಗ್ರಹದೋಷ ಪರಿಹಾರವೆಂದು ಶಾಸ್ತ್ರ ಹೇಳುತ್ತದೆ. ಸುಶಕ್ತರು ಈ ನಾಲ್ಕೂ ದಾನಗಳನ್ನು ಕೊದಬಹುದು. ಶಕ್ತಿಗನುಗುಣವಾಗಿ ಒಂದೋ ಎರಡೋ ದಾನ ಮಾದಬಹುದು. ಎಷ್ಟು ದಾನ ಕೊಡುತ್ತಿದ್ದೇನೆ ಎನ್ನುವುದಕ್ಕಿಂತಲೂ ಕೊಡುವಾತನ ನಿರ್ವಂಚನೆ ಬುದ್ಧಿ ಮತ್ತು ಸ್ವೀಕರ್ತೃವಿನ ಪಾತ್ರತೆಯು ದಾನದ ಸಾಫಲ್ಯದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.
ಗ್ರಹಸಂಬಂಧಿ ದಾನಗಳು:
ಗ್ರಹಗಳ ಧಾನ್ಯ, ರತ್ನ ಮತ್ತು ವಸ್ತ್ರದ ಬಣ್ಣಗಳನ್ನು ಗಮನಿಸಿದವರಿಗೆ ಅವುಗಳಿಗಿರುವ ಪರಸ್ಪರ ಸಂಬಂಧ ಗೋಚರಿಸುತ್ತದೆ. ಸೂರ್ಯನ ಬಣ್ಣ ಕೆಂಪು ಆದ್ದರಿಂದಲೇ ಕೆಂಪಾದ ತಾಮ್ರ ಅವನ ಲೋಹ. ಕೆಂಪಾದ ಮಾಣಿಕ್ಯವೇ ಅವನ ರತ್ನ. ಅವನ ಪ್ರೀತಿಗಾಗಿ ಕೆಂಪುವಸ್ತ್ರವನ್ನು ದಾನಮಾದಬೇಕು. ಕೆಂಪುಗೋಧಿ ಅವನಿಗೆ ಸಂಬಂಧಿಸಿದ ಧಾನ್ಯ. ಹೀಗೆಯೇ ಚಂದ್ರನ ಬಣ್ಣ ಬಿಳಿ,ಬಿಳಿಯಾದ ಅಕ್ಕಿ, ಬೆಳ್ಳಿ ಮತ್ತು ದೌತ ವಸ್ತ್ರಗಳು ಅವನಿಗೆ ಸಂಬಂಧಿಸಿವೆ. ಚಂದ್ರನ ಧಾನ್ಯ ಅಕ್ಕಿ (ತಂಡುಲ)ಎಂಬುದನ್ನು ಗಮನಿಸಬೇಕು. ಇತ್ತೀಚೆಗೆ ಅಂಗಡಿಗಳಲ್ಲಿ ನವಗ್ರಹಧಾನ್ಯದ ವ್ಯವಸ್ಥಿತ ಸೆಟ್‌ಗಳು ದೊರೆಯುತ್ತವೆ. ಇದರಲ್ಲಿ ಹೆಚ್ಚಗಿ ಅಕ್ಕಿಯ ಬದಲಿಗೆ ಭತ್ತವನ್ನು ಸೇರಿಸುತ್ತಾರೆ. ಅಕ್ಕಿಗಿಂತ ಭತ್ತ ಶುದ್ಧವೆಂಬ ಭಾವನೆ ಅವರದು. ಬಿತ್ತಿದರೆ ಮೊಳಕೆಬರುವ ಧಾನ್ಯವನ್ನು ದಾನ ಮಾಡಬೇಕೆಂದು ಅವರ ವಾದವಿರಬಹುದು. ಆದರೆ ಇದಕ್ಕೆ ಶಾಸ್ತ್ರದ ಸಮ್ಮತಿಯಿಲ್ಲ. ತಿನ್ನಬಹುದಾದ ಸ್ಥಿತಿಯಲ್ಲಿರುವ ಧಾನ್ಯವನ್ನು ದಾನಮಾಡಬೇಕು. ಭತ್ತವು ದಾನಪಡೆದವನಿಗೆ ತಿನ್ನಬರುವ ಧಾನ್ಯವಲ್ಲ. ಅಲ್ಲದೇ ಚಂದ್ರನಿಗೆ ಬಿಳಿಯಾದ ಬಟ್ಟೆಯನ್ನು ಬಿಳಿಯದಾದ ಮುತ್ತನ್ನೂ ಹೇಳೀರುವಾಗ ಬಿಳಿಯಾದ ತಂಡುಲವೇ ಅವನ ಧಾನ್ಯ. ವ್ರೀಹಿಯಲ್ಲ. “ತಂಡುಲಾಶ್ಚಂದ್ರದೈವತ್ಯಾ ಚಂದ್ರಪೀತಿಕರಾಃಶುಭಾಃ” ವ್ರೀಹಿಜಾತಸ್ತಂಡುಲಾಃ ಶುದ್ಧಾಃ” ಇತ್ಯಾದಿ ವಾಕ್ಯಗಳು ಇದನ್ನು ಪುಷ್ಟೀಕರಿಸುತ್ತವೆ.
