ಈ ಇಚ್ಛಾಶಕ್ತಿಯೇ ಪಂಚಭೂತಗಳಾಗಿ ಸೃಷ್ಟಿಗೆ ಕಾರಣೀಭೂತವಾದದ್ದು. ಇಚ್ಛೆ ಅಂದರೆ ಬೇರೇನೂ ಅಲ್ಲ. ನಮ್ಮ ಸುತ್ತಲೂ ನಾವೇನು ನೋಡುತ್ತಿದ್ದೇವೆಯೋ ಅದೇ ಇಚ್ಛೆ. ಇದು ಪಂಚಭೂತಗಳ ಮೂಲರೂಪವಷ್ಟೇ. ನಾವೆಲ್ಲರೂ ಅದರ ಒಂದು ಭಾಗವೇ. ಈ ಇಚ್ಛೆಯ ಶಕ್ತಿ ಅಥವಾ ಇದರ ಆಟವನ್ನು ತಿಳಿಸಿಕೊಡೋಕೆ ನಿಮಗೊಂದು ಉದಾಹರಣೆ ಕೊಡುತ್ತೇನೆ.
ಮೂವತ್ತು ಮೂವತ್ತೈದು ವರ್ಷಗಳ ಹಿಂದೆ ಒಬ್ಬ ಜನಪ್ರಿಯ ನಟ ಆಸ್ಪತ್ರೆಯಲ್ಲಿ ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದ. ಪರಿಸ್ಥಿತಿ ತುಂಬಾ ಗಂಭೀರವಿತ್ತು. ಇಡೀ ದೇಶಕ್ಕೆ ದೇಶವೇ ಆತನ ಮೇಲಿನ ಅಭಿಮಾನದಿಂದ ಒಗ್ಗೂಡಿ ಅವನ ಆರೋಗ್ಯಕ್ಕಾಗಿ ಪ್ರಾರ್ಥಿಸಿತು. ನಿಮಗೆ ಪವಾಡವೆನಿಸಬಹುದೇನೋ.
ಆ ಕಲಾವಿದ ಸಂಪೂರ್ಣವಾಗಿ ಚೇತರಿಸಿಕೊಂಡುಬಿಟ್ಟ. ಇಚ್ಛೆ ಅಥವಾ ಜಾಗೃತಿಗಿರುವ ಶಕ್ತಿ ಇದು. ಒಬ್ಬರ ಪ್ರಾರ್ಥನೆಗೇ ಅದೆಷ್ಟೋ ಶಕ್ತಿ ಇರುತ್ತದೆ. ಅಂಥದರಲ್ಲಿ ಒಂದು ಭಾರೀ ಸಮೂಹ ಒಗ್ಗೂಡಿದರೆ ಆ ಇಚ್ಛಾಶಕ್ತಿಯ ಸಾಮರ್ಥ್ಯವನ್ನು ನೀವೇ ಊಹಿಸಿ. ಕೆಲವೊಮ್ಮೆ ನೀವು ಯಾವುದೋ ಒಂದು ಅಪಾಯದ ನಿರೀಕ್ಷೆಯಲ್ಲಿ ಭಯಪಡುತ್ತಿರುತ್ತೀರಿ. ಹೀಗಾಗದಿರಲಿ ಅಂತ ಮನಸ್ಸಿನಲ್ಲೇ ಡವಗುಡುತ್ತಿರುತ್ತೀರಿ. ನಿಮ್ಮ ಭಯವೇ ನಿಜವಾಗಿ ಹೋಗುತ್ತದೆ.
ಅದೂ ಇಚ್ಛಾಶಕ್ತಿಯ ಆಟವೇ. ಅದರ ಬದಲು, ನೀವೇ ಹೀಗಾಗಕೂಡದು, ಇದನ್ನು ಹೀಗೆಯೇ ಆಗುವಂತೆ ಮಾಡುತ್ತೇನೆ ಎಂದು ನಿರ್ಧರಿಸಿಕೊಂಡರೆ, ಅದು ನಿಮ್ಮ ಆಣತಿಯಂತೆ ನಡೆಯುತ್ತದೆ. ಯೋಗ ವಿಜ್ಞಾನ ಆಧರಿಸಿರುವುದೇ ಈ ಜಾಗೃತಶಕ್ತಿ ಅಥವಾ ಇಚ್ಛಾಶಕ್ತಿಯನ್ನು. ಇದನ್ನು ಬಳಸಿಯೇ ಯೋಗಿಗಳು ಮತ್ತು ಸನ್ಯಾಸಿಗಳು ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳುವುದು. ವರ ಮತ್ತು ಶಾಪಗಳೂ ಇದನ್ನೇ ಅವಲಂಬಿಸಿದೆ. ಭಗೀರಥ ಗಂಗೆಯನ್ನು ಧರೆಗೆ ತಂದದ್ದು, ವಿಶ್ವಾಮಿತ್ರ ತ್ರಿಶಂಕು ಸ್ವರ್ಗವನ್ನು ನಿರ್ಮಿಸಿದ್ದು ಎಲ್ಲವೂ ಈ ಇಚ್ಛಾಶಕ್ತಿಯಿಂದಲೇ.