ಕುಜನ ಪ್ರೀತಿಗಾಗಿ ತೊಗರಿಯ ಜೊತೆ ಬೆಲ್ಲವನ್ನೂ ದಾನಮಾಡಬೇಕು.
ದಾನ ಪಡೆದವನು ಏನು ಮಾಡಬೇಕು? ತಾನು ಪಡೆದ ಧಾನ್ಯವನ್ನು ಉಪಯೋಗಿಸಬೇಕು. ಗೋಗ್ರಾಸವಾಗಿ ಉಪಯೋಗಿಸುವುದೂ ಅಪರಾಧವಲ್ಲ. ಅದಕ್ಕಿಂತಲೂ ಮುಖ್ಯವಾಗಿ ಗಾಯತ್ರೀ ಜಪ. ಗ್ರಜ ಮಂತ್ರಾದಿ ಜಪಗಳನ್ನು ಮಾಡಬೇಕು. ಏಕೆಂದರೆ,
ಪ್ರತಿಗ್ರಹಾದ್ಧಿ ವಿಪ್ರಸ್ಯ ಪುಣ್ಯಹಾನಿ ಪ್ರಜಾಯತೇ |
ಜಪಾಧ್ಯಜಪಾಧಯನ್ ದಾನಾದೈಃಪುನಃಪೂರಣಮಾಚರೇತ್ ||
ಎಂಬ ಮಾತಿದೆ. ದಾನ ತೆಗೆದುಕೊಳ್ಳುವುದ್ರಿಂದ ಬ್ರಾಹ್ಮಣನ ಪುಣ್ಯಹಾನಿಯಾಗುತ್ತದೆ. ಹಾನಿಯಾದುದನ್ನು ತುಂಬಿಸಿಕೊಳ್ಳುವಲ್ಲಿ ಮುಖ್ಯವಾಗಿ ಮೂರು ದಾರಿಗಳು. ಅವೆಂದರೆ ಜಪ, ಶಾಸ್ತ್ರಾಧ್ಯಯನ ಮತ್ತು ದಾನ.
ಪ್ರತಿಮೆಯನ್ನು ಪೂಜಿಸಿ, ಅರ್ಚಿಸಿ ದಾನ ಮಾಡಬೇಕು. ಧಾನ್ಯದಲ್ಲೂ ಗ್ರಹಗಳನ್ನು ಆವಾಹಿಸಿ, ಗ್ರಹಮಂತ್ರಗಳಿಂದ ಅಭಿಮಂತ್ರಿಸಿ, ಕೊನೆಯಲ್ಲಿ ಪೂಜೆಮಾಡಿ, ಆವಾಹಿತ ದೇವತೆಗಳನ್ನು ವಿಸರ್ಜಿಸಿ ದಾನಕೊಡುವುದು ಉತ್ತಮ. ಈ ಸಂದರ್ಭದಲ್ಲಿ ಆಯಾಯ ಗ್ರಹಗಳ ಧಾನ್ಯವನ್ನು ಅದರದೇ ಆದ ವಸ್ತ್ರದಲ್ಲಿ ಕಟ್ಟಬೇಕು. ನವಗ್ರಹ ಮಂಡಲವನ್ನು ಬರೆದು ಅದರ ಆಯಾಯ ಗ್ರಹಗಳ ದಿಕ್ಕಿನಲ್ಲಿ ಆಯಾಯ ಗ್ರಹಚಿಹ್ನೆಯನ್ನು ಬರೆದು ಅದರ ಮೇಲೆ ಧಾನ್ಯವನ್ನಿಡಬೇಕು. ಧಾನ್ಯದ ಮೇಲೆ ಗ್ರಹಪ್ರತಿಮೆಯನ್ನಿಟ್ಟು ಪೂಜಿಸಬೇಕು.
ನವಗ್ರಹಮಂಡಲ :
ಹಲವು ರೀತಿಯಲ್ಲಿ ನವಗ್ರಹಮಂಡಲವನ್ನು ಬರೆಯಬಹುದಾಗಿದೆ. ಸಮಾನವಾದ ಅಂಶವೆಂದರೆ ಮಂಡಲದಲ್ಲಿ ಐದು ಬಣ್ಣಗಳು ಪಂಚಭೂತಗಳ ಪ್ರತೀಕಗಳು. ಅದೆಂದರೆ ಬಿಳಿ (ಜಲ) ಹಳದಿ (ಆಕಾಶ) ಕೆಂಪು (ಅಗ್ನಿ) ಹಸಿರು (ಪೃಥಿವೀ) ಕಪ್ಪು (ವಾಯು). ಈ ಪಂಚವರ್ಣಗಳನ್ನು ತುಂಬುವಾಗಲೂ ಅನುಸರಿಸಬೇಕಾದ ಕ್ರಮವಿದೆ. ಅದನ್ನು ಈ ಮಂಡಲದಲ್ಲಿ ಸೂಚಿಸಲಾಗಿದೆ.
ಪದ್ಮದ ಅಷ್ಟದಲಗಳ ಆಯಾಭಾಗದಲ್ಲಿ ಆಯಾಗ್ರಹಗಳ ಚಿಹ್ನೆಯನ್ನು ಬರೆದಿದೆ. ಆ ಚಿಹ್ನೆಯ ಒಳಭಾಗದಲ್ಲಿ ಆಯಾಯ ಗ್ರಹಗಳಿಗೆ ಸಂಬಂಧಿಸಿದ ಬಣ್ಣದಿಂದ ತುಂಬಬೇಕು.
ಮಂಡಲದ ಈಶಾನ್ಯದಲ್ಲಿ ಶ್ರೀಃ ಎಂದು ಸಂಸ್ಕೃತದಲ್ಲಿ ಬರೆದು ಅಲ್ಲಿ ಗುರುಗಳನ್ನು ಪೂಜಿಸಬೇಕು. ಆಗ್ನೇಯದಲ್ಲಿ ಗಣಪತಿ ಮಂಡಲವಾದ ನವಕೋನವನ್ನು ಬರೆದು ಗಣೇಶನನ್ನು ಅರ್ಚಿಸಬೇಕು. ಗುರುಪೂಜೆಗಾಗಿ ಬರೆಯುವ ಶ್ರೀಕಾರವನ್ನು ಕೆಲವರು ಮಲೆಯಾಳವೇ ಮೊದಲಾದ ಲಿಪಿಗಳಲ್ಲಿ ಬರೆಯುತ್ತಾರೆ. ಕನ್ನಡದ ಲಿಪಿ ಯಾವ ಅಪರಾಧ ಮಾಡಿದೆಯೋ? ಆದರೆ ದೇವಕಾರ್ಯದಲ್ಲಿ ದೇವಭಾಷೆಯಾದ ಸಂಸ್ಕೃತವು ಬಳಸಿಕೊಂಡಿರುವ ದೇವನಾಗರೀ ಲಿಪಿಯನ್ನು ಜುಪೇಕ್ಷಿಸಿ ಇತರೆ ಲಿಪಿಯನ್ನು ಬಳಸುವುದರ ಔಚಿತ್ಯವನ್ನು ಹಿರಿಯರು ಚಿಂತಿಸಬೇಕು. ಶ್ರೀಗುರುವಿನಿಂದ ಪ್ರಾರಂಭಿಸಿ ಆದಿಗುರು, ಮೂಲಗುರು, ಪರಮಗುರುಗಳನ್ನೂ ಪ್ರತಿಪಾದಿಸುವ ಶ್ರೀಕಾರವನ್ನು ಪೂಜಾಕಾರ್ಯಗಳಲ್ಲಿ ಸಂಸ್ಕೃತದ ದೇವನಾಗರೀ ಲಿಪಿಯಲ್ಲಿಯೇ ಬರೆಯುವುದು ಉಚಿತವಲ್ಲವೇ?
ನವಗ್ರಹ ಮಂಡಲವನ್ನು ಪಂಚವರ್ಣಾತ್ಮಕವಾಗಿ ಬರೆಯುವುದು ಸಾಧ್ಯವಾಗದಾಗ ಬರಿಯ ರಂಗೋಲಿಯಲ್ಲಿ ಗ್ರಹಗಳ ಆಯಾಯ ಭಾಗದಲ್ಲಿ ಗ್ರಹಚಿಹ್ನೆಯನ್ನು ಬರೆದು ಅದರ ಮೇಲೆ ಧಾನ್ಯವನ್ನಿಟ್ಟು ಪೂಜಿಸಬೇಕು. ಸಾಮಾನ್ಯವಾಗಿ ಸತ್ಯನಾರಾಯಣ ವ್ರತಪೂಜೆಯಲ್ಲೂ ಪರಿವಾರದೇವತೆಗಳಾಗಿ ನವಗ್ರಹಗಳನ್ನು ಪೂಜಿಸುವುದಿದೆ. ಅಲ್ಲಿ ಧಾನ್ಯವನ್ನಿಟ್ಟೇ ಪೂಜಿಸುವುದಾದರೆ ನವಗ್ರಹ ಚಿಹ್ನೆಯನ್ನು ಬರೆದು ಪೂಜಿಸುವುದು ಉಚಿತ.
ನವಗ್ರಹಗಳ ಬಗ್ಗೆ ಹೇಳುತ್ತಾ ಕುಳಿತರೆ ದೂರ ಸಾಗಿದ್ದು ತಿಳಿಯುವುದಿಲ್ಲ. ಹೇಳಬಹುದಾದದ್ದು ಸಾಕಷ್ಟಿದೆ. ಹೇಳಬೇಕಾದುದರಲ್ಲಿ ಮುಖ್ಯಾಂಶಗಳು ಮಾತ್ರ ಇಲ್ಲಿವೆ. “ಶಾಂತಿರಸ್ತು ಶಿವಂ ಚಾಸ್ತು ಗ್ರಹಾಃ ಕುರ್ವಂತು ಮಂಗಲಮ್” ಎಂಬ ಪ್ರಾರ್ಥನೆಯೊಂದಿಗೆ ವಿರಮಿಸುತ್ತೇನೆ.